AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ

ಶ್ರೀಲಂಕಾದ ಸಮಸ್ಯೆಗಳಿಗೆ ಸುದೀರ್ಘ ಹಿನ್ನೆಲೆಯಿದೆ. 2009ರಷ್ಟು ಹಿಂದೆ ತಮಿಳರ ಸಮಸ್ಯೆಯನ್ನು ಪರಿಹರಿಸಿಕೊಂಡ ಮೇಲೆ ಅದು ಉಗ್ರ ರಾಷ್ಟ್ರೀಯತೆಯ ಕಡೆ ವೇಗವಾಗಿ ಹೊರಳಿಕೊಂಡಿತು.

ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ
ಲೇಖಕ ಪುರುಷೋತ್ತಮ ಬಿಳಿಮಲೆ (ಎಡಚಿತ್ರ) ಮತ್ತು ಶ್ರೀಲಂಕಾದ ಮಹಿಳೆ (ಬಲಚಿತ್ರ)
TV9 Web
| Edited By: |

Updated on:Apr 03, 2022 | 11:44 AM

Share

ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ವಿಶ್ವದ ಗಮನ ಸೆಳೆದಿರುವ ಶ್ರೀಲಂಕಾದ ಇಂದಿನ ಸ್ಥಿತಿಗೆ ಏನು ಕಾರಣ ಎಂಬ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ಅಲ್ಲಿನ ಆಡಳಿತ ತೆಗೆದುಕೊಂಡ ಈ ಹಿಂದೆ ತಪ್ಪು ತೀರ್ಮಾನಗಳು ಹೇಗೆ ಶ್ರೀಲಂಕಾದ ಇಂದಿನ ಬಿಕ್ಕಟ್ಟಿಗೆ ಕಾರಣವಾಗಿವೆ ಎಂಬ ಕುರಿತು ಕನ್ನಡದ ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರ ಬರಹ ಇಲ್ಲಿದೆ. ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಮೂಲಭೂತವಾದವು ಒಂದು ದೇಶವನ್ನು ಹೇಗೆ ಆರ್ಥಿಕ ಬಿಕ್ಕಟ್ಟಿಗೆ ದೂಡಬಲ್ಲದು ಎಂದು ವಿವರಿಸಲು ಈ ಬರಹ ಯತ್ನಿಸುತ್ತದೆ. ಪುರುಷೋತ್ತಮ ಬಿಳಿಮಲೆ ಅವರ ಫೇಸ್​ಬುಕ್​ ಖಾತೆಯಲ್ಲಿ ಪ್ರಕಟವಾಗಿದ್ದ ಬರಹವನ್ನು ಅವರ ಅನುಮತಿಯೊಂದಿಗೆ ಮರುಪ್ರಕಟಿಸಲಾಗಿದೆ. ಈ ಬರಹದಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ.

—

ನೆರೆಯ ರಾಷ್ಟ್ರ ಮಾತ್ರವಲ್ಲ, ರಾಮಾಯಣ ಕಾಲದಿಂದಲೂ ಭಾರತದೊಂದಿಗೆ ಸಂಬಂಧವಿರುವ ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ (Sri Lanka Economic Crisis) ಎಂದು ಹೇಳುವಲ್ಲಿ ಬಹುತೇಕ ಭಾರತೀಯ ಮಾಧ್ಯಮಗಳು ವಿಫಲವಾಗಿವೆ. ಅವುಗಳಿಗೆ ಹತ್ತಿರದ ಶ್ರೀಲಂಕಾಕ್ಕಿಂತ ದೂರದ ರಶಿಯಾ ಉಕ್ರೇನ್​ಗಳೇ ಆಕರ್ಷಕ ಸಾಮಗ್ರಿಗಳಾಗಿವೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷರ ಮೇಲೆ ಜನ ಮುಗಿಬಿದ್ದಿದ್ದಾರೆ. ಅಲ್ಲಿರುವ ಸುಮಾರು ಎರಡು ಕೋಟಿಗೂ ಹೆಚ್ಚು ಜನರು ಮತ್ತೊಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಬಡತನ ಮತ್ತು ಹಸಿವಿನಿಂದ ಆ ದೇಶ ಇದೀಗ ಕಂಗೆಟ್ಟಿದೆ. ಅರ್ಥಶಾಸ್ತಜ್ಞರ ಪ್ರಕಾರ ಶ್ರೀಲಂಕಾದ ರಾಷ್ಟ್ರೀಯ ಉತ್ಪಾದನೆಯು ಅದರ ಖರ್ಚಿಗಿಂತ ಎಷ್ಟೋ ಕಡಿಮೆಯಿರುವುದರಿಂದ ಸಮಸ್ಯೆ ಬಹಳ ಗಂಭೀರವಾಗಿದೆ. ಅಂತಾರಾಷ್ಟ್ರೀಯ ಸಾಲದ ಮಟ್ಟವೂ ಹಿಡಿತ ಮೀರಿ ಬೆಳೆದಿದೆ.

ಇದಕ್ಕೆ ಮುಖ್ಯ ಕಾರಣ ಕೋವಿಡ್ ಉಂಟು ಮಾಡಿದ ಬಿಕ್ಕಟ್ಟುಗಳು. ಕೋವಿಡ್ ಅವಧಿಯಲ್ಲಿ ಅಲ್ಲಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರವಾಸೋದ್ಯಮವು ಸಂಪೂರ್ಣವಾಗಿ ನೆಲಕಚ್ಚಿತು. ತೀವ್ರ ರಾಷ್ಟ್ರೀಯವಾದಿಯಾಗಿರುವ ರಾಜಪಕ್ಷ 2021ರಲ್ಲಿ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸಿದ್ದರಿಂದ ಅಲ್ಲಿನ ಕೃಷಿ ಕೈಗಾರಿಕೆಯೂ ಕುಸಿಯಿತು. ಸಣ್ಣಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿ ಜನರು ಬೀದಿಗೆ ಬಿದ್ದರು. ಉಕ್ರೇನ್- ರಶಿಯಾ ಯುದ್ಧದಿಂದಾಗಿ ಶ್ರೀಲಂಕಾಕ್ಕೆ ಈಗ ತೈಲ ಕೊಡುವವರೂ ಇಲ್ಲ. ಐಎಂಎಫ್ ಸಾಮಾನ್ಯವಾಗಿ ಅಸ್ಥಿರ ಆರ್ಥಿಕತೆ ಇರುವಲ್ಲಿಗೆ ವಿಶೇಷ ಒತ್ತು ಕೊಡುವುದಿಲ್ಲ.

ಶ್ರೀಲಂಕಾದ ಸಮಸ್ಯೆಗಳಿಗೆ ಸುದೀರ್ಘ ಹಿನ್ನೆಲೆಯಿದೆ. 2009ರಷ್ಟು ಹಿಂದೆ ತಮಿಳರ ಸಮಸ್ಯೆಯನ್ನು ಪರಿಹರಿಸಿಕೊಂಡ ಮೇಲೆ ಅದು ಉಗ್ರ ರಾಷ್ಟ್ರೀಯತೆಯ ಕಡೆ ವೇಗವಾಗಿ ಹೊರಳಿಕೊಂಡಿತು. ಇವತ್ತು ಈ ಉಗ್ರ ರಾಷ್ಟ್ರವಾದವು ಬೌದ್ಧ ಸಿಂಹಳೀಯರನ್ನು ಕೇಂದ್ರದಲ್ಲಿರಿಸಿಕೊಂಡು ಬೆಳೆದಿದೆ. ಈ ಬೆಳವಣಿಗೆಗಳು ಅಲ್ಲಿನ ಅಲ್ಪಸಂಖ್ಯಾಕರಾದ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರನ್ನು ಮೂಲೆಗೆ ತಳ್ಳಿ ಅವರನ್ನು ಅನುತ್ಪಾದಕಗೊಳಿಸಿತು. ಅಲ್ಪಸಂಖ್ಯಾಕರ ಹಲವು ಪ್ರಾರ್ಥನಾ ಸ್ಥಳಗಳನ್ನು ಕಾನೂನು ಪ್ರಕಾರವೇ ಒಡೆದು ಹಾಕಲಾಯಿತು. ಆ ಸ್ಥಳಗಳಲ್ಲಿ ಬೌದ್ಧ ವಿಹಾರಗಳನ್ನು ಕಟ್ಟಲಾಯಿತು. ಇದಕ್ಕೆ ಸರಕಾರ ಕೊಟ್ಟ ಕಾರಣ- ‘ಪ್ರಾಚ್ಯವಸ್ತು ವಿಭಾಗದ ಪ್ರಕಾರ ಇವು ಬೌದ್ದರಿಗೆ ಸೇರಿದ ಜಾಗಗಳು’.

2019ರ ಈಸ್ಟರ್ ಬಾಂಬ್ ಪ್ರಕರಣವು ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನು ನಿರ್ಣಾಯಕವಾಗಿ ಒಡೆಯಿತು. ಸಿಂಹಳೀಯ ಸಂಸ್ಕೃತಿಯ ಸಾರ್ವಭೌಮತ್ವಕ್ಕೆ ಕ್ರಿಶ್ಚಿಯನ್ ಮತ್ತು ಮುಸ್ಲಿಮರು ಅಪಾಯವೆಂದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು. ಈ ಕೆಲಸವನ್ನು Bodu Bala Sena (BBS) ಎಂಬ ತೀವ್ರಗಾಮಿ ಬೌದ್ಧ ಸಂಘಟನೆಯು ಮಾಡುತ್ತಿದ್ದರೂ ಸರಕಾರವು ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಸಂಘಟನೆಯು ದ್ವೇಷ ಭಾಷಣವನ್ನು ಜನರ ನಡುವೆ ಸಾಮಾನ್ಯ ಪ್ರಕ್ರಿಯೆ ಎಂಬಂತೆ ಮಾಡಿತು. ಇದರ ಆಧಾರದ ಮೇಲೆಯೇ ಈಗಿನ ಸರಕಾರದ ಗೊಟಬಯ ರಾಜಪಕ್ಷ ಮತ್ತು ಮಹಿಂದಾ ರಾಜಪಕ್ಷ ಸಹೋದರರು ಅಧಿಕಾರಕ್ಕೆ ಬಂದದ್ದನ್ನು ನಾವೇ ಕಂಡಿದ್ದೇವೆ. ಅಧಿಕಾರಕ್ಕೆ ಬರುವವರಿಗೆ ಇದಕ್ಕಿಂತ ಸುಲಭದ ಹಾದಿ ಬೇರೆ ಇಲ್ಲ.‌

ಈ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರ ಹಾಜರಾತಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಯಿತು ಎಂದು Commission on the Status of Women (CSW) ವರದಿ ಮಾಡಿತು. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಬುರ್ಖಾವನ್ನು ಮತ್ತು ಮುಸ್ಲಿಂ ಶಾಲೆಗಳನ್ನು ನಿಷೇಧಿಸುವ ತೀರ್ಮಾನವನ್ನು ಸರಕಾರ ತೆಗೆದುಕೊಂಡರೂ ಅಂತಾರಾಷ್ಟ್ರೀಯ ಒತ್ತಡಗಳನ್ನು ಗಮನಿಸಿ ‘ಇದಕ್ಕೆ ಸ್ವಲ್ಪ ಸಮಯಬೇಕು’ ಎಂದು ಹೇಳಿ ತೀರ್ಮಾನವನ್ನು ಮುಂದೂಡಿತು. 2020ರ ಕೋವಿಡ್ ಸಮಯದಲ್ಲಿ ಮುಸ್ಲಿಮರ ಧರ್ಮಾನುಸಾರ ಅಂತ್ಯಸಂಸ್ಕಾರ ನಡೆಸಲು ಶ್ರೀಲಂಕಾ ಸರಕಾರ ಅನುಮತಿ ನೀಡಲಿಲ್ಲ. 2009ರ ಆನಂತರದ ಶ್ರೀಲಂಕಾ ಚುನಾವಣೆಗಳು ಅಲ್ಪಸಂಖ್ಯಾಕರ ಮೇಲಿನ ಆರೋಪಗಳ ಮೂಲಕವೇ ನಡೆದುವೇ ವಿನಾ ಅಭಿವೃದ್ಧಿಯ ಮಾತುಗಳಿಂದ ಅಲ್ಲ. ಈ ನಡುವೆ ಸಂವಿಧಾನದ 20ನೇ ಪರಿಚ್ಚೇದಕ್ಕೆ ತಿದ್ದುಪಡಿ ತಂದು ರಾಜಪಕ್ಷ ತನ್ನ ಅಧಿಕಾರವನ್ನು ಇನ್ನಷ್ಟು ಬಲಪಡಿಸಿಕೊಂಡರು. ಅವರ ಅಧಿಕಾರವನ್ನು ಇದೀಗ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಶ್ನಿಸುವಂತಿಲ್ಲ.

ಶ್ರೀಲಂಕಾದ ಬೆಳವಣಿಗೆಗಳ ಕುರಿತು ಈಚೆಗೆ The United States Commission on International Religious Freedom (USCIRF) ಹೇಳಿದ ಒಂದು ಮಾತೆಂದರೆ- ‘ಒಡೆದ ಸಮುದಾಯಗಳನ್ನು ಮತ್ತೆ ಬೆಸೆಯಲು ಬಹಳ ಕಾಲಾವಕಾಶ ಬೇಕು’. ಒಂದು ಸದೃಢ ಮತ್ತು ಸುಸಂಕೃತ ರಾಷ್ಟ್ರವನ್ನು ಕಟ್ಟುವುದಕ್ಕೆ ಇತಿಹಾಸದ ಸರಿಯಾದ ಗ್ರಹಿಕೆ ಬೇಕು, ಭವಿಷ್ಯದ ಕುರಿತು ಕನಸುಗಳೂ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ‘ನಾವೇನು ಮಾಡುತ್ತಿದ್ದೇವೆ’ ಎಂಬ ಕುರಿತು ಒಂದು ತಿಳಿವಳಿಕೆಯೂ ಬೇಕು. ಇವಿಲ್ಲವಾದರೆ ರಾಷ್ಟ್ರವೊಂದರ ಕುಸಿತವನ್ನು ಯಾರಿಗೂ ತಪ್ಪಿಸಲಾಗದು. ಇದಕ್ಕೆ ಶ್ರೀಲಂಕಾದ ಇಂದಿನ ಅವಸ್ಥೆಯೇ ಸಾಕ್ಷಿ.

ಇದನ್ನೂ ಓದಿ: ಶ್ರೀಲಂಕಾಕ್ಕೆ ಭಾರತದಿಂದ ಅಕ್ಕಿ ಸರಬರಾಜು ಆರಂಭ: ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಸಹಾಯಹಸ್ತ

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾದ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು

Published On - 11:33 am, Sun, 3 April 22

Follow Us
TV9 Web
TV9 Web

TV9 Kannada

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ