ದೇಹ ನೀಡದೆ ಆಕಾಶ್ ಆಸ್ಪತ್ರೆಯ ಎಡವಟ್ಟು, ಈಗ ಸೆಟಲ್ಮೆಂಟ್​ಗೆ ಕರೆಯುತ್ತಿದ್ದಾರಂತೆ!

ಬೆಂಗಳೂರು: ಕೊರೊನಾ ಸೋಂಕಿನಿಂದ ವ್ಯಕ್ತಿ ಸಾವನ್ನಪ್ಪಿ 3 ದಿನವಾದರೂ, ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಸಂಬಂಧಿಕರಿಗೆ ನೀಡದ ಕಾರಣ, ಸಂಬಂಧಿಕರು ಆಸ್ಪತ್ರೆ ವಿರುದ್ಧ ಕಿಡಿಕಾರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೆಪಿ ಅಗ್ರಹಾರದ 53 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದೆ. ಹೀಗಾಗಿ ವ್ಯಕ್ತಿಯನ್ನು ಬಿಬಿಎಂಪಿ ಆದೇಶದ ಮೇರೆಗೆ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಮರುದಿನವೇ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸೆಟಲ್ಮೆಂಟ್ ಮಾಡೋಣ ಬನ್ನಿ ಎಂದು ಕರೆಯುತ್ತಿದ್ದಾರೆ
ಆದರೆ ಮೂರು ದಿನವಾದರೂ ಆಸ್ಪತ್ರೆ ಸಿಬ್ಬಂದಿ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ನೀಡಿಲ್ಲ. ಹೀಗಾಗಿ ಕುಟುಂಬಸ್ಥರು ಬಿಬಿಎಂಪಿ ಅಧಿಕಾರಿಗಳ ಮೊರೆಹೋಗಿದ್ದಾರೆ. ಆದರೆ ಅಲ್ಲೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ 3 ದಿನಗಳ ಅಂತರ ಕುಟುಂಬಸ್ಥರಿಗೆ ಕರೆ ಮಾಡಿದ ಖಾಸಗಿ ಆಸ್ಪತ್ರೆ ಸಿಬ್ಬಂದಿ, ಒಟ್ಟಾರೆಯಾಗಿ 5 ಮೃತದೇಹಗಳಿವೆ. ಅದರಲ್ಲಿ ನಿಮ್ಮ ಸಂಬಂಧಿಕರ ಮೃತದೇಹ ಯಾವುದು ಎಂಬುದನ್ನು ಗುರುತು ಮಾಡಿ ಎನ್ನುತ್ತಿದ್ದಾರೆ.

ಮೃತಪಟ್ಟು ಮೂರು ದಿನ ಕಳೆದಿರುವುದರಿಂದ ಕುಟುಂಬಸ್ಥರಿಗೆ ಮೃತದೇಹ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೂರು ದಿನಗಳಿಂದ ಆಸ್ಪತ್ರೆಯವರು ಮೃತದೇಹ ಇಟ್ಟುಕೊಂಡು ನಮ್ಮನ್ನು ಸತಾಯಿಸಿದ್ದಾರೆ. ಈಗ ಸೆಟಲ್ಮೆಂಟ್ ಮಾಡೋಣ ಬನ್ನಿ ಎಂದು ಕರೆಯುತ್ತಿದ್ದಾರೆ. ಹೀಗಾಗಿ ಇಂತಹವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮೃತನ ಸಂಬಂಧಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

Related Tags:

Related Posts :

Category: