ನಿಮ್ಮ ಪತ್ನಿಯನ್ನು ಕೆಲವೇ ಪದಗಳಲ್ಲಿ ಬಣ್ಣಿಸಿ ಎಂದ Fanಗೆ ಭುವನೇಶ್ವರ್​ ಹೇಳಿದ್ದೇನು ಗೊತ್ತಾ?

ಟೀಮ್​ ಇಂಡಿಯಾದ ನುರಿತ ಬೌಲರ್​ಗಳಲ್ಲಿ ಭುವನೇಶ್ವರ್​ ಕುಮಾರ್ ಸಹ ಒಬ್ಬರು. ತಮ್ಮ ವೇಗದ ಬೌಲಿಂಗ್​ನಿಂದಲೇ ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳಿಗೆ ನಡುಕ ಉಂಟುಮಾಡುವ ಭುವನೇಶ್ವರ್ ಇದೀಗ ತಮ್ಮ ಹಾಸ್ಯ ಸ್ವಭಾವವನ್ನು ಸಹ ತೋರಿಸಿದ್ದಾರೆ.

ಭುವನೇಶ್ವರ್ ಇಂದು ಟ್ವಿಟರ್​ನಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಆನ್​ಲೈನ್​ ಪ್ರಶ್ನೋತ್ತರ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಈ ವೇಳೆ ಫ್ಯಾನ್ಸ್​ನಿಂದ ಬಂದ ಗೂಗ್ಲಿ ಪ್ರಶ್ನೆಗಳ ಸುರಿಮಳೆಗೆ ಪ್ರತಿಕ್ರಿಯಿಸುವ ವೇಳೆ ಸ್ವಲ್ಪ ತಮಾಷೆಯಾಗಿಯೇ ಉತ್ತರ ನೀಡಿದ್ದಾರೆ.

ಪ್ರಶ್ನೋತ್ತರದ ವೇಳೆ ಅಭಿಮಾನಿಯೊಬ್ಬ ನಿಮ್ಮ ಪತ್ನಿ ನೂಪುರ್​ರನ್ನು ಕೆಲವೇ ಕೆಲವು ಪದಗಳಲ್ಲಿ ಬಣ್ಣಿಸಿ ಎಂದು ಕೇಳಿದ್ದಾನೆ. ಅಭಿಮಾನಿಯ ಪ್ರಶ್ನೆಗೆ ಭುವನೇಶ್ವರ್ ನನ್ನ ಪತ್ನಿ ಅತ್ಯಂತ ಬುದ್ಧಿವಂತೆ, ಬಹುಕಾರ್ಯ ಚತುರೆ ಹಾಗೂ ಆಕೆಗೆ ಶ್ವಾನಗಳೆಂದರೆ ಹುಚ್ಚು ಪ್ರೀತಿ ಎಂದು ತಮ್ಮ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ, ಕೆಲವು ಬಾರಿ ನನ್ನ ಪತ್ನಿ ತನ್ನ ಮುದ್ದಿನ ಶ್ವಾನಗಳಿಗೆ ನನಗಿಂತ ಹೆಚ್ಚು ಆದ್ಯತೆ ನೀಡುತ್ತಾಳೆ ಎಂದು ತಮ್ಮ ಹುಸಿಮುನಿಸನ್ನು ತೋಡಿಕೊಂಡಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಭುವನೇಶ್ವರ್​ ಈ ರೀತಿಯಾಗಿ ಪ್ರತಿಕ್ರಿಯೆ ನೀಡುವ ಮೂಲಕ ನಾನೇನು ಮಾಡ್ಲಿ ಸ್ವಾಮಿ ನನ್ನ ಹೆಂಡ್ತಿ ನಾಯಿಪ್ರೇಮಿ ಅಂತಾ ಕೊಂಚ ತಮಾಷೆಯಾಗಿ ಉತ್ತರಿಸಿದ್ದಾರೆ.

ಇದಲ್ಲದೆ, ನಿಮಗೆ ಅಲ್ಲಾದ್ದೀನ್​ ಬಳಿಯಿರುವ ಮ್ಯಾಜಿಕ್​ ದೀಪ ಸಿಕ್ಕರೆ ಅದರ ಜೀನಿ ಹತ್ತಿರ ಯಾವ ಮೂರು ವರಗಳನ್ನ ಕೇಳುವಿರಿ ಅಂತಾ ಮತ್ತೊಬ್ಬ ಫ್ಯಾನ್​ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಭುವನೇಶ್ವರ್​ ನನ್ನ ಮೊದಲ ವರ ಈ ಜಗತ್ತನ್ನು ಕೊರೊನಾ ಪಿಡುಗಿನಿಂದ ಮುಕ್ತಿಗೊಳಿಸೋದು. ಎರಡನೇ ವರವನ್ನ ಕಷ್ಟಕಾಲದಲ್ಲಿ ಬಳಸಿಕೊಳ್ಳಲು ಇಟ್ಟುಕೊಳ್ಳುತ್ತೇನೆ ಹಾಗೂ ಮೂರನೆಯದನ್ನ ಜೀನಿಯನ್ನ ಬಂಧನದಿಂದ ಮುಕ್ತಗೊಳಿಸಲು ಬಳಸಿಕೊಳ್ತೀನಿ ಅಂತಾ ಹೇಳಿಕೊಂಡಿದ್ದಾರೆ. ಒಟ್ನಲ್ಲಿ ಇಂಥದ್ದೇ ತರಲೆ ಪ್ರಶ್ನೆಗಳಿಗೆ ತಮ್ಮ ಹಾಸ್ಯ ಸ್ವಭಾವವನ್ನ ಬಳಸಿಕೊಂಡು ತಮಾಷೆಯಾಗಿ ಉತ್ತರ ನೀಡಿದ್ದಾರೆ.

Related Tags:

Related Posts :

Category:

error: Content is protected !!