ಗೃಹ ಸಚಿವರ ಭೇಟಿ ವೇಳೆ ಮಾತ್ರ ಚೆಕ್​ಪೋಸ್ಟ್ ಸಿಬ್ಬಂದಿಗೆ ಪಿಪಿಇ ಕಿಟ್ ಕೊಟ್ರು

ಬೆಳಗಾವಿ: ಕೊರೊನಾದಿಂದ ಇಡೀ ದೇಶವೇ ಲಾಕ್​ಡೌನ್ ಆಗಿತ್ತು. ಇದೀಗ ಲಾಕ್​ಡೌನ್ ಸಡಿಲಿಕೆ ಆಗಿದ್ದು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡಬಹುದಾಗಿದೆ. ಆದ್ರೆ ಹೊರ ರಾಜ್ಯದಿಂದ ಬರುವವರಿಗೆ ಜೂನ್ 15ರವರೆಗೂ ರಾಜ್ಯಕ್ಕೆ ಬರಲು ಅವಕಾಶ ಇಲ್ಲ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಯ ರಾಷ್ಟ್ರೀಯ ಹೆದ್ದಾರಿ4 ರಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. 250ಕ್ಕೂ ಹೆಚ್ಚು ಪೊಲೀಸರು ಮತ್ತು ನೂರಕ್ಕೂ ಅಧಿಕ ಆರೋಗ್ಯ ಇಲಾಖೆ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಇದೇ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಕೆಲಸ ಮಾಡಿದ್ರೂ ಬರೀ ಮಾಸ್ಕ್ ಮಾತ್ರ ಕೊಟ್ಟಿತ್ತು. ಇಂದು ದಿಢೀರನೆ ಪಿಪಿಇ ಕಿಟ್ ಕೊಟ್ಟು ಜಿಲ್ಲಾಡಳಿತ ಅಚ್ಚರಿ ಮೂಡಿಸಿದೆ.

ಚೆಕ್ ಪೋಸ್ಟ್​ನಲ್ಲಿದ್ದ ಸಿಬ್ಬಂದಿಗೆ ಪಿಪಿಇ ಕಿಟ್:
ಅಷ್ಟಕ್ಕೂ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಗಡಿ ದಾಟಿ ಈಗ ಬರುತ್ತಿಲ್ಲ. ಯಾಕಂದ್ರೆ ಪಾಸ್ ನೀಡದ ಹಿನ್ನೆಲೆಯಲ್ಲಿ ಬರೀ ಗೂಡ್ಸ್ ವಾಹನಗಳು ಹಾಗೂ ಎಮರ್ಜನ್ಸಿ ವಾಹನಗಳಷ್ಟೇ ಓಡಾಡುತ್ತವೆ. ಆದ್ರೆ ಇಂದು ಒಂದು ದಿನ ಮಾತ್ರ ಜಿಲ್ಲಾಡಳಿತ ಚೆಕ್ ಪೋಸ್ಟ್​ನಲ್ಲಿದ್ದ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಿದೆ. ಹೌದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚೆಕ್ ಪೋಸ್ಟ್​ಗೆ ಭೇಟಿ ನೀಡಿದ್ದ ಕಾರಣ ಎಲ್ಲವೂ ಸರಿಯಾಗಿದೆ. ಮತ್ತು ಸಿಬ್ಬಂದಿ ಮುಂಜಾಗ್ರತೆಗಾಗಿ ಪಿಪಿಇ ಕಿಟ್ ಕೊಟ್ಟಿದ್ದೇವೆ ಎಂದು ತೋರಿಸಿಕೊಳ್ಳಲು ಒಂದು ದಿನದ ಗಿಮಿಕ್ ಬೆಳಗಾವಿ ಜಿಲ್ಲಾಡಳಿತ ಮಾಡಿದೆ.

ಒಂದು ದಿನಕ್ಕೆ ಮಾತ್ರ ಪಿಪಿಇ ಕಿಟ್:
ಈ ಹಿಂದೆ ಯಾವತ್ತೂ ನೀಡದ ಪಿಪಿಇ ಕಿಟ್​ಗಳನ್ನ ಸಚಿವರು ಬರ್ತಾರೆ ಎಂಬ ಕಾರಣಕ್ಕೆ ನೀಡಿದ್ದು ಸಿಬ್ಬಂದಿಯಲ್ಲೂ ಅಚ್ಚರಿಯನ್ನುಂಟು ಮಾಡಿದ್ರೇ ಅಧಿಕಾರಿಗಳ ಗಿಮಿಕ್ ಹೇಗಿರುತ್ತೆ ಎಂಬುದನ್ನ ಕೂಡ ತೋರಿಸಿಕೊಟ್ಟಿದೆ. ಇತ್ತ ಬೆಳಗ್ಗೆಯಿಂದಲೇ ಎಲ್ಲ ಸಿಬ್ಬಂದಿ ಪಿಪಿಇ ಕಿಟ್​ ಧರಿಸಿದ್ದು ಗೃಹ ಸಚಿವರು ಬಂದು ಹೋದ ಬಳಿಕ ಎಲ್ಲವನ್ನೂ ತೆಗೆದು ಮತ್ತೆ ಎಂದಿನಂತೆ ಕೆಲಸ ನಿರ್ವಹಿಸಿದ್ದಾರೆ.

ಬೆಳಗಾವಿ ಜಿಲ್ಲಾಡಳಿತದ ನಡೆ ಸದ್ಯ ಅನುಮಾನ ಹುಟ್ಟಿಸುವಂತೆ ಮಾಡಿದೆ. ಅದೇನೆ ಇರಲಿ ಸಿಬ್ಬಂದಿಗೆ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸಿದ್ದು ಒಳ್ಳೆಯದ್ದೇ. ಇದೇ ರೀತಿ ಮುಂದಿನ ದಿನಗಳಲ್ಲೂ ನಿತ್ಯವೂ ಪಿಪಿಇ ಕಿಟ್ ಹಾಗೂ ಮಾಸ್ಕ್​ಗಳನ್ನ ಸಿಬ್ಬಂದಿಗೆ ನೀಡಿ ಕೆಲಸ ಮಾಡಿಸುವ ಕೆಲಸ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮಾಡಲಿ. ಇಲ್ಲವಾದ್ರೆ ಬೆಳಗಾವಿ ಜಿಲ್ಲಾಡಳಿತದ ನಡೆಯ ಮೇಲೆ ಸಂಶಯ ಹುಟ್ಟುವಂತಾಗುತ್ತೆ.

Related Posts :

Category:

error: Content is protected !!

This website uses cookies to ensure you get the best experience on our website. Learn more