ಆಮ್ ಆದ್ಮಿ ಕೇಜ್ರಿವಾಲ್ 3.0 ಪ್ರಮಾಣಕ್ಕೆ ರಾಮಲೀಲಾ ಮೈದಾನ ಸಜ್ಜು

ದೆಹಲಿ: ಎರಡು ರಾಷ್ಟ್ರೀಯ ಪಕ್ಷದ ಘಟಾನುಘಟಿ ನಾಯಕರು. ಮೋದಿ, ಅಮಿತ್ ಶಾ ಅನ್ನೋ ಸಾಮ್ರಾಟರ ತಾಕತ್ತು. ವರ್ಚಸ್ಸಿನ ಮುಂದೆ ಗೆದ್ದು ಬೀಗಿ. ವಿಜಯಪತಾಕೆ ಹಾರಿಸಿದ್ದು ಇದೇ ಅರವಿಂದ್ ಕೇಜ್ರಿವಾಲ್. 70 ಸೀಟುಗಳ ಪೈಕಿ 62 ಸೀಟು ಗೆದ್ದು ದೆಹಲಿಗೆ ಸುಲ್ತಾನನಾಗಿದ್ದು, ಮೂರನೇ ಬಾರಿಗೆ ರಾಷ್ಟ್ರರಾಜಧಾನಿಯ ಗದ್ದುಗೆ ಅಲಂಕರಿಸಲು ವೇದಿಕೆ ಸನ್ನದ್ಧವಾಗಿದೆ.

ಇಂದು ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣವಚನ:
ಯೆಸ್.. ಜಿದ್ದಾಜಿದ್ದಿನ ಕದನದಲ್ಲಿ ಶಕ್ತಿ ಮೀರಿ ಹೋರಾಡಿ ವಿಜಯ ಪತಾಕೆ ಹಾರಿಸಿದ ಆಪ್ ಸರದಾರ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಲಿದ್ದಾರೆ. ಇಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು, ವೇದಿಕೆ ರೆಡಿಯಾಗಿದೆ. ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಮೂಲಕ ಆಮ್ ಆದ್ಮಿ ಪಾರ್ಟಿ ಹುಟ್ಟಿದ ರಾಮಲೀಲಾ ಮೈದಾನದಲ್ಲೇ ಪದಗ್ರಹಣ ನಡೆಯಲಿದ್ದು, ಕೇಜ್ರಿವಾಲ್ ಜತೆಗೆ 6 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

‘ಕೇಜ್ರಿ’ ಕ್ಯಾಬಿನೆಟ್:
ಇಂದು ಮುಖ್ಯಮಂತ್ರಿ ಆಗಿ ಅರವಿಂದ ಕೇಜ್ರಿವಾಲ್ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ ಮನಿಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜತೆಗೆ ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಮತ್ತು ರಾಜೇಂದ್ರ ಗೌತಮ್ ಕೇಜ್ರಿವಾಲ್ ಕ್ಯಾಬಿನೆಟ್ ಸೇರಲಿದ್ದಾರೆ.

60 ಜನರೊಂದಿಗೆ ವೇದಿಕೆ ಹಂಚಿಕೊಳ್ಳಲಿರುವ ‘ಆಪ್ ಸರದಾರ’
ದೆಹಲಿಯ ನಿರ್ಮಾತೃಗಳು ಅಂತಾ ಕರೆಯಲ್ಪಡುವ 60 ಜನರೊಂದಿಗೆ ಅರವಿಂದ್ ಕೇಜ್ರಿವಾಲ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ ಈ ಗುಂಪಲ್ಲಿ ವೈದ್ಯರು, ಶಿಕ್ಷಕರು, ಪೌರ ಕಾರ್ಮಿಕರು, ಬಸ್ ಚಾಲಕ, ನಿವಾರ್ಹಕರು, ಆಟೋ ಡ್ರೈವರ್ಸ್, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಸೇರಲಿದ್ದಾರೆ.

ಪ್ರಧಾನಿ ಮೋದಿ, ದೆಹಲಿ ಸಂಸದರಿಗೆ ಮಾತ್ರ ಆಹ್ವಾನ:
ಪದಗ್ರಹಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮತ್ತು ದೆಹಲಿಯ 7 ಬಿಜೆಪಿ ಸಂಸದರಿಗೆ ಆಪ್ ಪಕ್ಷ ಆಹ್ವಾನ ನೀಡಿದೆ. ಇದನ್ನು ಬಿಟ್ಟು ಆಪ್ ಪಕ್ಷ ಬೇರೆ ಯಾವುದೇ ಪಕ್ಷದ ನಾಯಕರಿಗೆ ಆಹ್ವಾನ ನೀಡಿಲ್ಲ. ಆದ್ರೆ, ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪ್ರಧಾನಿ ಕಚೇರಿಯ ವೇಳಾಪಟ್ಟಿಯ ಪ್ರಕಾರ, 30 ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ತಮ್ಮ ಕ್ಷೇತ್ರ ವಾರಣಾಸಿಗೆ ತೆರಳುತಿದ್ದಾರೆ. ಮತ್ತೊಂದೆಡೆ, ದೆಹಲಿ ಎಲೆಕ್ಷನ್ ರಿಸಲ್ಟ್ ದಿನ ಮಿಂಚಿದ್ದ ಈ ಬೇಬಿ ಮಫ್ಲರ್ ಮ್ಯಾನ್​ಗೂ ಆಪ್ ಆಮಂತ್ರಣ ನೀಡಿದೆ.

ಒಟ್ನಲ್ಲಿ, ಅರವಿಂದ ಕೇಜ್ರಿವಾಲ್ 3ನೇ ಬಾರಿಗೆ ದೆಹಲಿ ಗೆದ್ದುಗೆ ಏರುತ್ತಿದ್ದು, ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ವಿಶೇಷ ಅತಿಥಿಗಳ ಸಮಾಗಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!