ದಿಲ್ಲಿ ಜನತೆ ದಿಲ್ ಗೆಲ್ಲಲು ಫೀಲ್ಡಿಗಿಳಿದ ಆದಿತ್ಯನಾಥ್, ಪ್ರಚಾರ ನಿಷೇಧಿಸುವಂತೆ AAP ಒತ್ತಾಯ

ದೆಹಲಿ: ಗದ್ದುಗೆಗೇರಲು ಆಮ್ ಆದ್ಮಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ದೆಹಲಿ ಗೆಲ್ಲಲು ಬಿಜೆಪಿ ಹರಸಾಹಸ ಮಾಡ್ತಿದೆ. ಉತ್ತರಪ್ರದೇಶ ಸಿಎಂ‌ ಆದಿತ್ಯನಾಥ್ ಪ್ರಚೋದನಾಕಾರಿ ಭಾಷಣ ಮಾಡ್ತಿದ್ದಾರೆ. ಯೋಗಿ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಆಪ್ ಪಕ್ಷ ಆಯೋಗದ ಮೊರೆಹೋಗಿದೆ.

ರಾಷ್ಟ್ರ ರಾಜಧಾನಿ ಗದ್ದುಗೆಗೇರಲು ರಾಜಕೀಯ ಪಕ್ಷಗಳ ಹಣಾಹಣಿ ಜೋರಾಗಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷದಿಂದ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿ ಇನ್ನಿಲ್ಲದ ಹೋರಾಟ ಮಾಡ್ತಿದೆ. ಶತಾಯಗತಾಯ ಸಿಎಂ ಕೇಜ್ರಿವಾಲರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಅಂತಾ ಪಣ ತೊಟ್ಟಿರುವ ಬಿಜೆಪಿ, ಬೇರೆ ರಾಜ್ಯಗಳಿಂದ ಪ್ರಚಾರಕರನ್ನ ಕರೆತಂದು ಮತಬೇಟೆಗಿಳಿದಿದೆ.

ದಿಲ್ಲಿ ಜನತೆ ದಿಲ್ ಗೆಲ್ಲಲು ಬಂದ ಯುಪಿ ಫೈರ್ ಬ್ರಾಂಡ್:
ದೆಹಲಿಯಲ್ಲಿ ಉತ್ತರಪ್ರದೇಶದಿಂದ ಬಂದಿರುವ ಜನರು ಹೆಚ್ಚಿದ್ದು, ಅವರ ಮತಸೆಳೆಯಲು ಹಿಂದುತ್ವದ ಫೈರ್ ಬ್ರಾಂಡ್ ಅಂತಾ ಕರೆಸಿಕೊಳ್ಳೊ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ. ಪ್ರಚಾರ ಭಾಷಣದಲ್ಲಿ ಆದಿತ್ಯನಾಥ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ರನ್ನೇ ಟಾರ್ಗೆಟ್​ ಮಾಡ್ತಿದ್ದಾರೆ.

ಪ್ರಚಾರದ ಆರಂಭದಲ್ಲೇ ಬೆಂಕಿಯುಗುಳಿರೋ ಯೋಗಿ, ಸಿಎಎ ವಿರೋಧಿಸಿ ಶಾಹೀನ್ ಬಾಗ್​ನಲ್ಲಿ ಪ್ರತಿಭಟನೆ ಕುಳಿತವರಿಗೆ ಕೇಜ್ರೀವಾಲ್ ಬಿರಿಯಾನಿ ನೀಡುತ್ತಿದ್ದಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರೋ ಆಪ್, ಚುನಾವಣೆಗಳಿಗಾಗಿ ದೆಹಲಿಯಲ್ಲಿ ಪ್ರಚಾರ ಮಾಡುವುದನ್ನ ನಿಷೇಧಿಸುವಂತೆ ಚುನಾವಣಾ ಆಯೋಗವನ್ನ ಒತ್ತಾಯಿಸಿದೆ. ಸಿಎಂ ಯೋಗಿ ವಿರುದ್ಧ ಎಫ್‌ಐಆರ್ ಹಾಕುವಂತೆ ಕೋರಿದೆ.

ಚುನಾವಣಾ ಕಣದಲ್ಲಿ ಸದ್ದು ಮಾಡದ ಕಾಂಗ್ರೆಸ್:
ದೆಹಲಿ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಇದ್ದು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ, ಎಎಪಿ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಿದೆ. ಈ ಮಧ್ಯೆ ಕಾಂಗ್ರೆಸ್ ಸೈಲೆಂಟಾಗಿಯೇ ಪ್ರಣಾಳಿಕೆ ಬಿಡುಗಡೆಮಾಡಿದೆ. ಕಾಂಗ್ರೆಸ್ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ನಿರುದ್ಯೋಗ ವೇತನ ನೀಡುವ ಯುವ ಸ್ವಾಭಿಮಾನ್‌ ಯೋಜನೆಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗೋದು ಮತ್ತು ಎನ್‌ಆರ್‌ಸಿಯನ್ನು ಜಾರಿ ಮಾಡದೇ ಇರುವುದು. ಹೀಗೆ ಕಾಂಗ್ರೆಸ್ ಅಂತಿಮವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿ ನಾನು ಕೂಡ ಕಣದಲ್ಲಿದ್ದೀನಿ ಅನ್ನೋದನ್ನು ತೋರಿಸಿದೆ. ಪ್ರಣಾಳಿಕೆಗಳ ಭರಾಟೆಯಲ್ಲಿ ದೆಹಲಿ ಮತದಾರ ಯಾರಿಗೆ ಮಣಿಯುತ್ತಾನೆ ನೋಡಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!