ಬಿಸಿಯೂಟ (ರಗಳೆ) ಇದ್ದಿದ್ದೇ.. ಇವತ್ತು ಸಹಭೋಜನ ಮಾಡೋಣಾ ಬನ್ನಿ: ಇದು ಬಾಗಲಗುಂಟೆ ಪೊಲೀಸರ ವಿಶೇಷ ಆತಿಥ್ಯ!

ಬೆಂಗಳೂರು: ಬಿಸಿಯೂಟ (ರಗಳೆ) ದಿನಾ ಇದ್ದಿದ್ದೇ.. ಇವತ್ತು ಒಂದು ದಿನ ಸಹಭೋಜನ ಮಾಡೋಣಾ ಬನ್ನಿ ಎಂದು ರಾಜಧಾನಿಯ ಉತ್ತರ ವಿಭಾಗದಲ್ಲಿ ಬಾಗಲಗುಂಟೆ ಪೊಲೀಸ್​ ಠಾಣೆಯ ಆರಕ್ಷಕರು ಆ ಮಹಿಳೆಯರಿಗೆ ಆತ್ಮೀಯ ಆಹ್ವಾನ ನೀಡಿ, ಸಂತೈಸಿದ್ದಾರೆ. ಹಾಗಂತ ಅವರೇನೂ ಅತಿಥಿಗಳು ಅಂತೇನೂ ಅಲ್ಲ. ಪೊಲೀಸರು ಬಯಸದೇ ಬಂದ ಅತಿಥಿಗಳು. ಆದರೂ ಅವರಿಗೆ ಆತಿಥ್ಯ ನೀಡಿ, ಕಳುಹಿಸಿದ್ದಾರೆ.

ಬಿಸಿಯೂಟ ಕಾರ್ಯಕರ್ತೆಯರು ಕನಿಷ್ಠ ಕೂಲಿ ನೀಡುವುದು, ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ನಗರದಲ್ಲಿ ಪ್ರತಿಭಟನೆ ಮಾಡಲು ಬಂದಿದ್ದರು. ಧರಣಿಗೆ ಆಗಮಿಸಿದ್ದ ಕಾರ್ಯಕರ್ತೆಯರನ್ನ ನಿಯಂತ್ರಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕಾರ್ಯಕರ್ತೆಯರ ಜೊತೆ ಪೊಲೀಸ್ ಸಿಬ್ಬಂದಿ ಕೂತು ಊಟ ಸವಿದಿದ್ದಾರೆ.

ಏನಾಯಿತು ಅಂದ್ರೆ.. ಪ್ರತಿಭಟನೆಯಲ್ಲಿ ತೊಡಗಿದ್ದ ಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರಗಿ, ಬಾಗಲಕೋಟೆ ಕಡೆಯ ಬಿಸಿಯೂಟ ಕಾರ್ಯಕರ್ತೆಯರನ್ನು ಬಾಗಲಗುಂಟೆ ಮಹಿಳಾ ಪೊಲೀಸರು ವಶಕ್ಕೆ ಪಡೆದರು. ಕರ್ತವ್ಯಕ್ಕೆ ಅನುಗುಣವಾಗಿ ಬಾಗಲಗುಂಟೆ ಮಹಿಳಾ ಪೊಲೀಸ್ ಸಿಬ್ಬಂದಿ ಒಂದಷ್ಟು ಪೊಲೀಸ್​ ಉಪಚಾರದ ನಂತರ ಬಿಸಿಯೂಟ ಕಾರ್ಯಕರ್ತೆಯರ ಜೊತೆ ಉಭಯ ಕುಶಲೋಪರಿಯಲ್ಲಿ ತೊಡಗಿದರು.

ಅವರೊಟ್ಟಿಗೆ ಕೂತು ರೊಟ್ಟಿ ಊಟ ಮಾಡಿದರು. ತಮಾಷೆ ಮಾಡುತ್ತಾ ರೊಟ್ಟಿ, ಚಟ್ನಿ ಪುಡಿ, ಹೋಳಿಗೆ ಊಟವನ್ನು ಹಂಚಿ ತಿನ್ನುತ್ತಾ ಮನಸಾರೆ ಹಗುರವಾದರು. ಅಲ್ಲಾ ಸರ್ಕಾರವಂತೂ ನಮ್ಮ ಮಾತು ಕೇಳೋಮಾತೇ ಇಲ್ಲ. ಆದ್ರೆ ಬೆಂಗಳೂರಿನಲ್ಲಿ ನಮಗೇ ಊಟೋಪಚಾರ ಮಾಡುತ್ತಿದ್ದಾರಲ್ಲಾ, ಅದೂ ಪೊಲೀಸರು! ಎಂದು ಬಿಸಿಯೂಟ ಕಾರ್ಯಕರ್ತೆಯರು ಆಶ್ಚರ್ಯ ಪಡುತ್ತಿರುವಾಗಲೇ ತಿಳಿದುಬಂದ ವಿಷಯ ಅಂದ್ರೆ ಈ ಬಾಗಲಗುಂಟೆ ಮಹಿಳಾ ಪೊಲೀಸರು ಬೇರೆ ಯಾರೋ ಅಲ್ಲ. ಅಲ್ಲಿಂದಲೇ.. ಅಂದ್ರೆ ಅದೇ ಉತ್ತರ ಕರ್ನಾಟಕ ಭಾಗದವರು. ಹಾಗಾಗಿ ಸ್ವಂತ ಊರಿನವರಿಗೆ ಸಹಭೋಜನದ ಸವಿತುತ್ತು ತಿನ್ನಿಸಿ, ಕಳುಹಿಸಿದ್ದಾರೆ.

ಇಷ್ಟಕ್ಕೂ ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳು ಏನೇನು ಅಂದ್ರೆ..
-ಬಿಸಿಯೂಟ ಯೋಜನೆ ಖಾಸಗೀಕರಣ ಬೇಡ
-ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡುವ ಆದೇಶವನ್ನ ಸರ್ಕಾರ ಮಾಡಬೇಕು
-ನಿವೃತ್ತಿ ವೇತನ ನೀಡಬೇಕು
-ಬಿಸಿಯೂಟ ನೌಕರರನ್ನ ಶಿಕ್ಷಣ ಇಲಾಖೆಯ ಅಡಿಯಲ್ಲಿ ಖಾಯಂ ಮಾಡಬೇಕು
-ಮಕ್ಕಳ ಹಾಜರಾತಿ ಆಧಾರದ ಮೇಲೆ ಅಡುಗೆ ಕೆಲಸದವರನ್ನ ಕೆಲಸದಿಂದ ಕೈ ಬೀಡಬಾರದು
-ಬಿಸಿಯೂಟ ನೌಕರರನ್ನ ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು
-ಬಿಸಿಯೂಟ ಯೋಜನೆಯನ್ನ 12ನೇ ತರಗತಿವರೆಗೆ ವಿಸ್ತರಣೆ ಮಾಡಬೇಕು
-ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಲೇಬೇಕು
-ವಿಶೇಷ ಸಂಧರ್ಭದಲ್ಲಿನ‌ ಕೆಲಸಕ್ಕೆ ವಿಶೇಷ ಭತ್ಯ ನೀಡಬೇಕು
-ಸುರಕ್ಷಾ ಭತ್ಯ ಹಾಗೂ ಸ್ವಚ್ಛತಾ ಭತ್ಯ ಒದಗಿಸಬೇಕು
-ಅಡುಗೆಯ ಸಂಪೂರ್ಣ ಜವಾಬ್ದಾರಿಯನ್ನ ಶಿಕ್ಷಕರಿಗೆ ಬಿಡಿಸಿ ಕಾರ್ಯಕರ್ತೆಯರಿಗೆ ನೀಡಬೇಕು
-ಹೆರಿಗೆ ರಜಾ ಹೆರಿಗೆ ಭತ್ಯೆ ನೀಡಬೇಕು
-ಸಾಮಾಜಿಕ ಭದ್ರತೆಗಾಗಿ ರಾಷ್ಟ್ರೀಯ ಭೀಮಾ ಯೋಜನೆ ಜಾರಿ ಮಾಡಬೇಕು
-ಎಲ್ಲ ಬಿಸಿಯೂಟ ಕಾರ್ಯಕರ್ತೆಯರಿಗೆ ಬಿ.ಪಿ.ಎಲ್ ಕಾರ್ಡ್ ನೀಡಬೇಕು.

Related Posts :

Category:

error: Content is protected !!

This website uses cookies to ensure you get the best experience on our website. Learn more