ಮೂರರಲ್ಲಿ ಎರಡು ಸೋತು ಗೆಲುವಿಗಾಗಿ ತವಕಿಸುತ್ತಿರುವ ಎಮ್ಐ ಮತ್ತು ಪಂಜಾಬ ನಡುವೆ ಇವತ್ತಿನ ಕದನ

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯ 13ನೇ ದಿವಾಗಿರುವ ಇಂದು, ನಾಲ್ಕನೇ ಬಾರಿ ಚಾಂಪಿಯನ್​ಶಿಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಇದುವರೆಗೆ ಒಮ್ಮೆಯೂ ಗೆಲ್ಲದಿರುವ ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ಭಾರಿ ಪೈಪೋಟಿಯ ಕದನ ಅಬು ಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಸೋತು ಒಂದೊಂದನ್ನು ಗೆದ್ದಿವೆ. ಇವೆರಡು ಸೂಪರ್ ಓವರ್​ನಲ್ಲಿ ಕೊನೆಗೊಂಡ ಪಂದ್ಯಗಳ ಭಾಗವಾಗಿದ್ದು ಅವುಗಳಲ್ಲಿ ಸೋಲಿನ ಕಹಿಯನ್ನು ಅನುಭವಿಸಿವೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನೊಂದಿಗೆ 13ನೇ ಅವೃತಿಯ ಅಭಿಯಾನ ಆರಂಭಿಸಿದ ಪಂಜಾಬ್ ಎರಡನೆ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಮೂರನೆಯದರಲ್ಲಿ ರಾಜಸ್ತಾನ ರಾಯಲ್ಸ್​ಗೆ ಸೋತಿತು. ಹಾಗೆಯೇ, ಚೆನೈ ಸೂಪರ್ ವಿರುದ್ಧ ಸೋಲಿನೊಂದಿಗೆ ಈ ಬಾರಿಯ ಐಪಿಎಲ್ ಸೀಸನ್ ಶುರುಮಾಡಿದ ಮುಂಬೈ ನಂತರ ಕೊಲ್ಕತಾ ನೈಟ್​ರೈಟರ್ಸ್ ಮೇಲೆ ಜಯಗಳಿಸಿ ಮೂರನೆಯದನ್ನು ಬೆಂಗಳೂರಿಗೆ ಸೂಪರ್ ಓವರ್​ನಲ್ಲಿ ಸೋತಿತು​

IPL 2020 Match 13 ಅಬುಧಾಭಿಯಲ್ಲಿ ಇಂದು ಪಂಜಾಬ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಹಣಾಹಣಿ. ಹಾಗಾದ್ರೆ ಗೆಲುವು ಯಾರಿಗೆ?

ಟೀಮುಗಳ ಬಲಾಬಲವನ್ನು ನೋಡಿದ್ದೇಯಾದರೆ, ಎರಡೂ ಸ್ಟಾರ್ ಬ್ಯಾಟ್ಸ್​ಮನ್ ಮತ್ತು ಬೌಲರ್​ಗಳನ್ನು ಹೊಂದಿದ್ದು ಎಲ್ಲ ಕೋನಗಳಿಂದ ಸಮತೋಲಿತ ಅನಿಸುತ್ತ್ತಿವೆ. ಪಂಜಾಬ್ ನಾಯಕ ಕೆ ಎಲ್ ರಾಹುಲ್ ಮತ್ತು ಅವರ ಜೊತೆ ಇನ್ನಿಂಗ್ಸ್ ಓಪನ್ ಮಾಡುವ ಮಾಯಾಂಕ್ ಅಗರ್​ವಾಲ್ ಅತ್ಯುತ್ತಮ ಪಾರ್ಮ್​ನಲ್ಲಿದ್ದಾರೆ. ಇಬ್ಬರ ಬ್ಯಾಟ್​ನಿಂದ ಶತಕಗಳು ಸಿಡಿದಿವೆ. ಮೂರು ಪಂದ್ಯಗಳಿಂದ 223 ರನ್ ಶೇಖರಿಸಿರುವ ರಾಹುಲ್ ಕಿತ್ತಳೆ ವರ್ಣದ ಕ್ಯಾಪ್​ನ ಒಡೆಯರಾಗಿದ್ದಾರೆ. ಆಗರ್​ವಾಲ್ ಸಹ ರಾಜಸ್ತಾನ ವಿರುದ್ಧ ಐಪಿಎಲ್​ನಲ್ಲಿ ತಮ್ಮ ಚೊಚ್ಚಲು ಶತಕ ದಾಖಲಿಸುವ ಮೊದಲು ಡೆಲ್ಲಿ ಮೇಲೆ ಆಕರ್ಷಕ 89 ರನ್ ಗಳಿಸಿ ಔಟಾಗಿದ್ದರು.

ಇದನ್ನೂ ಓದಿ: IPL 2020: MI vs KXIP Live Score

ಬಿರುಸಿನ ಹೊಡೆತಗಳನ್ನಾಡುವ ನಿಕೊಲಾಸ್ ಪೂರನ್ ಅವರಿಂದ ರನ್ ಬರುತ್ತಿಲ್ಲ, ಆದರೆ ಅವರು ಫೀಲ್ಡಿಂಗ್​ನಲ್ಲಿ ಹೆಸರು ಮಾಡುತ್ತಿದ್ದಾರೆ. ಅವರ ಸ್ಥಾನದಲ್ಲಿ ಇವತ್ತು ಈ ಸೀಸನ್​ನಲ್ಲಿ ಇನ್ನೂ ಒಂದು ಪಂದ್ಯ ಸಹ ಆಡದಿರುವ ಕ್ರಿಸ್ ಗೇಲ್​ರನ್ನು ಪ್ರಯೋಗಿಸಬಹುದು. ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಸರ್ಫ್ರಾಜ್ ಖಾನ್​ಗೆ ಬ್ಯಾಟಿಂಗ್ ಮಾಡುವ ಅವಕಾಶಗಳು ಸಿಗುತ್ತಿಲ್ಲ. ಯುವ ಆಟಗಾರರಾದ ದೀಪಕ್ ಹೂಡ ಮತ್ತು ಮನ್​ದೀಪ್ ಸಿಂಗ್ ಅವರಿಗೂ ಇದೇ ಮಾತು ಅನ್ವಯಿಸುತ್ತದೆ.

ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ರವಿ ಬಿಷ್ಣೊಯಿ ಮಿಂಚುತ್ತಿದ್ದಾರೆ. ರಾಜಸ್ತಾನದ ರಾಹುಲ್ ತೆವಾಟಿಯ ಕೈಲಿ ಓಂದೇ ಓವರ್​ನಲ್ಲಿ 5 ಸಿಕ್ಸರ್​ಗಳನ್ನು ಚಚ್ಚಿಸಿಕೊಂಡ ಶೆಲ್ಡನ್ ಕಾಟ್ರೆಲ್, ಆ ಪಂದ್ಯವನ್ನು ಹೊರತುಪಡಿಸಿ ಉಳಿದವುಗಳಲ್ಲಿ ಉತ್ತಮವಾಗಿ ಬೌಲ್ ಮಾಡಿರುವುದರಿಂದ ಟೀಮ್ ಮ್ಯಾನೇಜ್​ಮೆಂಟ್​ನಿಂದ ಅವಕೃಪೆಗಳಗಾಗುವ ಸಾಧ್ಯತೆ ತೀರ ಕಡಿಮೆ. ಕೃಷ್ಣಪ್ಪ ಗೌತಮ್ ಇವತ್ತಿನ ಪಂದ್ಯ ಆಡುವುದು ಅನುಮಾನ.

ಒಂದರ್ಥದಲ್ಲಿ ಇವತ್ತಿನ ಮ್ಯಾಚ್ ರಾಹುಲ್ ಮತ್ತು ಮುಂಬೈ ನಾಯಕ ರೋಹಿತ್ ಶರ್ಮ ನಡುವಿನ ವೈಯಕ್ತಿಕ ಶ್ರೇಷ್ಠತೆಯ ಹಣಾಹಣಿಯೂ ಹೌದು. ರೋಹಿತ್ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಉಪನಾಯಕರಾಗಿದ್ದರೆ, ರಾಹುಲ್​ರನ್ನು ಭಾವಿ ನಾಯಕ ಎಂದು ಪ್ರೊಜೆಕ್ಟ್ ಮಾಡಲಾಗುತ್ತಿದೆ. ರೋಹಿತ್ ಸಹ ಸದರಿ ಟೂರ್ನಿಯಲ್ಲಿ ಉತ್ತಮ ಸ್ಪರ್ಶದಲ್ಲಿದ್ದಾರೆ. ಕೆಕೆಆರ್ ವಿರುದ್ಧ ಆವರು ಬಾರಿಸಿದ ಮ್ಯಾಚ್ ವಿನ್ನಿಂಗ್ 80 ರನ್ ಇದಕ್ಕೆ ಸಾಕ್ಷಿ. ಇಂದಿನ ಪಂದ್ಯದಲ್ಲಿ ಅವರು 2 ರನ್ ಗಳಿಸಿದರೆ ಮಾಡಿದರೆ ಐಪಿಎಲ್​ನಲ್ಲಿ 5,000 ರನ್ ಗಳಿಸಿದ ಮೂರನೆ ಬ್ಯಾಟ್ಸಮನ್ ಎನಿಸಿಕೊಳ್ಳಲಿದ್ದಾರೆ

ರೋಹಿತ್ ಓಪನಿಂಗ್ ಪಾರ್ಟ್​ನರ್ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್​ಗಳಿಂದ ಮಹತ್ವದ ಕಾಣಿಕೆಗಳು ಬರುತ್ತಿಲ್ಲವಾದರೂ ನೆಚ್ಚಿಕೊಳ್ಳಬಹುದಾದ ಆಟಗಾರರಾಗಿದ್ದಾರೆ. ಆದರೆ ಎಲ್ಲರ ಕಣ್ಣು ಬೆಂಗಳೂರು ವಿರುದ್ಧ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಷನ್ ಅವರ ಮೇಲಿರುವುದು ನಿಶ್ಚಿತ. ಗಾಯಗೊಂಡ ಸೌರಭ್ ತಿವಾರಿ ಸ್ಥಾನದಲ್ಲಿ ಆಡಲು ಬಂದ ಕಿಷನ್, ಬೆಂಗಳೂರು ವಿರುದ್ಧ ಡ್ರೀಮ್ ಇನ್ನಿಂಗ್ಸ್ ಆಡಿ ಕೇವಲ ಇಂದು ರನ್ನಿಂದ ಶತಕ ವಂಚಿತರಾಗಿದ್ದು ದುರದೃಷ್ಟಕರ. ರಾಯಲ್ಸ್​ನ ಸಂಜು ಸ್ಯಾಮ್ಸನ್ ಅವರಂತೆ ಕಿಷನ್ ಸಹ ಕ್ರಿಕೆಟಿಂಗ್ ಹೊಡೆತಗಳನ್ನು ಬಾರಿಸುತ್ತಾರೆಯೇ ಹೊರತು ಸ್ಲಾಗ್ ಮಾಡಲ್ಲ. ಈ ಹುಡುಗ ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದ್ದಾನೆ ಅಂತ ಮಾಜಿ ಆಟಗಾರರು, ಕಾಮೆಂಟೇಟರ್​ಗಳು ಹೇಳುತ್ತಿರುವುದು ಖಂಡಿತವಾಗಿಯೂ ಉತ್ಪ್ರೇಕ್ಷೆಯಲ್ಲ.

ಕೈರನ್ ಪೊಲ್ಲಾರ್ಡ್ ಸಹ ಬೆಂಗಳೂರು ವಿರುದ್ಧ ಭರ್ಜರಿಯಾಗಿ ಆಡಿದರು. ಅವರು ಯಾವತ್ತಿಗೂ ಯುಟಿಲಿಟಿ ಆಟಗಾರರಾಗಿರುವುದರಿಂದ ಅಂಬಾನಿಗಳು ಅವರನ್ನು ಪ್ರತಿವರ್ಷ ರಿಟೇನ್ ಮಾಡಿಕೊಳ್ಳುತ್ತಾರೆ. ಮತ್ತಿಬ್ಬರು ಆಲ್​ರೌಂಡರ್​ಗಳು ಕೃಣಾಲ್ ಮತ್ತು ಹಾರ್ದಿಕ್ ಪಾಂಡ್ಯ ಎಡವುತ್ತಿದ್ದಾರೆ. ರೋಹಿತ್ ಟೀಮಿನ ಬೌಲಿಂಗ್ ಅದ್ಭುತವಾಗಿದೆ. ಜಸ್ಪ್ರಿತ್ ಬುಮ್ರಾ, ಜೇಮ್ಸ್ ಪ್ಯಾಟಿಸನ್, ಟ್ರೆಂಟ್ ಬೌಲ್ಟ್ ಮತ್ತು ರಾಹುಲ್ ಚಹರ್ ಯಾವುದೇ ಟೀಮು ಹೆಮ್ಮೆಪಟ್ಟುಕೊಳ್ಳಬಹುದಾದ ಬೌಲರ್​ಗಳು.

ಇವತ್ತು ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಕ್ರಿಕೆಟ್ ರಸದೌತಣ ಸಿಗುವುದು ಗ್ಯಾರೆಂಟಿ.

Related Tags:

Related Posts :

Category:

error: Content is protected !!