ಟ್ರಕ್​-ಬಸ್​ ನಡುವೆ ಭೀಕರ ಅಪಘಾತ; ಕೆಲಸಕ್ಕೆ ಹೊರಟಿದ್ದ ಗಾರ್ಮೆಂಟ್ಸ್​ ಫ್ಯಾಕ್ಟರಿಯ 41 ಮಂದಿ ದುರ್ಮರಣ

ಬಸ್​ನಲ್ಲಿ ಟೆಕ್ಸ್​ಟೈಲ್​ ಕಾರ್ಖಾನೆಯ  ಉದ್ಯೋಗಿಗಳು ಪ್ರಯಾಣಿಸುತ್ತಿದ್ದರು. ಇವರೆಲ್ಲ ಮುಂಜಾನೆ ಕೆಲಸಕ್ಕೆ ಹೊರಟವರು. ಸಾವೊಪೊಲೊ ರಾಜ್ಯದ ಟಾಗುಯಿ ಎಂಬಲ್ಲಿ ಈ ಬಸ್​ಗೆ ಟ್ರಕ್​ ಡಿಕ್ಕಿಯಾಗಿದೆ.

  • Lakshmi Hegde
  • Published On - 9:51 AM, 26 Nov 2020

ಬ್ರೆಸಿಲಿಯಾ: ಆಗ್ನೇಯ ಬ್ರೆಜಿಲ್​ನ ಸಾವೊ ಪಾಲೊ ರಾಜ್ಯದಲ್ಲಿ ಇಂದು (ನ.26) ಮುಂಜಾನೆ ಬಸ್​ ಹಾಗೂ ಟ್ರಕ್​ ನಡುವೆ ನಡೆದ ಭೀಕರ ಅಪಘಾತದಲ್ಲಿ 41 ಮಂದಿ ಮೃತಪಟ್ಟಿದ್ದು, 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್​ನಲ್ಲಿ ಟೆಕ್ಸ್​ಟೈಲ್​ ಕಾರ್ಖಾನೆಯ  ಉದ್ಯೋಗಿಗಳು ಪ್ರಯಾಣಿಸುತ್ತಿದ್ದರು. ಇವರೆಲ್ಲ ಮುಂಜಾನೆ ಕೆಲಸಕ್ಕೆ ಹೊರಟವರು. ಟಾಗುಯಿ ಎಂಬಲ್ಲಿ ಈ ಬಸ್​ಗೆ ಟ್ರಕ್​ ಡಿಕ್ಕಿಯಾಗಿದೆ. ನಾವು ಹೋಗುವಷ್ಟರಲ್ಲಿ ಸುತ್ತಮುತ್ತ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ರಕ್ತ ಹರಿಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನಗಳು, ಜನರ ದೇಹಗಳು ನಜ್ಜುಗುಜ್ಜಾಗಿವೆ. ಬಸ್​​ನಲ್ಲಿ ಇದ್ದವರು ಯಾರು, ಟ್ರಕ್​ನಲ್ಲಿ ಇದ್ದವರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೊದಲು ಸಾವಿನ ಸಂಖ್ಯೆ 32 ಇತ್ತು. ಅದು ಇನ್ನಷ್ಟು  ಏರಿದೆ. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸಾಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಟಾಗುಯಿ ಪಟ್ಟಣ ಬ್ರೆಜಿಲ್​ನ ಅತಿದೊಡ್ಡ ರಾಜ್ಯ, ಆರ್ಥಿಕ ರಾಜಧಾನಿಯಾದ ಸಾವೊಪೊಲೊದಿಂದ 340 ಕಿಮೀ ದೂರ ಇದೆ. ಸ್ಥಳೀಯ ಮಾಧ್ಯಮವೊಂದು ಬಸ್​ನಲ್ಲಿ 53 ಮಂದಿ ಇದ್ದರು. ಟ್ರಕ್​ ಡ್ರೈವರ್ ಬದುಕಿದ್ದಾರೆ ಎಂದು ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬ್ರೆಜಿಲ್​ನಲ್ಲಿ ಇಷ್ಟು ಭೀಕರ ಮಟ್ಟದ ಅಪಘಾತ ಸಂಭವಿಸಿರಲಿಲ್ಲ ಎನ್ನಲಾಗಿದೆ.