ದಿಲ್ಲಿ ದಂಗಲ್ ಬಗ್ಗೆ ಅಮಿತ್ ಶಾ ಆತ್ಮಾವಲೋಕನ, ಎಡವಿದ್ದೆಲ್ಲಿ ಅನ್ನೋದಕ್ಕೆ ಕಾರಣ ಕೊಟ್ಟ ಚಾಣಕ್ಯ

ದೆಹಲಿ: ದಂಗಲ್​ನಲ್ಲಿ ಆಪ್ ಪವರ್ ಮುಂದೆ ಬಿಜೆಪಿ ಮಕಾಡೆ ಮಲಗಿ ಬಿಡ್ತು. 250 ಸಂಸದರು, ಸಚಿವರು, ಸಿಎಂಗಳು, ಪ್ರಧಾನಿ ಮೋದಿ ನಿರಂತರ ಪ್ರಚಾರ ಮಾಡಿದ್ರೂ ಗೆಲ್ಲಲಾಗದೇ ಮಂಡಿಯೂರಿಬಿಟ್ರು. ಆದ್ರೀಗ ಆ ಹೀನಾಯ ಸೋಲಿಗೆ ಅಮಿತ್ ಶಾ ಕಾರಣ ನೀಡಿದ್ದಾರೆ.

3 ದಿನಗಳ ಬಳಿಕ ಅಮಿತ್ ಶಾ ಆತ್ಮಾವಲೋಕನ:
ಇಡೀ ದೇಶದ ಗಮನ ಸೆಳೆದಿದ್ದು ದೆಹಲಿ ವಿಧಾನಸಭೆ ದಂಗಲ್. ಇಡೀ ದೇಶದ ಜನರನ್ನೇ ತಿರುಗಿ ನೋಡುವಂತೆ ಮಾಡಿದ್ದು ದೆಹಲಿಯ ರೋಚಕ ಕದನ. ಯಾಕಂದ್ರೆ, ರಾಷ್ಟ್ರರಾಜಧಾನಿಯ ಕಾವೇರಿದ ಕಣದಲ್ಲಿ ಕಾದಾಡಿದ್ದು ದಿಗ್ಗಜ ನಾಯಕರು. ಆಪ್​ನಿಂದ ಕೇಜ್ರಿವಾಲ್ ಅನ್ನೋ ಅಭಿವೃದ್ಧಿ ಹರಿಕಾರ ಏಕಾಂಗಿಯಾಗಿ ಹೋರಾಡ್ತಿದ್ರೆ, ಕಾಂಗ್ರೆಸ್, ಬಿಜೆಪಿ ನಾಯಕರ ದಂಡೇ ಮಿಂಚಿನಂತೆ ಕಾದಾಡುತ್ತಿತ್ತು. ಅದ್ರಲ್ಲೂ ಬಿಜೆಪಿಯ 250ಕ್ಕೂ ಸಂಸದರು, ಕೇಂದ್ರ ಸಚಿವರುಗಳು ಹಾಗೂ ವಿವಿಧ ರಾಜ್ಯಗಳ ಸಿಎಂಗಳು ಮತ್ತು ಪ್ರಧಾನಿ ಮೋದಿ ಱಲಿ ನಡೆಸಿದ್ರು. ಆದ್ರೆ, ಅಂತಿಮವಾಗಿ ಮತದಾರ ಆಶೀರ್ವಾದ ಮಾಡಿದ್ದು ಅರವಿಂದ್ ಕೇಜ್ರಿವಾಲ್​ಗೆ.

ನಿಜ.. ದೆಹಲಿ ದಂಗಲ್​ನಲ್ಲಿ ಕೇವಲ 8 ಸ್ಥಾನ ಗೆದ್ದು ಕಮಲ ಪಡೆ ಸೋತು ಸುಣ್ಣವಾಗಿಬಿಡ್ತು. ಆದ್ರೆ, ಆ ರೀತಿ ಹೀನಾಯವಾಗಿ ಬಿಜೆಪಿ ಸೋಲೋಕೆ ಕಾರಣಗಳೇನು? ಅಸಲಿಗೆ ಬಿಜೆಪಿ ಎಡವಿದ್ದೆಲ್ಲಿ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ವು. ಆ ಪ್ರಶ್ನೆಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ. ರಿಸಲ್ಟ್ ಬಂದ ಮೂರು ದಿನಗಳ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೋಲಿಗೆ ಕಾರಣಗಳನ್ನು ನೀಡಿದ್ದಾರೆ.

‘ಅತಿರೇಕದ ಹೇಳಿಕೆಗಳಿಂದಲೇ ಹೀನಾಯ ಸೋಲು’
ಯೆಸ್. ಖಾಸಗಿ ಕಾರ್ಯಕ್ರಮದಲ್ಲಿ ಅಮಿತ್ ಶಾ, ರಾಷ್ಟ್ರೀಯ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ತಮಗಾದ ಹಿನ್ನಡೆಗೆ ಕಾರಣಗಳೇನು ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದನ್ನು ಒಂದೊಂದಾಗೇ ಹೇಳ್ತೀವಿ ನೋಡಿ.

ಸೋಲಿಗೆ ಕಾರಣ ನಂಬರ್ 1:
ದೆಹಲಿ ಅಖಾಡದಲ್ಲಿ ಪ್ರಚಾರದ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಒಂದು ಹೇಳಿಕೆ ಕೊಟ್ಟಿದ್ದರು. ದೇಶ್ ಕೆ ಗದ್ದಾರೋಂಕೋ ಅಂತಾ ಅವರು ಕೂಗುತ್ತಿದ್ರೆ, ಱಲಿಯಲ್ಲಿ ನೆರೆದಿದ್ದ ಜನ ಗೋಲಿ ಮಾರೋ ಅಂತಾ ಹೇಳ್ತಿದ್ರು. ಅನುರಾಗ್ ಠಾಕೂರ್ ಈ ನಡೆ ಪಕ್ಷಕ್ಕೆ ಹಿನ್ನಡೆ ತಂದು ಕೊಟ್ಟಿದ್ದು, ಇದೂ ಕೂಡ ಸೋಲಿಗೆ ಕಾರಣವಾಗಿದೆ ಅಂತಾ ಅಮಿತ್ ಶಾ ಹೇಳಿದ್ದಾರೆ.

ಸೋಲಿಗೆ ಕಾರಣ ನಂಬರ್ 2:
ಮತ್ತೊಂದೆಡೆ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಚುನಾವಣಾ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ರು.. ಅರವಿಂದ್ ಕೇಜ್ರಿವಾಲ್ ಓರ್ವ ಭಯೋತ್ಪಾದಕನಾಗಿದ್ದು, ಇದಕ್ಕೆ ಸಾಕ್ಷ್ಯ ಇದೆ ಅಂತಾ ಹೇಳಿ ವಿವಾದ ಸೃಷ್ಟಿಸಿದ್ರು.. ಆದ್ರೆ, ಅದೇ ಮಾತು ಸೋಲಿಗೆ ಕಾರಣವಾಗಿದೆ ಅಂತಾ ಅಮಿತ್ ಹೇಳಿದ್ದಾರೆ.

ನಾಯಕರ ಇಂಥಾ ಹೇಳಿಕೆಗಳು ಪಕ್ಷಕ್ಕೆ ದುಬಾರಿಯಾಗಿದ್ದು, ಫಲಿತಾಶದ ಮೇಲೆ ಪರಿಣಾ ಬೀರಿರುವುದು ನಿಜ ಅಂದಿದ್ದಾರೆ. ಅಲ್ದೆ, ದೆಹಲಿ ಚುನಾವಣೆ ಕುರಿತಾದ ನನ್ನ ಕಾರ್ಯಸೂಚಿ ತಪ್ಪಾಗಿದೆ. ಮಿತಿ ಮೀರಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ ನಾಯಕರುಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಇದೇ ಕಾರಣದಿಂದಾಗಿ ನಿರೀಕ್ಷಿತ ಫಲಿತಾಂಶದಿಂದ ಬಿಜೆಪಿ ತೀರಾ ಕೆಳಗೆ ಬಿದ್ದಿದೆ ಅಂತಾ ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ.

ಸೋತರೂ ವೋಟ್ ಬ್ಯಾಂಕ್ ಭದ್ರಪಡಿಸಿಕೊಂಡಿದ್ದೇವೆ:
ಇನ್ನು ದೆಹಲಿ ವಿಧಾನಸಭಾ ಚುನಾವಣೆ ಸೋಲು ಬಿಜೆಪಿಗೆ ಹಿನ್ನಡೆಯಾಗಿಲ್ಲ. ನಮ್ಮ ವೋಟ್ ಬ್ಯಾಂಕ್​ನ್ನು ಭದ್ರಪಡಿಸಿಕೊಂಡಿದ್ದೇವೆ. ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ನಮ್ಮ ಸಿದ್ಧಾಂತವನ್ನು ಹರಡುವುದು ಮುಖ್ಯ ಅಂತಾ ಅಮಿತ್ ಶಾ ಹೇಳಿದ್ದಾರೆ. ಜೊತೆಗೆ ದೆಹಲಿ ಚುನಾವಣೆಯ ಸೋಲನ್ನು ಸಿಎಎ, ಎನ್​ಆರ್​ಸಿ ವಿರುದ್ಧ ಜನರ ತೀರ್ಪು ಅಂತಾ ಭಾವಿಸಬಾರದು ಅಂತಲೂ ಹೇಳಿದ್ದಾರೆ.

ಒಟ್ನಲ್ಲಿ, ದೆಹಲಿ ವಿಧಾನಸಭೆ ಸೋಲಿನ ಬಗ್ಗೆ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ತಿದ್ದಾರೆ. ರಿಸಲ್ಟ್ ಬಂದು 3 ದಿನ ಕಳೆದ ಬಳಿಕ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದು, ನಾಯಕರ ಅತಿರೇಕದ ಹೇಳಿಕೆಗಳೇ ಪಕ್ಷದ ಗೆಲುವಿಗೆ ಮಾರಕವಾಗಿದೆ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!