ಅಧಿಕಾರಿಗಳು ಮನಸು ಮಾಡಿದ್ರೆ ಏನೇನು ಸಾಧನೆ ಮಾಡಬಹುದು ಅನ್ನೋದಕ್ಕೇ ಇಲ್ಲಿದೆ ಉದಾಹರಣೆ!

ಬೀದರ್ ಅರಣ್ಯ ಇಲಾಖೆಯ ಶ್ರಮದಿಂದ ಅತ್ಯದ್ಭುತ ಟ್ರೀ ಪಾರ್ಕ್ ನಿರ್ಮಾಣವಾಗಿದೆ. 20 ಎಕರೆಯ ವಿಶಾಲವಾದ ಟ್ರೀ ಪಾರ್ಕ್ ನಲ್ಲಿ ಅಶ್ವಗಂಧ, ಅಮೃತ ಬಳ್ಳಿ, ಗರುಡ ಪಾತಾಳ, ನೆಲ ಸಂಪಿಗೆ, ಬಿಳಿ ಚಿತ್ರಮೂಲ ಸೇರಿದಂತೆ 300 ಬಗೆಯ ವಿವಿಧ ಜಾತಿಯ ಔಷಧಿ ಸಸ್ಯಗಳು, ದೇಶದ ವಿವಿಧ ಭಾಗದಲ್ಲಿ ಬೆಳೆಯುವ ರುದ್ರಾಕ್ಷೀ ಗಿಡ ಸೇರಿದಂತೆ 3 ನೂರು ಬಗೆಯ ಗಿಡಗಳನ್ನ ಬೆಳೆಸಲಾಗಿದೆ.

ನಾನಾ ಬಗೆಯ ಔಷಧಿ ಸಸ್ಯಗಳನ್ನ ಒಂದೇ ಪ್ರದೇಶದಲ್ಲಿ ಬೆಳೆಸಿ ಹೈದರಾಬಾದ್ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಔಷಧಿ ಸಸ್ಯಗಳನ್ನ ಬೆಳೆಸಿದ ಕಿರ್ತಿಗೆ ಬೀದರ್ ನ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಜನರಾಗಿದ್ದಾರೆ. ಗಟ್ಟಿ ಕಲ್ಲುಗಳಿಂದ ಕೂಡಿದ ಈ ಪ್ರದೇಶದಲ್ಲಿ ಹುಲ್ಲು ಕೂಡಾ ಹುಟ್ಟುವುದಿಲ್ಲ. ಇಂತಹ ಪ್ರದೇಶದಲ್ಲಿ ಬೇರೆಡೆಯಿಂದ ಮಣ್ಣು ತಂದು ಹಾಕಿ ಇಲ್ಲಿ ನೂರಾರು ವಿವಿಧ ಜಾತಿಗೆ ಸೇರಿದ ಮರದ ಸಸಿಗಳನ್ನ ತಂದು ನೆಡಲಾಗಿದೆ.

ಹಾವು, ಚೇಳು ಕಚ್ಚಿದಾಗ ಹಚ್ಚುವ ನೆಲಬೇವು, ಮಲಬದ್ಧತೆ, ಪಿತ್ತದ ಗಂದೆ, ಕೆಮ್ಮಿಗೆ ಔಷಧಿಯಾಗಿ ಬಳಸುವ ಜೀವಂಶಿ, ಉಷ್ಣಕ್ಕೆ ಬಳಸುವ ಸೊಗಡೆ ಬೇರು, ರಕ್ತದೊತ್ತಡ, ಸರ್ಪಸುತ್ತು ಕಾಯಿಲೆಗೆ ಉಪಯೋಗಿಸುವ ಗರುಡ ಪಾತಾಳ ಹೀಗೆ ವಿವಿಧ ಕಾಯಿಲೆಗಳಿಗೆ ಪರಿಣಾಮಕಾರಿ ಉಪಚಾರ ನೀಡುವ ಔಷಧಿಯ ಬೇರು, ಸಸ್ಯಗಳ ಭಂಡಾರವೇ ಇಲ್ಲಿದೆ. ರುದ್ರಾಕ್ಷಿ ಮರ, ಕದಂಬ, ಕೂಡು ಮದ್ದಿನ ಹಾಗೂ ಹೆಬ್ಬೇವಿನ ಮರ ಹೀಗೆ ಅಪರೂಪದ ಮರಗಳೂ ಇಲ್ಲಿವೆ.

ಕರ್ನಾಟಕದ ಮೂಲೇ ಮೂಲೆಗೆ ತೆರಳಿ ಯಾವ ಪ್ರದೇಶದಲ್ಲಿ ಯಾವು ಔಷಧಿಯ ಸಸ್ಯಗಳು ಸಿಗುತ್ತವೇ ಅಂತಹ ಪ್ರದೇಶಕ್ಕೆ ಹೋಗಿ ಅಲ್ಲಿಂದ ಸಸಿಗಳನ್ನ ತಂದು ಬೆಳೆಸಲಾಗಿದೆ. ಹನಿ ನೀರಾವರಿ ಪದ್ದತಿಯ ಮೂಲಕ ನೀರುಣಿಸಲಾಗುತ್ತಿದೆ. ಪ್ರತಿದಿನ ಸಸಿಗಳಿಗೆ ಬೇಕಾದ ನೈಸರ್ಗಿಕ ಗೊಬ್ಬರ ಹಾಕಿ ಪ್ರಾಣಿಗಳು ಒಳಪ್ರವೇಶ ಮಾಡದಂತೆ ಸುತ್ತಲು ಗೋಡೆ ನಿರ್ಮಾಣ ಮಾಡಲಾಗಿದೆ.

ಕಡಿಮೆ ಖರ್ಚಿನಲ್ಲಿ ಬರಡು ಭೂಮಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಛಲದಿಂದ ಸಸಿಗಳನ್ನ ಬೆಳೆಸುತ್ತಿರುವುದರಿಂದ ಎಲ್ಲಾ ಔಷಧಿ ಸಸ್ಯಗಳು ಸಮೃದ್ಧವಾಗಿ ಬೆಳೆದಿವೆ. ಮುಂಬರುವ ದಿನಗಳಲ್ಲಿ ಇಲ್ಲಿ ಬೆಳೆಸಲಾದ ಔಷಧಿ ಸಮಸ್ಯಗಳನ್ನ ಆರ್ಯುವೇದ ವೈದ್ಯ ಕಾಲೇಜು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹಾಗೂ ನಾಟಿ ವೈದ್ಯರಿಗೂ ಕೂಡಾ ಈ ಔಷಧಿ ಉದ್ಯಾನ ಅನುಕೂಲವಾಗಲಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿದರೆ ಎಂತಹ ಪ್ರದೇಶದಲ್ಲಿಯೂ ಗಿಡಗಳನ್ನ ನೆಟ್ಟು ಸಮೃದ್ಧವಾಗಿ ಬೆಳೆಸಬಹುದೆಂದು ಬೀದರ್ ಅರಣ್ಯ ಇಲಾಖೆಯ ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ. ಹುಲ್ಲು ಕೂಡಾ ಬೆಳೆಯದೇ ಜೀವ ಸತ್ವವೇ ಇಲ್ಲದ ಜಮೀನಿನಲ್ಲಿ ನೂರಾರು ಬಗೆಯ ಔಷಧಿ ಸಸ್ಯಗಳನ್ನ ಬೆಳೆಸಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿ ಜಿಲ್ಲೆಯ ಅಧಿಕಾರಿಗಳು ಮೂಗಿನ ಬೆಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಅಧಿಕಾರಿಗಳು ಮನಸ್ಸು ಮಾಡಿದರೆ ಏನೇನು ಸಾಧನೆ ಮಾಡಬಹುದು ಅನ್ನೋದಕ್ಕೇ ಇದು ಉತ್ತಮ ಉದಾಹರಣೆ.
-ಸುರೇಶ್ ನಾಯಕ್

Related Posts :

Category:

error: Content is protected !!

This website uses cookies to ensure you get the best experience on our website. Learn more