ತಾ. ಪಂ. ಅಧ್ಯಕ್ಷೆ-ಉಪಾಧ್ಯಕ್ಷ ಮದುವೆಯಾದರು! ವಿಶೇಷ ಏನು ಗೊತ್ತಾ?

  • sadhu srinath
  • Published On - 17:07 PM, 13 Jul 2020

ಕಲಬುರಗಿ: ಇದೀಗ ಎಲ್ಲೆಲ್ಲೂ- ಎಲ್ಲದರಲ್ಲೂ ರಾಜಕೀಯ ಹೆಚ್ಚಾಗ್ತಿದೆ. ಆತ ಕಾಂಗ್ರೆಸ್, ಈತ ಬಿಜೆಪಿ, ಮತ್ತೋರ್ವ ಮತ್ತೊಂದು ಪಾರ್ಟಿಯವನು ಅಂತ ಪಕ್ಷದ ಜೊತೆ ಜನರನ್ನು ಗುರುತಿಸುವುದು ಹೆಚ್ಚಾಗಿದೆ. ಅದರಲ್ಲೂ ಕೂಡಾ ಪಕ್ಷದ ಕಾರ್ಯಕರ್ತರ ನಡುವೆ ಜಗಳಗಳು ಕೂಡಾ ಹೆಚ್ಚಾಗಿವೆ. ಆದ್ರೆ ಇದೆಲ್ಲವನ್ನು ಮೀರಿಸುವ ಶಕ್ತಿಗೆ ಪ್ರೀತಿಗೆ ಇದೆ. ಅದು ಆಗಾಗ ಸಾಬೀತು ಕೂಡಾ ಆಗಿದೆ.

ಪಕ್ಷವನ್ನು ಮೀರಿ ಪ್ರೀತಿ ಗೆದ್ದಿರುವ ಘಟನೆಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಡೆದಿದೆ. ಹೌದು ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ತಮ್ಮ ರಾಜಕೀಯವನ್ನು ಮೀರಿ ಇಬ್ಬರೂ ಕೂಡಾ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ಇಂದು ನಡೆದ ಸರಳ ವಿವಾಹದಲ್ಲಿ ದಂಪತಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ‘ಮೈತ್ರಿ’
ಹೌದು ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಮತ್ತು ತಾಲೂಕು ಪಂಚಾಯತ್ ಉಪಾಧ್ಯಕ್ಷ ಭೀಮಾಶಂಕರ್ ಹೊನ್ನಿಕೇರಿ ಇಂದು ವಿವಾಹವಾಗುವ ಮೂಲಕ ಪ್ರೀತಿ ಎಂಬದು ಪೊಲಿಟಿಕಲ್ ಪಾರ್ಟಿಗಿಂತ ದೊಡ್ಡದು ಅನ್ನೋದನ್ನು ಸಾಬೀತು ಮಾಡಿದ್ದಾರೆ.

ಹೌದು ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿರುವ ರುಕ್ಮಿಣಿ ಜಮಾದಾರ್ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಭೀಮಾಶಂಕರ್ ಹೊನ್ನಿಕೇರಿ, ಕಾಂಗ್ರೆಸ್ ನಿಂದ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಆದ್ರೆ ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ನಡುವೆ ವಿವಾಹ ಬಂಧನವಾಗಿದೆ. ತಾಲೂಕು ಪಂಚಾಯತ್ ನಲ್ಲಿ ಮೈತ್ರಿ ಇಲ್ಲದಿದ್ದರು ಕೂಡಾ ಇವರಿಬ್ಬರು ಜೀವನದ ಪಯಣದಲ್ಲಿ ಮೈತ್ರಿ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಲೂಕಿನ ಬೇರೆ ಬೇರೆ ಕ್ಷೇತ್ರಗಳಿಂದ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಇವರು ತಮ್ಮ ನಾಯಕರ ಆಶೀರ್ವಾದದಿಂದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಾಗಿದ್ದರು. ಹೀಗಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ತಾಲೂಕು ಪಂಚಾಯತ್ ಸಭೆಯಲ್ಲಿ ತಮ್ಮ ತಮ್ಮ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದ ಇವರಿಬ್ಬರ ನಡುವೆ ಸ್ನೇಹ ಹೆಚ್ಚಾಗಿತ್ತು. ಸ್ನೇಹ ಪ್ರೀತಿಯಾಗಿ ಮೂಡಿತ್ತು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡೂ ಕುಟುಂಬದವರು ಮಾತನಾಡಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ರು.

ಇಷ್ಟೆಲ್ಲಾ ಆದ್ರು ಕೂಡಾ ತಾಲೂಕಿನ ಜನರಿಗೆ ಇಬ್ಬರೂ ಮದುವೆಯಾಗ್ತಾರೆ. ಇಬ್ಬರೂ ಪ್ರೀತಿಸ್ತಿದ್ದಾರೆ ಅನ್ನೋ ವಿಷಯವೇ ಗೊತ್ತಿರಲಿಲ್ಲಾ! ಆದ್ರೆ ಕೆಲ ದಿನಗಳ ಹಿಂದಷ್ಟೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಾಗಲೇ ಗೊತ್ತಾಗಿದ್ದು, ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಪ್ರೇಮ ಮೈತ್ರಿಯಾಗಿರೋದು. ಇವರಿಬ್ಬರ ವಿವಾಹಕ್ಕೆ ರಾಜಕೀಯ ನಾಯಕರು ಕೂಡಾ ಶುಭ ಹಾರೈಕೆಗಳನ್ನು ಹೇಳಿದ್ದಾರೆ. ಇನ್ನು ಕಚೇರಿಯಲ್ಲಿ ಪಕ್ಷ ಬೇರೆಯಾದ್ರು ಕೂಡಾ, ಮನೆಯಲ್ಲಿ ಮಾತ್ರ ಇಬ್ಬರದೂ ಒಂದೇ ಪಕ್ಷ, ಅದುವೇ ಪ್ರೇಮ ಪಕ್ಷ! ಈ ಪ್ರೇಮಪಕ್ಷಿಗಳಿಗೆ ಊರಿನವರಿಂದಲೂ ಶುಭಾಶಯಗಳ ಪ್ರವಾಹವೇ ಹರಿದುಬರುತ್ತಿದೆ
-ಸಂಜಯ್ ಚಿಕ್ಕಮಠ