ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಎಂಬುದು ನಮ್ಮ ಊರು. ದಟ್ಟವಾದ ಕಾಡು ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡಮರಗಳ ನಡುವೆ ನಮ್ಮದೊಂದು ಪುಟ್ಟ ಊರು. ನಮ್ಮ ಈ ಪುಟ್ಟ ಊರು ಇತಿಹಾಸದ ಹಾಳೆಗಳ ಪುಟಕ್ಕೆ ಸೇರಲು ಇಲ್ಲಿಯ ಸುಬ್ರಹ್ಮಣ್ಯ ದೇವರ ಕೃಪಾಕಟಾಕ್ಷ ಇರುವ ದೇವಸ್ಥಾನ. ಇಲ್ಲಿಯ ಆಚಾರ ವಿಚಾರ ಸಂಪ್ರದಾಯ ಇವೆಲ್ಲವುದರ ಸಾಕ್ಷಿಯಾಗಿ ಈ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ.
ನಮ್ಮ ಊರಿನಲ್ಲಿ ಈ ಪರ್ವ ಕಾಲದಲ್ಲಿ ಚಂಪಾ ಷಷ್ಠಿಯ ಸಂಭ್ರಮ, ಕಾರ್ತಿಕ ಮಾಸದ ನಿರ್ಗಮನ, ಮಾರ್ಗಶಿರ ಮಾಸದ ಆಗಮನದಲ್ಲಿ ಪ್ರಕೃತಿಯ ದಟ್ಟ ಆಟದಲ್ಲಿ ಚಂಪಾ ಷಷ್ಠಿಯ ಸೊಬಗೆ ಬೇರೆ. ಸುತ್ತಲೂ ಕಂಗೊಳಿಸುವ ಗಿಡಮರಗಳು, ಮುಗಿಲೆತ್ತರಕ್ಕೆ ನಿಂತ ಪರ್ವತ ಶ್ರೇಣಿಗಳು. ನಡು ನಡುವೆ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು. ಜುಳು ಜುಳು ನಿನಾದಗೈಯುತ್ತಾ. ಹರಿಯುವ ಕುಮಾರಧಾರ ನದಿ. ದೇಗುಲದಿಂದ ಹೊರಡುವ ಗಂಟೆಯನಾದ. ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು. ಇದು ಮಹಾ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸುವ ದಿನ ನಿತ್ಯದ ಸುಂದರ ರಮಣೀಯ ದೃಶ್ಯಗಳು.
ಇದನ್ನು ಓದಿ: ಚಂಪಾಷಷ್ಠಿಯ ದಿನಾಂಕ, ಪೂಜಾವಿಧಾನ, ಮಹತ್ವದ ಬಗ್ಗೆ ತಿಳಿಯಿರಿ
ಚಂಪಾ ಷಷ್ಠಿಯ ಸುಸಂದರ್ಭದಲ್ಲಿ ಕೊಪ್ಪರಿಗೆ ಏರುವ ಮೂಲಕ ಚಂಪಾ ಷಷ್ಠಿಯ ಉತ್ಸವ ಪ್ರಾರಂಭವಾಗುತ್ತದೆ. ನಂತರ ಶೇಷವಾಹನಯುಕ್ತ ಬಂಡಿ ಉತ್ಸವ, ಹೂವಿನ ತೇರಿನ ಉತ್ಸವ, ಮುಂತಾದ ಉತ್ಸವಗಳು ನಡೆಯುತ್ತದೆ. ಇದರಲ್ಲಿ ಲಕ್ಷ ದೀಪೋತ್ಸವ ವಿಶೇಷವಾದದು, ಲಕ್ಷ ದೀಪಗಳನ್ನು ಬೆಳಗಿಸಿ ದೀಪದ ಬೆಳಕಿನಿಂದಲೇ ಸುಬ್ರಹ್ಮಣ್ಯ ಸ್ವಾಮಿಯು ಕಂಗೊಳಿಸುತ್ತಿರುತ್ತಾನೆ. ಭಕ್ತಾದಿಗಳು ಸಾಲು – ಸಾಲು ದೀಪಗಳನ್ನು ಬೆಳಗಿಸಿ ದೇವರಿಗೆ ಅರ್ಚನೆಯನ್ನು ಸಲ್ಲಿಸುತ್ತಾರೆ.
ಸುಬ್ರಹ್ಮಣ್ಯ ಸ್ವಾಮಿಗೆ ಬ್ರಹ್ಮರಥ ಉತ್ಸವ
ಚಂಪಾ ಷಷ್ಠಿಯ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರುಶನ ಭಾಗ್ಯ ನೀಡುತ್ತಾನೆ. ಪರಶುರಾಮನ ಸೃಷ್ಟಿಯ ನೆಲೆಯಲ್ಲಿ ಪರಮ ಪವಿತ್ರ ಸುಬ್ರಹ್ಮಣ್ಯನು ವರ್ಷದ ಅದ್ಭುತ ಸನ್ನಿವೇಶಕ್ಕೆ ಮತ್ತೆ ಮತ್ತೆ ಸಾಕ್ಷಿಯಾಗುತ್ತಾನೆ. ಮೊದಲು ಸುಬ್ರಹ್ಮಣ್ಯ ಸ್ವಾಮಿಯ ಹೂವಿನ ತೇರು ರಥ ಬೀದಿಯಲ್ಲಿ ಮುಂದೆ ಸಾಗಿದರೆ, ಬಳಿಕ ಸುಬ್ರಹ್ಮಣ್ಯನನ್ನು ಹೊತ್ತ ಬ್ರಹ್ಮರಥ ಸಾಗುತ್ತದೆ. ಲಕ್ಷಾಂತರ ಮಂದಿ ಕಟ್ಟಡಗಳ ಮೇಲೇರಿ, ರಸ್ತೆಯ ಇಕ್ಕೆಲಗಳಲ್ಲಿ ಸುಬ್ರಹ್ಮಣ್ಯನ ದರ್ಶನ ಮಾಡುತ್ತಾರೆ. ರಥ ಸಾಗುತ್ತಿರುವಾಗ ತೇರಿಗೆ ಎಳ್ಳು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ. ತೇರು ಸಂಪೂರ್ಣವಾದ ನಂತರ ಅರ್ಚಕರು ದೇವರಿಗೆ ಧರಿಸಿದ್ದ ಫಲ ಪುಷ್ಪಗಳನ್ನು ಭಕ್ತರತ್ತ ವೃಷ್ಟಿ ಮಾಡುತ್ತಾರೆ.
ಇಲ್ಲಿ ಬ್ರಹ್ಮರಥವನ್ನು ಬೆತ್ತದಿಂದ ಮಾಡಿರುತ್ತಾರೆ. ಈ ಬ್ರಹ್ಮರಥವನ್ನು ಎಳೆಯುವುದು ಕ್ಷೇತ್ರದ ಒಂದು ವಿಶೇಷತೆ, ಏಕೆಂದರೆ ರಥವು ಹಾದಿಯನ್ನು ತಪ್ಪದಂತೆ ಜಾಗರೂಕತೆ ವಹಿಸುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ನಂತರ ಕೊನೆಯ ದಿನದಂದು ಕೊಪ್ಪರಿಗೆಯನ್ನು ಇಳಿಸುವ ಮೂಲಕ ಜಾತ್ರೆಯು ತೆರೆ ಕಾಣುತ್ತದೆ. ದೇವರ ಅವಭೃತ ಸ್ನಾನ, ನೀರು ಬಂಡಿ ಉತ್ಸವ, ಮುಂತಾದವು ಕ್ಷೇತ್ರದಲ್ಲಿ ನಡೆಯುತ್ತದೆ.
ಸುಬ್ರಹ್ಮಣ್ಯ ದೇವಾಲಯವನ್ನು ರಕ್ಷಿಸುವ ಶೇಷ ಪರ್ವತ
ಈ ಸೌಂದರ್ಯಮಯ ಜಗತ್ತಿನ ಇನ್ನೊಂದು ವಿಶೇಷತೆ ಏನೆಂದರೆ ಶೇಷ ಪರ್ವತ, (ಕುಮಾರ ಪರ್ವತ) ಈ ಪರ್ವತವು ಸುಬ್ರಹ್ಮಣ್ಯ ದೇವಾಲಯವನ್ನು ರಕ್ಷಿಸುವ ನಾಗರ ಹಾವಿನಂತೆ ಕಾಣುತ್ತದೆ ಎಂದು ಹೇಳುವುದರಲ್ಲಿ ತಪ್ಪಾಗಲಾರದು. ಈ ಭವ್ಯ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದೆನಿಸುತ್ತದೆ. ಕುಕ್ಕೆ ಒಡೆಯನ ಚಂಪಾ ಷಷ್ಠಿಯ ವಿಶೇಷತೆಯೇ ಹಾಗೆ ಮೈ ರೋಮಾಂಚನಗೊಳಿಸುವಂತದ್ದು.”ಕುಕ್ಕೆ ಒಡೆಯನೇ ನಮ್ಮನ್ನು ಕಾಪಾಡು”ಎಂಬ ಭಕ್ತಾದಿಗಳ ಕೋರಿಕೆಯನ್ನು ಈಡೇರಿಸುತ್ತಾ, ಕಷ್ಟ ಕಾರ್ಪಣ್ಯ ದಲ್ಲಿ ನನ್ನನ್ನು ನಂಬಿದವರನ್ನು ಕೈಬಿಡೆನು ಎಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಶಾಂತ ಚಿತ್ತದಿಂದ ನೆಲೆಸಿದ್ದಾನೆ.
ಮೋಕ್ಷ. ಆಲ್ಕಬೆ
ಪ್ರಥಮ ಬಿಎ ಪುತ್ತೂರು
ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Mon, 28 November 22