ಕಳಸಾ ಬಂಡೂರಿ ಯೋಜನೆಗೆ ಸರ್ಕಾರದಿಂದ ಸಿಕ್ತು ಆಡಳಿತಾತ್ಮಕ ಅನುಮೋದನೆ

ಬೆಳಗಾವಿ:  ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿಯೂ ಸದ್ದಿಲ್ಲದೆ ಸರ್ಕಾರ ಕಳಸಾ ಬಂಡೂರಿ ನಾಲಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು ವಿಸ್ತೃತ ಯೋಜನಾ ವರದಿಯ ಅನುಷ್ಠಾನಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.

ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ‌ ನದಿಗೆ ಅಣೆಕಟ್ಟು ನಿರ್ಮಿಸಿ ಕೂಡು ಕಾಲುವೆಯ ಮುಖಾಂತರ  ಕುಡಿಯುವ ಉದ್ದೇಶಕ್ಕಾಗಿ 1.72 ಟಿಎಂಸಿ ನದಿ ನೀರನ್ನು ಮಲಪ್ರಭಾ ನದಿಗೆ ಹರಿಸಲು ರೂಪಿಸಲಾದ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಜೊತೆಗೆ,  ಖಾನಾಪುರ ತಾಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ, ಕೂಡು ಕಾಲುವೆ ಮುಖಾಂತರ  ಕುಡಿಯುವ ಉದ್ದೇಶಕ್ಕಾಗಿ 2.18 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮಲಪ್ರಭಾ ನದಿಗೆ ಹರಿಸಲು ರೂಪಿಸಲಾದ ಬಂಡೂರಿ ನಾಲಾ ತಿರುವು ಯೋಜನೆಗೂ ಸಹ ಆಡಳಿತಾತ್ಮಕ ಅನುಮೋದನೆ‌ ನೀಡಿದೆ‌.

ಸಿಎಂ ಬಿಎಸ್ ಯಡಿಯೂರಪ್ಪಗೆ ಸಚಿವ ರಮೇಶ್ ಜಾರಕಿಹೊಳಿ ಅಭಿನಂದನೆ
ಆಡಳಿತಾತ್ಮಕ ಒಪ್ಪಿಗೆಯ ಜೊತೆಗೆ 885.80 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಸಹ ತಾತ್ವಿಕ ಒಪ್ಪಿಗೆ
ದೊರಕಿದೆ. ಯೋಜನೆಯನ್ನ ಕಾರ್ಯರೂಪಕ್ಕೆ ತರಲು ಅನುಕೂಲ ಮಾಡಿಕೊಟ್ಟ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅಭಿನಂದಿಸಿದ್ದಾರೆ. ಹಾಗೆಯೇ, ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು‌ ತಿಳಿಸಿದ್ದಾರೆ.

ಸರ್ಕಾರದ ಆದೇಶದಲ್ಲಿ ಏನಿದೆ?
1.ಕಳಸಾ ನಾಲಾ ತಿರುವ ಯೋಜನೆಗೆ 885.80 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ತಾತ್ವಿಕ ಆಡಳಿತಾತ್ಮಕ ಅನುಮೋದನೆ
2. ಯೋಜನೆಯ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಪಡೆಯಬೇಕು.

ಒಟ್ನಲ್ಲಿ, ಸರ್ಕಾರ ಶೀಘ್ರದಲ್ಲಿ ಕಾಮಗಾರಿ ಆರಂಭಿಸುವ ಎಲ್ಲಾ ಮುನ್ಸೂಚನೆಯನ್ನ ನೀಡಿದೆ. ಕೊರೊನಾ ಸಂದರ್ಭದಲ್ಲಿಯೂ ಸರ್ಕಾರದ ನಿರ್ಧಾರದಿಂದಾಗಿ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!