ಸಾಮಾನ್ಯ ವಾಹನಗಳಿಂತಲೂ ಎಲೆಕ್ಟ್ರಿಕ್ ವಾಹನಗಳ ಇನ್ಸುರೆನ್ಸ್ ಯಾಕೆ ದುಬಾರಿ ಗೊತ್ತಾ?

ಎಲೆಕ್ಟ್ರಿಕ್ ವಾಹನಗಳು ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳಿಂತಲೂ ತುಸು ದುಬಾರಿಯಾಗಿದ್ದು, ಇದರ ಪರಿಣಾಮ ಇವಿ ವಾಹನಗಳ ವಿಮೆ ಮೊತ್ತವು ಕೂಡಾ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಆದರೆ ದುಬಾರಿ ಇವಿ ವಾಹನದ ರಕ್ಷಣೆಯಲ್ಲಿ ವಿಮೆ ಖರೀದಿ ಮಹತ್ವದ ಪಾತ್ರವಹಿಸಲಿದ್ದು, ಇದು ಇವಿ ವಾಹನಗಳಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತವೆ.

ಸಾಮಾನ್ಯ ವಾಹನಗಳಿಂತಲೂ ಎಲೆಕ್ಟ್ರಿಕ್ ವಾಹನಗಳ ಇನ್ಸುರೆನ್ಸ್ ಯಾಕೆ ದುಬಾರಿ ಗೊತ್ತಾ?
ಎಲೆಕ್ಟ್ರಿಕ್ ವಾಹನಗಳ ಇನ್ಸುರೆನ್ಸ್ ಯಾಕೆ ದುಬಾರಿ ಗೊತ್ತಾ?
Follow us
Praveen Sannamani
|

Updated on: Jan 07, 2024 | 5:49 PM

ಎಲೆಕ್ಟ್ರಿಕ್ ವಾಹನಗಳು (Electric Vehicles) ದೇಶಿಯ ಮಾರುಕಟ್ಟೆಯಲ್ಲಿ ಕ್ರಮೇಣ ಜನಪ್ರಿಯತೆಯನ್ನು ಗಳಿಸುತ್ತಿದ್ದು, 2023 ರಲ್ಲಿ ಎಲೆಕ್ಟ್ರಿಕ್ ವಾಹನಗಳು ಶೇಕಡಾ 6 ಕ್ಕಿಂತ ಹೆಚ್ಚು ಮಾರಾಟದೊಂದಿಗೆ ಸಾಂಪ್ರದಾಯಿಕ ವಾಹನಗಳಿಗೆ ಪೈಪೋಟಿ ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮುಂಚೂಣಿಯಲ್ಲಿದ್ದು, ಇವಿ ವಾಹನಗಳ ಮಾರಾಟದ ಅರ್ಧದಷ್ಟು ಭಾಗವನ್ನು ಇವಿ ದ್ವಿಚಕ್ರ ವಾಹನಗಳು ಹೊಂದಿವೆ. ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸಾಂಪ್ರದಾಯಿಕ ವಾಹನಗಳಿಂತಲೂ ದುಬಾರಿಯಾಗಿರುವ ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆಯಲ್ಲಿ ಉತ್ತಮ ರಕ್ಷಣೆ ಒದಗಿಸುವ ಇನ್ಸುರೆನ್ಸ್ ಆಯ್ಕೆಗಳು ಪ್ರಮುಖ ಅಂಶವಾಗಿದೆ.

ಸಾಂಪ್ರದಾಯಿಕ ಇಂಧನ-ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ವಿಮೆ ವೆಚ್ಚವು ತುಸು ದುಬಾರಿಯಾಗಿರಲಿದ್ದು, ಇವಿ ವಾಹನಗಳ ವಿಮೆಯು ಸಾಮಾನ್ಯವಾಗಿ ಚಾರ್ಜಿಂಗ್ ಉಪಕರಣಗಳು, ಬ್ಯಾಟರಿ ವಾರಂಟಿಗಳು ಮತ್ತು ಪ್ರಾಕೃತಿಕ ವಿಕೋಪದಿಂದಾಗಿ ಹಾನಿಗಳಿಗೆ ಗರಿಷ್ಠ ರಕ್ಷಣೆ ಒಳಗೊಂಡಿರುತ್ತದೆ. ಜೊತೆಗೆ ಇತ್ತೀಚೆಗೆ ಬಿಡುಗಡೆ ಮಾಡಲಾದ ವಿವಿಧ ಇನ್ಸುರೆನ್ಸ್ ಪ್ಯಾಕೇಜ್ ಗಳಲ್ಲಿ ಇವಿ ವಾಹನ ಮಾಲೀಕರ ಬೇಡಿಕೆಗೆ ಅನುಗುಣವಾಗಿ ಆಡ್-ಆನ್‌ಗಳನ್ನು ಸೇರಿಸಲಾಗುತ್ತಿದ್ದು, ಇವೆಲ್ಲದರ ಪರಿಣಾಮ ಇವಿ ಕಾರುಗಳ ಇನ್ಸುರೆನ್ಸ್ ಸಾಕಷ್ಟು ದುಬಾರಿ ಎನ್ನಿಸುತ್ತದೆ.

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲಾ ಮಾದರಿಯ ವಾಹನಗಳ ಮಾಲೀಕರು ವಿಮೆಯನ್ನು ಮಾಡಿಸಲೇಬೇಕಿದ್ದು, ಇದು ಅಪಘಾತದಂತಹ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಮೂರನೇ ವ್ಯಕ್ತಿಗೆ ಪರಿಹಾರ ಒದಗಿಸಲು ಸಹಕಾರಿಯಾಗಿದೆ. ಜೊತೆಗೆ ವಾಹನ ವಿಮೆಯು ನಿಮ್ಮ ವಾಹನಕ್ಕೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಮತ್ತು ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸುತ್ತದೆ. ಹೀಗಾಗಿ ಸಾಂಪ್ರದಾಯಿಕ ವಾಹನಗಳಂತೆ ಇವಿ ವಾಹನಗಳಿಗೂ ಮೂರನೇ ವ್ಯಕ್ತಿ ವಿಮೆ ಮತ್ತು ಸಮಗ್ರ ವಿಮಾ ಪಾಲಿಸಿ ಪರಿಚಯಿಸಲಾಗಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..

ಪ್ರಾಥಮಿಕ ವಿಮಾ ಪಾಲಿಸಿಯಲ್ಲಿ ಅಪಘಾತದ ಸಂದರ್ಭದಲ್ಲಿ ಮೂರನೇ ವ್ಯಕ್ತಿಗೆ ಮಾತ್ರ ಪರಿಹಾರ ಒದಗಿಸಲಿದ್ದು, ಇದಲ್ಲಿ ಕಾರಿಗೆ ಆಗುವ ಹಾನಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಆದರೆ ಸಮಗ್ರ ವಾಹನ ವಿಮಾ ಆಯ್ಕೆಯಲ್ಲಿ ಮೂರನೇ ವ್ಯಕ್ತಿಗೆ ಪರಿಹಾರದ ಜೊತೆಗೆ ವಾಹನಕ್ಕಾಗುವ ಎಲ್ಲ ಮಾದರಿಯ ನಷ್ಟವನ್ನು ಭರಿಸುತ್ತದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನಗಳಿಗೆ ಸಮಗ್ರ ವಾಹನ ವಿಮೆ ಉತ್ತಮ ಆಯ್ಕೆಯಾಗಿದ್ದು, ಇದರಲ್ಲಿ ಬ್ಯಾಟರಿ ವಾರಂಟಿ, ಚಾರ್ಜಿಂಗ್ ಉಪಕರಣಗಳು, ಆಕ್ಸೆರಿಸ್, ಕಳ್ಳತನ, ಪ್ರಾಕೃತಿಕ ವಿಕೋಪದಿಂದಾಗುವ ಹಾನಿಗೆ ಪರಿಹಾರ ಸಿಗುತ್ತದೆ.

ಇನ್ನು ಎಲೆಕ್ಟ್ರಿಕ್ ವಾಹನಗಳಿಗೆ ಅವುಗಳಲ್ಲಿರುವ ಬ್ಯಾಟರಿ ಪ್ಯಾಕ್ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಮಾ ದರ ನಿರ್ಣಯವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ 30 KW ಬ್ಯಾಟರಿ ಪ್ಯಾಕ್ ಜೋಡಣೆ ಅನ್ನು ಮೀರದ ಎಲೆಕ್ಟ್ರಿಕ್ ಕಾರುಗಳಿಗೆ ರೂ. 1,780 ಆರಂಭಿಕ ಪ್ರೀಮಿಯಂ ದರ ನಿಗದಿಪಡಿಸಿದರೆ 30 KW ಯಿಂದ 65 KW ವ್ಯಾಪ್ತಿಯೊಳಗೆ ಎಲೆಕ್ಟ್ರಿಕ್ ಕಾರುಗಳಿಗೆ ರೂ 2,904 ಆರಂಭಿಕ ಪ್ರೀಮಿಯಂ ದರ ನಿಗದಿಪಡಿಸಲಾಗಿದೆ. ಹಾಗೆಯೇ 65 KW ಗಿಂತ ಹೆಚ್ಚಿನ ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಕಾರುಗಳಿಗೆ ರೂ. 6,712 ಆರಂಭಿಕ ಪ್ರೀಮಿಯಂ ದರ ನಿಗದಿಪಡಿಸಲಾಗಿದ್ದು, ಮಾಲೀಕರ ಆದ್ಯತೆಗೆ ಅನುಗುಣವಾಗಿ ಸೇರಿಸಲಾಗುವ ವಿವಿಧ ಆಡ್-ಆನ್ ಗಳಿಂದ ವಿಮಾ ಕಂತಿನ ದರವು ತುಸು ದುಬಾರಿಯಾಗಿರುತ್ತದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಹೊಸ ಎಡಿಎಎಸ್ ಫೀಚರ್ಸ್ ಕಾರುಗಳಿವು!

ಇದರೊಂದಿಗೆ ಎಲೆಕ್ಟ್ರಿಕ್ ವಾಹನ ಮಾಲೀಕರು ಸಾಮಾನ್ಯ ವಾಹನಗಳಿಗೆ ಅನ್ವಯಿಸುವಂತೆ ನೋ ಕ್ಲೈಂ ಬೋನಸ್(ಎನ್‌ಸಿಬಿ) ಲಭ್ಯವಿದ್ದು, ವಿಮಾ ಅವಧಿಯಲ್ಲಿ ಕ್ಲೈಮ್ ಮಾಡದಿದ್ದಲ್ಲಿ ಮುಂದಿನ ಪಾಲಿಸಿಯಲ್ಲಿ ಡಿಸ್ಕೌಂಟ್ ದೊರೆಯುತ್ತದೆ. ಹಾಗೆಯೇ ಒಂದು ವಿಮಾ ಕಂಪನಿಯಿಂದ ಇನ್ನೊಂದು ವಿಮಾ ಕಂಪನಿಗೆ ಬದಲಾದಲೂ ಕೂಡಾ ಎನ್‌ಸಿಬಿ ಸೌಲಭ್ಯ ಮುಂದುವರೆಯಲಿದ್ದು, ಐದು ವರ್ಷದ ವರೆಗೂ ಯಾವುದೇ ಕ್ಲೈಮ್ ಮಾಡದಿದ್ದಲ್ಲಿ ಪ್ರೀಮಿಯಂ ಮೊತ್ತದಲ್ಲಿ ಶೇ. 50ರ ತನಕ ಡಿಸ್ಕೌಂಟ್ ಪಡೆಯಬಹುದಾಗಿದೆ.