ಬಿಹಾರದಲ್ಲಿಂದು ಮೊದಲ ಹಂತದ ಮತದಾನ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವೋಟಿಂಗ್

  • Ayesha Banu
  • Published On - 6:35 AM, 28 Oct 2020

ದೆಹಲಿ: ಕೊರೊನಾ.. ಕೊರೊನಾ.. ಕೊರೊನಾ.. ಹೀಗೆ ಕೊರೊನಾ ನಡುಕ ಹುಟ್ಟಿಸಿರುವ ಸಂದರ್ಭದಲ್ಲೇ ಪ್ರಜಾಪ್ರಭುತ್ವದ‌ ತೇರನ್ನೂ ಎಳೆಯಬೇಕಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, 1066 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 2 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.

ಕೊರೊನಾ ದೇಶಕ್ಕೆ ಮತ್ತು ದೇಶದ ನಿವಾಸಿಗಳಿಗೆ ದೊಡ್ಡ ಆಘಾತ ಕೊಟ್ಟಿದೆ. ದೇಶದ ಎಲ್ಲೆಡೆ ಕೊರೊನಾ ಅಬ್ಬರಿಸ್ತಿದೆ. ಈ ಹೊತ್ತಲ್ಲೇ ಬಿಹಾರ ಚುನಾವಣೆ ಕೂಡ ಎದುರಾಗಿದ್ದು, ಸಂಚಲನ ಸೃಷ್ಟಿಯಾಗಿದೆ.

ಬಿಹಾರದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಶುರು
ಬಿಹಾರದಲ್ಲಿ ಪ್ರಜಾಪ್ರಭುತ್ವ ಪರ್ವ ಆರಂಭವಾಗಿದೆ. ಮೋದಿ, ನಿತೀಶ್ ಜೋಡಿ ಒಟ್ಟಾಗಿ ಈ ಬಾರಿ ಚುನಾವಣೆ ಎದುರಿಸುತ್ತಿದ್ರೆ, ಆರ್​ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿ ಮೋದಿ, ನಿತೀಶ್​ಗೆ ಸೆಡ್ಡುಹೊಡೆದಿವೆ. ಜಿದ್ದಾಜಿದ್ದಿನಿಂದ ಕೂಡಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ.

ಮೈತ್ರಿಯ ಮಹಾಪರ್ವ
ಇಂದು ಮೊದಲ ಹಂತದಲ್ಲಿ ಬಿಹಾರದ 71 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. 71 ಕ್ಷೇತ್ರಗಳಲ್ಲಿ 1,066 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಮೊದಲ ಹಂತದಲ್ಲಿ 2 ಕೋಟಿ 14ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 1066 ಸ್ಪರ್ಧಾಳುಗಳಲ್ಲಿ 114 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. 35ರಲ್ಲಿ ಜೆಡಿಯು ಹಾಗೂ 29 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸ್ತಿವೆ. ಆರ್​ಜೆಡಿ 42 ಮತ್ತು ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿವೆ. 41 ಕ್ಷೇತ್ರಗಳಲ್ಲಿ ಮಾತ್ರ ಎಲ್​ಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜೆಡಿಯು ಸ್ಪರ್ಧಿಸಿರೋ 35 ಕ್ಷೇತ್ರಗಳಲ್ಲೂ ಎಲ್​ಜೆಪಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ, ಶೂಟರ್ ಶ್ರೇಯಸಿ ಸಿಂಗ್ ಹಣೆಬರಹವನ್ನ ಇಂದು ಮತದಾರರು ಬರೆಯಲಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ಮತದಾನ ಪ್ರಕ್ರಿಯೆಯಲ್ಲಿ ಒಂದಷ್ಟು ಬದಲಾವಣೆ ತರಲಾಗಿದ್ದು, ಚುನಾವಣಾ ಆಯೋಗ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಕ್ಸಲ್ ಹಾವಳಿ ಇರುವ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಡಳಿತಾರೂಢ ಎನ್‍ಡಿಎ ಹಾಗೂ ವಿಪಕ್ಷಗಳ ಒಕ್ಕೂಟ ಮಹಾಘಟಬಂಧನ್​ಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಮತದಾರರು ಯಾರಿಗೆ ಜೈ ಅಂತಾರೆ ಅಂತಾ ಫಲಿತಾಂಶ ಬಂದ ಬಳಿಕ ಗೊತ್ತಾಗಲಿದೆ.