ಪೇಡಾ ನಗರಿಯಲ್ಲೊಂದು ಅಪರೂಪದ ದೇಶಿ ನಾಯಿ! ಆರಕ್ಷಕರ ರಕ್ಷಕ ಈ ರಾಜ..

ಧಾರವಾಡ : ಸಮಾಜದಲ್ಲಿ ಏನೇ ಸಮಸ್ಯೆಯಾದರೂ ರಕ್ಷಣೆಗೆ ಬರಬೇಕಾದವರು ಪೊಲೀಸರೇ. ಅವರೇ ಎಲ್ಲರ ರಕ್ಷಕರು. ಇಂಥ ಪೊಲೀಸರಿಗೆೇ ಧಾರವಾಡದಲ್ಲೊಂದು ಶ್ವಾನ ರಕ್ಷಣೆ ನೀಡುತ್ತಿದೆ. ಅದರಲ್ಲೂ ಅದು ಕಂಟ್ರಿ ನಾಯಿ ಅನ್ನೋದು ವಿಶೇಷ.

ಹೌದು ಯಾವುದೇ ತರಬೇತಿ ಇಲ್ಲದ ನಾಯಿ ಧಾರವಾಡದ ಶಹರ ಠಾಣೆಯ ರಕ್ಷಣೆಗೆ ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುತ್ತಿದೆ. ಹೀಗಾಗಿಯೇ ಠಾಣೆಯ ಸಿಬ್ಬಂದಿ ಇದಕ್ಕೆ ಪ್ರೀತಿಯಿಂದ ರಾಜಾ ಅಂತಾ ಹೆಸರಿಟ್ಟಿದ್ದಾರೆ. ಆಕಸ್ಮಿಕವಾಗಿ ಮರಿಯಿದ್ದಾಗ ಆಹಾರಕ್ಕಾಗಿ ಠಾಣೆ ಬಳಿ ಅಲೆದಾಡುವಾಗ ಸಿಬ್ಬಂದಿ ಇದಕ್ಕೆ ಆಹಾರ ನೀಡಿದ್ದಾರೆ. ಅಂದಿನಿಂದ ಠಾಣೆಯ ಬಳಿಯೇ ಇರಲು ಶುರು ಮಾಡಿದ ನಾಯಿ ಮರಿ ಈಗ ಠಾಣೆಯ ರಕ್ಷಕ ‘ರಾಜ’ ನಾಗಿ ಬೆಳೆದಿದೆ.

ಕುಡಿದು ಬರೋರನ್ನ ಠಾಣೆಯಿಂದಲೇ ಓಡಿಸುತ್ತೆ
ದಿನಗಳೆದಂತೆ ರಾಜಾ ಠಾಣೆ ತನ್ನದು, ಠಾಣೆ ಹಾಗೂ ಸಿಬ್ಬಂದಿಯ ರಕ್ಷಣೆ ತನ್ನ ಹೊಣೆ ಎನ್ನುವಂತೆ ಹಗಲು-ರಾತ್ರಿ ಠಾಣೆಯ ಬಾಗಿಲಲ್ಲಿಯೇ ಇದ್ದು ಕಾಯತೊಡಗಿದೆ. ಯಾರಾದರೂ ಠಾಣೆಗೆ ಕುಡಿದು ಬಂದರೆ ಸಾಕು ಅವರನ್ನು ಠಾಣೆಯೊಳಗೆ ಬಿಡುವುದೇ ಇಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಕುಡಿದು ಠಾಣೆಗೆ ಬರೋರನ್ನು ಗುರುತಿಸಿ, ಬೊಗಳಲು ಶುರು ಮಾಡುತ್ತದೆ. ಸಾಮಾನ್ಯವಾಗಿ ತರಬೇತಿ ನೀಡಿದ ನಾಯಿಗಷ್ಟೇ ಈ ರೀತಿ ವರ್ತಿಸುತ್ತವೆ. ಆದರೆ ಈ ರಾಜಾ ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಕುಡಿದು ಠಾಣೆಗೆ ಬರೋರನ್ನು ಗುರುತಿಸುತ್ತೆ.

ಪೊಲೀಸರಿಗೇ ರಕ್ಷಕ ಈ ರಾಜ
ಇನ್ನು ಯಾರಾದರೂ ಪೊಲೀಸ್ ಸಿಬ್ಬಂದಿಯನ್ನು ಜೋರಾಗಿ ಮಾತನಾಡಿಸಿದರೆ, ಬೆದರಿಕೆಯೊಡ್ಡಿದರೆ ಅವರ ಮೇಲೆ ಅಟ್ಯಾಕ್ ಮಾಡತ್ತದೆ. ಅಂಥವರನ್ನು ಠಾಣೆಯಿಂದ ಹೊರಗೆ ಕಳಿಸೋವರೆಗೂ ಬಿಡೋದೇ ಇಲ್ಲ. ರಾತ್ರಿ ಎಂಟರಿಂದ ಬೆಳಗಿನವರೆಗೂ ಠಾಣೆಯ ಬಾಗಿಲಲ್ಲಿ ಒಂದು ಕ್ಷಣವೂ ನಿದ್ದೆ ಮಾಡದೇ ಕಾಯೋದು ರಾಜಾನಿಗೆ ರೂಢಿಯಾಗಿ ಹೋಗಿದೆ.

ಪೊಲೀಸರಿಗೂ ರಾಜನಿಗೂ ಜನುಮ ಜನುಮದ ಅನುಬಂಧ
ಹಾಗೇನೆ ಠಾಣೆಯ ಈ ರಾಜನಿಗೆ ನಿತ್ಯವೂ ಸಿಬ್ಬಂದಿಯೇ ಊಟ ನೀಡುತ್ತೆ. ರಾತ್ರಿ ಪಾಳೆಗೆ ಬರುವ ಸಿಬ್ಬಂದಿ ಮನೆಯಿಂದ ಅಥವಾ ಹೋಟೆಲ್ ನಿಂದ ಮಾಂಸಾಹಾರ ತಂದು ನೀಡುತ್ತಾರೆ. ಮತ್ತೆ ಬೆಳಿಗ್ಗೆ ಕರ್ತವ್ಯಕ್ಕೆ ಬರುವ ಮಹಿಳಾ ಸಿಬ್ಬಂದಿ ಮನೆಯಿಂದ ಉಪಹಾರ ತಂದು ನೀಡುತ್ತಾರೆ. ಪಾಳೆಯ ಪ್ರಕಾರ ಸಿಬ್ಬಂದಿ ಮನೆಯಿಂದಲೋ ಅಥವಾ ಹೋಟೆಲ್ ನಿಂದಲೋ ಇದಕ್ಕೆ ಊಟದ ವ್ಯವಸ್ಥೆ ಮಾಡುತ್ತಾರೆ. ಇತ್ತೀಚಿಗೆ ನಾಲ್ಕಾರು ಬೀದಿ ನಾಯಿಗಳು ಸೇರಿ ಇದಕ್ಕೆ ಕಚ್ಚಿದ್ದಾಗ, ಠಾಣೆಯ ಸಿಬ್ಬಂದಿಯೇ ಮುಂದೆ ನಿಂತು ಆಪರೇಷನ್ ಮಾಡಿಸಿ ನಿತ್ಯವೂ ಉಪಚಾರ ಮಾಡಿ ತಮ್ಮ ನೆಚ್ಚಿನ ರಾಜಾನನ್ನು ಉಳಿಸಿಕೊಂಡಿದ್ದಾರೆ.

ದೇಶಿ ನಾಯಿಗಳೂ ಶ್ರೇಷ್ಠ ಅಂತಿದೆ ರಾಜ

ಒಟ್ಟಿನಲ್ಲಿ ದೇಶ-ವಿದೇಶಗಳ ನಾಯಿಗಳೇ ಶ್ರೇಷ್ಠ ಅನ್ನುವವರಿಗೆ ಈ ರಾಜಾನನ್ನು ಒಮ್ಮೆ ತೋರಿಸಲೇಬೇಕು. ದೇಶಿ ನಾಯಿಗಳು ಕೂಡ ಸಾಕಷ್ಟು ಜಾಣತನ ಪ್ರದರ್ಶಿಸೋದಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟು ಮಾಲೀಕರನ್ನು ರಕ್ಷಣೆ ಮಾಡೋ ಸಾಮರ್ಥ್ಯ ಹೊಂದಿವೆ ಅನ್ನೋದನ್ನ ಈ ನಾಯಿಯನ್ನು ನೋಡಿದ್ರೆ ಖಂಡಿತವಾಗಿ ಅರ್ಥವಾಗುತ್ತೆ.
-ನರಸಿಂಹಮೂರ್ತಿ ಪ್ಯಾಟಿ

Related Tags:

Related Posts :

Category:

error: Content is protected !!