ಬದುಕಿಗೊಂದು ಧೈರ್ಯ, ಭರವಸೆ, ಜೀವನಕ್ಕೆ ಆಧಾರಸ್ಥಂಭ. ಇವೆಲ್ಲಕ್ಕೂ ಒಂದೇ ಉತ್ತರ ಅಪ್ಪ-ಅಮ್ಮಾ. ಅವರಂದ್ರೆ ಅಳೆದಷ್ಟು ಮುಗಿಯದ ತೀರ. ಅಲೆಗಳು ಎಷ್ಟೇ ರಭಸವಾಗಿ ಬೀಸಿದರೂ ತೀರವನ್ನು ಹೇಗೆ ಒಂದಿಂಚೂ ಅಲುಗಾಡಿಸಲು ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರನ್ನೂ ಕೂಡ. ಇವರು ಪದಗಳಿಗೆ ನಿಲುಕದ ನಕ್ಷತ್ರ. ಅದೆಷ್ಟು ನೋವು-ಕಷ್ಟ ಬಂದರೂ ಜಗ್ಗದ ಜೀವಗಳು. ಅಪ್ಪ ತನ್ನ ಮಕ್ಕಳಿಗೋಸ್ಕರ ಅದೆಷ್ಟೋ ತ್ಯಾಗ ಮಾಡುತ್ತಾರೆ. ತನಗಾಗಿ ಏನನ್ನೂ ಮಾಡಿಕೊಳ್ಳದ, ಪ್ರತಿಯೊಂದು ಸಂತೋಷವನ್ನೂ ಮಕ್ಕಳಿಗೋಸ್ಕರ ಮುಡಿಪಾಗಿಟ್ಟು, ಓದಿಸಿ, ಬೇಕಾದ ಬಟ್ಟೆ-ಬರೆ ಕೊಡಿಸಿ, ಒಳ್ಳೆಯ ಊಟ, ಎಲ್ಲವೂ ಮಕ್ಕಳಿಗೋಸ್ಕರ. ಅವಶ್ಯಕತೆ ಬಂದರೆ ಆಕಾಶ-ಭೂಮಿ ಒಂದು ಮಾಡೋಕೂ ರೆಡಿ. ತಾವು ಕಷ್ಟಪಟ್ಟು ಬೆಳೆದ ಹಾಗೆ ನಮ್ಮ ಮಕ್ಕಳೂ ಕಷ್ಟ ಬರಬಾರದು, ನಮಗೆ ಸಿಗದ ಅದೃಷ್ಟ, ಸುಖ, ಶಾಂತಿ ಅವರಿಗೆ ಸಿಗಬೇಕು ಅಂತ ಒದ್ದಾಡೊ ಜೀವಗಳು ಅಂದ್ರೆ ಹೆತ್ತವರು ಮಾತ್ರ.
ಒಂದು ಮನೆಯಲ್ಲಿ ಹೆಣ್ಣು ಮಗುವಿನ ಆಗಮನವಾಯಿತು ಎಂದಾಕ್ಷಣ, ಮನೆಯಲ್ಲಿ ಸಂತೋಷ, ಸಂಭ್ರಮ-ಸಡಗರ ಒಂಚೂರು ಜಾಸ್ತಿಯೇ. ಲಕ್ಷ್ಮೀಯೇ ಬಂದಂತೆ ಸಂಭ್ರಮಿಸುವವರೂ ಇದ್ದಾರೆ. ಹೀಗೆ ಅಪ್ಪನಿಗೆ ಮಗಳಂದ್ರೆ ಪ್ರಾಣ, ಅಮ್ಮನಿಗೆ ಮಗನೆಂದರೆ ಪ್ರಾಣ. ಇದು ಲೋಕ ಸತ್ಯವಾದರೂ, ಪ್ರಿತಿ-ಕಾಳಜಿಗೇನು ಕಮ್ಮಿ ಇಲ್ಲ. ಮಗಳು ಏನೇ ಕೇಳಿದರು ಇಲ್ಲ ಎಂದು ಹೇಳದ ಜೀವ ಅಪ್ಪ. ಬಿದ್ದಾಗ, ಸೋತು ಅತ್ತಾಗ ಪ್ರತಿ ಕ್ಷಣದಲ್ಲೂ ಅಮ್ಮನನ್ನೇ ನಾವು ಹಂಬಲಿಸುತ್ತೇವೆ. ಆದರೆ ಅಪ್ಪನ ದುಃಖ ಕಣ್ಣೀರು ಯಾರಿಗೂ ಹೆಚ್ಚಾಗಿ ತಿಳಿಯುವುದೇ ಇಲ್ಲ. ಅಪ್ಪನ ದುಡಿಮೆಯ ಪ್ರತಿ ಬೆವರ ಹನಿಯೂ ಮಕ್ಕಳ ಯಶಸ್ವಿಗೆ ಕಾರಣವಾಗುತ್ತದೆ. ಅನ್ನದ ಪ್ರತಿ ತುತ್ತಿನಲ್ಲೂ ಅಮ್ಮನಿದ್ದರೆ, ಪರಿಶ್ರಮದ ಹಿಂದೆ ಇರುವ ಬೆವರ ಹಿನಿ ಅಪ್ಪ.
ಅಪ್ಪ ಮುಗಿಲೆತ್ತರದ ನಂಬಿಕೆ, ಅವನೇ ಬದುಕಿನ ಭರವಸೆ. ಮಗಳ ಮೊದಲ ಹೀರೋ ಕೂಡ ಅಪ್ಪನೇ. ಅಪ್ಪನ ಕೈ ಕೆಸರಾದರೆ ಮಾತ್ರ ಮಕ್ಕಳು ಭವಿಷ್ಯ ಚೆನ್ನಾಗಿರಲು ಸಾಧ್ಯ. ಇಡೀ ಜೀವಮಾನದಲ್ಲಿ ಯಾರಿಗೂ ತಲೆತಗ್ಗಿಸಿ ಮಾತನಾಡದ ನಾವು ಅಪ್ಪ-ಅಮ್ಮನ ಬಳಿ ಮಾತ್ರ ತಲೆತಗ್ಗಿಸಿ, ಮೇಲುದನಿಯಲ್ಲಿ ಮಾತಡುತ್ತೇವೆ. ಯಾಕೆಂದರೆ ತಾನು ಕಾಣದ ಪ್ರಪಂಚವನ್ನು ತನ್ನ ಮಕ್ಕಳಿಗೆ ತೆರೆದಿಟ್ಟವರು, ಬದುಕಿನ ಹಾದಿಯಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಲ್ಲು ಧೈರ್ಯ ತುಂಬಿದವರು. ಬದುಕನ್ನು ಯಾವ ರೀತಿಯಲ್ಲಿ ಸ್ವೀಕಸಬೇಕುಂತ ತಿಳಿಸಿಕೊಟ್ಟವರು.
ಇದನ್ನೂ ಓದಿ: ಯಕ್ಷಗಾನದ ಹಿಮ್ಮೇಳದ ಮದ್ದಳೆಯ ನಾದ, ಸ್ವರ, ತಾಳದ ಹಿನ್ನೆಲೆ ಇಲ್ಲಿದೆ
ಎಲ್ಲಾ ಕಷ್ಟಗಳನ್ನು ಮೀರಿ ಬದುಕ ಸಾಗಿಸಿದ ಛಲಗಾರರನ್ನು ಪಡೆದ ನಾವೇ ಪುಣ್ಯವಂತರು. ಅದೆಷ್ಟೋ ಮನೆಗಳಲ್ಲಿ ತಂದೆ ತಾಯಿಯ ಸ್ಥಾನ ತುಂಬಿದ್ದೂ ಇದೆ, ನಾವು ಹುಟ್ಟೋಕು ಮುಂಚೆ ಮಗುವನ್ನು ಹೀಗೇ ನೋಡ್ಕೋಬೇಕು, ಚನ್ನಾಗಿ ಓದಿಸಬೇಕು ಅಂತೆಲ್ಲಾ ಕನಸು ಕಂಡ ಜೀವ. ಹಾಗಾಗಿ ನಮ್ಮನ್ನ ಲಾಲನೆ ಪಾಲನೆ ಮಾಡಿ ತಮ್ಮೆಲ್ಲಾ ಸುಖ-ಸಂತೋಷಗಳನ್ನು ತ್ಯಾಗ ಮಾಡಿ ಬೆಳೆಸಿದ ಹೆತ್ತವರನ್ನು ಯಾವತ್ತೂ ಮರೆಯಬೇಡಿ. ದೇವರು ನೀಡಿರುವ ಬೆಲೆಕಟ್ಟಲಾರದ ಆಸ್ತಿಯೇ ಹೆತ್ತವರು. ಯಾವುದೇ ಹೆಣ್ಣು ಮಗಳು ಒಂದು ಮನೆಗೆ ಸೋಸೆಯಾಗಿ ಹೋಗುವುದಕ್ಕಿಂತ ಮಗಳಾಗಿ ಹೋದರೆ, ಮಗನೂ ಹೆತ್ತವರನ್ನ ಗೌರವಿಸಿದರೆ ಯಾವ ವೃದ್ಧಾಶ್ರಮದ ಅವಶ್ಯಕತೆಯೂ ಇಲ್ಲ.
ನಮ್ಮ ಯಶಸ್ವೀ ಜೀವನದ ಹಿಂದೆ ಹೆತ್ತವರ ಶ್ರಮ ಮಹತ್ವವಾದ್ದದು. ತಂದೆ-ತಾಯಿ ನಮ್ಮ ಎರಡು ಕಣ್ಣುಗಳಿದ್ದಂತೆ. ಹಾಗಾಗಿ ನಾವು ದೊಡ್ಡವರಾದ ಮೇಲೆ ಹೆತ್ತವರು ನಮ್ಮನ್ನ ನೋಡಿಕೊಂಡದಕ್ಕಿಂತ ಒಂದು ಕೈ ಹೆಚ್ಚಾಗಿಯೇ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳೋಣ. ಅವರಿಗೂ ನಮ್ಮ ಅವಶ್ಯಕತೆ ಇರುತ್ತೆ, ನಮ್ಮ ಮಕ್ಕಳಿಗೂ.
ಗೀತಾ ರಾಮಚಂದ್ರ
ಪುತ್ತೂರು