2019ರಲ್ಲಿ ಕನ್ನಡ ಚಿತ್ರರಂಗದಲ್ಲಾದ ಐದು ಪ್ರಮುಖ ವಿವಾದಗಳು

2019ರಲ್ಲಿ ಸಿನಿಮಾಗಳು ಎಷ್ಟು ಸದ್ದು ಮಾಡಿದ್ವೋ. ವಿವಾದಗಳು ಕೂಡ ಅಷ್ಟೇ ಗದ್ದಲ ಎಬ್ಬಿಸಿದ್ವು. ತೆಲುಗು, ತಮಿಳು, ಹಿಂದಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲೂ ಕಾಂಟ್ರವರ್ಸಿಗಳದ್ದೇ ಕಾರುಬಾರು ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಯಾಱರು ಯಾವ್ಯಾವ ಕಾರಣಕ್ಕೆ ಕಿತ್ತಾಡ್ಕೊಂಡ್ರು..? ಸ್ಯಾಂಡಲ್​ವುಡ್​ನಲ್ಲಾದ ಐದು ಪ್ರಮುಖ ವಿವಾದಗಳು ಇಲ್ಲಿವೆ.

ಉರಿಯೋ ಬೆಂಕಿಗೆ ತುಪ್ಪ ಸುರಿಯೋದು. ಗಾಯದ ಮೇಲೆ ಉಪ್ಪು ಸವರೋದು ಎಲ್ಲಾ ಚಿತ್ರರಂಗದಲ್ಲೂ ನಡೀತಾನೇ ಇರುತ್ತೆ. ಕೆಲವೊಮ್ಮೆ ಗೊತ್ತಿದ್ದೋ.. ಗೊತ್ತಿಲ್ಲದೆಯೋ ತಾರೆಯರು ವಿವಾದಕ್ಕೆ ಸಿಕ್ಕಿಕೊಳ್ತಾರೆ. ಈ ವರ್ಷ ಸ್ಯಾಂಡಲ್​ವುಡ್ ನಟ-ನಟಿಯರು ಕೂಡ ಹೀಗೆ ವಿವಾದಕ್ಕೆ ಸಿಲುಕಿದ್ರು. 2019ರಲ್ಲಿ ಕನ್ನಡ ಚಿತ್ರರಂಗವನ್ನ ಮುಜುಗರಕ್ಕೀಡು ಮಾಡಿದೆ, ಸಿನಿಪ್ರೇಮಿಗಳನ್ನ ಬೆಚ್ಚಿಬೀಳಿಸಿದ ಐದು ವಿವಾದಗಳನ್ನ ಒಂದೊಂದಾಗೇ ನಿಮ್ಮ ಮುಂದೆ ಇಡ್ತಾ ಹೋಗ್ತೀವಿ.

ಮದಕರಿಗಾಗಿ ದುರ್ಯೋಧನ.. ಪೈಲ್ವಾನ್ ಘೋರಯುದ್ಧ!
ಇನ್ನೇನು 2018 ಮುಗಿದೇ ಬಿಡ್ತು. ಇನ್ನೊಂದೆರಡು ತಿಂಗಳು 2019ಕ್ಕೆ ಕಾಲಿಟ್ಟು ಬಿಡ್ತೀವಿ ಅನ್ನೋ ಸಡಗರದಲ್ಲಿ ಚಿತ್ರರಂಗವಿತ್ತು. ಆಗ್ಲೇ ಸೈಲೆಂಟಾಗಿದ್ದ ಮದಕರಿ ಸಿನಿಮಾ ಸೆಟ್ಟೇರಲು ಸಜ್ಜಾಗಿತ್ತು. ರಾಕ್​​ಲೈನ್ ವೆಂಕಟೇಶ್ ಐತಿಹಾಸಿಕ ವೀರಮದಕರಿ ಸಿನಿಮಾವನ್ನ ನಿರ್ಮಿಸೋಕೆ ಮುಂದಾಗಿದ್ರು. ವೀರ ಮದಕರಿ ಅವತಾರದಲ್ಲಿ ದರ್ಶನ್ ಅಖಾಡಕ್ಕಿಳಿಯೋದು ಕನ್ಫರ್ಮ್ ಆಗಿತ್ತು. ಈ ವಿಷ್ಯ ಹೊರಬೀಳುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ರು. ವೀರ ಮದಕರಿ ಅವತಾರದಲ್ಲಿ ಕಿಚ್ಚ ಸುದೀಪ್ ನಟಿಸ್ಬೇಕು ಅಂತ ಪಟ್ಟು ಹಿಡಿದಿದ್ರು. ಇನ್ನೊಂದ್ಕಡೆ ವೀರಮದಕರಿ ಅವತಾರ ದಾಸನಿಗೆ ಸರಿ ಅಂತ ಡಿ ಬಾಸ್ ಫ್ಯಾನ್ಸ್ ಪಟ್ಟು ಹಿಡಿದಿದ್ರು. ಹೀಗಾಗಿ ಕಿಚ್ಚ ಹಾಗೂ ದಾಸನ ಅಭಿಮಾನಿಗಳು ಮದಕರಿಗಾಗಿ ಯುದ್ಧಕ್ಕೆ ಇಳಿದುಬಿಟ್ಟಿದ್ರು.

ರಾಕ್​ಲೈನ್ ನಿರ್ಮಾಣದ ವೀರಮದಕರಿ ಕಿಚ್ಚ ಹಾಗೂ ದಾಸನ ಅಭಿಮಾನಿಗಳಿಗೆ ಕಿಚ್ಚು ಹಚ್ಚಿತ್ತು. ಇಬ್ಬರೂ ಕಿತ್ತಾಟಕ್ಕೆ ಇಳಿಯುತ್ತಿದ್ದಂತೆ ಕಿಚ್ಚನ ಪರ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ ಅಖಾಡಕ್ಕಿಳಿದಿದ್ರು. ಸುದೀಪ್ ವಾಲ್ಮೀಕಿ ಸಮುದಾಯದ ನಟ. ಹೀಗಾಗಿ ಸ್ವಾಮೀಜಿ ವೀರಮದಕರಿ ಪಾತ್ರದಲ್ಲಿ ಕಿಚ್ಚನೇ ಅಭಿನಯಿಸ್ಬೇಕು. ಅದನ್ನ ಬಿಟ್ಟು ಬೇರೆ ಯಾರೇ ನಟಿಸಿದ್ರೂ ತಮ್ಮ ವಿರೋಧವಿದೆ ಅಂತ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಗುಡುಗಿದ್ದರು. ಸ್ವಾಮೀಜಿ ಆಡಿದ ಈ ಮಾತುಗಳು ಮತ್ತಷ್ಟು ವಿವಾದಕ್ಕೆ ಸಿಲುಕಿಸಿತ್ತು. ಜಾತಿ ಆಧಾರದ ಮೇಲೆ ಸಿನಿಮಾದ ಪಾತ್ರಗಳನ್ನ ಆಯ್ಕೆ ಮಾಡ್ಬೇಕಾ ಅಂತ ಸಿನಿಪ್ರೇಮಿಗಳು ಕಿಡಿಕಾರಿದ್ರು.

ಇಷ್ಟೆಲ್ಲಾ ಆದ್ರೂ ರಾಕ್​ಲೈನ್ ವೆಂಕಟೇಶ್ ವೀರ ಮದಕರಿ ಸಿನಿಮಾದಿಂದ ಹಿಂಜರಿಯಲಿಲ್ಲ. ಮದಕರಿ ನಾಯಕ ಇತಿಹಾಸ ಕಂಡ ನಾಯಕ. ಯಾರು ಬೇಕಾದ್ರೂ ಮದಕರಿ ಬಗ್ಗೆ ಸಿನಿಮಾ ಮಾಡ್ಬಹುದು. ಮದಕರಿ ಬಗ್ಗೆ ಒಟ್ಟು 9 ಪರಂಪರೆಗಳಿವೆ. ಅವುಗಳಲ್ಲಿ ಯಾರು ಯಾವ ಪರಂಪರೆಯನ್ನಾದ್ರೂ ಸಿನಿಮಾ ಮಾಡ್ಬಹುದು ಅಂತ ವಾದ ಮಂಡಿಸಿದ್ದರು. ಇತ್ತ ಸುದೀಪ್ ಕೂಡ ಮದಕರಿ ಸಿನಿಮಾಗಾಗಿ ತಯಾರಿ ನಡೆಸಿದ್ರು. ಹೀಗಾಗಿ ಸದ್ಯಕ್ಕೆ ವೀರಮದಕರಿ ನಾಯಕ ವಿವಾದ ಮುಗಿಯೋ ಲಕ್ಷಣಗಳು ಕಾಣಿಸಲೇ ಇಲ್ಲ. ಇಷ್ಟೆಲ್ಲ ಗದ್ದಲ ನಡೆಯೋ ಹೊತ್ತಿಗೆ 2019 ಕ್ಕೆ ಪಾದಾರ್ಪಣೆ ಮಾಡಿ ಆಗಿತ್ತು. ಅಷ್ಟರಲ್ಲೆ ಕಿಚ್ಚ ಸುದೀಪ್ ಒಂದು ತೀರ್ಮಾನಕ್ಕೆ ಬಂದಿದ್ರು.

ದರ್ಶನ್ ಮದಕರಿ ಆಗಲಿ ಎಂದ ಕಿಚ್ಚ:
ಮದಕರಿ ಸಿನಿಮಾಕ್ಕೆ ಕನ್ನಡದ ಇಬ್ಬರು ಸೂಪರ್​ಸ್ಟಾರ್​ಗಳಾದ ಸುದೀಪ್ ಹಾಗೂ ದರ್ಶನ್ ಪಟ್ಟು ಹಿಡಿದಿದ್ರು. ವಿವಾದ ಅತಿರೇಕಕ್ಕೆ ಹೋದಾಗ ಇಬ್ಬರೂ ಮದಕರಿ ಸಿನಿಮಾ ಮಾಡೋಣ. ಎರಡೂ ಸಿನಿಮಾವನ್ನ ಇತಿಹಾಸ ಪುರುಷನಿಗೆ ಅರ್ಪಿಸೋಣ ಎಂದಿದ್ರು. ಆದ್ರೆ ಕೆಲವೇ ದಿನಗಳಲ್ಲಿ ಮನಸ್ಸು ಬದಲಿಸಿದ್ರು. ಗೆಳೆಯ ದರ್ಶನ್ ಅವರೇ ಮದಕರಿಯಾಗಿ ಮಿಂಚಲಿ ಅಂತ ಹೇಳಿದ್ರು. ಈ ಮೂಲಕ ಮದಕರಿಗಾಗಿ ಶುರುವಾಗಿದ್ದ ವಿವಾದ ಕಿಚ್ಚನ ಹೇಳಿಕೆಯಿಂದ ಅಂತ್ಯ ಕಂಡಿತ್ತು.

ಉಪ್ಪಿಗೆ ಐ ಲವ್ ಯು ಹೇಳಿ ಕಣ್ಣೀರಿಟ್ಟ ಡಿಂಪಲ್ ಕ್ವೀನ್!
ಫಿಲ್ಟರ್ ಇಲ್ದೇ ಮಾತಾಡೋ ನಟ ರಿಯಲ್ ಸ್ಟಾರ್ ಉಪೇಂದ್ರ. ಅವ್ರ ಸಿನಿಮಾಗಳೂ ಕೂಡ ಅಷ್ಟೇ ಬೋಲ್ಡ್ ಅಂಡ್ ಬ್ಯೂಟಿಫುಲ್. ಉಪ್ಪಿ 2019ರಲ್ಲಿ ಮತ್ತೆ ಹಳೇ ಅವತಾರದಲ್ಲಿ ಕಂಡಿದ್ರು. ಅವರೇ ನಟಿಸಿದ ‘ಉಪೇಂದ್ರ’ ಹಾಗೂ ‘ಎ’ ಯನ್ನ ನೆನಪಿಸೋ ಸಿನಿಮಾ ಐ ಲವ್ ಯೂನಲ್ಲಿ ನಟಿಸಿದ್ರು. ಉಪ್ಪಿ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ಮೊದಲ ಬಾರಿಗೆ ಬೋಲ್ಡ್ ಅವತಾರದಲ್ಲಿ ನಟಿಸಿದ್ರು. ಅದ್ರಲ್ಲೂ ಮಾತನಾಡಿ ಮಾಯವಾದೆ ಅನ್ನೋ ರೊಮ್ಯಾಂಟಿಕ್ ಹಾಡಿನಲ್ಲಿ ರಚಿತಾ ಹಾಟ್ ಆಗಿ ನಟಿಸಿದ್ದರು.

ಐ ಲವ್ ಯೂ ಸಿನಿಮಾದ ಮಾತನಾಡಿ ಮಾಯವಾದೆ ಹಾಡು ರಿಲೀಸ್ ಆಗುತ್ತಿದ್ದಂತೆ ವಿವಾದಕ್ಕೆ ಸಿಕ್ಕಿಕೊಂಡಿತ್ತು. ರಚಿತಾ ಅಭಿಮಾನಿಗಳು ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದನ್ನ ವಿರೋಧಿಸಿದ್ದರು. ಹೀಗಾಗಿ ರಚಿತಾ ರಾಮ್ ಇನ್ಮುಂದೆ ಬೋಲ್ಡ್ ಸೀನ್​ಗಳಲ್ಲಿ ನಟಿಸೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ರು.

ಎಸ್.. ರಚಿತಾ ರಾಮ್ ಆಡಿದ ಈ ಮಾತು ಐ ಲವ್ ಯು ಚಿತ್ರತಂಡವನ್ನ ಮುಜುಗರಕ್ಕೆ ಒಳಪಡಿಸಿತ್ತು. ಇದರ ಹಿಂದೆನೇ ರಚಿತಾ ರಾಮ್, ಪ್ರಿಯಾಂಕ ಉಪೇಂದ್ರರನ್ನ ಕೆರಳಿಸಿದ್ರು. ಐ ಲವ್ ಯು ಚಿತ್ರದ ಮಾತನಾಡಿ ಮಾಯವಾದೆ ಹಾಡನ್ನ ಚಿನ್ನಿ ಪ್ರಕಾಶ್ ನಿರ್ದೇಶಿಸ್ಬೇಕಿತ್ತು. ಆದ್ರೆ ಈ ಹಾಡಿನಲ್ಲಿ ನಟಿಸುವಾಗ ನಾನು ಮುಜುಗರಕ್ಕೆ ಒಳಗಾಗಿದ್ದೆ. ಆ ವೇಳೆ ಉಪೇಂದ್ರ ಅವ್ರು ನೀನು ಧಾರ್ಮಿಕ, ನಾನು ಸಂತೋಷ್. ಇದು ಕೇವಲ ಪಾತ್ರವಷ್ಟೇ ಅಂತ ಹೇಳಿ ಒಪ್ಪಿಸಿದ್ರು. ಹೀಗಾಗಿ ಬೋಲ್ಡ್ ಆಗಿ ಸಾಂಗ್​ನಲ್ಲಿ ನಟಿಸಿದೆ ಎಂದು ಹೇಳಿಕೆ ನೀಡಿದ್ರು. ಅದು ಉಪೇಂದ್ರ ಪತ್ನಿ ಪ್ರಿಯಾಂಕಾ ಕಣ್ಣುಗಳನ್ನ ಕೆಂಪಗಾಗಿಸಿತ್ತು. ಹೀಗಾಗಿ ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಕೆಂಡಕಾರಿದ್ದರು.

ರಚಿತಾ ಇಷ್ಟವಿಲ್ಲದಿದ್ದರೆ ಈ ಸಿನಿಮಾ ಮಾಡಬಾರದಿತ್ತು. ಅದನ್ನ ಬಿಟ್ಟು ಹೋದಲ್ಲೆಲ್ಲಾ ಉಪೇಂದ್ರ ಅವರ ಹೆಸರನ್ನ ಎಳೆದು ತರ್ತಿದ್ದಾರೆ ಎಂದು ಕಿಡಿಕಾರಿದ್ದರು. ಹಾಗಂತ ಈ ವಿವಾದ ಇಲ್ಲಿಗೆ ನಿಲ್ಲಲಿಲ್ಲ. ಅಪ್ಪ ಅಮ್ಮನಿಗೂ ನನ್ನ ಬೋಲ್ಡ್ ಪಾತ್ರ ಇಷ್ಟ ಆಗಿಲ್ಲ ಅಂತ ರಚಿತಾ ಕಣ್ಣೀರು ಹಾಕಿದ್ರು. ಕೊನೆಗೂ ಐ ಲವ್ ಯು ವಿವಾದಗಳನ್ನ ಹೊತ್ತು ಬಿಡುಗಡೆ ಆಯ್ತು. ರಚಿತಾ ಮತ್ತೆ ಐ ಲವ್ ಯು ಚಿತ್ರತಂಡದೊಂದಿಗೆ ಕಾಣಿಸಿಕೊಳ್ಳಲಿಲ್ಲ.

ಟ್ರೋಲ್ ಹೈಕ್ಳ ಕಾಟ.. ಗಾಂಚಲಿ ಗೀತಾ ಗಲಿಬಿಲಿ!
2019 ರಲ್ಲಿ ರಶ್ಮಿಕಾ ವಿವಾದಗಳ ರಾಣಿ ಅನ್ನೋ ಪಟ್ಟು ಹೊತ್ತು ತಿರುಗಿದ್ರು. ಅದ್ರಲ್ಲೂ ಡಿಯರ್ ಕಾಮ್ರೇಡ್ ಸಿನಿಮಾ ಪ್ರಚಾರದ ವೇಳೆ ಕನ್ನಡನೂ ಕಷ್ಟ ಅಂತ ಹೇಳಿ ಪ್ರೇಚಿಗೆ ಸಿಲುಕಿದ್ರು..
‘ನನಗೆ ಯಾವ ಭಾಷೆನೂ ಸರಿಯಾಗಿ ಬರೋದಿಲ್ಲ’ ಹೌದು.. ಇದೇ ಮಾತು.. ರಶ್ಮಿಕಾ ಕೊಟ್ಟ ಈ ಹೇಳಿಕೆಗೆ ಟ್ರೋಲಿಗರು ಉಗಿದು ಉಪ್ಪಿನಕಾಯಿ ಹಾಕಿದ್ರು. ಬೆಳೆಯೋಕೆ ಕನ್ನಡ ಬೇಕು. ಬೆಳೆದು ನಿಂತ್ಮೇಲೆ ಕನ್ನಡ ಬೇಡ್ವಾ ಅಂತ ಕಿಡಿಕಾರಿದ್ರು.

ಡಿಯರ್ ಕಾಮ್ರೇಡ್ ಬಿಡುಗಡೆ ವೇಳೆ ಕನ್ನಡ ಸಂಘಟನೆ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿತ್ತು. ಇಲ್ಲಿಂದ ಪದೇ ಪದೇ ರಶ್ಮಿಕಾ ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾಗ್ತಾನೇ ಇದ್ರು. ರಶ್ಮಿಕಾ ಬಾಲ್ಯದ ಫೋಟೋವನ್ನ ಹಂಚಿಕೊಂಡಾಗ್ಲೂ ಕಿಡಿಗೇಡಿಗಳು ಅಶ್ಲೀಲ ಪದಗಳಿಂದ ನಿಂದಿಸಿದ್ರು. ಆಗ ರಶ್ಮಿಕಾ ತಾಳ್ಮೆ ಕಳೆದುಕೊಂಡು ಕಿಡಿಗೇಡಿಗಳನ್ನ ತರಾಟೆಗೆ ತೆಗೆದುಕೊಂಡಿದ್ರು.
ರಶ್ಮಿಕಾ ಬಾಲ್ಯದ ಫೋಟೋಗಳಿಗೆ ಕಿಡಿಗೇಡಿಗಳು ಅಶ್ಲೀಲ ಪದ ಬಳಸಿದ್ರು. ಇದು ಕಿರಿಕ್ ಸುಂದರಿಯ ಕಣ್ಣನ್ನ ಕೆಂಪಗಾಗಿಸಿತ್ತು. ಹೀಗಾಗಿ ಟ್ರೋಲ್ ಮಾಡಿದ ಪೊರ್ಕಿಗಳನ್ನ ತನ್ನ ಪದಗಳಲ್ಲಿ ತಿವಿದು ಹಾಕಿದ್ರು.

ಪೈಲ್ವಾನ್ ಪೈರಸಿ.. ದಾಸನ ಅಭಿಮಾನಿಗಳೆಡೆಗೆ ಬೊಟ್ಟು:
ದಾಸ ಹಾಗೂ ಕಿಚ್ಚನ ಗೆಳೆತನ ಮೊದಲಿನಂತಿಲ್ಲ. ಹೀಗಾಗಿ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಇದೇ ವೇಳೆ ಕಿಚ್ಚನ ಪೈಲ್ವಾನ್ ರಿಲೀಸ್ ಆಯ್ತು. ಪೈಲ್ವಾನ್ ಬಿಡುಗಡೆಯಾದ ಮೊದಲ ದಿನವೇ ಕಿಡಿಗೇಡಿಗಳು ಫುಲ್ ಸಿನಿಮಾ ಲೀಕ್ ಮಾಡಿದ್ರು. ಹೀಗಾಗಿ ಕಿಚ್ಚ ಹಾಗೂ ದಾಸನ ಅಭಿಮಾನಿಗಳ ನಡುವೆ ಮತ್ತೆ ಯುದ್ಧ ಆರಂಭವಾಗಿತ್ತು. ಇಬ್ಬರು ಪರಸ್ಪರ ಪತ್ರ ಮುಖೇನಾ ಕೆಸರು ಎರಚಿಕೊಂಡ್ರು. ಇದೇ ವೇಳೆ ಪೈಲ್ವಾನ್ ಚಿತ್ರತಂಡ ಸೈಬಲ್ ಪೊಲೀಸರಿಗೆ ದೂರು ನೀಡಿತ್ತು. ನೆಲಮಂಗಲದ ಹಿಮಚೇನಹಳ್ಳಿ ನಿವಾಸಿ ರಾಕೇಶ್ ಫೇಸ್​ಬುಕ್​ನಲ್ಲಿ ಪೈಲ್ವಾನ್ ಸಿನಿಮಾ ರಿಲೀಸ್ ಮಾಡಿರೋದು ಬೆಳಕಿಗೆ ಬಂತು.

ಪೈಲ್ವಾನ್ ಪೈರಸಿ ವೇಳೆ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳ ಕಿತ್ತಾಟ ತಾರಕಕ್ಕೇರುತ್ತಿತ್ತು. ಇತ್ತ ದಾಸ ಅನ್ನದಾತರನ್ನ ಕೆಣಕಿದ್ರೆ ಸುಮ್ಮನಿರೋದಿಲ್ಲ ಅಂತ ಟ್ವೀಟ್ ಮಾಡಿ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ರು. ಮತ್ತೊಂದ್ಕಡೆ ಕಿಚ್ಚ ಆಕ್ರೋಶದಲ್ಲಿ ಕೈಗೆ ಬಳೆತೊಟ್ಟಿಲ್ಲ ಅಂತ ಮಾಡಿದ ಟ್ವೀಟ್ ವಿವಾದಕ್ಕೆ ಸಿಲುಕಿತ್ತು.

ಸಂಜನಾ-ವಂದನಾ ಫೈಟ್.. ಏನಿದು ಗಲಾಟೆ:
2019ರ ಕೊನೆಯಲ್ಲಿ ಗಂಡ ಹೆಂಡ್ತಿ ಖ್ಯಾತಿಯ ಸಂಜನಾ ವಿವಾದಕ್ಕೆ ಸಿಲುಕಿದ್ರು. ಅಷ್ಟಕ್ಕೂ ಡಿಸೆಂಬರ್ 24 ರಂದು ಪಂಚತಾರಾ ಹೋಟೆಲ್‌ನಲ್ಲಿ ನಡೆದ ಘಟನೆ ಇದು. ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಹೊಟೇಲ್​ನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ತಮ್ಮ ಕೈಯಲ್ಲಿನ ವಿಸ್ಕಿ ಗ್ಲಾಸ್​ಅನ್ನು ಸಂಜನಾ ನಿರ್ಮಾಪಕಿ ಮೇಲೆ ಎಸೆದು ರಾದ್ಧಾಂತ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಪೋಲಿಸರ ಮೆಟ್ಟಿಲೇರಿತ್ತು. ಬಳಿಕ ಇಬ್ಬರನೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದರು. ಸದ್ಯ ಇಬ್ಬರೂ ತಮ್ಮ ಜಗಳಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

 

Related Posts :

Category:

error: Content is protected !!

This website uses cookies to ensure you get the best experience on our website. Learn more