Yakshagana: ಬದುಕಿಗಾಗಿ ಮುದ್ರಣ, ಸಂತೋಷಕ್ಕಾಗಿ ಜನ್ಮದತ್ತ ಯಕ್ಷಗಾನ, ಪುರಾಣಗಳನ್ನು ಮನೆ ಮನೆಗೆ ಪಸರಿಸಿದ ಸಾಧಕ ಸಚ್ಚಿದಾನಂದ ಪ್ರಭು
ಗದ್ದೆ ಬೇಸಾಯದ ಜೊತೆಗೆ ಸಂಜೆ ಹೊತ್ತಿನಲ್ಲಿ ಯಕ್ಷಗಾನದ ಪ್ರಕಾರವಾದ ತಾಳಮದ್ದಳೆ ಕೂಟ ಪ್ರತೀ ಮನೆಯಲ್ಲಿ ದಿನಕ್ಕೊಂದರಂತೆ ನಡೆಯುತ್ತಿತ್ತು ಹಾಗಾಗಿ ಅಲ್ಲಿನ ಹೆಚ್ಚಿನ ಜನರಿಗೆ ರಾಮಾಯಣ, ಮಹಾಭಾರತ, ಭಾಗವತ, ಇತ್ಯಾದಿ ಪುರಾಣ ಕಥೆಗಳ ಅರಿವು ಇತ್ತು. ಮಕ್ಕಳು ಕೂಡ ನಿದ್ದೆ ಬಿಟ್ಟು ಭಾಗವಹಿಸುತ್ತಿದ್ದರು.
ಆತ್ಮರತಿಯ ಅಭಿವ್ಯಕ್ತಿಯೇ ಕಲೆ. ಕಲಾವಿದರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಸಂತೋಷಕ್ಕಾಗಿ ಕಲಾಸೇವೆಯನ್ನು ನಡೆಸುತ್ತಾರೆ. ಇದರಿಂದ ಪುರಾಣಜ್ಞಾನ, ನೀತಿಯುಕ್ತ ವಿಚಾರಧಾರೆ, ಶುದ್ಧ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಉಕ್ತಿಗಳು, ಗಾದೆಗಳು ಮುಂದಿನ ಜನಾಂಗಕ್ಕೆ ಧಾರೆ ಎರೆಯುವ ಕಾಯಕ ಕಲಾವಿದರು ನಡೆಸುತ್ತಿದ್ದಾರೆ. ಇಂತಹ ಕಲೆಯ ಕಾಯಕದಲ್ಲಿ ತಮ್ಮನ್ನು ತೋಡಗಿಸಿಕೊಂಡರು ಆಜೇರು ಸಚ್ಚಿದಾನಂದ ಪ್ರಭು, ಬಂಟ್ವಾಳ ತಾಲೂಕು ಪುಣಚ ಗ್ರಾಮದ ಆಜೇರು ಎಂಬ ಸಣ್ಣ ಊರು ಸುತ್ತಲು ಎತ್ತರವಾದ ಗುಡ್ಡ ಪ್ರದೇಶ ಸಂಪರ್ಕ ರಸ್ತೆಗಳು ಇಲ್ಲದ ಕಾಲ ಕಾಲ್ನಡಿಗೆಯಲ್ಲೇ ದೂರದ ಊರು – ಪೇಟೆಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ಆ ಊರಿನಲ್ಲಿ ಕೃಷಿ ಕಾರ್ಯದ ಜೊತೆಗೆ ಸಾಂಸ್ಕೃತಿಕ ಮನಸ್ಥಿತಿಯ ಊರ ಜನರು ಕೃಷಿ ಕಾರ್ಯದ ಜೊತೆಗೆ ಸಾಂಸ್ಕೃತಿಕವಾಗಿ ಮೇರು ಶಿಖರದೆತ್ತರಕ್ಕೆ ಬೆಳೆದ್ದಿದ ಯಕ್ಷಗಾನ ಕಲಾವಿದ ಆಜೇರು ಸಚ್ಚಿದಾನಂದ ಪ್ರಭುಗಳು. ಹಿರಿಯರಾದ ಕೊಗ್ಗಣ್ಣ ಪ್ರಭುಗಳ ಮಾರ್ಗದರ್ಶನದಲ್ಲಿ ಕಲೆಯನ್ನು ಕರಗತ ಮಾಡಿಕೊಂಡು ಇದೀಗ ತಮ್ಮ ಜೀವನದ ಪ್ರವೃತ್ತಿಯನ್ನು ಕಲಾಮಾತೆಯ ಸೇವೆಗೆ ಮುಡಿಪಾಗಿಟ್ಟಿದ್ದಾರೆ.
ಗದ್ದೆ ಬೇಸಾಯದ ಜೊತೆಗೆ ಸಂಜೆ ಹೊತ್ತಿನಲ್ಲಿ ಯಕ್ಷಗಾನದ ಪ್ರಕಾರವಾದ ತಾಳಮದ್ದಳೆ ಕೂಟ ಪ್ರತೀ ಮನೆಯಲ್ಲಿ ದಿನಕ್ಕೊಂದರಂತೆ ನಡೆಯುತ್ತಿತ್ತು ಹಾಗಾಗಿ ಅಲ್ಲಿನ ಹೆಚ್ಚಿನ ಜನರಿಗೆ ರಾಮಾಯಣ, ಮಹಾಭಾರತ, ಭಾಗವತ, ಇತ್ಯಾದಿ ಪುರಾಣ ಕಥೆಗಳ ಅರಿವು ಇತ್ತು. ಮಕ್ಕಳು ಕೂಡ ನಿದ್ದೆ ಬಿಟ್ಟು ಭಾಗವಹಿಸುತ್ತಿದ್ದರು. ಆ ಕಾಲದಲ್ಲಿ ಕಟೀಲು ಮೇಳದಲ್ಲಿದ್ದ ಪ್ರಸಿದ್ಧ ಸ್ತ್ರೀ ವೇಷಧಾರಿ ವಾಸುದೇವ ಪ್ರಭುಗಳ ಗರಡಿಯಲ್ಲಿ ಪಳಗಿದ ಆಜೇರು ಸಚ್ಚಿದಾನಂದ ಪ್ರಭು, ಮಳೆಗಾಲದಲ್ಲಿ ನಡೆಯುತ್ತಿದ್ದ ನಾಟ್ಯ ತರಬೇತಿಗೆ ಮೂರು ಮೈಲು ನಡೆದುಕೊಂಡು ಹೋಗಿ ಕುಣಿತ ಕಲಿತು ಹವ್ಯಾಸಿಯಾಗಿ ವೇಷ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಅದೇ ರೀತಿ ಹೆಚ್ಚಿನ ಅಭ್ಯಾಸ ಪಡೆಯಬೇಕೆಂದು ಅನೇಕ ಮೇಳಗಳ ಯಕ್ಷಗಾನ ಬಯಲಾಟವನ್ನು ನೋಡುತ್ತಿದ್ದರು.
ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗರರಾದ ಹಾಸ್ಯರತ್ನ ನಯನ ಕುಮಾರ್ ಹಾಗೂ ಕರ್ನಾಟಕ ಮೇಳದ ವಿಧೂಷಕರಾದ ಮಿಜಾರು ಅಣ್ಣಪ್ಪ ಈ ಇಬ್ಬರು ಮಹಾನ್ ಕಲಾವಿದರಿಂದ ಪ್ರಭಾವ ಬೀರಿ ಹಾಸ್ಯಪಾತ್ರದ ಬಗೆಗೆ ಹೆಚ್ಚಿನ ಆಸಕ್ತಿತೋರಿ ನಯನ ಕುಮಾರ್ ರವರ “ಹಾಸ್ಯಲೋಕ” ಎಂಬ ತರಬೇತಿ ಕೇಂದ್ರದಲ್ಲಿ ಏಳು ವರುಷ ಪುರಾಣ ಪ್ರಸಂಗಗಳ ಪರಂಪರೆಯ ಹಾಸ್ಯ ನಡೆಗಳನ್ನು ಅಭ್ಯಾಸ ಮಾಡಿದರು. ಆನಂತರ ತನ್ನ ಹುಟ್ಟೂರಿನ ಮಕ್ಕಳಿಗೆ ದೂರದ ಊರಿಗೆ ಹೋಗಿ ಯಕ್ಷಗಾನ ಕಲಿಯಲು ಅಸಾಧ್ಯ ಎಂದು ಅರಿತು ಯಕ್ಷನಮನ ಆಜೇರು ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಟೀಲು ಮೇಳದ ಹಿರಿಯ ಕಲಾವಿದರಾದ ವಾಸುದೇವ ಪ್ರಭುಗಳನ್ನು ಕರೆಸಿ ಹಲವು ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಹುಟ್ಟಿಸಿದರು.
ಇವರು ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಬರೆಕೇಶವ ಭಟ್, ರಾಧಾಕೃಷ್ಣ ಕಲ್ಚಾರ್ , ಹರೀಶ್ ಬಳಂತಿಮೊಗೇರು, ಮಳಿ ಶ್ಯಾಂ ಭಟ್, ದೇವಕಾನ ಕೃಷ್ಣಭಟ್, ಮುಳಿಯ ಶಂಕರ ಭಟ್, ಇವರ ಒಡನಾಟದಿಂದ ಮಾರ್ಗದರ್ಶನ ಪಡೆದರು. ತಳಕಲ ಮೇಳ, ಚೀರುಂಭ ಭಗವತೀ ಮೇಳ, ಬಪ್ಪನಾಡು ಮೇಳ, ಸುರತ್ಕಲ್ ಮೇಳ, ಇರುವೈಲು ಮೇಳ, ಮಂಗಳಾದೇವಿ ಮೇಳ, ದೇಂತಡ್ಕ ಮೇಳ, ಶ್ರೀಧಾಮ ಮಾಣಿಲಾ ಮೇಳ ಹೀಗೆ ಆನೇಕ ಮೇಳಗಳಲ್ಲಿ ಹಾಸ್ಯಗಾರನಾಗಿ ಕಲಾಸೇವೆ ಗೈದಿರುವ ಪ್ರಭುಗಳು ಪ್ರಸ್ತುತ ನಾಳ ದುರ್ಗಾಪರಮೇಶ್ವರಿ ಮೇಳದಲ್ಲಿ ಸೇವೆ ಸಲಿಸುತ್ತಿದ್ದಾರೆ. ಅಲ್ಲದೆ ಧರ್ಮಸ್ಥಳ ರುಡ್ ಸೆಡ್ ಕ್ಯಾಂಪಿನಲ್ಲಿ ಪೇಪರ್ ಉತ್ಪನ್ನಗಳ ತರಬೇತಿ ಪಡೆದು ‘ ಪ್ರಭು ಪ್ರಿಂಟ್ ‘ ಶಿರೋನಾಮೆಯ ಸ್ವಉದ್ಯೋಗವನ್ನು ಆರಂಭಿಸಿದರು. ಬದುಕಿಗಾಗಿ ಮುದ್ರಣ, ಸಂತೋಷಕ್ಕಾಗಿ ಜನ್ಮದತ್ತ ಪ್ರತಿಭೆಯ ಅನುಸರಿಸಿದವರು.
ಹಿರಿಯರಾದ ವಾಸುದೇವ ಸಾಮಗರ, ಕೈಲಾಸ ಶಾಸ್ತ್ರಿ ಜೊತೆ ಕಾಶಿಮಾಣಿ ಪಾತ್ರ ಮಾಡಿ ಅವರಿಂದ ಸಂಮಾನಿತರಾಗಿದ್ದಾರೆ. ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಬಪ್ಪಬ್ಯಾರಿ ಪಾತ್ರದಿಂದ ಪ್ರಭಾವಿತರಾಗಿ ತದನಂತರದಲ್ಲಿ ಉಸ್ಮಾನನ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಕ್ಷಯಜ್ಞದ ಬ್ರಾಹ್ಮಣ, ದಾರುಕ, ಮಕರಂದ, ಅಗಸ್ತ( ರಜಕ ), ಪುರೋಹಿತ, ದೇವದೂತ, ರಕ್ಕಸದೂತ, ನಾರದ, ಬ್ರಹ್ಮ, ಹೀಗೆ ಹಲವು ಪುರಾಣ ಪಾತ್ರಗಳ ಜೊತೆಗೆ ಈಗಿನ ತುಳು ಪ್ರಸಂಗಗಳಲ್ಲಿಯೂ ಕೂಡ ಹಾಸ್ಯ ಪಾತ್ರಗಳನ್ನು ಮಾಡಿ ಪ್ರೇಕ್ಷಕರನ್ನು ತೃಪ್ತಿಗೊಳಿಸುತ್ತಿದ್ದಾರೆ. ಯಾವುದೇ ಹಾಸ್ಯ ಪಾತ್ರ ನೀಡಿದರು ಸೈ ಎನಿಸಿ ಸುಮಾರು 40 ವರುಷದಿಂದ ಕಲಾಮಾತೆಯ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಗುರುಗಳ ನಿಧನಾನಂತರ ಅವರ ಸ್ಮರಣೆಗಾಗಿ ” ಯಕ್ಷಸಂಜೀವ ” ಪ್ರಶಸ್ತಿಯನ್ನು ಪ್ರತೀ ವರ್ಷ ಇಬ್ಬರು ಹಿರಿಯ – ಕಿರಿಯ ಕಲಾವಿದರಿಗೆ ನೀಡಿ ಗೌರವಿಸುತ್ತಿದ್ದಾರೆ. ಇವರ ಹವ್ಯಾಸ ಪುಸ್ತಕ ಸಂಗ್ರಹ, ಪುಸ್ತಕ ಸಂಗ್ರಹಾಲಯದಲ್ಲಿ ಯಕ್ಷಗಾನ ಪ್ರಸಂಗ ಪುಸ್ತಕಗಳು, ಪುರಾಣ, ಇತಿಹಾಸ ಹೀಗೆ ಆನೇಕ ಗ್ರಂಥಗಳ ಸಂಗ್ರಹವಿದೆ.
ಇದನ್ನೂ ಓದಿ: Yakshagana Artist: ಯಕ್ಷಗಾನ ಕ್ಷೇತ್ರದ ಕನಸಿನ ಕೂಸು ಪುನೀತ್ ಬೋಳಿಯಾರ್
ಇವರಿಗೆ ಆನೇಕ ಸಂಸ್ಥೆಗಳಿಂದ ಸಮ್ಮಾನ ಲಭಿಸಿದೆ. ಅಲ್ಲದೆ ಮಂಗಳೂರು ಕೊಂಕಣಿ ಸಂಘದಿಂದ ” ಕೊಂಕಣಿ ಯಕ್ಷರತ್ನ ” ಬಿರುದು ನೀಡಿ ಗೌರವಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ಸರಕಾರದ ತುಳು ಸಾಹಿತ್ಯ ಆಕಾಡೆಮಿಯಿಂದ ಮಂಗಳೂರು ತುಳು ಭವನದಲ್ಲಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ಹೀಗೆ ಹಲವು ಗೌರವ ಪುರಸ್ಕಾರಗಳಿಗೆ ಭಾಜನರಾಗಿರುವ ಸಚ್ಚಿದಾನಂದ ಪ್ರಭುಗಳು ತಾಯಿ ವನಿತಾ, ಪತ್ನಿ ವಿಜಯಲಕ್ಷ್ಮೀ ಮತ್ತು ಮಗಳು ಶ್ರಾವ್ಯಳೊಂದಿಗೆ ಸುಖಮಯ ಸಂಸಾರದ ನಾವಿಕರಾಗಿ ಸಾಗುತ್ತಿದ್ದಾರೆ.
ಶ್ರಾವ್ಯ ಪ್ರಭು ಎ. ಎಸ್