ಅನ್ನದಾತನೊಂದಿಗೆ ನಾವು: ಭೂಮಿಯಿಂದ ದೇವರು ಗುಳೆ ಹೋಗಬೇಕು ಇಲ್ಲಾ ಆಕಾಶದಲ್ಲಿ ಧಾನ್ಯ ಬೆಳೆಯಬೇಕು

ಕಲಾವಿದನಿಗೆ ಹಾಳು ಗೋಡೆ ಸಿಕ್ಕರೂ ಹೇಗೆ ಕಲ್ಪನೆಯ ಗರಿಗೆದರುತ್ತದೆಯೋ ಹಾಗೆ ಹಿಡಿ ಮಣ್ಣು ತುಂಡು ಭೂಮಿ ಸಿಕ್ಕರೂ ಸಾಕು ರೈತ ಹಿಗ್ಗುತ್ತಾನೆ. ಯಾವ ಗುಡುಗಪ್ಪ, ಸಿಡಿಲಪ್ಪನಿಗೂ ಹೆದರದೆ ದಿನದಿಂದ ದಿನಕ್ಕೆ ಉತ್ಸಾಹ ಹೆಚ್ಚಿಸಿಕೊಳ್ಳುತ್ತಲೇ ಇರುವ ರೈತರು ದೆಹಲಿಯಲ್ಲಿ ತಾವು ಕುಳಿತಲ್ಲೇ ಹೆದ್ದಾರಿಯ ಬದಿ, ಮಣ್ಣು ತುಂಬಿದ ಡಿವೈಡರು, ಫುಟ್ಪಾತುಗಳಲ್ಲಿ ಈಗಾಗಲೇ ತರಕಾರಿಗಳ ಬೀಜ ಬಿತ್ತಿದ್ದಾರೆ. ಅವೆಲ್ಲ ಮೊಳೆತು ಸಸಿ ಹುಟ್ಟುತ್ತಿರುವಂತೆ ಕವಿ, ಲೇಖಕಿ ರೇಣುಕಾ ನಿಡಗುಂದಿ ಅಲ್ಲಿಂದಲೇ ಕಾವ್ಯಾನುಸಂಧಾನಕ್ಕೆ ಇಳಿದಿದ್ದಾರೆ.

  • TV9 Web Team
  • Published On - 15:38 PM, 13 Jan 2021
ಸಜ್ಜೆಯ ತೆನೆ

ಅನ್ನ (ಆಹಾರ) ಮಾತ್ರವಲ್ಲ ಅದನ್ನು ಬೆಳೆಯುವ ರೈತನೂ ಪರಬ್ರಹ್ಮ ಎಂದ ದೇಶ ನಮ್ಮದು. ರೈತರ ಬದುಕು ಸಂಕಷ್ಟದಲ್ಲಿದೆ ಎನ್ನುವುದು ನಮ್ಮ ದೇಶದ ಮಟ್ಟಿಗೆ ಹಳೆಯ ಮಾತು. ಇದೀಗ ‘ದೆಹಲಿ ಚಲೋ’ ಚಳವಳಿಯ ನಂತರ ಇದೇ ಮಾತು ವಿಶ್ವಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಯಿತು. ಇದನ್ನೇ ನೆಪವಾಗಿಸಿಕೊಂಡು ಸೃಜನಶೀಲ ಕಲೆಗಳಲ್ಲಿ ಅನ್ನದಾತನ ಬದುಕು ಹೇಗೆ ಬಿಂಬಿತವಾಗಿದೆ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಗಂಭೀರ ಓದುಗರು, ಲೇಖಕರು ಇಲ್ಲಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಡಿಜಿಟಲ್ ‘ಅನ್ನದಾತನೊಂದಿಗೆ ನಾವು’ ಎಂಬ ಸರಣಿಯ ಮೂಲಕ ದಿನವೂ ನಿಮಗೆ ಜ್ಞಾನದ ಬುತ್ತಿಯನ್ನು ಉಣಿಸುತ್ತಿದೆ. ಇಂದು ಕವಿ, ಲೇಖಕಿ, ಅನುವಾದಕಿ ರೇಣುಕಾ ನಿಡಗುಂದಿ ಅವರ ಬರಹ ನಿಮ್ಮ ಓದಿಗೆ. ನಿಮ್ಮ  ಪ್ರತಿಕ್ರಿಯೆಗಳೂ ನಮಗೆ ಅಮೂಲ್ಯ. ಇ-ಮೇಲ್ tv9kannadadigital@gmail.com

ಲೋಕದ ಸಕಲ ಪ್ರಾಣಿಗಳ ರಕ್ಷಣೆಗೆ ಅನ್ನೋದಕವೇ ಮೂಲಕಾರಣ. ಅನ್ನ ಕಡಿಮೆಯಾದರೆ ಆಯುಷ್ಯವೂ ಕಡಿಮೆಯಾಯಿತೆಂದೇ ಅರ್ಥ. ಅನ್ನೋದಕವೆನ್ನುವುದು ಸಕಲ ಚರಾಚರಗಳ ಮೂಲಧಾತು ಎನ್ನುವುದು ದೇಸೀಜ್ಞಾನದ ಮೂಲತತ್ವವಾಗಿದೆ. ಸರ್ವಜ್ಞ ‘ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂದಿದ್ದಾನೆ. ಭೂಮಿ, ನೀರು, ಆಕಾಶ, ಗಾಳಿ ಮತ್ತು ಬೆಂಕಿ ಪಂಚಭೂತಗಳು. ಇವುಗಳು ಸಮಸ್ಥಿತಿಯಲ್ಲಿದ್ದರೆ ಕೃಷಿಕರ ಬದುಕು ನೆಮ್ಮದಿಯಿಂದಿರಬಹುದು. ಇದನ್ನು ನಮ್ಮ ಪೂರ್ವಜರು ಚೆನ್ನಾಗಿ ಅರಿತಿದ್ದರಿಂದಲೇ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲೇಂದರು, ಜಲ-ನೆಲ-ಕೃಷಿಯ ಕುರಿತು ಅವರು ತಮ್ಮ ತಿಳಿವಳಿಕೆಯನ್ನು ದೈನಂದಿನ ಬದುಕಿನಲ್ಲಿ ಅದರ ಮಹತ್ವವನ್ನು ನುಡಿಗಟ್ಟು, ಹಂತಿಪದಗಳು, ಲಾವಣಿ ಹಾಡುಗಳಾಗಿ ಮೌಖಿಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ಕೃಷಿಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿ ವಿಹೀನನ ದೇಶವದು ದುರ್ದೇಶ ಕೇಳೆಂದ
(ಸಭಾ ಪರ್ವ, 1ನೇ ಸಂಧಿ, 64ನೇ ಪದ್ಯ)

‘ರಾಷ್ಟ್ರಕ್ಕೆ ಕೃಷಿಯೇ ಮುಖ್ಯ ಅದೇ ಎಲ್ಲಕ್ಕೂ ಮೊದಲು, ಅದರಿಂದ ಅಭಿವೃದ್ಧಿ ಪಸರಿಸುವುದು, ಆದ್ದರಿಂದ ದೇಶವು ಕೃಷಿಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕೃಷಿಕರು, ಕೃಷಿಯು ಸಮೃದ್ಧವಾದ ದೇಶದಲ್ಲಿ ಐಶ್ವರ್ಯವು ವೃದ್ಧಿಸುತ್ತದೆ, ಐಶ್ವರ್ಯವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಆದ್ದರಿಂದ ಕೃಷಿಯು ಇಲ್ಲದ ದೇಶ ದುರ್ದೇಶ ಎಂದು ನಾರದರು ಯುಧಿಷ್ಠಿರನಿಗೆ ಕೃಷಿಯ ಮಹತ್ವವನ್ನು ಸಾರಿದರು.’
ಎಂದ ನಮ್ಮ ಕುಮಾರವ್ಯಾಸನನ್ನು ಮರೆಯುವುದುಂಟೇ?

ಇದೇ ರೀತಿ 1911 ರಲ್ಲಿ ಬಿಹಾರದಲ್ಲಿ ಹುಟ್ಟಿದ ಖ್ಯಾತ ಕವಿ ನಾಗಾರ್ಜುನರು (ವೈದ್ಯನಾಥ ಮಿಶ್ರಾ) ವಿಧಿವತ್ತಾಗಿ ಕಾಶಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿದ ವಿದ್ವಾಂಸರು. ಸಾಹಿತ್ಯದೊಂದಿಗೆ ಅನೇಕ ರಾಜಕೀಯ ಆಂದೋಲನಗಳಲ್ಲಿ ಭಾಗವಹಿಸುತ್ತಿದ್ದ ನಾಗಾರ್ಜುನರು ಸ್ವಾಮಿ ಸಹಜಾನಂದರಿಂದ ಪ್ರಭಾವಿತರಾಗಿ ಬಿಹಾರದ ಚಂಪಾರಣದಲ್ಲಿ ಬ್ರಿಟಿಷರ ನೀತಿಗಳ ವಿರುದ್ಧ ರೈತರು ನಡೆಸಿದ ಆಂದೋಲನದಲ್ಲಿ ಭಾಗವಹಿಸಿದ್ದರು. ಅವರ ‘ಫಸಲು’ ಕವಿತೆ ಪ್ರಮುಖವಾದುದು.

ಏಕ ಕಾ ನಹಿ,
ದೋ ಕಾ ನಹೀ
ಡೇರ್ ಸಾರಿ ನದಿಯೋಂ ಕೆ ಪಾನೀ ಕಾ ಜಾದೂ
ಏಕ ಕಾ ನಹಿ , ದೋ ಕಾ ನಹೀ
ಲಾಖ್ ಲಾಖ್ ಕೋಟಿ ಕೋಟಿ ಹಾಥೋ ಕೇ ಸ್ಪರ್ಶ ಕೀ ಗರಿಮಾ
ಏಕ ಕಾ ನಹಿ , ದೋ ಕಾ ನಹೀ

‘ಒಂದಲ್ಲ ಎರಡಲ್ಲ ಅನಗಣಿತ ನದಿಗಳ ನೀರಿನ ಮಾಂತ್ರಿಕ ಶಕ್ತಿಯದು, ಒಂದಲ್ಲ ಎರಡಲ್ಲ ಲಕ್ಷ ಕೋಟಿ ಕೈಗಳ ಸ್ಪರ್ಷದ ಹಿರಿಮೆಯಿದೆ. ಕಪ್ಪು-ಕಂದು, ಬೂದು, ಚಂದನ ಹೀಗೆ ತರಹಾವರಿ ಬಣ್ಣ ಬಣ್ಣದ ಮಣ್ಣಿನ ಗುಣಧರ್ಮದೊಂದಿಗೆ ಸಸಿ ಅದರ ಸತ್ವವನ್ನು ಹೀರಿ ದ್ಯುತಿಸಂಶ್ಲೇಷಣ ಕ್ರಿಯೆಯಿಂದ ಆಹಾರವನ್ನು ತಯಾರಿಸಿಕೊಂಡು ಬೆಳೆಯುವ ಪರಿ ಅನನ್ಯವಾದುದು. ಹೀಗೆ ಮನುಷ್ಯ ಮತ್ತು ಪ್ರಕೃತಿಯ ಸಂಬಂಧ ಬೇರ್‍ಪಡಿಸಲಾಗದು’ ಎನ್ನುತ್ತಾರೆ ಕವಿ ನಾಗಾರ್ಜುನ.

ಫಸಲ್ ಕ್ಯಾ ಹೈ ?
ಔರ್ ತೋ ಕುಛ್ ನಹಿ ಹೈ ವೋಹ್
ನದಿಯೋಂ ಕೇ ಪಾನಿ ಕಾ ಜಾದೂ ಹೈ ವಹ್
ಹಾಥೋ ಕೆ ಸ್ಪರ್ಶ ಕೀ ಮಹಿಮಾ ಹೈ
ಭೂರಿ, ಕಾಲೀ, ಸಂದಲಿ ಮಿಟ್ಟಿ ಕಾ ಗುಣ ಧರ್ಮ ಹೈ
ರೂಪಾಂತರ್ ಹೈ ಸೂರಜ್ ಕೀ ಕಿರಣೋಂ ಕಾ
ಸಿಮಟಾ ಹುವಾ ಸಂಕೋಚ ಹೈ ಹವಾ ಕಿ ಥಿರಕನ್ ಕಾ!

‘ಸಂಕೋಚದಲ್ಲಿ ಹಿಡಿಯಾದ ಗಾಳಿಯ ನರ್ತನ’ ಎಂಥ ಅದ್ಭುತ ಬಣ್ಣನೆ! ನರ್ತಿಸುವ ಗಾಳಿ ಕಣ್ಣಲ್ಲಿ ಸುಳಿದು ಹೋದಂತೆ, ಹಾಯೆನಿಸುವ ಗಾಳಿ ಸೋಕಿದ ಅನುಭವ.

ಇಲ್ಲಿ ಕವಿ ರೈತನ ಪರಿಶ್ರಮ ಮತ್ತು ಪ್ರಕೃತಿಯ ಹಿರಿಮೆಯನ್ನು ಬಣ್ಣಿಸಿದ್ದಾರೆ. ಬೆಳೆಯನ್ನು ಬೆಳೆಯುವುದೆಂದರೆ ವ್ಯಕ್ತಿ ಒಬ್ಬನೇ ಏಕಾಂಗಿಯಾಗಿ ಮಾಡಬಹುದಾದ ಕೆಲಸವಲ್ಲ. ವ್ಯವಸಾಯವೆಂದರೆ ಪ್ರಕೃತಿ ಮತ್ತು ಮನುಷ್ಯ ಇಬ್ಬರಲ್ಲೂ ತಾಳಮೇಳವಿರಬೇಕು. ಪ್ರಕೃತಿಯ ನಾದ, ಭೂಮಿಯ ಲಯ ಹಾಗೂ ರೈತನ ಶ್ರಮ ಶೃತಿ ಹಿಡಿದು ತಾಳ ಮೇಳೈಸುವ ಸೋಜಿಗ. ಅದೊಂದು ತಪಸ್ಸು. ಧ್ಯಾನ. ಬೀಜ ಮೊಳಕೆಯೊಡೆಯಲು ಬಿಸಿಲು, ಗಾಳಿ, ಮಳೆ ಮಣ್ಣು ಇದರ ಜೊತೆಗೆ ಮನುಷ್ಯನ ಕಠೋರ ಪರಿಶ್ರಮದ ಅಗತ್ಯವಿದೆ. ಆಗಷ್ಟೇ ನಾವು ಉಣ್ಣಲು ಯೋಗ್ಯವಾದ ಆಹಾರ ನಮಗೆ ಸಿಗುತ್ತದೆ.

ಕವಿಗಳಾದ ಸಚ್ಚಿದಾನಂದ ಮತ್ತು ಮೈಥಿಲಿ ಶರಣ ಗುಪ್ತ

ಹಿಂದಿ ಸಾಹಿತ್ಯದ ರಾಷ್ಟ್ರಕವಿ ಮೈಥಿಲಿ ಶರಣ ಗುಪ್ತ ಅವರ ‘ಕಿಸಾನ್’ ಕವಿತೆ ಭಿನ್ನವಾಗಿದೆ. ಕವಿ ಕಣ್ಣೋಟದ ರಮ್ಯತೆಯಿದೆ. ರೈತ ಎಷ್ಟೇ ಬೆಳೆದರೂ ಕೊನೆಗೆ ಅರೆಹೊಟ್ಟೆಯಲ್ಲಿಯೇ ಬದುಕುವ ಕಠೋರ ವಾಸ್ತವಿಕತೆಯಿದೆ.

ಹೇಮಂತ ಮೇ ಬಹುದಾ ಘನೋ ಸೇ ಪೂರ್ಣ ರಹತಾ ವ್ಯೋಮ
ಪಾವಸ ನಿಶಾವೋಂ ಮೇ ತಥಾ ಹಂಸತಾ ಶರದ ಕಾ ಸೋಮ ಹೈ
ಹೋ ಜಾಯೆ ಅಚ್ಛೀ ಭೀ ಫಸಲ್ , ಪರ್ ಲಾಭ ಕೃಷಕೋಂ ಕೋ ಕಹಾಂ
ಖಾತೇ ಖವಾಯಿ, ಬೀಜ ಋಣ ಸೇ ಹೈ ರಂಗೇ ರಖೆ ಹೈ ಜಹಾಂ
ಆಯಾ ಮಹಾಜನ್ ಕೆ ಯಹಾಂ ವಹ್ ಅನ್ನ ಸಾರಾ ಅಂತ ಮೇ
ಅಧಪೇಟ್ ಖಾಕರ್ ಫಿರ್ ಉನ್ಹೆ ಹೈ ಕಾಂಪನಾ ಹೇಮಂತ ಮೇ !

ಹೇಮಂತ ಋತುವಿನಲ್ಲಿ ಆಕಾಶ ದಟ್ಟ ಮೋಡಗಳಿಂದ ತುಂಬಿದ್ದು, ಮಳೆ ಸುರಿಯುವಾಗ ಶರದೃತುವಿನ ಮಧುಕರ ಚಂದಿರ ಮುಗುಳುನಗುವಾಗ, ಸಮೃದ್ಧವಾಗಿ ಫಸಲು ಬಂದರೇನು ಲಾಭವಿದೆ ರೈತನಿಗೆ? ತಿನ್ನುವವರು ತಿನ್ನುತ್ತಾರೆ, ಬೀಜಗಳು ಇಟ್ಟಲ್ಲಿ ಸಾಲದಲ್ಲಿ ಮುಳುಗಿವೆ, ಬೆಳೆದ ಎಲ್ಲಾ ಧಾನ್ಯವೂ ಶ್ರೀಮಂತರ ಮನೆಗೇ ಸೇರುವಾಗ, ಅರೆಹೊಟ್ಟೆ ಉಂಡ ರೈತ ಮತ್ತೆ ಮಳೆಗಾಲದಲ್ಲಿ ನಡಗುವುದೇ ಇದೆ (ಹೇಮಂತ).

ಬರಸಾ ರಹಾ ಹೈ ರವಿ ಅನಲ, ಭೂತಲ ತವಾ ಸಾ ಜಲ್ ರಹಾ
ಹೈ ಚಲ್ ರಹಾ ಸನ್ ಸನ್ ಪವನ, ತನ್ ಸೇ ಪಸೀನಾ ಬಹ ರಹಾ
ದೇಖೋ ಕೃಷಕ ಶೋಷಿತ , ಸುಖಾಕರ್ ಹಲ್ ತಥಾಪಿ ಚಲಾ ರಹೇ
ಕಿಸ್ ಲೋಭ ಸೆ ಇಸ್ ಆಂಚ ಮೇ ವೇ ನಿಜ್ ಶರೀರ ಜಲಾ ರಹೇ!

ಸೂರ್ಯ ಬೆಂಕಿಯುಗುಳುತ್ತಿದ್ದಾನೆ, ಕಾದ ಕಾವಲಿಯಾಗಿದೆ ಭೂಮಿ
ಭರ್ರನೇ ಗಾಳಿ ಬೀಸುತ್ತಿದೆ, ಮೈಯಿಂದ ಬೆವರು ಸುರಿಯುತ್ತಿದೆ
ನೋಡು ಶೋಷಿತ ರೈತ ಬೆವರೊರೆಸಿಕೊಳ್ಳುತ್ತಲೇ ನೇಗಿಲು ನಡೆಸುತ್ತಿರುವ
ಇಂಥ ಝಳದಲ್ಲಿ ಯಾವ ಲೋಭದಿಂದ ಅವನು ತನ್ನನ್ನೇ ಸುಟ್ಟುಕೊಳ್ಳುತ್ತಿರುವ?

ಕವಿಗೆ ಚಿಂತೆ ಕಾಡುತ್ತಿದೆ…

ಅಗಸ್ಟ್ 3, 1886 ರಲ್ಲಿ ಉತ್ತರಪ್ರದೇಶದಲ್ಲಿ ಜನಿಸಿದ್ದ ಮೈಥಿಲಿ ಶರಣ ಗುಪ್ತ ಅವರು ಆಧುನಿಕ ಹಿಂದಿ ಕವಿಗಳಲ್ಲಿ ಒಬ್ಬರು. ಮಹಾತ್ಮಾ ಗಾಂಧಿ, ವಿನೋಭಾ ಭಾವೆ, ರಾಜೇಂದ್ರ ಪ್ರಸಾದರಂಥ ಜನನಾಯಕರ ಸಂಪರ್ಕ ಹೊಂದಿದ್ದರು. ತಮ್ಮ ಕಾಲದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಂವೇದನಶೀಲರಾಗಿದ್ದರು. ಅವರು ಇಹಲೋಕ ತ್ಯಜಿಸಿದ್ದು 1964ರಲ್ಲಿ. ಈ ಕವಿತೆಯನ್ನು ಬರೆದ ಕಾಲ ಅರ್ಧ ಶತಮಾನಕ್ಕೂ ಹಿಂದಿನದೆಂದು ಗ್ರಹಿಸಿದಾಗ ರೈತನ ಸ್ಥಿತಿಗತಿಯ ವಾಸ್ತವ ಚಿತ್ರಣ ನಮ್ಮನ್ನು ವಿಚಲಿತಗೊಳಿಸುತ್ತದೆ.

ಸಚ್ಚಿದಾನಂದ ನಂದ ಹೀರಾನಂದ ವಾತ್ಸಯನ (7 ಮಾರ್ಚ 1911 – 4 ಎಪ್ರಿಲ್1987) ‘ಆಜ್ಞೇಯ’ ಕಾವ್ಯನಾಮದಿಂದ ಪರಿಚಿತರಾದ ಇಪ್ಪತ್ತರ ಶತಮಾನದ ಮತ್ತೊಬ್ಬ ಪ್ರಮುಖ ಕವಿ ತನ್ನ ಪ್ರೇಮಿಯನ್ನು ‘ಬಿಛಲಿ ಗಾಸ್ ಹೋ ತುಮ್’ ಲಹಲಹಾತಿ ಹವಾ ಮೇ ಕಲಗಿ ಛರಹರೇ ಬಾಜರೇ ಕೀ! ಎನ್ನುತ್ತಾರೆ.

ಆಧುನಿಕ ಶೃಂಗಾರ ಕವಿತೆಗಳಲ್ಲಿ ಪ್ರೇಮಿಯನ್ನು ಸೂರ್ಯ ಚಂದ್ರ ತಾರೆ, ಬೆಳದಿಂಗಳು, ಹೂವು, ಚಂದನ, ನಕ್ಷತ್ರಗಳಿಗೆ ಹೋಲಿಸುತ್ತಿದಾಗ ಅಜ್ಞೇಯರು ‘ನವಿರಾದ ಹಸಿರು ಹುಲ್ಲು, ಗಾಳಿಯಲ್ಲಿ ರೇಶಿಮೆಯ ಗೊಂಚಲಿನಂತೆ ಮೆಲ್ಲಗೇ ಬಳಕುವ ತೆಳುವಾದ ಸಜ್ಜೆಯ ತೆನೆ’ಯ ರೂಪಕದಲ್ಲಿ ಆಕರ್ಷಕವಾಗಿ ಕಟ್ಟಿಕೊಟ್ಟರು.

ಹೆಣ್ಣಿನ ಕೋಮಲತೆಗೆ, ಸೂಕ್ಷ್ಮತೆಗೆ ಅವರು ಅವರು ಬಳಸಿದ್ದ ಸಜ್ಜೆಯ ತೆನೆ, ಹಚ್ಚಹಸಿರು ಗರಿಕೆಯ ಹೊಸ ರೂಪಕ ಸಮಕಾಲೀನ ಕವಿಗಳಲ್ಲಿಯೇ ಬಹು ಚರ್ಚಿತ ಸಂಗತಿಯಾಗಿತ್ತು. ಸ್ವತಃ ಕವಿ ಆಜ್ಞೇಯರು ಬಳಕುವ ಕೋಮಲ ಸಜ್ಜೆಯೆ ತೆನೆಯನ್ನು ಕಂಡಾಗ ತಾವು ಮುಗ್ಧಗೊಳ್ಳುವುದನ್ನೂ, ಪ್ರಿಯತಮೆಯ ಬಗ್ಗೆ ಪ್ರಿಯನಿಗಿರುವ ಸಮರ್ಪಣಾಭಾವವನ್ನೂ ಅವರೇ ಬಣ್ಣಿಸುತ್ತಾರೆ.

ಆಜ ಹಮ್ ಶಹರಾತಿಯೋಂ ಕೋ ಪಾಲತೂ
ಮಾಲಂಚ ಪರ ಸಂವರಿ ಜೂಹಿ ಕೀ ಫೂಲ ಸೇ 
ಸೃಷ್ಟಿ ಕೆ ವಿಸ್ತಾರ ಕಾ- ಐಶ್ವರ್ಯ ಕಾ-ಔದಾರ್ಯ ಕಾ
ಕಹೀ ಸಚ್ಚಾ, ಕಹೀಂ ಪ್ಯಾರಾ ಏಕ ಪ್ರತೀಕ ಬಿಛಲಿ ಘಾಸ ಹೈ
ಯಾ ಶರದ ಕೀ ಸಾಂಝ್ ಕೇ ಸೂನೇ ಗಗನ್ ಕೀ
ಪಿಠಿಕಾ ಪರ್ ಡೋಲತಿ ಕಲಗಿ ಅಕೇಲಿ ಬಾಜರೇ ಕೀ!

ಇಂದು ನಮ್ಮಂಥ ನಗರ ವಾಸಿಗಳಿಗೆ
ಮನೆಯ ಹೂದಾನಿಯಲ್ಲಿನ ಮಲ್ಲಿಗೆಹೂವಿಗಿಂತ
ಸೃಷ್ಟಿಯ ವಿಸ್ತಾರ- ಐಶ್ವರ್ಯ, ಔದಾರ್ಯಕ್ಕಿಂತ ಹೆಚ್ಚಾಗಿ
ನಿರ್ಮಲವಾದ ಹಸಿರು ಗರಿಕೆ ಅಥವಾ ಶರತ್ಕಾಲದ ಸಂಜೆ
ಖಾಲಿ ಆಗಸದ ಕ್ಯಾನವಾಸಿನಲ್ಲಿ ಬಳಕುವ
ಏಕೈಕ ಸಜ್ಜೆಯ ತೆನೆ ಹೆಚ್ಚು ಪ್ರಿಯವಾಗಿದೆ!

ಕಾಲ ಕಾಲಕ್ಕೆ ರೈತನ ಸಂಕಷ್ಟಗಳಿಗೆ ದನಿಯಾಗುತ್ತ ಬಂದ ಕವಿಗಳ ದನಿ ಭಿನ್ನ. ಭಾವ ಭಿನ್ನವಾದರೂ ಅನ್ನ ಬೆಳೆಯುವ ಕೃಷಿಕ ನಮ್ಮೆಲ್ಲರ ಭಾವ ಭಿತ್ತಿಯಿಂದ ಹೊರಗಿಲ್ಲ. ಬಾಲ್ಯದಲ್ಲಿ ನಾವು ಚಕ್ಕಡಿ ಹತ್ತಿಕೊಂಡು ಹೊಲಕ್ಕೆ ಹೊರಟವರ ಜೊತೆ ಹೊಲಕ್ಕೆ ಹೋಗುತ್ತಿದ್ದುದು ನೆನಪಾಗುತ್ತದೆ. ಹೊಲವೇ ನಮಗೆ ಪಿಕ್‍ನಿಕ್ ತಾಣ. ಹಸಿ ತೊಗರಿ, ಹಸೀ ಶೇಂಗಾ, ಹಸಿ ಜೋಳದ ತೆನಿ ( ಬೆಳಸಿ) ಕೆಂಡದಲ್ಲಿ ಸುಟ್ತು ತಿನ್ನುವುದು ನೆನಪಾಗುತ್ತದೆ.

ಕವಿಗಳಾದ ನಾಗಾರ್ಜುನ ಮತ್ತು ನಿರಾಲಾ.

ಇನ್ನೊಬ್ಬ ಖ್ಯಾತ ಕವಿಗಳಾದ ಸೂರ್ಯಕಾಂತ್ ತ್ರಿಪಾಠಿ (ನಿರಾಲಾ) ಅವರು, ‘ನಾಯಿ ಬೊಗಳತೊಡಗಿತು’ ಕವಿತೆಯಲ್ಲಿ:
‘ಕಡು ಚಳಿಗಾಲ, ಆಲಿಕಲ್ಲಿನ ಮಳೆ, ವಾರದ ಹಿಂದೆ ಬಿದ್ದ ಹಿಮಕ್ಕೆ ಸತ್ತು ಹೋದ ತೊಗರಿ ಬೆಳೆ, ಸೆಟೆದುಹೋದ ಗೋಧಿ ತೆನೆಗಳ ಬಗ್ಗೆ ಹೇಳುತ್ತ, ಅದೇ ಹೊತ್ತಿಗೆ ಜಮೀನುದಾರನ ಸಿಪಾಯಿ ಬಂದು ಥಾಣೆದಾರ ಬಂದಿದ್ದಾನೆ ಕಂದಾಯ ಇಸಿದುಕೊಳ್ಳಲು, ವಾರದೊಳಗೇ ಕೊಡಬೇಕು ಚಂದಾ, ಹೋಗಿ ಮಾತುಕೊಟ್ಟು ಬನ್ನಿ’ ಎನ್ನುತ್ತಾನೆ, ಆಗ ರೈತನೊಂದಿಗೆ ಕುಳಿತಿದ್ದ ನಾಯಿ ಸಿಪಾಯಿಯನ್ನು ಕಂಡು ಬೊಗಳತೊಡಗುತ್ತದೆ’ ಎನ್ನುವಲ್ಲಿ ಕವಿತೆ ಮುಕ್ತಾಯವಾಗುತ್ತದೆ.

ನಿರಾಲಾ ಒಂದು ಪುಟ್ಟ ಪದ್ಯದಲ್ಲಿ ಚಳಿ ಮತ್ತು ಮಳೆಯಿಂದಾದ ಬೆಳೆಯ ನಷ್ಟವನ್ನು ಹೇಳುತ್ತಲೇ ನಮ್ಮ ಮನಃಪಟಲದಲ್ಲಿ ಅಂದಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಒಂದು ಚಿತ್ರವನ್ನು ಬಿಡಿಸಿ, ಹೃದಯ ಕಲಕುವಂತೆ, ವೇದನೆ ಕಣ್ಣುತುಂಬುವಂತೆ ಮಾಡಿಬಿಡುತ್ತಾರೆ. ಅನೇಕ ಮೊಗಲ್ ಬಾದಶಹಾಗಳ ಆಳ್ವಿಕೆಯಲ್ಲಿ ರೈತ ಬೆಳೆದದ್ದು ಕೈಗೆ ಸಿಗದಷ್ಟು ಭೂಕಂದಾಯ ಕೊಡಬೇಕಿತ್ತು. ಉಳಿದದ್ದನ್ನು ಸ್ಥಳೀಯ ಸುಬೇದಾರರು ಕಬಳಿಸುತ್ತಿದ್ದರು. ಅಂಥ ಶೋಚನೀಯ ಸ್ಥಿತಿಯನ್ನು ಕವಿ ಮನಗಾಣಿಸುತ್ತಾರೆ.

‘ಪಿತ್ರಾರ್ಜಿಜ ಆಸ್ತಿ’ ಕವಿತೆಯಲ್ಲಿ ಕವಿ ಕೇದಾರನಾಥ್ ಅಗ್ರವಾಲರು , ರೈತನೊಬ್ಬ ತೀರಿಕೊಂಡಾಗ ಅವನ ಮಗನಿಗೆ ತಂದೆಯಿಂದ ಬಳುವಳಿಯಾಗಿ ಸಿಕ್ಕ ಸಂಪತ್ತು, ಪಾಳುಬಿದ್ದ ಮನೆ, ಮುರಿದ ಖಾಟು (ಪಲ್ಲಂಗು), ತುಂಡು ಭೂಮಿ ಅದೂ ಜಮೀನುದಾರನದು’ ಎನ್ನುತ್ತಾರೆ.

ಮುಂದುವರಿದು – ಗೆದ್ದಲು, ಕಣಜಿರ್ಲಿ (ಶತಪದಿ), ಸೊಳ್ಳೆ, ಹುಳಹುಪ್ಪಡಿಗಳೇ ಅವನ ಜೊತೆಗಾರರು. ಅವನಿಗೇನು ಗೊತ್ತು ಸ್ವಾತಂತ್ರ್ಯವೇನೆಂದು. ಸ್ವತಂತ್ರ ಭಾರತದ ಮಾತೇನು ಗೊತ್ತು? ಎನ್ನುವ ಕವಿ ಮುಂದೆ ತಮ್ಮ ‘ಧರತಿ’ ಕವಿತೆಯಲ್ಲಿ ಎತ್ತುಗಳ ಹೆಗಲ ಮೇಲೆ ಮಳೆಯನ್ನು ನಿಲ್ಲಿಸಬಲ್ಲ ರೈತನದೇ ಈ ಭೂಮಿ’ ಎನ್ನುವಂಥ ಭರವಸೆಯ ಮಾತುಗಳನ್ನು ಹೇಳುತ್ತಾರೆ.

ಆದರೆ ಕ್ರಾಂತಿ ಕವಿ ರಮಾಶಂಕರ್ ಯಾದವ (ವಿದ್ರೋಹಿ) ಅವರ ಭಾಷೆ ದನಿ ಎಲ್ಲಕ್ಕಿಂತ ಭಿನ್ನವಾಗಿದೆ. ಅವರು ಭರವಸೆಯ ನವಿರುತನವನ್ನು ತೋರದೇ ಖಡಾಮುಡಿಯಾಗಿ ಸವಾಲೆಸುತ್ತಾರೆ. ಬಂಡೇಳುತ್ತಾರೆ ಅರಾಜಕತೆಯ ವಿರುದ್ಧ. ಬಿಹಾರದಿಂದ ಓದಲು ಜೆಎನ್​ಯೂ ಗೆ ಬಂದು ಇಲ್ಲಿಯೇ ಚಳವಳಿಗಳು, ಆಂದೋಲನಗಳಲ್ಲಿ ಭಾಗವಹಿಸುತ್ತಾ ತಮ್ಮ ಆಶುಕವಿತೆಗಳಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕವಿಯಾಗಿ ಕೊನೆಗೆ ಜೆಎನ್​ಯೂ ಆವರಣದಲ್ಲಿಯೇ 2015ರಲ್ಲಿ ಕೊನೆಯುಸಿರೆಳೆದರು. ಈ ವಿದ್ರೋಹಿ ಹುಟ್ಟಿಸಿದ್ದ ಕ್ರಾಂತಿಯ ಕಿಡಿಗಳು ಜೆಎನ್​ಯೂ ಗೋಡೆ ಗೋಡೆಗಳಲ್ಲಿ ಕೆತ್ತಿಹೋಗಿವೆ.

ಅವರ ಕವಿತೆ ‘ನಯೀ ಖೇತಿ’ ಯನ್ನು ನೋಡಿ

ಮೈ ಕಿಸಾನ್ ಹೂಂ
ಆಸಮಾನ ಮೇ ಧಾನ್ ಬೋ ರಹಾ ಹೂಂ
ಕುಛ್ ಲೋಗ ಕೆಹ ರಹೇ ಹೈ
ಕಿ ಪಗಲೇ ಆಸಮಾನ ಮೇ ಧಾನ ನಹೀ ಜಮಾ ಕರತಾ
ಮೈ ಕಹತಾ ಹೂಂ ಪಗಲೇ
ಅಗರ್ ಜಮೀನ್ ಪರ್ ಭಗವಾನ್ ಜಮ್ ಸಕತಾ ಹೈ
ತೋ ಆಸಮಾನ ಮೇ ಧಾನ್ ಭೀ ಜಮ್ ಸಕತಾ ಹೈ
ಔರ್ ಅಬ್ ತೋ ದೋನೋ ಮೆ ಸೆ ಕೋಯಿ ಏಕ್ ಹೋಕರ್ ರಹೇಗಾ
ಯಾ ತೋ ಜಮೀನ್ ಸೇ ಭಗವಾನ್ ಉಖಡೇಗಾ
ಯಾ ಆಸಮಾನ್ ಮೇ ಧಾನ್ ಉಗೇಗಾ !

ಹೊಸ ಬೆಳೆ

ನಾನೊಬ್ಬ ರೈತ
ಆಗಸದಲ್ಲಿ ಧಾನ್ಯವನ್ನು ಬಿತ್ತುತ್ತಿದ್ದೇನೆ
ಕೆಲವರು ಹೇಳುತ್ತಾರೆ
ಎಲವೋ ಹುಚ್ಚಾ, ಆಕಾಶದಲ್ಲಿ ಯಾರೂ ಧಾನ್ಯ ಬಿತ್ತುವುದಿಲ್ಲ
ನಾನನ್ನುತ್ತೇನೆ ಅರೆ ಹುಚ್ಚಪ್ಪಗಳಿರಾ
ದೇವರು ಭೂಮಿಯ ಮೇಲೆ ನೆಲೆಸಬಹುದಾದರೆ
ಆಕಾಶದಲ್ಲಿ ಧಾನ್ಯವನ್ನೂ ಬಿತ್ತಬಹುದು
ಈಗಂತೂ ಎರಡರಲ್ಲಿ ಒಂದು ಆಗೇ ತೀರುವುದು
ಒಂದೋ ಭೂಮಿಯಿಂದ ದೇವರು ಗುಳೆ ಹೋಗಬೇಕು
ಇಲ್ಲಾ ಆಕಾಶದಲ್ಲಿ ಧಾನ್ಯ ಬೆಳೆಯಬೇಕು!

‘ನೂರು ದೇವರನ್ನು ನೂಕಾಚೆ ದೂರ’ವೆನ್ನುವ ಕವಿಯ ಆಶಯವನ್ನು ವಿದ್ರೋಹಿಯವರ ದೇವರು ಗುಳೆಹೋಗುವ ಮತ್ತು ಆಗಸದಲ್ಲಿ ಧಾನ್ಯ ಬೆಳೆಯುವ ಉಪಮೆಯಲ್ಲಿ ಮುಂದುವರಿಕೆಯಾಗಿ ಕಾಣಬಹುದಾಗಿದೆ.

ಲೋಕದೊಳೇನೇ ನಡೆಯುತಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೆ ಇಲ್ಲ

ಉಳುವಾ ಯೋಗಿಯ ನೋಡಲ್ಲಿ ಎಂದ ವಿಶ್ವಕವಿ ಕುವೆಂಪು, ಉಳುವ ರೈತನನ್ನು ನೇಗಿಲಯೋಗಿಯನ್ನಾಗಿಸಿದವರು. ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೆ ನಿಂತಿದೆ ಧರ್ಮ ಎಂದು ಬೇಸಾಯದ ಮಹತ್ವವನ್ನು ಸಾರಿದವರು.

ನಾಡಿನ ಬೆನ್ನಲುಬು ಕೃಷಿಕರೇ ಹೊರತು, ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ಸಾಧು-ಸಂತರಾಗಲಿ ಅಲ್ಲ. ಯಾವ ನಾಡಿನಲ್ಲಿ ಕೃಷಿಕರು ಅವಗಣೆನೆಗೆ ಒಳಗಾಗುತ್ತಾರೋ ಆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ಎಂದು ಇತ್ತೀಚೆಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಷ್ಟು ಚೆನ್ನಾಗಿ ಹೇಳಿದ್ದಾರೆ.

ಇನ್ನು ಸಮೃದ್ಧವಾದ ಕೃಷಿಗೆ ಮಳೆ ಬೇಕು. ಮಣ್ಣಿನ ಫಲವತ್ತತೆಗೆ ನೀರು ಬೇಕು. ಮಳೆ ಮತ್ತು ನಕ್ಷತ್ರಗಳ ಸಂಬಂಧವೂ ಅಷ್ಟೇ ಪ್ರಮುಖವಾದುದು. ಎಲ್ಲಾ ಪುರಾತನ ಸಂಸ್ಕೃತಿಗಳಲ್ಲಿ ಮಳೆ ದೇವತೆಗಳು ಆಕಾಶದಲ್ಲಿ ವಾಸಿಸುತ್ತಾರೆಂಬ ನಂಬಿಗೆಯಿತ್ತು. ಅಶ್ವಿನಿ, ರೋಹಿಣಿ, ಕೃತ್ತಿಕಾ ಇತ್ಯಾದಿಯಾಗಿ ಮಳೆಯ ಹೆಸರುಗಳು ಹಾಘೂ ನಕ್ಷತ್ರಗಳ ಹೆಸರುಗಳೂ ಒಂದೇ ಆಗಿದ್ದು ಸ್ತ್ರೀಪ್ರಧಾನ ಸಂಸ್ಕೃತಿ , ಸ್ತ್ರೀ ತತ್ವವಾದರೆ ಕೃಷಿ, ಕೃಷಿಕ ಪುರುಷ ಪ್ರಧಾನ ತತ್ವಗಳು ಪ್ರಕೃತಿ ಪುರುಷರ ಸಮನ್ವಯಗಳ ಜೀವ ತತ್ವವೆನ್ನುವುದೂ ಗಮನಾರ್ಹ. ಅನ್ನದಾತನಿಗೆ ಯಾವ ಮಳೆಯಿಂದ ಯಾವ ಬೆಳೆ ಉತ್ತಮವಾಗಿ ಬರುತ್ತದೆ. ಯಾವ ದಿಕ್ಕಿನ ಗಾಳಿಯಿಂದ ಯಾವ ಮಳೆ ಸುರಿಯುತ್ತದೆ ಎಂಬುದರ ಜ್ಞಾನವಿತ್ತು. ಅಂಥ ವಿಜ್ಞಾನಿಗಳು ನಮ್ಮ ಕೃಷಿಕರು

ಪುರಾಣ ಕಥೆಗಳಲ್ಲಿ ರೋಹಿಣಿಯು ಚಂದ್ರನ 27 ಹೆಂಡತಿಯರಲ್ಲಿ ಒಬ್ಬಳು. ಚಂದ್ರ ರೋಹಿಣಿಯಲ್ಲಿಯೇ ಹೆಚ್ಚು ಅನುರಕ್ತ. ಹಾಗಾಗಿ ಕೃಷಿ ಬದುಕಲ್ಲಿ ‘ರೋಹಿಣಿಯ ಮಳೆಯಾದರೆ ಊರೆಲ್ಲಾ ಜ್ವಾಳ’ ಎನ್ನುವ ಹಲವು ಗಾದೆಗಳು ಸಮೃದ್ಧಿಯ ಪ್ರತೀಕವಾಗಿ ಬೆಳೆದು ಬಂದಿವೆ. ಜಾನಪದ ತ್ರಿಪದಿಗಳಲ್ಲಿ

ರೋಣಿಯ ಮಳೆಯಾಗಿ ಓಣೆಲ್ಲಾ ಜ್ವಾಳಾಗಿ
ಕಾಣಾದ ಹುಲುಸು ಕುಡಿಯಾಗಿ ಹೊಲದಾಗ
ಕಣ ತುಂಬಿ ರಾಶಿ ಹೊಳಿಯಾಗಿ.

ಹಸ್ತ ಮಳೆಯಿಲ್ಲದೇ ಹೋದರೆ ರೈತ ಹಲ್ಲು ಕಿಸ್ದ ‘ಸ್ವಾತಿ ಹೋದ ಮೇಲೆ ಮಳೆಯಿಲ್ಲ ಸೂತಕ ಹೋದ ಮೇಲೆ ಮಕ್ಕಳಿಲ್ಲ’ ಎಂಬಂಥ ಗಾದೆಗಳು ಪ್ರಕೃತಿ ಮತ್ತು ಪುರುಷನ ಸಮೃದ್ಧಿ ನೆಲೆಯನ್ನು ಬಿಂಬಿಸುತ್ತವೆ. ಇವೆಲ್ಲ ಸಂಗತಿಗಳು ಮಳೆಗೂ ಬೆಳೆಗೂ, ಕೃಷಿಗೂ ಮನುಷ್ಯರ ಬದುಕಿಗೂ ಇರುವ ಸಂಬಂಧವನ್ನು ಕಟ್ಟುಕೊಡುತ್ತವೆ. ಅಣ್ಣ ತಂಗಿ ಎನ್ನುವ ಲಾವಣಿಯಲ್ಲಿ

ತವರಿಗೆ ಕರೆಯಲಿ ಬಂದ ಅಣ್ಣನಿಗೆ ತಂಗಿ ಹೇಳುವ ಮಾತುಗಳು ಹೀಗಿವೆ :

ಕಬ್ಬು ಕಡಿಯಾಲೈದೆ ಕಡಲೆ ಕೀಳಾಲೈದೆ
ರಾಜುಣದು ಗದ್ದೆ ಕೊಯಿಲಾದ! ಅಣ್ಣಯ್ಯ
ನಾನೆಂಗೋ ಬರಲೋ ಮದವೀಗೆ…

ಕೈತುಂಬ ಕೃಷಿ ಕೆಲಸ ಬಿದ್ದಿದೆ ಬಿಟ್ಟು ಹೇಗೆ ಮದುವೆಗೆ ಬರಲಿ ಎನ್ನುವುದು ತಂಗಿಯ ಚಿಂತೆ. ಆಕೆಗೆ ಮದುವೆಗಿಂತಲೂ ಕಬ್ಬು ಕಡಿಯುವ, ಕಡಲೆ ಕೀಳುವ, ಗದ್ದೆ ಕೊಯ್ಲಿನ ಕೆಲಸಗಳು ಪ್ರಮುಖವಾಗುತ್ತವೆ.

ಅಕ್ಕ ತನ್ನ ವಚನದಲ್ಲಿ ಸೃಷ್ಟಿಯ ವಿಸ್ಮಯದ ಕುರಿತು ಹೀಗನ್ನುತ್ತಾಳೆ:

ಹುಳಿ ನಿಂಬೆ ಮಾವು ಮಾದಲಕ್ಕೆ
ಹುಳಿ ನೀರೆರದವರಾರಯ್ಯ
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿ ನೀರೆರದವರಾರಯ್ಯ? 

ಕನಕದಾಸರು…
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು?

(ಡಾ. ವೀರೇಶ್ ಬಡಿಗೇರ್ – ಜಲಶಾಸ್ತ್ರದ ಹಸ್ತಪ್ರತಿಗಳು ಮತ್ತು ದೇಸಿ ವಿವೇಕ ಪುಸ್ತಕ)

ಹಿಂದಿ ಕವಿ ಉದಯ್ ಪ್ರಕಾಶ್ ಅವರು ರೈತನ ಒಡನಾಡಿ, ದುಡಿಮೆಯ ಸಂಗಾತಿ ಎತ್ತನ್ನು ಕುರಿತು ಮಿಡಿದಿದೆ. ಅವರು ‘ರಾಜಧಾನಿಯಲ್ಲಿ ಎತ್ತು (ರಾಜಧಾನಿ ಮೇ ಬೈಲ್ ) ‘ಎನ್ನುವ ಕವಿತೆ ನಾ ಓದಿದ ಅಪರೂಪದ ಕವಿತೆ. ದಿಲ್ಲಿಯ ಬೀದಿಯಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತ ಎತ್ತನ್ನು ಕಂಡ ಕವಿ ಮರುಗುತ್ತಾನೆ. ತನ್ನ ಕೊಡೆಯಲ್ಲಿ ಅದಕ್ಕೂ ಜಾಗ ಕೊಡುವಷ್ಟು ಕವಿ ಹೃದಯ ಆರ್ದ್ರಗೊಳ್ಳುತ್ತದೆ.

ಬಾದಲೋಂ ಕೋ ಸಿಂಗ್ ಪರ್ ಉಠಾಯೇ
ಖಡಾ ಹೈ ಆಕಾಶ ಕೀ ಪುಲಕ್ ಕೇ ನೀಚೆ

ಕರಿಮೋಡಗಳನ್ನು ತನ್ನ ಕೊಂಬಿನಲ್ಲಿ ಹೊತ್ತು ನಿಂತಿದೆ ಎತ್ತು ಆಕಾಶದ ಸೇತುವೆ ಕೆಳಗೆ

ಬೈಲ್ ಕೋ ಮೈ ಅಪನೆ ಛಾತೇ ಕೇ ನೀಚೆ ಲಾನಾ ಚಾಹತಾ ಹೂಂ
ಆಕಾಶ. ಪೃಥ್ವಿ ಔರ್ ಉಸೇ ಭೀಗನೇ ಸೇ ಬಚಾನೇ ಕೇ ಲಿಯೇ
ಲೇಕಿನ್ ಶಾಯದ್ ಕುಛ್ ಛೋಟಾ ಹೈ ಯೇಹ್ ಛಾತಾ

ಎತ್ತನ್ನು ನನ್ನ ಛತ್ರಿಯ ಕೆಳಗೆ ಕರೆದುಕೊಳ್ಳುತ್ತಿದ್ದೆ ಆದರೆ ಬಹುಶಃ ನನ್ನ ಛತ್ರಿ ಚಿಕ್ಕದಿದೆ ಎನ್ನುತ್ತಾನೆ ಕವಿ.

ಇಸ್ ಫಸಲ್ ಕೇ ಅನ್ನ ಮೇ ಹೋಗಾ
ಧೂಪ ಜೈಸಾ ಆಟಾ ಬಾದಲ್ ಜೈಸಾ ಭಾತ್

ಈ ಸಲದ ಫಸಲಿನಲ್ಲಿ ಬಿಸಿಲಿನಂತ ಹಿಟ್ಟು, ಮೋಡದಂಥ ಅನ್ನವಿದೆ. ಆಹಾ ಎಂಥಾ ಪರಿಕಲ್ಪನೆ!

ಇವೆಲ್ಲ ಸಂಗತಿಗಳು ನಮ್ಮ ಭಾರತೀಯ ದೇಸಿ ನೆಲೆಯದ್ದಾದರೆ ಪಾಶ್ಚ್ಯಾತ್ಯ ದೇಶಗಳಲ್ಲಿ ಅದೂ ರಶಿಯಾದಲ್ಲಿ ‘ರೈತ ಕಾವ್ಯ’ ಎಂಬ ಬರಹಗಾರರ ಗುಂಪು ರಷ್ಯಾದ ಸಾಹಿತ್ಯಕ್ಕೆ ಒಂದು ಹೊಸ ತಿರುವನ್ನು ತಂದರು. ಆ ಕಾಲ ಸಾಮಾಜಿಕ ಕೊಳೆಯುವಿಕೆಯ ಮುನ್ಸೂಚನೆ ಮತ್ತು ಕಲೆಯಲ್ಲಿ ಅರ್ಥಗಳ ಸಂಪೂರ್ಣ ಅರಾಜಕತೆಯ ಸಮಯವಾಗಿತ್ತು,

ಹೊಸ ರೈತ ಕಾವ್ಯವು 20 ನೇ ಶತಮಾನದ ರಷ್ಯಾದ ಸಾಹಿತ್ಯದಲ್ಲಿ ಒಂದು ವಿಶಿಷ್ಟ ವಿದ್ಯಮಾನವಾಗಿದೆ. ರಷ್ಯಾದ ಕಾವ್ಯದ ಈ ವಿಶಿಷ್ಟ ಶಾಖೆಯು ಕೃಷಿ ರೈತ ಜಗತ್ತನ್ನು ಅದರ ವಿಶಿಷ್ಟ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಹಣೆಬರಹ, ಅದರ ವಿರೋಧಾಭಾಸಗಳು ಮತ್ತು ದೌರ್ಬಲ್ಯಗಳು, ಬಳಕೆಯಾಗದ ಅವಕಾಶಗಳೊಂದಿಗೆ ಪ್ರತಿಬಿಂಬಿಸುತ್ತದೆ.

ಇದರ ಅತಿದೊಡ್ಡ ಪ್ರತಿನಿಧಿಗಳು ಅಲೆಕ್ಸಿ ವಾಸಿಲಿವಿಚ್ ಕೋಲ್ಟ್ಸೊವ್, ಇವಾನ್ ಸಾವ್ವಿಚ್ ನಿಕಿಟಿನ್ ಮತ್ತು ಇವಾನ್ ಜಖರೋವಿಚ್ ಸುರಿಕೋವ್. ರೈತರ ಕೆಲಸ ಮತ್ತು ಜೀವನದ ಬಗ್ಗೆ, ಅವರ ಜೀವನದ ನಾಟಕೀಯ ಮತ್ತು ದುರಂತ ಘರ್ಷಣೆಗಳ ಬಗ್ಗೆ ಬರೆದಿದ್ದಾರೆ.

ಇವಾನ್ ಸುರಿಕೋವ್ ಅವರ ‘ಹಾಡುಗಳಲ್ಲಿ’ ‘ಆತ್ಮದ ದುಃಖಗಳು’, ‘ದುಃಖ ಮತ್ತು ಹಾತೊರೆಯುವಿಕೆ’ ಇವೆ.

Was I not a blade of grass in the field,
Did I not grow, all green, in the field?
They took me, blade of grass, and cut me down,
The left me out to dry in the field under the sun.
Oh you, oh woe of mine, miserable woe!
Such is my lot in life!

ನಾನು ಹೊಲದಲ್ಲಿ ಹುಲ್ಲಿನ ಬ್ಲೇಡ್ ಆಗಿರಲಿಲ್ಲ,
ನಾನು ಹೊಲದಲ್ಲಿ ಹಸಿರಾಗಿ ಬೆಳೆದಿಲ್ಲವೇ?
ಅವರು ನನ್ನನ್ನು ಕರೆದೊಯ್ದರು ಮತ್ತು ಕತ್ತರಿಸಿ ಹಾಕಿದರು,
ಅವರು ಹೊಲದಲ್ಲಿ ಬಿಸಿಲಿನಲ್ಲಿ ಒಣಗಲು ಬಿಟ್ಟರು.
ಓಹ್, ನನ್ನ ಸಂಕಟ! ಶೋಚನೀಯ ಸಂಕಟ
ಬದುಕಲ್ಲಿ ಬಹಳಷ್ಟಿದೆ ನನಗೆ ಅಂಥದ್ದು!

Aleksey Koltsov
The Ploughman’s Song
Pull, my gray one, pull now!
Turning o’er the black clods,
Mother-earth will burnish
White the iron ploughshare.

ಅಲೆಕ್ಸಿ ಕೊಲ್ಟ್ಸೊವ್ ಹೇಳುವ ploughman’s Song ನೇಗಿಲು ಹೂಡುವ ಮನುಷ್ಯನ ಹಾಡು ಕೂಡ ನಮ್ಮದೇ ನೇಗಿಲುಯೋಗಿಯ ಹಾಡನ್ನು ನೆನಪಿಸುತ್ತದೆ. ವಿಶ್ವದಾದ್ಯಂತ ಭೂಮಿಯು ಒಂದೇ, ಭೂಮಿಯ ಗತಿ, ಅನ್ನದ ಮಿತಿ, ಕೃಷಿಯ ವಿಧಿವಿಧಾನ ಸಂಕಷ್ಟಗಳು ಒಂದೇ.
ಅಂತಿಮವಾಗಿ ನಮ್ಮ ಹೃದಯದಲ್ಲಿ ಅನುರಣಿಸುವುದು ನಮ್ಮ ದೇಶದ ಬೆನ್ನೆಲುಬಾದ ರೈತರ ನೆಮ್ಮದಿ ರಾಷ್ಟ್ರದ ನೆಮ್ಮದಿ. ಕವಿ ರಾಮಪ್ರಕಾಶ್ ‘ಬೇಖುದ್’ ಲಖನವಿ – ಅವರ ಆಶಯ ನಮ್ಮೆಲ್ಲರ ಆಶಯವೂ ಆಗಿದೆ.

ಲಹಕತೇ ಧಾನ ಕೀ ಏಕ್ ಏಕ್ ಬಾಲಿ ಸೂಖ್ ಜಾತೀ ಹೈ
ಅಗರ್ ಸೀಂಚೀ ನಹೀ ಜಾತೀ ತೋ ಖೇತಿ ಸೂಖ ಜಾತಿ ಹೈ

ಹೊಳೆಯುವ ಧಾನ್ಯದ ಒಂದೊಂದು ತೆನೆಯೂ ಒಣಗಿಹೋಗುತ್ತದೆ
ನೀರೆರೆಯದಿದ್ದರೆ ಹೊಲಮಾಳವೂ ಒಣಗಿಹೋಗುತ್ತದೆ!

ಗಿಡದಿಂದ ಕಳಚಿಕೊಂಡ ಪ್ರತಿಯೊಂದು ರೆಂಬೆಯೂ ಒಣಗಿಹೋಗುತ್ತದೆ. ಕೆಲವರಿಗೆ ತಿನ್ನಲು ಒಂದು ತುತ್ತೂ ಸಿಗುವುದಿಲ್ಲ. ಕೆಲವರ ಮನೆಯಲ್ಲಿ ತಿನ್ನದೇ ಬಿದ್ದು ಬಿದ್ದು ರೊಟ್ಟಿ ಒಣಗಿಹೋಗುತ್ತವೆ. ಎಂಥ ಮಾರ್ಮಿಕವಾದ ಸಾಲುಗಳು!

ಲೇಖಕಿ ರೇಣುಕಾ ನಿಡಗುಂದಿ

ಪರಿಚಯ: ರೇಣುಕಾ ನಿಡಗುಂದಿಯವರ ತವರೂರು ಧಾರವಾಡ. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ. ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿಕಾರ್ಯದರ್ಶಿಯಾಗಿಯೂ , ಸಂಘದ ಮುಖವಾಣಿ ‘ಅಭಿಮತ’ ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ‘ರಾಜಧಾನಿಯಲ್ಲಿ ಕರ್ನಾಟಕ’ ಪುಸ್ತಕವನ್ನು ಸಂಪಾದಿಸಿದ್ದಾರೆ. ಇವರ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ.  ಬಿಡುಗಡೆಯಾದ ಕೃತಿಗಳು – ‘ಮೊದಲ ಕವನ ಸಂಕಲನ’, ‘ಕಣ್ಣ ಕಣಿವೆ’, ‘ದಿಲ್ಲಿ ಡೈರಿಯ ಪುಟಗಳು’, ‘ಅಮೃತ ನೆನಪುಗಳು’, ‘ಅಮೃತಾ ಪ್ರೀತ್ಂರ ಜೀವನಗಾಥೆ ಇಮರೋಜ್ ಕಂಡಂತೆ’, ‘ನಮ್ಮಿಬ್ಬರ ನಡುವೆ’.

ಅನ್ನದಾತನೊಂದಿಗೆ ನಾವು: ಉಳುವ ಯೋಗಿಯು ಕಲೆಯಲ್ಲಿ…