ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಇಂದು ಸಾಯಂಕಾಲ ಬುಧವಾರ ಬೆಳಗ್ಗೆ ನಿಧನರಾದ ಪಕ್ಷದ ಹಿರಿಯ ನಾಯಕ ಮತ್ತು ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿದ್ದ ಅಹ್ಮದ್ ಪಟೇಲ್ ಅವರ ಶೋಕಸಭೆಯಲ್ಲಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಶ್ರದ್ಧಾಂಜಲಿ ಅರ್ಪಿಸಿದರು.
ಕಾಂಗ್ರೆಸ್ ಹಿರಿಯ ಧರೀಣ ಅಹ್ಮದ್ ಪಟೇಲ್ ಅವರ ಸಾವಿನ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಇಂದು ಸಾಯಂಕಾಲ ಆಯೋಜಿಸಿದ ಸಂತಾಪ ಸೂಚಕ ಸಭೆಯಲ್ಲಿ ಪಕ್ಷದ ರಾಜ್ಯ ನಾಯಕರು ಭಾವಪೂರ್ಣ ಶದ್ಧಾಂಜಲಿಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಪಟೇಲ್ ಅವರ ಸಾವಿನಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ, ಅವರು ಪಕ್ಷದ ಆಧಾರ ಸ್ತಂಭವಾಗಿದ್ದರು ಮತ್ತು ಒಗ್ಗಟ್ಟು, ಐಕ್ಯತೆಗಾಗಿ ತಮ್ಮ ಬದುಕಿನಡೀ ಶ್ರಮಿಸಿದರು. ಯಾವುದೇ ರಾಜಕೀಯ ಸಮಸ್ಯೆಯಿದ್ದರೂ ಅದಕ್ಕೆ ಪರಿಹಾರ ಕಂಡುಹಿಡಿಯುತ್ತಿದ್ದರು, ಸಮಸ್ಯೆಯನ್ನು ಮುನ್ನೆಲೆಗೆ ತಾರದೆ ಪಕ್ಷದ ಚೌಕಟ್ಟಿನೊಳಗೆ ಅದನ್ನು ಬಗೆಹರಿಸುತ್ತಿದ್ದರು. 2006ರಲ್ಲಿ ನಾನು ಕಾಂಗ್ರೆಸ್ ಸೇರಲು ಪಟೇಲ್ ಅವರೇ ಕಾರಣ, ನಿಜವಾದ ರಾಜಕೀಯ ಚಾಣಕ್ಯ ಅಂದರೆ ಅಹ್ಮದ್ ಪಟೇಲ್. ಅವರ ಸ್ಥಾನ ತುಂಬುವಂಥವರು ಬೇಱರೂ ಕಾಣಿಸುತ್ತಿಲ್ಲ,’ ಎಂದು ಹೇಳಿದರು.
ನಂತರ ಮಾತಾಡಿದ, ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ‘ಅಹ್ಮದ್ ಪಟೇಲ್ರಲ್ಲಿ ಮೆಚ್ಚಿಕೊಳ್ಳುವಂಥ ಹಲವಾರು ಗುಣಗಳಿದ್ದವು. ಬೇರೆ ಬೇರೆ ಪಕ್ಷಗಳ ನಾಯಕರಲ್ಲೂ ಹೊಂದಾಣಿಕೆ ಹುಟ್ಟಿಸುವ ಕೆಲಸವನ್ನೂ ಪಟೇಲ್ ಸುರಳೀತವಾಗಿ ಮಾಡುತ್ತಿದ್ದರು. ಪಕ್ಷದಲ್ಲಿ ಯಾವುದೇ ತೊಂದರೆ ಎದುರಾದರೂ ಎಲ್ಲವನ್ನೂ ಸಹಿಸಿಕೊಂಡು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಅವರು ಕೊನೆವರೆಗೂ ಮಾಡಿದರು,’ ಎಂದರು.