ಫಿನಾಯಿಲ್ ಮಾರುವ ಯುವತಿ, ಮನೆ ದರೋಡೆಗೆ ಮುನ್ನ ಮಾಡಿದ ಹೇಯ ಕೃತ್ಯವೇನು?

  • TV9 Web Team
  • Published On - 13:57 PM, 3 Aug 2020

ವಿಜಯಪುರ: ಮನೆಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದ ಯುವತಿ ಮನೆಯ ಸದಸ್ಯರಿಗೆಲ್ಲ ಮಂಪರು ಬರಿಸುವ ಔಷಧ ಸಿಂಪಡಣೆ ಮಾಡಿ ಪ್ರಜ್ಞೆ ತಪ್ಪಿಸಿ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಶಾಂತಿನಗರದ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 2.20 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಮಧ್ಯಾಹ್ನ ಮನೆ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದಿದ್ದ ಯುವತಿ ಮೊದಲು ಕೇಶವ ತೋಳಬಂದಿಗೆ ಫೆನಾಯಿಲ್ ವಾಸನೆ ತೋರಿಸುವ ನೆಪದಲ್ಲಿ ಪ್ರಜ್ಞೆ ತಪ್ಪಿಸಿದ್ದಾಳೆ. ನಂತರ ಸುನಂದ ತೋಳಬಂದಿ ಹಾಗೂ ಅವರ ಪತಿ ವಾಸುದೇವ ತೋಳಬಂದಿಗೂ ಮಂಪರು ಬರಿಸುವ ಸ್ಪ್ರೇ ಸಿಂಪಡಣೆ ಮಾಡಿ ಅವರ ಮನೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ನಾಯಿಗೆ ಆಹಾರದಲ್ಲಿ ವಿಷವುಣಿಸಿ ಕೊಂದಿದ್ದಾಳೆ
ಈ ದರೋಡೆಗೆ ಮೊದಲೇ ತಯಾರಿ ನಡೆಸಿದ್ದ ಯುವತಿ ಕೃತ್ಯಕ್ಕೂ ಮೊದಲು ಮನೆಯ ಆವರಣದಲ್ಲಿದ್ದ ನಾಯಿಗೆ ಆಹಾರದಲ್ಲಿ ವಿಷವುಣಿಸಿ ಕೊಂದಿದ್ದಾಳೆ ಎನ್ನಲಾಗಿದೆ. ಸದ್ಯ ವಿಜಯಪುರ ನಗರದ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.