ಬರ ಮುಕ್ತ ಜಿಲ್ಲೆಗೆ ಸಂಕಲ್ಪ, ನಡೆದಿದೆ ಜಲಮೂಲಗಳ ಪುನ:ಶ್ಚೇತನ!

ಬಳ್ಳಾರಿ: ದಿನೇ ದಿನೇ ಅಂತರ್ಜಲ ಕುಸಿಯುತ್ತಿದೆ, ಸಾವಿರಾರು ಅಡಿ ಬೋರ್ ವೆಲ್ ಕೊರೆಸಿದರೂ ನೀರು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅಂತರ್ಜಲ ಹೆಚ್ಚಳಕ್ಕೆ ‘ಇಂಜೆಕ್ಷನ್ ವೆಲ್’ ಕಾಮಗಾರಿ ಕೈಗೊಂಡು ಯಶಸ್ಸು ಕಂಡಿರುವ ಬಳ್ಳಾರಿ ಜಿಲ್ಲಾ ಪಂಚಾಯತ್ ಇದೀಗ ಬರ ನಿರ್ಮೂಲನೆಗೆ ಜಲಮೂಲಗಳ ಪುನಶ್ಚೇತನಕ್ಕೆ ಮುಂದಾಗಿದೆ. ಕಳೆದ ವಾರದಿಂದ ನಾಲಾ ಪ್ರದೇಶದಲ್ಲಿ ಪುನಶ್ಚೇತನ ಕಾಮಗಾರಿಗಳು ಬರದಿಂದ ಸಾಗಿವೆ.

ಪ್ರಾರಂಭಿಕವಾಗಿ ವೇದಾವತಿ(ಹಗರಿ)ನದಿಯ ಜಲಮೂಲಗಳ ಪುನಶ್ಚೇತನ ಪ್ರಾರಂಭಿಸಿದ್ದು, ಬಳ್ಳಾರಿ ತಾಲೂಕಿನ ಸಂಜೀವನರಾಯ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಂಚೇರಿ ಗ್ರಾಮದ ರಾಮನಕೊಳ್ಳದ ಹಳ್ಳದಿಂದ ಹಗರಿ ಹತ್ತಿರದ ಅಸುಂಡಿಯವರೆಗೆ 24ಕಿ.ಮೀವರೆಗಿನ ಪುನಶ್ಚೇತನ ಕಾಮಗಾರಿ ಪ್ರಾರಂಭವಾಗಿದೆ. ರಾಮನಹಳ್ಳ ಕೊಳ್ಳದ ಸುತ್ತಲು ಗುಡ್ಡಗಳಿರುವುದರಿಂದ ಮೇಲಿಂದ ನೀರು ನೇರವಾಗಿ ನದಿಗೆ ಹರಿದು ಹೋಗದೇ ನಿಧಾನವಾಗಿ ನಿಂತು, ಭೂಮಿಯಲ್ಲಿ ಹಿಂಗಿ ಹೋಗುವಂತೆ ಮಾಡಲಾಗುತ್ತಿದೆ.

ಕಾಮಗಾರಿಯಿಂದಾಗಿ ಸಾವಿರಾರು ಕಾರ್ಮಿಕರಿಗೆ ಕೆಲ್ಸ:
ನದಿಮೂಲಗಳು ಬತ್ತಿ ಹೋಗಿರುವುದಲ್ಲದೇ ಒತ್ತುವರಿಯಾಗಿರುವುದರಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಜೊತೆಗೆ ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಸಂಕಷ್ಟ ಪರಿಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಬಳ್ಳಾರಿ ಜಿ.ಪಂ ನದಿಗಳ ಪುನಶ್ಚೇತನ ಕಾರ್ಯಕ್ಕೆ ಮುಂದಾಗಿದೆ. ಒಟ್ಟು 19.62 ಕೋಟಿ ರೂ.ಮೊತ್ತದ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕೈಗೊಳ್ಳುತ್ತಿರುವ ವಿನೂತನ ಕಾರ್ಯಕ್ರಮವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಜನಜೀವನ ಬಹಳ ಸಂಕಷ್ಟದಲ್ಲಿದೆ. ದೂರದ ಊರುಗಳಿಗೆ ದುಡಿಯಲು ಹೋಗಿದ್ದ ಜನರು ವಾಪಾಸ್ ಗ್ರಾಮ ಸೇರಿದ್ದಾರೆ. ಇವರಿಗೆ ದುಡಿಯಲು ಕೆಲ್ಸ ಇಲ್ಲ, ಪ್ರಸ್ತುತ ಜಿ.ಪಂ ಆರಂಭಿಸಿರುವ ಕಾಮಗಾರಿಯಿಂದಾಗಿ 9 ಗ್ರಾಮಗಳ ಸಾವಿರಾರು ಕಾರ್ಮಿಕರಿಗೆ ಕೆಲ್ಸ ಸಿಕ್ಕಿದೆ.

ಪ್ರತಿ ವರ್ಷ ತೀವ್ರ ಬರಗಾಲ ಎದುರಿಸುತ್ತಿದ್ದ ಬಳ್ಳಾರಿ ತಾಲೂಕಿನ ಶಂಕರಬಂಡೆ, ಅಮರಾಪೂರ, ಸಂಜೀರಾಯನ ಕೋಟೆ ಸೇರಿದಂತೆ 9 ಗ್ರಾಮಗಳು ಬರದಿಂದ ಮುಕ್ತಿ ಪಡೆಯಲಿವೆ. ಪುನಶ್ಚೇತನ ಕಾಮಗಾರಿಯಲ್ಲಿ 20ಮಲ್ಟಿ ಆರ್ಚ್ ಚೆಕ್ ಡ್ಯಾಂ, 50ರಿಚಾರ್ಜ್‌ವೆಲ್, 24 ಕಿ.ಮೀ ವಿಸ್ತಿರ್ಣದಲ್ಲಿ ಹೂಳೆತ್ತುವುದು ಮತ್ತು ಹಳ್ಳದ ಎರಡು ಕಡೆ ಒಡ್ಡು ಬಲಪಡಿಸಲಾಗುತ್ತಿದೆ. ಅಲ್ಲದೆ 25ಬೋಲ್ಡರ್ ಚೆಕ್, 25ಗ್ಯಾಬಿಯನ್ ಚೆಕ್ ಡ್ಯಾಮ್, 3 ಸಣ್ಣ ಕೆರೆ, ಗೋ ಕಟ್ಟೆ ನಿರ್ಮಾಣ, 50ಹೆಕ್ಟೇರ್ ಮಿಂಚೆರಿ ಗುಡ್ಡದಲ್ಲಿ ಕಂಟುರ್ ಟ್ರೆಂಚ್ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಮುಗಿದ ನಂತರ ಉಳಿದ ನದಿಮೂಲಗಳ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾಗಲು ಜಿ.ಪಂ ಚಿಂತಿಸಿದೆ.

ಬರ ಮುಕ್ತ ಜಿಲ್ಲೆಯ ಸಂಕಲ್ಪವನ್ನಿಟ್ಟುಕೊಂಟು ಅಂತರ್ಜಲ ಹೆಚ್ಚಳಕ್ಕೆ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದರಲ್ಲಿ ಮೊದಲನೆಯದಾಗಿ ನದಿಮೂಲಗಳ ಪುನಶ್ಚೇತನ ಕಾರ್ಯಕ್ರಮ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಬಳ್ಳಾರಿ ಜಿ.ಪಂ ಸಿಇಒ ಕೆ ನಿತೀಶ್ ಹೇಳಿದ್ದಾರೆ.

Related Tags:

Related Posts :

Category:

error: Content is protected !!