ಬಾಬಾ ಕಾ ಡಾಬಾ ಆಯ್ತು.. ಈಗ ‘ರೋಟಿವಾಲಿ ಅಮ್ಮಾ’ಳ ಸಂಕಷ್ಟಕ್ಕೆ ಸ್ಪಂದಿಸೋರು ಬೇಕು

ಲಕ್ನೋ: ಕಳೆದ ಕೆಲವು ದಿನಗಳ ಹಿಂದೆ ಜೀವನೋಪಾಯದ ದಾರಿಯಾಗಿದ್ದ ತನ್ನ ಡಾಬಾದಲ್ಲಿ ವ್ಯಾಪಾರವಾಗ್ತಿಲ್ಲ ಎಂದು ದೆಹಲಿಯ ವೃದ್ಧ ದಂಪತಿಯೊಂದು ಬಿಕ್ಕಿ ಬಿಕ್ಕಿ ಅತ್ತು ತಮ್ಮ ನೋವು ತೋಡಿಕೊಂಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವೃದ್ಧ ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿದ್ದ ನೆಟ್ಟಿಗರು ಮತ್ತು ದೆಹಲಿಯ ಜನತೆ ಅವರ ನೆರವಿಗೆ ಧಾವಿಸಿದ್ದರು.
ಇದೀಗ, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಈ 80 ವರ್ಷದ ವೃದ್ಧೆಯದ್ದು ಅದೇ ಪರಿಸ್ಥಿತಿ. ಅಂದ ಹಾಗೆ, ಈಕೆಯ ಹೆಸರು ಯಾರಿಗೂ ತಿಳಿದಿಲ್ಲ. ಆದರೂ ಈಕೆಯನ್ನು ಸಾಕ್ಷಾತ್​ ಅನ್ನಪೂರ್ಣೇಶ್ವರಿಯಂತೆ ರೋಟಿವಾಲಿ ಅಮ್ಮಾ ಅಥವಾ ರೊಟ್ಟಿ ಉಣಬಡಿಸುವ ತಾಯಿ ಎಂದೇ ಸ್ಥಳೀಯರು ಕರೆಯುತ್ತಾರೆ.

ಕಳೆದ 15 ವರ್ಷಗಳಿಂದ ನಗರದ ಸೇಂಟ್​ ಜಾನ್​ ಕಾಲೇಜು ಬಳಿ ವ್ಯಾಪಾರ ನಡೆಸುತ್ತಿರುವ ಈ ವೃದ್ಧೆ ನಗರದ ಬಡವರು ಮತ್ತು ಕೂಲಿ ಕಾರ್ಮಿಕರ ಪಾಲಿಗೆ ಅನ್ನದಾತೆ. ಕೇವಲ 20 ರೂಪಾಯಿಗೆ ರುಚಿರುಚಿಯಾದ ರೊಟ್ಟಿ ಮತ್ತು ಗೊಜ್ಜು ಸವಿಯಲು ವೃದ್ಧೆಯ ಫುಟ್​ಪಾತ್​ ಮೇಲಿರುವ ಗೂಡಂಗಡಿಗೆ ಬರುತ್ತಾರೆ.

ಆದರೆ, ಬಾಬಾ ಕಾ ಡಾಬಾ ದಂಪತಿಯಂತೆ ಈಕೆಗೂ ಕಳೆದ ಕೆಲವು ದಿನಗಳಿಂದ ವ್ಯಾಪಾರ ಅಷ್ಟಕಷ್ಟೆ. ಲಾಕ್​ಡೌನ್​ ಬಳಿಕ ಕೂಲಿ ಕಾರ್ಮಿಕರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಇದರಿಂದ ವೃದ್ಧೆಗೆ ಬದುಕು ಸಾಗಿಸಲು ಕೊಂಚ ಕಷ್ಟವಾಗಿದೆ. ಹಾಗಂತಾ ಈಕೆ ನೆರವಿಗೆ ಮನವಿ ಮಾಡಿಲ್ಲ. ತಮ್ಮ ಕಷ್ಟವನ್ನು ಯಾರ ಬಳಿಯೂ ಹೇಳಿಕೊಳ್ಳದೇ ಬರುವ ಆದಾಯದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇನ್ನಾದರೂ ಈಕೆಯ ಸಂಕಷ್ಟಕ್ಕೆ ಸಹೃದಯಿಗಳು ಸ್ಪಂದಿಸುವರು ಎಂಬುದು ಎಲ್ಲರ ಆಶಯ.

Related Tags:

Related Posts :

Category:

error: Content is protected !!