ಕನ್ನಡ ಭಾಷೆ ಅಳಿದು ಹೋಗಲು ಸಾಧ್ಯವಿಲ್ಲ, ಮೊದಲು ನಮ್ಮ ಭಾಷೆಯನ್ನು ಯಾರು ಕಲಿಯಬೇಕು?

ಹೇಗೆ ಮಾನವನು ಹತ್ತು ಹಲವು ಅಂಶಗಳನ್ನು ಅವಲಂಬಿಸಿ ಬದುಕುತ್ತಾನೆಯೋ ಹಾಗೆಯೇ ಭಾಷೆಯು ಬೇರೆ-ಬೇರೆ ಅಂಶಗಳಿಂದ ಪ್ರಭಾವಿತವಾಗಿ, ಆಕರ್ಷಿತವಾಗಿ, ಪೋಷಿಸಲ್ಪಡುತ್ತದೆ. ಯಾವುದೇ ಭಾಷೆಯ ಉಳಿವು ಅಥವಾ ವಿಕಸನ, ಅದರ ಬೆಳವಣಿಗೆಯಿಂದಲೇ ಸಾಧ್ಯ.

ಕನ್ನಡ ಭಾಷೆ ಅಳಿದು ಹೋಗಲು ಸಾಧ್ಯವಿಲ್ಲ, ಮೊದಲು ನಮ್ಮ ಭಾಷೆಯನ್ನು ಯಾರು ಕಲಿಯಬೇಕು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 01, 2023 | 8:33 AM

ವಿಶ್ವದಲಿ ಸುಮಾರು 6000 ಭಾಷೆಗಳಿವೆ ಎಂಬುದು ಒಂದು ಅಂದಾಜು. ಯಾವುದೇ ಭಾಷೆಯು ಮೇಲು ಅಥವಾ ಕೀಳು ಎಂಬ ಭೇದ-ಭಾವವಿಲ್ಲ. ಭಾಷೆಯೊಂದು ಜನರಲ್ಲಿ ಸಂಸ್ಕಾರ ಕಲ್ಪಿಸಲು ಅನುಕೂಲಕರವಾಗಿದ್ದರೆ, ಅದುವೇ ಶ್ರೇಷ್ಠ ಭಾಷೆ. ಭಾಷೆಗಳು ಹುಟ್ಟಿಕೊಂಡದ್ದು ಮಾನವನ ನಡುವಿನ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳಲು. ಇಂದಿನ ಯುಗಕ್ಕೆ ಸರಿಯಾಗಿ ಹೇಳುವುದಾದರೆ ಭಾಷೆ ಒಂದು ಮಾಧ್ಯಮವಾಗಿವೆ. ಪ್ರತೀ ಭಾಷೆಗೂ ತನ್ನದೇ ಆದ ವಿಶಿಷ್ಟತೆ ಇದೆ. ಹೇಗೆ ಮಾನವನು ಹತ್ತು ಹಲವು ಅಂಶಗಳನ್ನು ಅವಲಂಬಿಸಿ ಬದುಕುತ್ತಾನೆಯೋ ಹಾಗೆಯೇ ಭಾಷೆಯು ಬೇರೆ-ಬೇರೆ ಅಂಶಗಳಿಂದ ಪ್ರಭಾವಿತವಾಗಿ, ಆಕರ್ಷಿತವಾಗಿ, ಪೋಷಿಸಲ್ಪಡುತ್ತದೆ. ಯಾವುದೇ ಭಾಷೆಯ ಉಳಿವು ಅಥವಾ ವಿಕಸನ, ಅದರ ಬೆಳವಣಿಗೆಯಿಂದಲೇ ಸಾಧ್ಯ. ಬದಲಾವಣೆ ಜಗದ ನಿಯಮ ಕನ್ನಡ ಭಾಷೆ ಇದಕ್ಕೆ ಹೊರತೇನಲ್ಲ. ಅಂದರೆ ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪರಿಣಾಮ ಬೀಳುತ್ತಿದೆ. ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ನಾವೆಲ್ಲರೂ ಕನ್ನಡವನ್ನು ಓದಬೇಕು, ಬರೆಯಬೇಕು, ಮಾತನಾಡಬೇಕು. ಆದರೆ ನಮ್ಮಲ್ಲಿ ಅಂಬೆಗಾಲಿಕ್ಕುವ ಮಗುವಿಗೂ ಆಂಗ್ಲ ಪದದ ತುತ್ತನ್ನು ನುಂಗಿಸುವ ಸಂಸ್ಕೃತಿ ಹುಟ್ಟಿಕೊಂಡಿದೆ. ಬ್ರಿಟಿಷರು ದೇಶವನ್ನಾಳಿ ತೊಲಗಿದರು, ಆದರೆ ಅವರು ಬಿಟ್ಟುಹೋದ ಆಂಗ್ಲ ಭಾಷೆ ಈಗಲೂ ಕಂಗ್ಲೀಷ್ ಆಗಿ ಉಳಿದುಕೊಂಡಿದೆ.

ಸತ್ಯವಾಗಿ ಹೇಳುವುದಾದರೆ ನಗರ ಪ್ರದೇಶಗಳಲ್ಲಿನ ಕೆಲವರು, ಕೆಲವು ಕನ್ನಡ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿ, ಇತರರಿಗೆ ಕನ್ನಡ ಭಾಷಾ ಪರವಾಗಿ ಮಾತನಾಡುವ ಸಲಹೆ ನೀಡುತ್ತಾರೆ. ಅವರಿಂದ ಕನ್ನಡ ಭಾಷೆಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಏಕೆಂದರೆ ನಗರಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಕನ್ನಡದ ಬಳಕೆ ಹೆಚ್ಚಾಗಿ ಕಾಣಸಿಗುತ್ತದೆ. ಒಂದು ರಾಜ್ಯದ ಭಾಷೆಗೆ ಅಕ್ಕ-ಪಕ್ಕದ ಪ್ರದೇಶಗಳ ಭಾಷೆಯ ಪರಿಣಾಮ ಬೀರಬಹುದು. ಆದರೆ ಅದು ಆ ಪ್ರದೇಶದ ಭಾಷೆಯ ಅವನತಿಗೆ ಯಾವತ್ತೂ ಕಾರಣವಾಗುವುದಿಲ್ಲ. ಯಾಕೆಂದರೆ ಭಾಷೆಯ ಬೆಳವಣಿಗೆ ಅಥವಾ ಕೊನೆಯು ಬಳಕೆಯಿಂದಲೇ ಹೊರತು ಬೇರೆ ಪ್ರಭಾವದಿಂದಲ್ಲ.

ಯಾವುದೇ ಮೂಲವಿಲ್ಲದೆ ಹುಟ್ಟಿ ಬಂದು ನಿಂತ ಭಾಷೆಗಳು ಕಾಣಸಿಗುವಾಗ, ಕನ್ನಡ ಭಾಷೆಯನ್ನು ಮೂಲತಃ ಉಳಿಸಿಕೊಳ್ಳುವುದು ಏನು ಕಷ್ಟವಲ್ಲ. ಮೊದಮೊದಲು ಶುದ್ಧವಾಗಿ ಮಾತನಾಡಲು ಕಷ್ಟವಾಗಬಹುದು, ಆದರೆ ಮಾತನಾಡುವ ಸಂದರ್ಭದಲ್ಲಿ ಯಾವುದು ಆಂಗ್ಲ ಪದ ಎಂದು ನೆನಪು ಮಾಡಿ ಅದಕ್ಕೆ ಕನ್ನಡದಲ್ಲಿ ಪರ್ಯಾಯ ಪದ ಯಾವುದು ಇದೆ ಎಂದು ಕಲಿಯುತ್ತಾ ಹೋದಂತೆ, ಭಾಷಾ ಬಳಕೆಯು ಉತ್ತಮವಾಗುತ್ತಾ ಹೋಗುತ್ತದೆ. ಯಾವುದೇ ಭಾಷೆಯ ಉತ್ತಮ ಬಳಕೆಗಾಗಿ ನಮ್ಮಲ್ಲಿ ಭಾಷಾಭಿಮಾನ ಹಾಗೂ ಸತತ ಪ್ರಯತ್ನ ಇರಬೇಕು.

ಕನ್ನಡ ಭಾಷೆಯು ಅಳಿದು ಹೋಗುತ್ತದೆ ಎಂಬ ಭಾವನೆ ಹಲವರ ಮನಸ್ಸಿನಲ್ಲಿದೆ ಆದರೆ ಅದು ಸಾಧ್ಯವಿಲ್ಲ. ಇಂದಿನ ಯುಗದ ಪ್ರಕಾರ ಹೋದಲ್ಲಿ ಭಾಷೆಯಲ್ಲಿ ಬದಲಾವಣೆ ಬರಬಹುದು ಅಂದರೆ ಪದಗಳ ಬಳಕೆಯಲ್ಲಿ ವ್ಯತ್ಯಾಸ ಕಂಡು ಬರಬಹುದು ಆದರೆ ಭಾಷೆ ನಶಿಸಿಹೋಗುವುದಿಲ್ಲ. ಪರಸ್ಪರ ಅವಲಂಬನೆಯಿಂದ ಮನುಷ್ಯನ ಜೀವನ ಹೇಗೆ ಸಾರ್ಥಕತೆವಾಗುತ್ತದೆಯೋ, ಹಾಗೆಯೇ ಭಾಷೆಗಳ ಹೊಂದಾಣಿಕೆಯಿಂದ ಭಾಷೆಗಳು ಪೋಷಿಸಲ್ಪಡುತ್ತವೆ, ಹಾಗೂ ಬೆಳೆಯುತ್ತವೆ. ಇದಕ್ಕೆ ಪ್ರಾಮಾಣಿಕ ಪ್ರಯತ್ನ ಅಗತ್ಯ.

ಇದನ್ನೂ ಓದಿ: Baarisu Kannada Dim Dimava: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಪ್ರಧಾನಿ ಮೋದಿ

ಕೇವಲ ಕನ್ನಡದಲ್ಲಿ ಮಾತಾಡಿ ಎಂದು ಹೇಳುವ ಬದಲಿಗೆ ಕನ್ನಡ ಮಾಧ್ಯಮಗಳ ಮೊರೆ ಹೋಗುವುದು, ಕನ್ನಡ ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಓದುವುದು, ಆಂಗ್ಲ ಪದಗಳ ಪರ್ಯಾಯ ಪದಗಳು ಯಾವುದೆಂದು ಕಂಡು ಹಿಡಿಯುವುದು, ಸೂಚನಾ ಫಲಕಗಳನ್ನು ಕನ್ನಡದಲ್ಲಿ ಬರೆಯುವುದು, ಇತರದೊಂದಿಗೆ ವ್ಯವಹರಿಸುವಾಗ ಹೆಚ್ಚಾಗಿ ಕನ್ನಡದಲ್ಲಿ ಮಾತನಾಡುವುದು, ಮಕ್ಕಳ ಬಾಲ್ಯದಿಂದಲೇ ಭಾಷೆಯ ಮೇಲೆ ಪ್ರೀತಿಯನ್ನು ಬೆಳೆಸುವ ಕಾಯಕವನ್ನು ಮಾಡುವುದು, ಇವೆಲ್ಲವೂ ನಾವು ಭಾಷಾಭಿಮಾನವನ್ನು ಬೆಳೆಸಲು ಇರುವಂತಹ ಚಿಕ್ಕಪುಟ್ಟ ಹೆಜ್ಜೆಗಳು.

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತು ಇದೆ. ಇದು ಕನ್ನಡಿಗರಿಗೆ ಹೇಳಿ ಮಾಡಿಸಿದಂತಿದೆ. ಏಕೆಂದರೆ ನಾವು ನಮ್ಮ ಮಾತೃ ಭಾಷೆಯನ್ನು ಬಿಟ್ಟು ಆಂಗ್ಲ ಭಾಷೆಯ ಮೊರೆ ಹೋಗುತ್ತಿದ್ದೇವೆ. ಆಂಗ್ಲ ಪದಗಳ ಬಳಕೆ ತಪ್ಪೇನಲ್ಲ, ಆಂಗ್ಲ ಭಾಷೆ ಬಳಕೆ ಇಂದಿನ ಕಾಲದಲ್ಲಿ ಅತೀ ಅಗತ್ಯವಾಗಿದೆ ಆದರೆ ಕನ್ನಡವೂ ಅತ್ಯಂತ ಸುಂದರವಾದ ಭಾಷೆ. ಅದನ್ನು ಅರ್ಥ ಮಾಡಿಕೊಳ್ಳಲು ನಮಗೆ ಭಾಷಾ ಪ್ರೇಮ ಅಗತ್ಯ. ಕನ್ನಡದಲ್ಲಿ ಪದಗಳಿಲ್ಲ ಎಂಬ ಮನೋಭಾವವನ್ನು ಹೊಂದಿದ ನಾವು, ಸರಿಯಾಗಿ ಹುಡುಕಿದರೆ ಅತ್ಯಂತ ಅರ್ಥಪೂರ್ಣವಾದ ಪದಗಳು ದೊರಕುತ್ತವೆ. ಅಂತಹ ಪದಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ರೂಡಿ ಮಾಡಿಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು.

ಮನಸ್ಸು ಮಾಡಿದರೆ ಪರಿಹಾರ ಎಂಬ ಮಾತಿನಂತೆ ನಮ್ಮ ದಿನನಿತ್ಯದ ಅಭ್ಯಾಸವು ನಮ್ಮ ಮನಸ್ಸಿನಲ್ಲಿ ಭಾಷಾಭಿಮಾನವನ್ನು ಮೂಡಿಸಲಿ, ಆಂಗ್ಲ ಭಾಷಾ ಪದಗಳ ಬಳಕೆ ಕಡಿಮೆಯಾಗಲಿ. ಸಾಧ್ಯವಾದ ಸಮಯದಲ್ಲಿ ಭಾಷಾಭಿಮಾನವನ್ನು ವ್ಯಕ್ತಪಡಿಸುವ ಅವಕಾಶ ದೊರೆತಾಗ ಅದನ್ನು ಬಳಸಿಕೊಳ್ಳುವ ಧ್ಯೇಯ ನಮ್ಮದಾಗಲಿ. ಎಲ್ಲೆಲ್ಲಿಯೂ ಕನ್ನಡ ನುಡಿ ಕೇಳಿ ಬರಲಿ, ಕನ್ನಡ ಡಿಂಡಿಮ ಎಲ್ಲೆಡೆಸಾರಲಿ.

ಲೇಖನ: ಸ್ವೀಡಲ್‌ ಬಳಕುಂಜೆ