ಪ್ರಧಾನಿ ಮೋದಿ ಮುಂದೆ ಹೆಮ್ಮೆಯಿಂದ ಪಥಸಂಚಲ ಮಾಡಿದ ಬೆಳ್ಳಾರೆಯ ಹೇಮಾಸ್ವಾತಿ ಬಹುಮುಖ ಪ್ರತಿಭೆ
ಕರ್ನಾಟಕವನ್ನು ಪ್ರತಿನಿಧಿಸುವ ಖುಷಿಯಿಂದ ಹೇಮ ಸ್ವಾತಿ ಡಿಸೆಂಬರ್ 16ರಂದು ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ 42 ದಿನಗಳ ಕಾಲ ಬಿಡುವಿಲ್ಲದೆ ತರಬೇತಿ ನಡೆಯುತ್ತದೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಭೆಯನ್ನು ಅವರ ಸಹೋದರ ಗುರುತಿಸಿ ಇಡೀ ಕ್ರೀಡಾ ಲೋಕಕ್ಕೆ ಅಪ್ಪಟ ಪ್ರತಿಭೆಯನ್ನು ಕೊಡುಗೆಯಾಗಿ ನೀಡಿದ್ದು ಈಗ ಇತಿಹಾಸ. ಹೌದು ಪ್ರತಿಭೆ ಎನ್ನುವುದು ಯಾರ ಸ್ವತ್ತೂ ಅಲ್ಲ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಪ್ರತಿಭೆ ಖಂಡಿತಾ ಇರುತ್ತದೆ. “ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು” ಎಂಬ ಮಾತಿನಂತೆ ಮಕ್ಕಳಲ್ಲಿ ಚಿಕ್ಕವರಿದ್ದಾಗಲೇ ಕೆಲವು ಪ್ರತಿಭೆಗಳು ಮೊಳಕೆಯೊಡೆಯುವುದನ್ನು ಕಾಣುತ್ತೇವೆ. ಇಂತಹ ಪ್ರತಿಭೆಯನ್ನು ಪೋಷಕರು ಗುರುತಿಸಿ ಬೆಳೆಸಿದಾಗ ಮುಂದೊಂದು ದಿನ ಆ ಪ್ರತಿಭೆ ಹೆಮ್ಮರವಾಗಿ ಬೆಳೆಯಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯೇ ಬೆಳ್ಳಾರೆಯ ಬೆಡಗಿ ಹೇಮಾಸ್ವಾತಿ. ಹೆಚ್ಚಿನ ಪೋಷಕರು ತಮ್ಮ ಮಗು ತಾವು ಅಂದುಕೊಂಡಂತೆಯೇ ಆಗಬೇಕು ಎಂದು ಬಯಸುತ್ತಾರೆ. ಆದರೆ ಈಕೆಯ ಪೋಷಕರಾದ ಉದಯಶಂಕರ್ ಹಾಗೂ ವಸಂತ ಲಕ್ಷ್ಮಿ ದಂಪತಿಗಳು ತಮ್ಮ ಮಗಳ ಆಸಕ್ತಿ ತಿಳಿದುಕೊಂಡು ಅದನ್ನು ಬೆಳೆಸುವ ವಾತಾವರಣವನ್ನು ಆಕೆಗೆ ಕಲ್ಪಿಸಿ ಕೊಟ್ಟಿದ್ದಾರೆ.
ಸಾಧಾರಣ ಎತ್ತರ, ಸೊಂಪಾದ ಕೇಶರಾಶಿ, ತಾವರೆಯೇ ನಾಚಿಕೊಳ್ಳುವಂತಹ ಸೌಂದರ್ಯ, ದಾಳಿಂಬೆಯಂತಹ ಹಲ್ಲಿನಿಂದ ಸದಾ ನಗುವನ್ನು ಚೆಲ್ಲುತ್ತಾ, ಎಲ್ಲರೊಂದಿಗೆ ಪಟಪಟನೆ ಮಾತನಾಡುತ್ತಾ ಬೆರೆಯುವ ಹೇಮ ಸ್ವಾತಿಯ ಬಹುಮುಖ ಪ್ರತಿಭೆ. ಪ್ರಸ್ತುತ ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಇವರು ಪ್ರೌಢ ಶಿಕ್ಷಣವನ್ನು ಬೆಳ್ಳಾರೆ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪಡೆದಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವ ಸಮಯದಲ್ಲೇ ಈಕೆಗೆ ನೃತ್ಯ ಮತ್ತು ಸಂಗೀತದಲ್ಲಿ ಆಸಕ್ತಿಯನ್ನು ಬೆಳಸಿಕೊಳ್ಳುತ್ತಾರೆ. ಮೂರನೇ ತರಗತಿಯಲ್ಲಿ ಭರತನಾಟ್ಯ ಹಾಗೂ ಸಂಗೀತ ತರಗತಿಗೆ ಸೇರುತ್ತಾರೆ. ಪೋಷಕರು ಮಗಳ ಆಸಕ್ತಿಗೆ ನೀರೆರೆದು ಬೆಳೆಸುತ್ತಾರೆ. ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಮಾರ್ಗದರ್ಶನದಿಂದ ನಾಟ್ಯ ಕಲಿಯುತ್ತಾ ನಟರಾಜನನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಸುಮಾರು ನೂರಕ್ಕೂ ಹೆಚ್ಚು ಕಡೆ ತನ್ನ ನಾಟ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯುವಂತೆ ಮಾಡುತ್ತಾರೆ. ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಪಾಸ್ ಆಗಿ ವಿದ್ವತ್ ಕಲಿಯಲು ಪ್ರಾರಂಭಿಸುತ್ತಾರೆ. ಪ್ರಸ್ತುತ ವಿದುಷಿ ಪ್ರಣತಿ ಚೈತನ್ಯವರಿಂದ ವಿದ್ವತ್ ಕಲಿಯುತ್ತಿದ್ದಾರೆ. ನಟರಾಜನ ಜೊತೆ ಸರಸ್ವತಿಯೂ ಬೇಕೆಂದು ಸಂಗೀತವನ್ನು ಏಕಾಗ್ರತೆಯಿಂದ ಕಲಿಯುತ್ತಾರೆ.
ಜೂನಿಯರ್ ಪರೀಕ್ಷೆಯನ್ನು ಬರೆದು ಪಾಸ್ ಮಾಡಿಕೊಂಡು. ತಂದೆಯ ಜೊತೆಯಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದ ಈಕೆಗೆ ಯಕ್ಷಗಾನ ಕಲಿಯುವ ಆಸಕ್ತಿ ಪ್ರಾರಂಭವಾಗುತ್ತದೆ. ಎಂಟನೇ ತರಗತಿಯಿಂದ ಪದ್ಯಾನ ಗಣಪತಿ ಭಟ್ ರವರನ್ನು ಗುರುವಾಗಿಟ್ಟುಕೊಂಡು ಭಾಗವತಿಕೆಯನ್ನು ಕಲಿಯಲು ಪ್ರಾರಂಭಿಸುತ್ತಾರೆ. ಭಾಗವತಿಗೆಯ ಜೊತೆಯಲ್ಲಿ ಕೆಲ ಪುಟ್ಟ ವೇಷಗಳನ್ನು ಧರಿಸಲು ಯಕ್ಷ ಪಾತ್ರಗಳಲ್ಲಿ ಮಿಂಚುತ್ತಾರೆ. ನಾನು ಇಲ್ಲಿಯವರೆಗೆ ಹೆಚ್ಚಾಗಿ ಪುಂಡುವೇಶವನ್ನೇ ಹಾಕಿಕೊಂಡು ಬಂದವಳು, ಕೃಷ್ಣ ರಾಮನ ಪಾತ್ರಕ್ಕೆ ವೇಷ ಹಾಕುವುದು ನನಗೆ ಬಹಳ ಇಷ್ಟ ಎನ್ನುತ್ತಾರೆ ಹೇಮಸ್ವಾತಿ. ಇದುವರೆಗೆ 200 ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿ: Yakshagana: ಉದಯೋನ್ಮುಖ ಪ್ರತಿಭೆ ರಾಮಪ್ರಕಾಶ ಕಲ್ಲೂರಾಯ ಯಕ್ಷಗಾನ ಭಾಗವತಿಕೆಗೂ ಸೈ , ಸಂಗೀತಕ್ಕೂ ಜೈ
ಭರತನಾಟ್ಯ, ಸಂಗೀತ, ಯಕ್ಷಗಾನವನ್ನೇ ತನ್ನ ಪ್ರಪಂಚ ಎಂದುಕೊಂಡಿದ್ದ ಹೇಮ ಸ್ವಾತಿ ಪದವಿ ಪೂರ್ವ ಶಿಕ್ಷಣ ಪಡೆಯಲು ವಿವೇಕಾನಂದ ಕಾಲೇಜಿನತ್ತ ಹೆಜ್ಜೆ ಹಾಕುತ್ತಾರೆ. ಇದು ಆಕೆಯನ್ನು ಇನ್ನೊಂದು ಪ್ರಪಂಚಕ್ಕೆ ಕೊಂಡೊಯುತ್ತದೆ. ಅದುವೇ ಎನ್. ಸಿ. ಸಿ. ಪಿಯುಸಿಯಲ್ಲಿ ಜೂನಿಯರ್ ವಿಂಗ್ನಲ್ಲಿ ಎಂ.ಸಿ.ಸಿ ಗೆ ಸೇರಿಕೊಳ್ಳುತ್ತಾರೆ. ಛಲತೊಟ್ಟು, ಸಿಪಾಯಿಯಂತೆ ಎಂಸಿಸಿ ತರಬೇತಿ ಪಡೆಯುತ್ತಾರೆ. ಪದವಿಯಲ್ಲೂ ಎನ್. ಸಿ. ಸಿ ಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. 2020 – 21ನೇ ಸಾಲಿನಲ್ಲಿ ಭಾವಿ ಅತುಲ್ ಶೆಣೈ ಅವರಿಂದ ಉತ್ತಮವಾದ ತರಬೇತಿ ಪ್ರಾರಂಭವಾಗುತ್ತದೆ. ಕೊರೋನಾ ಸಮಯದಲ್ಲಿ ಎರಡು ತಿಂಗಳು ಬಿಡುವಿಲ್ಲದೆ ತರಬೇತಿ ಪಡೆದುಕೊಂಡು ಮಡಿಕೇರಿಯಲ್ಲಿ ಬೆತಾಲಿಯನ್ ಮಟ್ಟದ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ಆರ್. ಡಿ. ಸಿ ಗೆ ಹೋಗುವ ಕನಸು ಹೊತ್ತುಕೊಂಡಿದ್ದ ಈಕೆಗೆ ಗುರಿ ತಲುಪುವ ದಾರಿ ಸುಲಭವಾಗಿ ಇರುತ್ತದೆ.
ಈಕೆ ಮೊದಲೇ ಸಾಂಸ್ಕೃತಿಕ ಲೋಕದಲ್ಲಿ ಎತ್ತಿದ ಕೈ. ಮುಂದಿನ ಮಟ್ಟದ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ನಂತರದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ 30 ದಿನಗಳ ಎನ್.ಸಿ. ಸಿ ಶಿಬಿರ ನಡೆಯುತ್ತದೆ. ಅಲ್ಲಿಯೂ ಮುಂದಿನ ಮಟ್ಟದ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ತದನಂತರ ಬೆಂಗಳೂರಿನಲ್ಲಿ 30 ದಿನಗಳ ಪ್ರಿ .ಆರ್. ಡಿ. ಸಿ ಕ್ಯಾಂಪ್ ನಡೆಯುತ್ತದೆ. ಹೀಗೆ ಹಲವು ದೈಹಿಕ ಪರೀಕ್ಷೆಯ ನಂತರ ಆರ್.ಡಿ. ಸಿ ಗೆ ಆಯ್ಕೆಯಾಗುತ್ತಾರೆ. ಕರ್ನಾಟಕವನ್ನು ಪ್ರತಿನಿಧಿಸುವ ಖುಷಿಯಿಂದ ಹೇಮ ಸ್ವಾತಿ ಡಿಸೆಂಬರ್ 16ರಂದು ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ 42 ದಿನಗಳ ಕಾಲ ಬಿಡುವಿಲ್ಲದೆ ತರಬೇತಿ ನಡೆಯುತ್ತದೆ. ಬೆಳಗ್ಗೆ 5:00 ರಿಂದ ಮಧ್ಯಾಹ್ನ ಒಂದರ ವರೆಗೆ ಹಾಗೂ 2:00 ರಿಂದ ರಾತ್ರಿ 8 ಗಂಟೆ ಇವರ ತರಬೇತಿಯ ಸಮಯವಾಗಿರುತ್ತದೆ. ಹೀಗೆ ಏಕಾಗ್ರತೆಯಿಂದ ತರಬೇತಿ ಪಡೆದು ಜನವರಿ 26ರ ಗಣರಾಜೋತ್ಸವದಂದು ಆರ್‌ಡಿಸಿ ಹಾಗೂ ಪ್ರಧಾನಮಂತ್ರಿಯ ಮುಂದೆ ಪಥಸಂಚಲನದಲ್ಲೂ ಭಾಗಿಯಾಗುತ್ತಾರೆ.
ಸಂಗೀತ, ಭರತನಾಟ್ಯ, ಯಕ್ಷಗಾನ, ಎನ್. ಸಿ. ಸಿ. ಮಾತ್ರವಲ್ಲದ ಈಕೆ ಓದಿನಲ್ಲೂ ಮುಂದು. ವಿಜ್ಞಾನದ ಇನ್ಸ್ಪೈರ್ ಅವಾರ್ಡ್ನಲ್ಲೂ ಭಾಗವಹಿಸಿದ ಹೆಮ್ಮೆ ಇವರಿಗಿದೆ. ಪ್ರತಿಭಾ ಕಾರಂಜಿಯಲ್ಲಿ ಯಕ್ಷಗಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಕೊಟ್ಟಿದ್ದಾರೆ. ನಾಟಕ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ತಂದುಕೊಟ್ಟು ತನ್ನ ಊರಿಗೆ ಹಾಗೂ ಶಾಲೆಗೆ ಹೆಮ್ಮೆ ತಂದಿದ್ದಾರೆ. ಸಿಐಡಿ ಆಫೀಸರ್ ಆಗುವ ಕನಸು ಹೊತ್ತ ಈಕೆ ಜೀವನದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಿ ದೇಶವೇ ಮೆಚ್ಚುವಂತ ಹೆಣ್ಣು ಮಗಳಾಗಲಿ ಎಂದು ಆಶಿಸೋಣ.
ಲೇಖನ: ಲಾವಣ್ಯ.ಎಸ್.