ಅಬ್ಬರಿಸಿ ಬೊಬ್ಬಿರಿದ ಕೊರೊನಾ ವೈರಸ್​: ರಾಜ್ಯದಲ್ಲಿ ಈವರೆಗೆ 11 ಮಂದಿಗೆ ಸೋಂಕು!

ಬೆಂಗಳೂರು: ಕೊರೊನಾ ಅನ್ನೋ ಮಹಾಮಾರಿ ಹೆಸರು ಕೇಳಿದ್ರೆ ಸಾಕು. ಇಡೀ ಜಗತ್ತೇ ಬೆಚ್ಚಿ ಬೀಳ್ತಿದೆ. ಜನರ ಜೀವ ಬಾಯಿಗೆ ಬಂದಂತಾಗ್ತಿದೆ. ಮನೆಯಿಂದ ಕಾಲಿಡೋಕೂ ಎದೆಯೇ ಝೆಲ್ ಅಂತಿದೆ. ಯಾಕಂದ್ರೆ, ಈ ಮಹಾಮಾರಿ ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಅದ್ರಲ್ಲೂ ಭಾರತಕ್ಕೆ ಎಂಟ್ರಿ ಕೊಟ್ಟಿರೋ ಕಿಲ್ಲರ್ ಕೊರೊನಾ, ಕರುನಾಡಲ್ಲೂ ಸಾವಿನ ಕೇಕೆ ಹಾಕುತ್ತಿದೆ. ಮತ್ತಷ್ಟು ಜನರ ಜೀವ ಬಲಿ ಪಡೆಯೋಕೆ ಸಜ್ಜಾಗಿ ನಿಂತಿದೆ.

ರಾಜ್ಯದಲ್ಲಿ ಇದುವರೆಗೆ 11 ಜನರಿಗೆ ಸೋಂಕು!
ಯೆಸ್.. ಕಲಬುರಗಿಯಲ್ಲಿ ವೃದ್ಧನ ಜೀವ ಹಿಂಡಿದ ಕೊರೊನಾ, ಈಗ ರಾಜ್ಯದಲ್ಲಿ ರುದ್ರತಾಂಡವ ಆಡುತ್ತಿದೆ. ದಿನದಿಂದ ದಿನಕ್ಕೆ ಜನರಿಗೆ ಸೋಂಕು ವಕ್ಕರಿಸಿಕೊಳ್ಳುತ್ತಲೇ ಇದೆ. ಇದುವರೆಗೆ ರಾಜ್ಯದಲ್ಲಿ 11 ಜನರಿಗೆ ಕೊರೊನಾ ತಗುಲಿದೆ. ನಿನ್ನೆ ಬೆಂಗಳೂರಿನಲ್ಲಿ ಹೊಸದಾಗಿ ಒಂದು ಕೇಸ್ ಪತ್ತೆಯಾಗಿದೆ.

ಸೋಂಕಿತ ವ್ಯಕ್ತಿ ಮಾರ್ಚ್ 3ರಿಂದ ಮಾರ್ಚ್​ 8ರವರೆಗೆ ದುಬೈನಲ್ಲಿದ್ರು. ಮಾರ್ಚ್ 9ರಂದು ಗೋವಾ ಮೂಲಕ ಬೆಂಗಳೂರಿಗೆ ಬಂದಿದ್ರು. ಇಲ್ಲಿಗೆ ಬಂದ ಬಳಿಕ ಜ್ವರ, ಕೆಮ್ಮು ಕಾಣಿಸಿಕೊಂಡಿದ್ರಿಂದ ಆಸ್ಪತ್ರೆಗೆ ದಾಖಲಾಗಿದ್ರು. ರಕ್ತದ ಮಾದರಿ ಪರೀಕ್ಷೆ ಮಾಡಿದಾಗ ಸೋಂಕು ಇರೋದು ದೃಢಪಟ್ಟಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಸದ್ಯ, ಕೊರೊನಾ ಎರಡನೇ ಸ್ಟೇಜ್‌ನಲ್ಲಿದೆ. ಮೂರು ಮತ್ತು ನಾಲ್ಕನೇ ಸ್ಟೇಜ್​ಗೆ ಬಂದ್ರೆ ಕಂಟ್ರೋಲ್ ಮಾಡೋದೇ ಕಷ್ಟಸಾಧ್ಯ. ಹೀಗಾಗೇ, ಆ ಸ್ಟೇಜ್​ಗೆ ತಲುಪೋಕು ಮುಂಚೆಯೇ ಹೆಮ್ಮಾರಿಯನ್ನ ಮಟ್ಟ ಹಾಕೋಕೆ ಸರ್ಕಾರ ಇನ್ನಿಲ್ಲದ ಸರ್ಕಸ್ ನಡೆಸಿದೆ. ಅನುಮಾನ ಬಂದವರನ್ನೆಲ್ಲಾ ತಪಾಸಣೆಗೆ ಒಳಪಡಿಸುತ್ತಿದೆ. ಹಾಗಾದ್ರೆ, ಇದುವರೆಗೆ ಎಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ? ಎಷ್ಟು ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಅನ್ನೋ ಬಗ್ಗೆಯೂ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

‘ಕೊರೊನಾ’ ಕಟ್ಟೆಚ್ಚರ:
ರಾಜ್ಯದಲ್ಲಿ ಇದುವರೆಗೆ 1 ಲಕ್ಷ 17 ಸಾವಿರದ 306 ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 2,146 ಜನರನ್ನು ಮನೆಗಳಲ್ಲೇ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 319 ಜನರ 28 ದಿನಗಳ ಅವಧಿ ಅಂತ್ಯವಾಗಿದ್ದು, ಯಾವುದೇ ತೊಂದ್ರೆ ಕಂಡು ಬಂದಿಲ್ಲ. ಅಲ್ದೆ, 943 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಇವರ ಪೈಕಿ 766 ಜನರ ವರದಿ ನೆಗೆಟಿವ್ ಬಂದಿದೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯ ಇಲ್ಲ ಅಂತಲೂ ಸಚಿವ ಸುಧಾಕರ್ ಹೇಳಿದ್ದಾರೆ.

ಸರ್ಕಾರ ಇಷ್ಟೆಲ್ಲಾ ಎಚ್ಚರಿಕೆ ವಹಿಸಿದ್ರೂ ರಾಜ್ಯಾದ್ಯಂತ ಭಯ ಹೆಚ್ಚುತ್ತಲೇ ಇದೆ. ಅದ್ರಲ್ಲೂ ಹೆಮ್ಮಾರಿ ಕೊರೊನಾ ವೃದ್ಧನ ಬಲಿ ಪಡೆದ ನಂತ್ರ ಕಲಬುರಗಿ ಬೆಚ್ಚಿ ಬಿದ್ದಿದೆ.. ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಇನ್ನಿಲ್ಲದ ಹೋರಾಟ ನಡೆಸಿದೆ. ಜಿಲ್ಲೆಯ ಪ್ರಾರ್ಥನಾ ಮಂದಿರಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ ಮತ್ತು ಜನದಟ್ಟಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಅಂತ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.

ಕಲಬುರಗಿಯನ್ನ ತಿರುಗಿಯೂ ನೋಡದ ಉಸ್ತುವಾರಿ ಸಚಿವರು!
ಇಷ್ಟೆಲ್ಲಾ ಆದ್ರೂ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಕಲಬುರಗಿಯತ್ತ ತಿರುಗಿ ನೋಡಿಲ್ಲ.. ಅಲ್ಲಿನ ವ್ಯವಸ್ಥೆ ಬಗ್ಗೆಯೂ ಗಮನ ಹರಿಸಿದೇ ತಮ್ಮ ಪಾಡಿಗೆ ತಾವಿದ್ದಾರೆ… ಈ ಬಗ್ಗೆ ಕಾರಜೋಳರನ್ನು ಕೇಳಿದ್ರೆ, ಅಲ್ಲಿಗೆ ಹೋಗೋಕೆ ಭಯ ಅಂತಿದ್ದಾರೆ.

ಊಟಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ:
ಇನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಊಟಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಬಂದ್ ಮಾಡಲಾಗಿದೆ.. ಮಾರ್ಚ್ 31ರವರೆಗೆ ಬಸ್​ಗಳ ಓಡಾಟ ಬಂದ್ ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಇದಿಷ್ಟೇ ಅಲ್ದೆ, ಬಾಗಲಕೋಟೆ, ಬಳ್ಳಾರಿ, ಮೈಸೂರು ಸೇರಿದಂತೆ ರಾಜ್ಯ ಎಲ್ಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಒಟ್ನಲ್ಲಿ, ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಜನರ ಎದೆ ಬಡಿತ ಹೆಚ್ಚಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!