ಗಾಂಧಿ ವಿರೋಧಿ ಹೇಳಿಕೆ: ಸ್ಪಷ್ಟನೆ ನೀಡುವಂತೆ ಸ್ವಪಕ್ಷದಿಂದಲೇ ಹೆಗಡೆಗೆ ನೋಟಿಸ್

ದೆಹಲಿ: ಗಾಂಧೀಜಿ ಸ್ವಾತಂತ್ರ್ಯ ಹೋರಾಟವನ್ನೇ ಡ್ರಾಮಾ ಎಂದಿದ್ದ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಹೈಕಮಾಂಡ್ ಗರಂ ಆಗಿದೆ. ಅನಂತ್ ಕುಮಾರ್ ಹೆಗಡೆಗೆ ಶೋಕಾಶ್ ನೋಟೀಸ್ ನೀಡಿದ್ದು, ಇಂದಿನ ಸಂಸದೀಯ ಸಭೆಗೂ ನಿಷೇಧ ಹೇರಲಾಗಿದೆ.

ಬಾಯಿ ಬಿಟ್ರೆ ಸಾಕು ಬರೀ ವಿವಾದ. ಒಂದಿಲ್ಲೊಂದು ಕಾಂಟ್ರವರ್ಸಿ ಮಾತು. ಯಾವುದಾದ್ರೂ ವೇದಿಕೆ ಸಿಕ್ರೆ ಸಾಕು ವಿವಾದ ಸೃಷ್ಟಿಸದೇ ಅನಂತಕುಮಾರ್ ಹೆಗಡೆ ವಾಪಸ್ ಬರೋ ಮಾತೇ ಇಲ್ಲ. ಆದ್ರೀಗ ಅವರ ಮಾತುಗಳೇ ಅನಂತಕುಮಾರ್ ಹೆಗಡೆಗೆ ಮುಳುವಾಗಿದೆ.

ವಿವಾದಾತ್ಮಕ ಹೇಳಿಕೆ ನೀಡಿದ್ದ ಅನಂತಕುಮಾರ್​ಗೆ ಶಾಕ್!
ಯೆಸ್.. ಮಾತಾಡೋ ಭರದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮೊನ್ನೆ ಮಹಾತ್ಮ ಗಾಂಧೀಜಿ ಬಗ್ಗೆ ಹಗುರವಾದ ಹೇಳಿಕೆ ಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಲಾಠಿ ನೋಡದ, ಏಟು ತಿನ್ನದವರನ್ನು ಹಾಗೂ ಬ್ರಿಟಿಷರ ಜೊತೆಗೆ ಒಳಒಪ್ಪಂದ ಮಾಡಿಕೊಂಡವರನ್ನು ಇತಿಹಾಸದ ಪುಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಲಾಗುತ್ತಿದೆ ಅಂತಾ ಹೇಳಿ ವಿವಾದ ಸೃಷ್ಟಿಸಿದ್ದರು.

ಈ ವಿಚಾರವಾಗಿ ವಿಪಕ್ಷಗಳು ಗರಂ ಆಗಿವೆ. ಇದ್ರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋದನ್ನು ಅರಿತ ಬಿಜೆಪಿ ಹೈಕಮಾಂಡ್, ಅನಂತಕುಮಾರ್​ಗೆ ಕ್ಲಾಸ್ ತೆಗೆದುಕೊಂಡಿದೆ. ಅಲ್ದೆ, ಈ ಬಗ್ಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಅಂತಾ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದ್ರ ಜೊತೆಗೆ ಇಂದು ಸಂಸತ್ ಭವನದಲ್ಲಿ ನಡೆಯಲಿರುವ ಸಂಸದೀಯ ಸಭೆಯಿಂದಲೂ ಗೇಟ್ ಪಾಸ್ ನೀಡಲಾಗಿದೆ.

ಬಿಜೆಪಿ ವಿರುದ್ಧ ಸಮರ ಸಾರಿದ್ದ ವಿಪಕ್ಷಗಳು!
ಇದಕ್ಕೂ ಮೊದಲು ಅನಂತಕುಮಾರ್ ಹೆಗಡೆ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಿಪಕ್ಷಗಳು ಸಮರ ಸಾರಿದ್ವು. ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀಡಿರುವ ಹೇಳಿಕೆ ವಿಚಾರವಾಗಿ ಪ್ರಧಾನಮಂತ್ರಿ ಕ್ಷಮೆಯಾಚಿಸಬೇಕು ಅಂತಾ ಕಾಂಗ್ರೆಸ್ ಆಗ್ರಹಿಸಿತ್ತು. ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಡಿ ಸಂಸದ ಹೆಗಡೆ ವಿರುದ್ಧ ದೇಶದ್ರೋಹದ ಕೇಸನ್ನೂ ಕಾಂಗ್ರೆಸ್ ದಾಖಲಿಸಿತ್ತು.

ಪ್ರಧಾನಮಂತ್ರಿ ಮತ್ತು ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಆಚರಿಸುತ್ತಿರುವುದು ಹೌದೇ ಆದರಲ್ಲಿ, ಪ್ರಧಾನಮಂತ್ರಿ ಸಂಸತ್ತಿಗೆ ಆಗಮಿಸಿ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಈ ಹೇಳಿಕೆ ವಿಚಾರವಾಗಿ ಕ್ಷಮೆ ಯಾಚಿಸಬೇಕು. ಒಂದೊಮ್ಮೆ ಪ್ರಧಾನಿಗೆ ಮಹಾತ್ಮಾ ಗಾಂಧಿ ಬಗ್ಗೆ ಅಭಿಮಾನವಿದ್ದರೆ ಕೂಡಲೇ ಅನಂತಕುಮಾರ್ ಹೆಗಡೆಯನ್ನ ಉಚ್ಚಾಟಿಸಬೇಕು ಅಂತಾ ಕಾಂಗ್ರೆಸ್​ನ ಹಿರಿಯ ನಾಯಕ ಆನಂದ ಶರ್ಮಾ ಆಗ್ರಹಿಸಿದ್ರು.

ಪದೇಪದೆ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಬಿಜೆಪಿಗೆ ಮುಜುಗರ ಉಂಟುಮಾಡಿದ್ದು, ದೆಹಲಿ ಚುನಾವಣೆ ಸಂದರ್ಭದಲ್ಲಿ ಈ ಹೇಳಿಕೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಇದ್ರಿಂದ ಪಕ್ಷಕ್ಕೆ ನಷ್ಟ ಆಗುತ್ತೆ ಅನ್ನೋದನ್ನು ಅರಿತ ಬಿಜೆಪಿ ವರಿಷ್ಠರು ಈಗ ಅನಂತಕುಮಾರ್ ಹೆಗಡೆಗೆ ಬ್ರೇಕ್ ಹಾಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!