ಸಿಲಿಕಾನ್ ಸಿಟಿಯಲ್ಲಿ ಈವರೆಗೆ 397 ಮಂದಿಗೆ ಕೊರೊನಾ ಸೋಂಕು!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿನ್ನೆ ಅಬ್ಬರಿಸಿ ಬೊಬ್ಬಿರಿದಿದೆ. ಜಿಲ್ಲೆ ಜಿಲ್ಲೆಗೂ ಮಹಾರಾಷ್ಟ್ರದ ಮಹಾನಂಜು ವ್ಯಾಪಿಸಿದೆ. ಆದ್ರೆ ಬೆಂಗಳೂರಿನಲ್ಲಿ ಹೊರಗಿನ ನಂಜಿಗಿಂತ ಒಳ ಹೊಡೆತವೇ ಹೆಚ್ಚಾಗ್ತಿದೆ. ನಿನ್ನೆ 15 ಜನರಿಗೆ ಸೋಂಕು ಅಪ್ಪಳಿಸಿದ್ದು, ಸೋಂಕಿತರ ಸಂಪರ್ಕದಿಂದಲೇ ಹಲವರು ಆಸ್ಪತ್ರೆ ಸೇರಿದ್ದಾರೆ.

ಯಾರೂ ಊಹಿಸಲು ಆಗದ ಮಟ್ಟಿಗೆ ಕೊರೊನಾ ರುದ್ರ ನರ್ತನ ಮಾಡುತ್ತಿದೆ. ಕ್ಷಣ ಕ್ಷಣಕ್ಕೂ ಜನರನ್ನ ಬೆಚ್ಚಿ ಬೀಳಿಸುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರನ್ನ ಬಗ್ಗು ಬಡಿಯುತ್ತಿದೆ. ಒಬ್ಬರ ದೇಹದಿಂದ ಮತ್ತೊಬ್ಬರ ದೇಹಕ್ಕೆ ನುಗ್ಗಿ ರಣಕೇಕೆ ಹಾಕುತ್ತಿದೆ.

ಸಿಲಿಕಾನ್‌ ಸಿಟಿಯಲ್ಲಿ ನಿನ್ನೆ 12 ಮಂದಿಗೆ ವಕ್ಕರಿಸಿದ ಕೊರೊನಾ:
ನಿನ್ನೆ ಕೊರೊನಾ ಮಾರುತ ಕರುನಾಡಿಗೆ ಬಂದಪ್ಪಳಿಸಿದೆ. ಮಹಾರಾಷ್ಟ್ರದ ಮಹಾ ಹೊಡೆತಕ್ಕೆ ಇಡೀ ರಾಜ್ಯ ನಲುಗಿ ಹೋಗಿದೆ. ಉಡುಪಿ, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ವಕ್ಕರಿಸಿದ್ರೆ, ಬೆಂಗಳೂರಿನಲ್ಲಿ ಕೊರೊನಾ ಹೆಜ್ಜೆ ಗುರುತೇ ಬೇರೆಯಾಗಿದೆ. ಸೋಂಕಿನ ನಡೆಯೇ ಭಯ ಹುಟ್ಟಿಸುತ್ತಿದೆ. ಹೌದು ಬೆಂಗಳೂರು ನಗರದಲ್ಲಿ ನಿನ್ನೆ 12 ಜನರ ಮೇಲೆ ಕೊರೊನಾ ದಾಳಿ ಮಾಡಿದ್ದು, ಇಲ್ಲಿ ಸೋಂಕಿತರ ಸಂಖ್ಯೆ ಬರೋಬ್ಬರಿ 397 ಕ್ಕೆ ಏರಿಕೆಯಾಗಿದೆ. ಇನ್ನು ಗ್ರಾಮಾಂತರದಲ್ಲಿ ನಿನ್ನೆ ಮೂವರಿಗೆ ಕೊರೊನಾ ಇರೋದು ದೃಢವಾಗಿದೆ. ಎರಡು ಕಡೆ ಸೇರಿ 15 ಜನರಿಗೆ ಕೊರೊನಾ ಬಂದಿದ್ರು, ಸೋಂಕಿತರ ಸಂಪರ್ಕದಿಂದಲೇ ಬರೋಬ್ಬರಿ 9 ಜನರಿಗೆ ಸೋಂಕು ಅಟ್ಯಾಕ್‌ ಆಗಿದೆ. ಸೋಂಕಿನ ಲಕ್ಷಣವೇ ಇಲ್ಲದೆ ಆಸ್ಪತ್ರೆ ಸೇರಿದ್ದ ವೃದ್ಧೆಯಿಂದಲೇ ಕಂಟಕ ಎದುರಾಗಿದೆ.

ಕೊರೊನಾ ಸಂಪರ್ಕ ಸೇತುವೆ!
ಈಗಾಗಲೇ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್‌ ಪಡೆಯುತ್ತಿರೋ 2796 ನೇ ಸೋಂಕಿತನ ಸಂಪರ್ಕದಿಂದಲೇ ನಿನ್ನೆ ಬರೋಬ್ಬರಿ ನಾಲ್ವರಿಗೆ ಕೊರೊನಾ ಬಂದಿದೆ. 45 ವರ್ಷದ ಈ ವ್ಯಕ್ತಿ ಯಶವಂತಪುರದ ನಿವಾಸಿಯಾಗಿದ್ದು, ಈತನಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇರಲಿಲ್ಲ. ಆದ್ರೆ ಈತನಿಂದಲೇ ನಾಲ್ವರಿಗೆ ಸೋಂಕು ಹರಡಿದೆ. ಇನ್ನು 2519 ನೇ ಸೋಂಕಿತ ವೃದ್ಧೆಯಿಂದ ಇಬ್ಬರಿಗೆ ವೈರಸ್‌ ಅಟ್ಯಾಕ್‌ ಮಾಡಿದೆ. ಈ ವೃದ್ಧೆ ಅಗ್ರಹಾರ ದಾಸರಹಳ್ಳಿ ನಿವಾಸಿಯಾಗಿದ್ದು ಈಗಾಗಲೇ ಆಸ್ಪತ್ರೆಯಲ್ಲಿದ್ದಾರೆ. ಅಷ್ಟಕ್ಕೂ ಇವರಿಗೆ ಸೋಂಕಿನ ಲಕ್ಷಣ ಇರಲಿಲ್ಲ. ಅನಾರೋಗ್ಯ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ಹೋಗಿದ್ರು. ಅಲ್ಲಿ ಟೆಸ್ಟ್‌ ಮಾಡಿದಾಗ ಕೊರೊನಾ ಇರೋದು ಗೊತ್ತಾಗಿತ್ತು. ನಿನ್ನೆ ಅವರ ಸಂಪರ್ಕದಲ್ಲಿದ್ದ ಇಬ್ಬರು ಸೋಂಕಿನ ಸುಳಿಗೆ ಬಿದ್ದಿದ್ದಾರೆ. ಇನ್ನು ಮುಂಬೈ ನಂಟು ಬೆಂಗಳೂರನ್ನೂ ಬಿಟ್ಟಿಲ್ಲ. ಮಹಾರಾಷ್ಟ್ರದಿಂದ ಬಂದಿರೋ ಇಬ್ಬರ ಮೇಲೆ ಸೋಂಕಿನ ದಾಳಿಯಾಗಿದೆ. ದೆಹಲಿಯಿಂದ ಬಂದಿರೋ ಇಬ್ಬರು ಯುವಕರಿಗೂ ವೈರಸ್‌ ವಕ್ಕರಿಸಿದೆ.

ಒಬ್ಬ ಯುವತಿಯಿಂದ ಮೂವರಿಗೆ ಸೋಂಕು!
ಇನ್ನು ಬೆಂಗಳೂರು ಗ್ರಾಮಾಂತರದಲ್ಲೂ ಸೋಂಕಿತರ ಸಂಪರ್ಕದಿಂದಲೇ ಕೊರೊನಾ ಹರಡುತ್ತಿದೆ. ಈಗಾಗಲೇ ಕೊರೊನಾ ವಾರ್ಡ್‌ನಲ್ಲಿ ಟ್ರೀಟ್‌ಮೆಂಟ್‌ ಪಡೆಯುತ್ತಿರೋ 20 ವರ್ಷದ ಯುವತಿಯ ಸಂಪರ್ಕದಿಂದ ಮೂವರಿಗೆ ಕೊರೊನಾ ಬಂದಿದೆ.

ಹೋಂ​ ಕ್ವಾರಂಟೈನ್​ನಲ್ಲಿದ್ದ ಪತ್ನಿ, ತಾಯಿಗೆ ಕೊರೊನಾ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇಲತೊರೆ ಗ್ರಾಮದ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. 2550ನೇ ಸೋಂಕಿತನ ಪತ್ನಿ, ತಾಯಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೋಂ​ ಕ್ವಾರಂಟೈನ್​ನಲ್ಲಿದ್ದ ಪತ್ನಿ, ತಾಯಿಗೆ ಕೊರೊನಾ ದೃಢವಾಗಿದೆ. ಒಂದೇ ಕುಟುಂಬದ ಮೂವರಿಗೆ ಸೋಂಕು ಇರೋದು ದೃಢವಾಗಿರೋದ್ರಿಂದ ಇಲತೊರೆ ಗ್ರಾಮದ ಜನರಿಗೆ ಕೊರೊನಾ ಆಂತಕ ಶುರುವಾಗಿದೆ.

ಮಹದೇವಪುರದಲ್ಲೂ ಕೊರೊನಾ ತಕಧಿಮಿತ!
ಇನ್ನು ಮಹಾದೇವಪುರ ಭಾಗದಲ್ಲೂ ಕೊರೊನಾ ಕೇಕೆ ಹಾಕ್ತಿದೆ. ಬೆಳ್ಳಂದೂರು ಖಾಸಗಿ ಅಪಾರ್ಟ್ ಮೆಂಟ್ ನಲ್ಲಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬನಿಗೆ ಕೊರೊನಾ ಬಂದಿದೆಯಂತೆ. ಹೀಗಾಗಿ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಕೊರೊನಾ ವಕ್ಕರಿಸುತ್ತಿರೋದು ಆರೋಗ್ಯಾಧಿಕಾರಿಗಳಲ್ಲಿ ಆತಂಕ ಉಂಟು ಮಾಡಿದೆ.

ಒಟ್ನಲ್ಲಿ ರಾಜ್ಯದಲ್ಲಿ ನಿತ್ಯ ಶತಕ ಬಾರಿಸುತ್ತಿದ್ದ ಕೊರೊನಾ ನಿನ್ನೆ 350ರ ಗಡಿ ತಲುಪಿ ಮುನ್ನುಗುತ್ತಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಕೊರೊನಾ ಅಷ್ಟೊಂದು ಆರ್ಭಟಿಸಿಲ್ಲ ನಿಜ. ಆದ್ರೆ ಸಂಪರ್ಕದಿಂದಲೇ ಇಲ್ಲಿ ಸೋಂಕು ಹರಡುತ್ತಿರೋದು ಆತಂಕಕ್ಕೆ ಕಾರಣವಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more