ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಅಂಜುಮನ್‌ ಸಂಸ್ಥೆಯಿಂದ ಕೋವಿಡ್‌ ಕೇರ್‌ ಆಸ್ಪತ್ರೆ ನಿರ್ಮಾಣ

ಹುಬ್ಬಳ್ಳಿ: ಕೊರೊನಾ ವಿರುದ್ಧ ಶತಾಯ ಗತಾಯ ಹೋರಾಟ ನಡೆಸಿರೋ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹುಬ್ಬಳ್ಳಿಯ ಅಂಜುಮನ್‌ ಸಂಸ್ಥೆ ಕೈ ಜೋಡಿಸಿದ್ದು, ಕೋವಿಡ್‌ ಕೇರ್‌ ಕೇಂದ್ರವನ್ನು ರೆಡಿ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಲು ಸಜ್ಜಾಗಿದೆ.

ಹೌದು, ಹುಬ್ಬಳ್ಳಿಯ ಅಂಜುಮನ್‌ ಸಂಸ್ಥೆ ಈಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜತೆ ಕೈ ಜೋಡಿಸಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸಂಸ್ಥೆ ಸ್ವಯಂ ಪ್ರೇರಿತವಾಗಿ ನಗರದ ಪಿ.ಬಿ. ರಸ್ತೆಯಲ್ಲಿರುವ ಅಂಜುಮನ್ ಹಾಲ್ ಬಳಿಯಿರುವ ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ 120 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರವನ್ನು ಸಿದ್ಧಪಡಿಸಿದೆ.

ಈ ಕೋವಿಡ್‌ ಕೇರ್‌ ‌ ಕೇಂದ್ರವನ್ನು ಸಂಸ್ಥೆ ಮುಂದಿನ ಎರಡು ಮೂರು ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಿದೆ. ಅಂಜುಮನ್‌ ಸಂಸ್ಥೆಯ ಈ ಮಹತ್ತರ ಕಾರ್ಯದಲ್ಲಿ ಆಜಾದ್-ಕೊ-ಬ್ಯಾಂಕ್‌ 50 ಕಬ್ಬಿಣದ ಮಂಚ ಹಾಗೂ ಕುಂಬಾರ ಮಜ್ಜೀದ್ ಜಮಾತ್ ಮೆಹಬೂಬ್ ಕಾಂಪ್ಲೆಕ್ಸ್  50 ಕಬ್ಬಿಣದ ಮಂಚಗಳನ್ನು ದೇಣಿಗೆಯಾಗಿ ನೀಡಿ ಕೈ ಜೋಡಿಸಿವೆ.

ಈ ಬೆಡ್‌ಗಳಿಗಾಗಿ ಹಾಸಿಗೆಗಳು ಕೂಡ ದೇಣಿಗೆಯಾಗಿ ಲಭಿಸಿದ್ದು, ಸೋಂಕಿತರ ಚಿಕಿತ್ಸೆಗೆ ಅವಶ್ಯಕ ಇರುವ ಎಲ್ಲ ಸಿದ್ದತೆಗಳನ್ನು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಾಡಲಾಗುತ್ತಿದೆ. ಕೇಂದ್ರ ಹೇಗಿರಬೇಕೆಂಬ ಬಗ್ಗೆ ಜಿಲ್ಲಾಡಳಿತ ಸಂಸ್ಥೆಗೆ ಮಾರ್ಗದರ್ಶನ ನೀಡಿತ್ತು. ಅದಕ್ಕೆ ತಕ್ಕಂತೆ ಈಗ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ.

ಕೊರೊನಾ ಸೋಂಕಿತರಿಗೆ ಬಿಸಿ ನೀರು ಸೇರಿದಂತೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಸೋಂಕಿತರ ಚಿಕಿತ್ಸೆಗೆ ಕೇಂದ್ರ ಈಗ ಸಂಪೂರ್ಣವಾಗಿ ಸಜ್ಜಾಗಿದ್ದು ಜಿಲ್ಲಾಡಳಿತಕ್ಕೆ ವಹಿಸಿಕೊಡಲು ಅಂಜುಮನ್ ಸಂಸ್ಥೆ ಸಿದ್ದತೆ ನಡೆಸಿದೆ.-ದತ್ತಾತ್ರೇಯ ಪಾಟೀಲ್

Related Tags:

Related Posts :

Category: