Ugadi Special 2022 : ಯುಗಾದಿಗೆ ಹಲವು ನಾಮ, ಪ್ರಕೃತಿ ಸಂಭ್ರಮಿಸುವ ಪರ್ವ ಕಾಲ ಈ ಯುಗಾದಿ!

Ugadi Special 2022 : ಯುಗಾದಿಗೆ ಹಲವು ನಾಮ, ಪ್ರಕೃತಿ ಸಂಭ್ರಮಿಸುವ ಪರ್ವ ಕಾಲ ಈ ಯುಗಾದಿ!
ಸಾಂದರ್ಭಿಕ ಚಿತ್ರ

Ugadi Special 2022 : ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರುವ ಭಾರತ ದೇಶದಲ್ಲಿ ಯುಗಾದಿ ಹಬ್ಬವನ್ನು ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ವಿಶಿಷ್ಟವಾಗಿ ಹಾಗೂ ವಿಭಿನ್ನವಾಗಿ ಯುಗಾದಿಯನ್ನು ಆಚರಿಸುವುದು ವಾಡಿಕೆ.

TV9kannada Web Team

| Edited By: ಅಕ್ಷಯ್​ ಕುಮಾರ್​​

Apr 02, 2022 | 8:44 AM

ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ; ಆದಿ ಎಂದರೆ ಆರಂಭ. ಯುಗಾದಿ ತತ್ಸಮ ಪದವಾದರೆ ಉಗಾದಿ ತದ್ಭವ, ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇಳೆಯ ಸಮಸ್ತ ಜೀವಕೋಟಿಗೆ ಮರುಹುಟ್ಟು ನೀಡುವ ಹೊಸತನವನ್ನು ಹೊತ್ತು ತರುವ ಯುಗಾದಿ ಮರಳಿ ಬರುತ್ತಲೇ ಇರುತ್ತದೆ. ಋತುವಿನ ನಿಯಮದಂತೆ ಯುಗಾದಿ ಪ್ರಕೃತಿಗೆ, ಜೀವ ಸಂಕುಲಕ್ಕೆ ನೀಡುವ ಈ ನವ ಚೈತನ್ಯದ ಉತ್ಸಾಹ ಬತ್ತುವ ಮೊದಲೇ ಮತ್ತೊಂದು ಯುಗಾದಿ ಮರುಕಳಿಸುತ್ತದೆ. ಇದು ಒಂದು ಚಕ್ರದಂತೆ ಎಂದಿಗೂ ನಿಲ್ಲದ ಪ್ರಕ್ರಿಯೆ. ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳಲ್ಲಿ  ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವುದು.

ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರುವ ಭಾರತ ದೇಶದಲ್ಲಿ ಯುಗಾದಿ ಹಬ್ಬವನ್ನು ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ವಿಶಿಷ್ಟವಾಗಿ ಹಾಗೂ ವಿಭಿನ್ನವಾಗಿ ಯುಗಾದಿಯನ್ನು ಆಚರಿಸುವುದು ವಾಡಿಕೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ನಾವು ‘ಯುಗಾದಿ’ ಅಥವಾ ಉಗಾದಿ ಎಂದು ಕರೆದರೆ, ಮಹಾರಾಷ್ಟ್ರದಲ್ಲಿ’ ಗುಡಿಪಾಡ್ವ’ಎಂಬ ಹೆಸರಿನಿಂದ ಕರೆಯುತ್ತಾರೆ. ಉತ್ತರಭಾರತದಲ್ಲಿ ಇದೇ ಹಬ್ಬವನ್ನು’ಬೈಸಾಕಿ’ಎಂಬ ವಿಶಿಷ್ಟ ನಾಮದೊಂದಿಗೆ ಗುರುತಿಸಲಾಗುತ್ತದೆ. ವೈವಿಧ್ಯತೆಯ ಆಚರಣೆಗಳೊಂದಿಗೆ ಎಲ್ಲರೂ ಸೇರಿ ಭೇದಭಾವವನ್ನು ಮರೆತು ಸಂಭ್ರಮಾಚರಣೆಯಲ್ಲಿ ಮೈಮರೆಯುತ್ತಾರೆ.

ಪಾಶ್ಚಿಮಾತ್ಯರ ಅಂಧಾನುಕರಣೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ನಮ್ಮನ್ನ ದೂರ ಸರಿಸುತ್ತಿರುವುದು ದುರಂತವೇ ಸರಿ. ಬಾಲ್ಯದ ನಮ್ಮ ದಿನಗಳನ್ನು ಒಮ್ಮೆ ಮೆಲುಕು ಹಾಕಿ ನೋಡಿ, ಇಡೀ ಮನೆಯಲ್ಲಿ ಹಬ್ಬದ ಪೂರ್ವ ತಯಾರಿಗಳು, ಹಬ್ಬದ ದಿನ ಬಂಧುಗಳ ಸಮಾಗಮ, ಮುಂಜಾನೆಯಿಂದಲೇ ಹೊಸಬಟ್ಟೆ ತೊಟ್ಟು ಕುಣಿದು ಸಂಭ್ರಮಿಸುವ ಯುಗಾದಿ ಮರೆತೆನೆಂದರೂ ಮರೆಯಲಾಗದಂತದ್ದು.

ಪ್ರತಿ ಮನೆ ಮನೆಯ ಮುಂದೆ ಕಂಗೊಳಿಸುವ ಬಣ್ಣದ ಚಿತ್ತಾರದ ರಂಗೋಲಿ, ಬಾಗಿಲಿನಲ್ಲಿ ನಲಿದಾಡುವ ಮಾವಿನೆಲೆ ಮತ್ತು ಬೇವಿನೆಲೆಗಳ ತೋರಣ ನೋಡುವುದೇ ಕಣ್ಮನಗಳಿಗೆ ಸೊಗಸಿನ ಆನಂದಾನುಭವ. ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.

-ರಂಜಿತ್ ಕೆ ಎಸ್ ,ಸಾಗರ

Follow us on

Related Stories

Most Read Stories

Click on your DTH Provider to Add TV9 Kannada