ಕೊನೆಗೂ ಫಲಿಸಿತು ನಿರ್ಭಯಾ ತಾಯಿಯ ನಿರಂತರ ಹೋರಾಟ!

ದೆಹಲಿ: ಕ್ಷಣಕ್ಕೊಂದು ಬಣ್ಣ.. ದಿನಕ್ಕೊಂದು ನಾಟಕ.. ಕಟ್ಟುಕಥೆ.. ಕುಂಟುನೆಪ.. ನೇಣುಗಂಬ ತಪ್ಪಿಸಿಕೊಳ್ಳೋಕೆ ತಿಂಗಳಿಗೊಂದು ಅರ್ಜಿ.. ಎಷ್ಟೇ ಆಟ ಆಡಿದ್ರೂ.. ಎಂಥಾದ್ದೇ ನಾಟಕ ಮಾಡಿದ್ರೂ ಕಾಮಪಿಶಾಚಿಗಳ ಎಲ್ಲ ಬಾಗಿಲುಗಳು ಬಂದ್ ಆಗಿದ್ದು, ಕ್ರೂರಿಗಳ ಹೆಣ ನೇಣುಗಂಬದಲ್ಲಿ ನೇತಾಡಿದೆ.

ನಿಜ ಕಾಮಪಿಶಾಚಿಗಳ ಅಟ್ಟಹಾಸಕ್ಕೆ ಸಿಲುಕು ನರಳಿ ನರಳಿ ಪ್ರಾಣ ಬಿಟ್ಟ ನಿರ್ಭಯಾ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿದೆ. ನಿರ್ಭಯಾ ತಾಯಿ ಆಶಾದೇವಿಯ ನಿರಂತರ ಹೋರಾಟ ಫಲ ನೀಡಿದೆ. ನಿರ್ಭಯಾ ಅಪರಾಧಿಗಳಿಗೆ ಇಂದು ಬೆಳಗ್ಗೆ 5.30ಸಮಯಕ್ಕೆ ಗಲ್ಲು ಶಿಕ್ಷೆಯಾಗಿದೆ.

ಹೇಗಾದ್ರೂ ಮಾಡಿ ಈ ಶಿಕ್ಷೆಯಿಂದ ಪಾರಾಗೋಕೆ ಪವನ್‌ ಗುಪ್ತಾ, ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಮಾಡಿದ ನಾಟಕ ಅಷ್ಟಿಷ್ಟಲ್ಲ. ಒಬ್ಬರಾದ ನಂತ್ರ ಮತ್ತೊಬ್ಬರು ಕೋರ್ಟ್​ ಮೆಟ್ಟಿಲೇರುತ್ತಿದ್ರು. ಅದನ್ನು ಡಿಟೇಲ್ ಆಗಿ ಹೇಳೋಕೂ ಮುಂಚೆ ಆವತ್ತು ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆ ನಡೆದಿದ್ದೇಗೆ ಅನ್ನೋದಾದ್ರೆ…

ಕ್ರೂರಿಗಳು ಅಟ್ಟಹಾಸ ಮೆರೆದಿದ್ದೇಗೆ?
2012ರ ಡಿಸೆಂಬರ್ 16ರಂದು ಪೈಶಾಚಿಕ ಕೃತ್ಯ ನಡೆದಿತ್ತು. ಆವತ್ತು ಸಾಕೇತ್​ನಲ್ಲಿ ಸಿನಿಮಾ ನೋಡಿ ನಿರ್ಭಯಾ ವಾಪಸ್ ಆಗ್ತಿದ್ಳು. ದೆಹಲಿಯ ದಕ್ಷಿಣ ಭಾಗದ ದ್ವಾರಕಾ ಪ್ರದೇಶದ ಮುರ್ನಿಕಾದಲ್ಲಿ ಸ್ನೇಹಿತನ ಜತೆ ನಿರ್ಭಯಾ ಬಸ್ ಹತ್ತಿದ್ದಳು. ಈ ವೇಳೆ, ಚಲಿಸುತ್ತಿದ್ದ ಬಸ್​ನಲ್ಲೇ ನಿರ್ಭಯಾ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು.

ಬಳಿಕ ನಿರ್ಭಯಾ ಮೇಲೆ 6 ದುರುಳರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಬಳಿಕ ರಾತ್ರಿ 11ರ ಸುಮಾರಿಗೆ ಇಬ್ಬರನ್ನೂ ಚಲಿಸೋ ಬಸ್​ನಿಂದ ತಳ್ಳಿ ಎಸ್ಕೇಪ್ ಆಗಿದ್ದರು. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ನಿರ್ಭಯಾಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಗೆ ಕೊರೆದೊಯ್ಯಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ 2012ರ ಡಿ.29ರ ಮಧ್ಯರಾತ್ರಿ 2.10ಕ್ಕೆ ಸಂತ್ರಸ್ತೆ ಜೀವ ಬಿಟ್ಟಿದ್ಳು. ಮತ್ತೊಂದೆಡೆ ಈ ಕೇಸ್ ಬೆನ್ನು ಬಿದ್ದಿದ್ದ ಪೊಲೀಸ್ರು ಕಟುಕರಿಗೆ ಬಲೆ ಬೀಸಿದ್ರು.. ಅತ್ಯಾಚಾರವೆಸಗಿದ್ದ 6 ಕಾಮುಕರ ಕೈಗೆ ಕೋಳ ತೊಡಿಸಲು ಫೀಲ್ಡಿಗೆ ಇಳಿದಿದ್ರು.

ಕಟುಕರಿಗೆ ಖೆಡ್ಡಾ!
2012ರ ಡಿಸೆಂಬರ್ 17ರಂದು ದೆಹಲಿ ಪೊಲೀಸರು, ಬಸ್ ಚಾಲಕ ರಾಮ್ ಸಿಂಗ್, ಸಹೋದರ ಮುಖೇಶ್, ವಿನಯ್ ಶರ್ಮಾ ಹಾಗೂ ಪವನ್ ಗುಪ್ತಾ ಗುರುತು ಪತ್ತೆ ಹಚ್ಚಿದ್ರು. ಮಾರನೇ ದಿನವೇ ಅಂದ್ರೆ, ಡಿ.18ರಂದು ರಾಮ್​ಸಿಂಗ್ ಸೇರಿ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ರು. ನಂತ್ರ 2012ರ ಡಿ.21ರಂದು ಕೃತ್ಯದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಇದಾದ ಬಳಿಕ 2012ರ ಡಿ.22ರಂದು ಅಕ್ಷಯ್ ಠಾಕೂರ್​ನನ್ನು ಬಂಧಿಸಿ ತಿಹಾರ್ ಜೈಲಿಗಟ್ಟಿದ್ರು. ಆದ್ರೆ, 2013ರ ಮಾರ್ಚ್ 3ರಂದು ಆರೋಪಿ ರಾಮ್​ಸಿಂಗ್ ಆತ್ಮಹತ್ಯೆ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.

3 ವರ್ಷ ಜೈಲು ಶಿಕ್ಷೆ ಅನುಭವಿಸಿ ಅಪ್ರಾಪ್ತ ಬಿಡುಗಡೆಯಾಗಿದ್ದ. 2013ರ ಸೆಪ್ಟೆಂಬರ್ 13ರಂದು ವಿಚಾರಣೆ ನಡೆಸಿದ್ದ ದೆಹಲಿಯ ವಿಶೇಷ ಕೋರ್ಟ್, ನಾಲ್ವರು ದೋಷಿಗಳೆಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್​ 2014ರ ಮಾ.13ರಂದು ವಿಶೇಷ ಕೋರ್ಟ್​ ತೀರ್ಪನ್ನು ಎತ್ತಿ ಹಿಡಿದಿತ್ತು. ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ರೂ ಅಪರಾಧಿಗಳಿಗೆ ಹಿನ್ನಡೆ ಆಗಿತ್ತು. ಅಲ್ಲಿಂದ ಈ ಹೃದಯ ಹೀನರು ಮಾಡಿದ ನಾಟಕಗಳು ಒಂದೆರಡಲ್ಲ. 3 ಬಾರಿ ಡೆತ್ ವಾರಂಟ್ ಮಾಡಿದ್ರೂ ಗಲ್ಲು ಶಿಕ್ಷೆ ವಿಳಂಬವಾಗುವಂತೆ ಏನಾದ್ರೂ ನಾಟಕ ಮಾಡುತ್ತ ಇದ್ರು.

ಮೊದಲ ಡೆತ್ ವಾರಂಟ್:
ಜನವರಿ 7, 2020ರಂದು ದೆಹಲಿಯ ಪಟಿಯಾಲ ಹೈಸ್ ಕೋರ್ಟ್​ ಮೊದಲ ಡೆತ್ ವಾರಂಟ್ ಹೊರಡಿಸಿತ್ತು. ಜನವರಿ 22ರ ಬೆಳಗ್ಗೆ 7 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸೂಚಿಸಿತ್ತು. ಇದಾದ ನಂತರ ಅಪರಾಧಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಆದ್ರೆ, ಸುಪ್ರೀಂಕೋರ್ಟ್​ನ ಪಂಚ ಪೀಠದಿಂದ ಕ್ಯುರೇಟಿವ್ ಅರ್ಜಿ ವಜಾಗೊಂಡಿತ್ತು. ಬಳಿಕ ಅಪರಾಧಿಗಳು ಜನವರಿ 14, 2020ರಂದು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ರು. ಆದ್ರೆ, ಜನವರಿ 17, 2020ರಂದು ಕ್ಷಮಾದಾನ ಅರ್ಜಿಯನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ತಿರಸ್ಕರಿಸಿದ್ರು.

ಅಪರಾಧಿಗಳ ಎರಡನೇ ನಾಟಕ!
ಜನವರಿ 22, 2020ರಂದು ದೆಹಲಿ ಕೋರ್ಟ್ ಎರಡನೇ ಬಾರಿಗೆ ವಾರಂಟ್ ಜಾರಿ ಮಾಡಿತ್ತು. ಫೆಬ್ರವರಿ 01ರಂದು ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಸೂಚಿಸಿತ್ತು. ಆದ್ರೆ, ಜನವರಿ 25 ರಂದು ರಾಷ್ಟ್ರಪತಿಗಳು ಕ್ಷಮಾದಾನ ತಿರಸ್ಕರಿಸಿದ ಕುರಿತು ಅಪರಾಧಿ ಮುಕೇಶ್ ಕುಮಾರ್ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ.

ಜನವರಿ 28 ರಂದು ಮತ್ತೋರ್ವ ಅಪರಾಧಿ ಅಕ್ಷಯ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ. ಆದ್ರೆ, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜನವರಿ 29ರಂದು ಅಕ್ಷಯ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತ್ತು. ಜನವರಿ 31ರಂದು ಕೋರ್ಟ್, ಅರ್ಜಿ ವಿಚಾರಣೆ ಬಾಕಿ ಇದ್ದಿದ್ರಿಂದ ಡೆತ್ ವಾರಂಟ್ ರದ್ದು ಪಡಿಸಿತ್ತು. ಬಳಿಕ ಫೆಬ್ರವರಿ 1ರಂದು ಅಪರಾಧಿ ವಿನಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನ ರಾಷ್ಟ್ರಪತಿಗಳು ತಿರಸ್ಕಾರ ಮಾಡಿದ್ರು.

3ನೇ ಬಾರಿಗೆ ಡೆತ್ ವಾರಂಟ್
ಮಾರ್ಚ್ 02, 2020ರಂದು ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮೂರನೇ ಬಾರಿಗೆ ಡೆತ್ ವಾರಂಟ್ ಹೊರಡಿಸಿತ್ತು. ಡೆತ್ ವಾರಂಟ್ ಜಾರಿಗೊಳಿಸಿದ ಬಳಿಕ ವಿನಯ್ ಶರ್ಮಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ಫೆ.28ರಂದು ತನಗೆ ನೀಡಿರುವ ಗಲ್ಲು ಶಿಕ್ಷೆ ಪರಿವರ್ತಿಸಿ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಪವನ್ ಗುಪ್ತಾ ಅರ್ಜಿ ಸಲ್ಲಿಸಿದ್ದ.

ಬಳಿಕ ಫೆ.29ರಂದು ಹಿಂದೆ ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಅಪೂರ್ಣವೆಂದು ಅಕ್ಷಯ್, ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಕೋರ್ಟ್​, ಮಾರ್ಚ್ 2ರಂದು ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿತ್ತು. ಆ ಬಳಿಕ ಗಲ್ಲು ಶಿಕ್ಷೆ ಮುಂದೂಡಿಕೆಯಾಗಿತ್ತು. ನಾಲ್ಕನೇ ಬಾರಿಗೆ ಅಂದ್ರೆ, ಮಾರ್ಚ್​ 20ರಂದು ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಜಾರಿ ಮಾಡಿದ ಬಳಿಕವೂ ಕ್ರೂರಿಗಳು ಒಂದಿಲ್ಲೊಂದು ಆಟ ಶುರು ಮಾಡಿದ್ರು. ಆದ್ರೆ, ಕೋರ್ಟ್​ ಯಾವುದಕ್ಕೂ ಆಸ್ಪದ ಕೊಡದ ಹಿನ್ನೆಲೆಯಲ್ಲಿ ಅಪರಾಧಿಗಳ ಅದೃಷ್ಟದ ಬಾಗಿಲು ಬಂದ್ ಆಗಿತ್ತು. ಒಟ್ನಲ್ಲಿ, ಇಂದು ತಿಹಾರ್ ಜೈಲಿನ ನೇಣುಗಂಬದಲ್ಲಿ ನಾಲ್ವರೂ ನೇತಾಡಿದ್ದು, ನಿರ್ಭಯಾ ತಾಯಿಯ ಹೋರಾಟಕ್ಕೆ ಜಯ ಸಿಕ್ಕಿದೆ.

Related Posts :

ತಾಜಾ ಸುದ್ದಿ

error: Content is protected !!