ತುಳುನಾಡಿನ ಸಂಪ್ರದಾಯಿಕ ಕಲೆಗಳು ಎಂದಾಕ್ಷಣ ಮೊದಲು ನೆನಪಾಗುವುದೇ ಯಕ್ಷಗಾನ. ಇಲ್ಲಿನ ಆಚಾರ – ವಿಚಾರ, ದೈವಾರಾಧನೆ , ಕಂಬಳ, ಭೂತಕೋಲ ಎಲ್ಲವೂ ವಿಶಿಷ್ಟವಾದ್ದದು ಕರಾವಳಿಯ ಗಂಡುಕಲೆ ಎಂದು ಹೆಸರುವಾಸಿಯಾಗಿರುವ ಯಕ್ಷಗಾನ, ತನ್ನ ವೈವಿಧ್ಯಮಯ ಹಾವ ಭಾವಗಳ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತದೆ. ರಂಗದಲ್ಲಿ ಬಣ್ಣದ ವೇಷ ಹಾಕಿಕೊಂಡು ಕುಣಿಯುವ ಕಲಾವಿದನ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಕಲೆಯಲ್ಲಿ ತೊಡಗಿಸಿಕೊಂಡು ನೋಡುಗರನ್ನು ನಿಬ್ಬೆರಗಾಗಿಸುವಂತೆ ಮಾಡುತ್ತಿರುವ ಕಲಾವಿದ ಪುನೀತ್ ರಾಜ್ ಬೋಳಿಯಾರ್. ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಬೋಳಿಯಾರ್ ಗ್ರಾಮದ ಗುಂಡ್ಯದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಚಂದ್ರಾವತಿ ದಂಪತಿಗಳ ಸುಪುತ್ರ.
4ನೇ ತರಗತಿಯಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಬ್ಬಣ ಕೋಡಿ ರಾಮ ಭಟ್ ಅವರಲ್ಲಿ ಯಕ್ಷಗಾನ ಕಲಿತು ಪ್ರೀತಿಯ ಶಿಷ್ಯರಾಗಿದ್ದರು. ತನ್ನ 9ನೇ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ತೊಡಗಿಕೊಂಡವರು, ಮನೆಯವರ ಆಸೆಯಂತೆ ಏಳನೇ ತರಗತಿಯಲ್ಲಿರುವಾಗ ಗುರುಗಳಾದ ಶ್ರೀ ಸಬಣ್ಣಕೋಡಿ ರಾಮ ಭಟ್ರ ಮಾರ್ಗದರ್ಶನದಂತೆ ಆಗಿನ ಕಟೀಲು 3ನೇ ಮೇಳದ ಪ್ರಸಿದ್ಧ ಭಾಗವತರಾಗಿದ್ದ ರಂಗನಾಯಕ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ಮೇಳದಲ್ಲಿ ಸೇರ್ಪಡೆಗೊಂಡರು. ಅದರೊಂದಿಗೆ ಯಕ್ಷ ದ್ಯುಮಣಿ ಶ್ರೀ ಅಮ್ಮುಂಜೆ ಮೋಹನ್ ಕುಮಾರ್, ಶ್ರೀ ದಿ.ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಶ್ರೀ ಕೃಷ್ಣ ಮೂಲ್ಯ ಕೈರಂಗಳ ಇವರುಗಳ ಜೊತೆಗೆ ತಿರುಗಾಟ ನಡೆಸಿ ಇವರ ಯಕ್ಷಗಾನ ಬದುಕಿಗೆ ಸ್ಫೂರ್ತಿಯಾಯಿತು . ಶ್ರೀ ಕ್ಷೇತ್ರ ಕಟೀಲು 3ನೇ ಮೇಳದಲ್ಲಿ ಬಣ್ಣ ಹಚ್ಚಿದ ಇವರು ನಂತರ ಶ್ರೀ ಕ್ಷೇತ್ರ ಕಟೀಲು 2, 4, ಮತ್ತು 1ನೇ ಮೇಳದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಯಕ್ಷಕಿರೀಟಿ ಶ್ರೀ ಸುಬ್ರಾಯ ಹೊಳ್ಳರ ವೇಷ ಇವರನ್ನು ಪ್ರೇರೆಪಿಸಿ , ಅದರಲ್ಲೇ ಮುಂದುವರಿಯಲು ಇಂಬು ನೀಡಿತು. ತನ್ನ ತಾಯಿಯ ಅಪೇಕ್ಷೆಯಂತೆ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ ಇವರು ಇಂದು ಯಕ್ಷಗಾನದಲ್ಲಿ ತನ್ನದೇ ಆದ ಶೈಲಿಯಲ್ಲಿ ಮುಂದುವರಿಯುತ್ತಿದ್ದಾರೆ. ಕಲಾವಿದನಾಗಿ ಸುಮಾರು 1000ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ಇವರ ಗರಿಮೆ.
ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ಶಿಕ್ಷಣದ ಸಮಯದಲ್ಲಿ ತಮ್ಮ ಮನೆಯಲ್ಲಿ ಕಷ್ಟವಿದ್ದ ಕಾರಣ ಗುರುಗಳಾದ ಸಬ್ಬಣ್ಣ ಕೋಡಿ ರಾಮ ಭಟ್ ಅವರ ಆಣತಿಯಂತೆ ಶ್ರೀ ದಕ್ಷಿಣಮೂರ್ತಿ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಎಡನೀರು ಮೇಳದಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ, ಸಿಡಿಲ ಮರಿ ಪುತ್ತೂರು ಶ್ರೀಧರ ಭಂಡಾರಿ , ರವಿರಾಜ್ ಭಟ್ ಪನೆಯಾಲ, ಲಕ್ಷ್ಮಣ ಕುಮಾರ್ ಮಾರಕಡ, ಶಂಬಯ್ಯ ಭಟ್ ಕಂಜರ್ಪನೆ , ಶಶಿಧರ್ ಕುಲಾಲ್ ಕನ್ಯಾನ, ಪೂಕಳ ಲಕ್ಷ್ಮೀನಾರಾಯಣ ಭಟ್ ಇಂತಹ ಯಕ್ಷರಂಗದ ಮೇರು ಹಾಗೂ ಹಿರಿಯ ಕಲಾವಿದರ ಜೊತೆಗೆ ತಿರುಗಾಟ ನಡೆಸಿದ್ದಾರೆ.
ಪ್ರಸ್ತುತ ಶ್ರೀ ಕ್ಷೇತ್ರ ಕಟೀಲು 6ನೇ ಮೇಳದಲ್ಲಿ ಕಿರೀಟ ವೇಷದಲ್ಲಿ ಪ್ರಜ್ವಲಿಸುತ್ತಿರುವ ಇವರು, ಪ್ರಸಿದ್ಧ ಭಾಗವತರು ಪುಂಡಿಕೈ ಗೋಪಾಲಕೃಷ್ಣ ಭಟ್ ಅವರಿಂದ ಹಾಗೂ ಅವರ ಮಾರ್ಗದರ್ಶನದಲ್ಲಿ ಕಿರೀಟ ವೇಷದಲ್ಲಿ ಇವರ ನಡೆ ಹಾಗೂ ಕುಣಿತ ಶ್ಲಾಘನೀಯ. ಯಕ್ಷಗಾನ ರಂಗದ ಪ್ರಖ್ಯಾತ ಬಣ್ಣದ ವೇಷದಾರಿ ಹರಿನಾರಾಯಣ ಭಟ್ ಎಡನೀರು, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ದಯಾನಂದ ಮಿಜಾರು, ವಿಶ್ವನಾಥ್ ಶೆಣೈ, ಸದಾಶಿವ ಶೆಟ್ಟಿ ಮುಂಡಾಜೆ, ಶೃತಕೀರ್ತಿರಾಜ್ ಉಜಿರೆ ಇಂತಹ ಯಕ್ಷಗಾನ ದ ಕಲಾವಿದರ ಜೊತೆಗೆ ತಿರುಗಾಟ ನಡೆಸಿದ್ದಾರೆ. ಇವರ ಕಿರೀಟ ವೇಷದಲ್ಲಿ ಹಲವಾರು ಅಭಿಮಾನಿಗಳು ಇದ್ದಾರೆ.
ಕಿರೀಟ ವೇಷದಲ್ಲಿ ಶಿಶುಪಾಲ, ದಂತವಕ್ರ, ಹಿರಣ್ಯಾಕ್ಷ, ಇಂದ್ರಜಿತು, ಪಾಲನೇತ್ರ, ಮಕರಾಕ್ಷ, ವಜ್ರನಾಭ, ದೇವೇಂದ್ರ, ಅರ್ಜುನ, ಹಂಸಧ್ವಜ , ದಕ್ಷಪ್ರಜಾಪತಿ , ವರುಣ ಮತ್ತು ದೃಢವರ್ಮ ಹಾಗೂ ಪುಂಡು ವೇಷದಲ್ಲಿ ಅಭಿಮನ್ಯು , ಸುಧನ್ವ ,ಸುರಥ, ಯಕ್ಷ , ಚಂಡ-ಮುಂಡ, ಕೃಷ್ಣ, ಬಲರಾಮ ಮತ್ತು ವೃಷಕೆತು ಮೊದಲಾದ ಪಾತ್ರದಲ್ಲಿ ಮಿಂಚಿದ್ದಾರೆ.
ಇವರ ಈ ಅಭೂತಪೂರ್ವ ಸಾಧನೆಯನ್ನು ಮನಗಂಡು ಹಲವೆಡೆ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2011ರಲ್ಲಿ ಗುಂಡ್ಯದಲ್ಲಿ ಪ್ರತಿಭಾ ಪುರಸ್ಕಾರ, 2012ರಲ್ಲಿ ಕೋಡ ಪದವಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಇವರ ಮುರಾಸುರ ಪಾತ್ರಕ್ಕೆ ಉತ್ತಮ ಪೋಷಕ ಪಾತ್ರಧಾರಿ ಪ್ರಶಸ್ತಿ , 2014ರಲ್ಲಿ ಪ್ರತಿಭಾಕಾರಂಜಿಯಲ್ಲಿ ಅಭಿಮನ್ಯು ಪಾತ್ರಕ್ಕೆ ಉತ್ತಮ ಪುಂಡು ವೇಷದಾರಿ ಪ್ರಶಸ್ತಿ, 2014 ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಏಕಪಾತ್ರಾಭಿನಯಕ್ಕೆ ಪ್ರಥಮ ಪ್ರಶಸ್ತಿ ಮತ್ತು 2019ರಲ್ಲಿ ಮಂಚಿ ಹಾಗೂ 2021ರಲ್ಲಿ ಸಾಲೆತ್ತೂರಿನಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ . 2022ರಲ್ಲಿ ಬೆಟ್ಟಂಪಾಡಿಯಲ್ಲಿ ಕಟೀಲು ಮೇಳದ ರಂಗಸ್ಥಳದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಇದು ಇವರ ಕನಸು ಕೂಡ ಹೌದು.
ನಂತರ ಇತ್ತೀಚೆಗೆ ರುದ್ರ ತಾಂಡವ ನಾಸಿಕ್ ಬ್ಯಾಂಡ್ ಇವರು ಯಕ್ಷರಂಗದ ದ್ರುವತಾರೆಯೆಂಬುವುದಾಗಿ ಇವರನ್ನು ಸನ್ಮಾನಿಸಿರುವುದು ಶ್ಲಾಘನೀಯ. ಅಭಿನಯ ಚತುಷ್ಕದಿಂದ ಕೂಡಿದ ಯಕ್ಷಗಾನದಲ್ಲಿ ವಾಚಿಕಕ್ಕೆ ಮುಖ್ಯ ಸ್ಥಾನವಿದೆ. ಇಲ್ಲಿ ಬರುವ ಪಾತ್ರಗಳ ಸಂಭಾಷಣೆ ಸ್ವತಂತ್ರವಾದದ್ದು, ಅದರಲ್ಲೂ ಯಕ್ಷಗಾನಕ್ಕೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ತುಂಬಾ ಹೆಚ್ಚಾಗುದಲ್ಲದೆ ಯಕ್ಷಗಾನದ ಬಗ್ಗೆ ಅವರು ತೋರುವ ಒಲವು, ಶ್ರದ್ಧೆ, ಅದನ್ನು ಉಳಿಸುವ ಹಾಗೂ ಬೆಳೆಸುವ ಪ್ರಯತ್ನ ನೋಡಿ ಸಂತೋಷವಾಗುತ್ತಿದೆ. ಯಕ್ಷಗಾನಕ್ಕೆ ಇನ್ನೂ ಇದೆ ರೀತಿಯಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಲಿ ಹಾಗೂ ಇನ್ನಷ್ಟು ಹೆಚ್ಚಿನ ಕಲಾವಿದರು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಲಿ ಯಕ್ಷಗಾನವನ್ನ ಇನ್ನಷ್ಟು ಮೇಲೆತ್ತರಕ್ಕೆ ಬೆಳೆಸುವಲ್ಲಿ ಪ್ರಾಮುಖ್ಯತೆಯನ್ನು ವಹಿಸಲಿ ಎಂದು ಹೇಳುವ ಇವರು ಕೇವಲ ಯಕ್ಷಗಾನದಲ್ಲಿ ತೊಡಗಿಕೊಂಡಿರುವುದಲ್ಲದೇ ತನ್ನ ಮೂರನೇ ಕಣ್ಣಿಂದ ಭಾವನೆಯನ್ನು ಸೆರೆಹಿಡಿಯುವ ಮಾಂತ್ರಿಕನು ಹೌದು. ಇದರ ಜೊತೆಗೆ ಅಡ್ವೆಂಚರ್ ರೈಡರ್, ಕ್ರೀಡಾ ಕ್ಷೇತ್ರ , ಹಾಗೂ ಮಂಗಳೂರಿನ ಪ್ರಖ್ಯಾತ ಶ್ರೀ ರುದ್ರ ತಾಂಡವ ನಾಸಿಕ್ ಬ್ಯಾಂಡ್ ನಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆಯು ಹೌದು.
ಯಾವುದೇ ಪಾತ್ರವನ್ನು ನಿಭಾಯಿಸಬಲ್ಲ ಸಾಮರ್ಥ್ಯವಿರುವ ವ್ಯಕ್ತಿ
ಪುನೀತ್ ರಾಜ್ ಬೋಳ್ಯಾರ್ ವಿದ್ಯಾರ್ಥಿ ದೆಸೆಯಿಂದಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ ಹೊಂದಿದವರು. ಸಬ್ಬಣಕೋಡಿಯವರ ಮಾರ್ಗದರ್ಶನದಲ್ಲಿ ಸಕಾಲಿಕ ತರಬೇತಿ ಪಡೆದದ್ದು ಮಾತ್ರವಲ್ಲ, ಬಿಡುವಿನ ಅವಧಿಯಲ್ಲೆಲ್ಲ ವೃತ್ತಿಪರ ಮೇಳಗಳಲ್ಲೂ ಪ್ರದರ್ಶನಗಳಲ್ಲಿ ಪಾಲ್ಗೊಂಡು ತನ್ನಲ್ಲಿರುವ ಕಲಾವಿದ ಸೊರಗದಂತೆ ನೋಡಿಕೊಂಡವರು. ಇಂದು ಓರ್ವ ಭರವಸೆಯ ಕಲಾವಿದರಾಗಿ ಬೆಳೆಯುತ್ತಿರುವ ಪುನೀತ್ ಓರ್ವ ಉತ್ತಮ ಪುಂಡುವೇಷಧಾರಿಯಾಗಿ ನಾಟ್ಯದಲ್ಲಿ ಮಾತ್ರ ಕಂಡುಬರುತ್ತಿರುವುದಲ್ಲ, ಅರ್ಥಗಾರಿಕೆಯಲ್ಲೂ ಪಳಗುತ್ತಿದ್ದಾರೆ. ಶ್ರೀ ಕಟೀಲು ಮೇಳದ ತಿರುಗಾಟಗಳು ಅವರಲ್ಲಿ ವ್ಯಾಪಕವಾಗಿ ಪೌರಾಣಿಕ ಪ್ರಸಂಗಗಳ ಕುರಿತ ಜ್ಞಾನ ಒದಗಿಸಿದೆ ಎಂದು ನಾನು ನಂಬಿದ್ದೇನೆ. ಕೋಲು ಕಿರೀಟದ ರಕ್ಕಸ ಪಾತ್ರಗಳಲ್ಲಿರುವ ರೌದ್ರತೆಯ ಜೊತೆಗೆ ಸಂಯಮದ ದೇವೇಂದ್ರನಾಗಿಯೂ ಅವರು ಮೆರೆಯಬಲ್ಲರು. ಹಿರಿಯ ವೇಷಧಾರಿ ಸುಬ್ರಾಯ ಹೊಳ್ಳರ ಛಾಯೆ ಅವರ ವೇಷ ಹಾಗೂ ನಾಟ್ಯ ಎರಡರಲ್ಲೂ ಮೇಳೈಸಿದೆ. ಭವಿಷ್ಯದಲ್ಲಿ ಯಾವುದೇ ಪಾತ್ರವನ್ನು ನಿಭಾಯಿಸಬಲ್ಲ ಸಾಮರ್ಥ್ಯವನ್ನು, ಅವಕಾಶವನ್ನು ದೇವಿ ಭ್ರಾಮರಿ ಅವರಿಗೆ ಅನುಗ್ರಹಿಸಲಿ.
– ಕೃಷ್ಣಮೋಹನ ತಲೆಂಗಳ, ಯಕ್ಷಗಾನ ಅಭಿಮಾನಿ
ಪ್ರಸ್ತುತ ಲಾರ್ಸೆನ್ & ಟರ್ಬೋ ಎನ್ನುವ ಖಾಸಗಿ ಬ್ಯಾಂಕ್ ಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಮುಂದಿನ ಹಾದಿ ಸುಗಮವಾಗಿರಲಿ ಎಂದು ಆಶೀಸೋಣ.
ತನುಶ್ರೀ ಬೆಳ್ಳಾರೆ
Published On - 8:12 am, Wed, 24 August 22