ಡಿ.ಜೆ ಹಳ್ಳಿ ಗಲಾಟೆ: ನಡುರಾತ್ರಿ ಪೊಲೀಸ್ ಕಾರ್ಯಾಚರಣೆ, ಇನ್ನೂ 50 ಆರೋಪಿಗಳು ಅರೆಸ್ಟ್

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ, ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.

ರಾತ್ರಿ 12ರಿಂದ ಬೆಳಗಿನ ಜಾವ 4ರವರೆಗೂ ಜಂಟಿ ಕಾರ್ಯಾಚರಣೆ ನಡೆಸಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯ ಗಲ್ಲಿಗಲ್ಲಿಗೆ ತೆರಳಿ ಹಲವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳ ತಂಡದಿಂದ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.

ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್, ಡಿಸಿಪಿ ಕುಲ್‌ದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಲಭೆ ಸಂಬಂಧ ಗಲಾಟೆ ವಿಡಿಯೋಗಳನ್ನು ಪರಿಶೀಲಿಸಿ ಈವರೆಗೆ 200ಕ್ಕೂ ಹೆಚ್ಚು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಹೈಡ್ರಾಮಾ
ಪೊಲೀಸರ ಮಿಡ್ ನೈಟ್ ಕಾರ್ಯಾಚರಣೆ ವೇಳೆ ಆರೋಪಿಗಳಿಂದ ಹೈಡ್ರಾಮಾ ನಡೆದಿದೆ. ಪೊಲೀಸರ ಕೈಗೆ ಸಿಗದಂತೆ ಓಡಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಖಾಕಿ ಪಡೆ ಆರೋಪಿಗಳನ್ನು ಅಟ್ಟಾಡಿಸಿ ಬಂಧಿಸಿದ್ದಾರೆ. ಒಂದು ಕಡೆ ಆರೋಪಿಗಳ ಬಂಧನವಾಗುತ್ತಿದ್ದಂತೆ ವಾಟ್ಸಾಪ್ ಮೆಸೇಜ್ ಮೂಲಕ ಉಳಿದವರನ್ನು ಎಚ್ಚರಿಸಿರು ಸಂದೇಶ ರವಾನೆಯಾಗಿದೆ.

ಹಲವು ಆರೋಪಿಗಳ ಮೊಬೈಲ್‌ನಲ್ಲಿ ಎಚ್ಚರಿಕೆ ಸಂದೇಶ ಪತ್ತೆಯಾಗಿದೆ. ಪೊಲೀಸರು ಬಂಧಿಸುತ್ತಿದ್ದಾರೆ, ಮನೆ ಬಾಗಿಲು ತೆರೆಯಬೇಡಿ. ಒಂದ್ವೇಳೆ ಬಾಗಿಲು ತೆರೆದ್ರೆ ಹೆಂಗಸರು, ಮಕ್ಕಳನ್ನ ಮುಂದೆಬಿಡಿ. ನೀವುಗಳು ಅವರಿಗೆ ಸಿಗದಂತೆ ಕುಳಿತುಬಿಡಿ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಆರೋಪಿಗಳು ಮೆಸೇಜ್ ಹಾಕಿ ಉಳಿದವರನ್ನು ಎಚ್ಚರಿಸಿದ್ದಾರೆ.

Related Tags:

Related Posts :

Category: