ಸಾವು-ಬದುಕಿನೊಂದಿಗೆ ಹೋರಾಟ ನಡೆಸುತ್ತಿರುವ ಬಾಲಿವುಡ್ ನಟ ಫರಾಜ್ ಖಾನ್

ಹಲವು ಹಿಂದಿ ಸಿನಿಮಾ ಮತ್ತು ಟಿವಿ ಸೀರಿಯಲ್​ಗಳಲ್ಲಿ ನಟಿಸಿದ್ದ ನಟ ಫರಾಜ್ ಖಾನ್ ಬೆಂಗಳೂರಿನ ಖ್ಯಾತ ಅಸ್ಪತ್ರೆಯೊಂದರಲ್ಲಿ ಸಾವುಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಫರಾಜ್ ಮೆದುಳಿನ ಸೋಂಕು ಮತ್ತು ನ್ಯುಮೊನಿಯಾದಿಂದ ಬಳಲುತ್ತಿದ್ದು ತೀವ್ರ ಚಿಕಿತ್ಸಾ ಘಟಕದಲ್ಲಿರಿಸಿ ಅವರಿಗೆ ಚಿಕೆತ್ಸೆ ನೀಡಲಾಗುತ್ತಿದೆ.

ನಟನ ಸಹೋದರ ಫಹ್ಮಾನ್ ಖಾನ್ ತಿಳಿಸಿರುವಂತೆ, ಫರಾಜ್​ರನ್ನು ಅಕ್ಟೊಬರ್ 8ರಂದು ಬಹಳ ಚಿಂತಾಜನಕ ಸ್ಥಿತಿಯಲ್ಲಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದೊಂದು ವರ್ಷದಿಂದ ಅವರು ಕೆಮ್ಮುತ್ತಿದ್ದರು ಮತ್ತು ಸೋಂಕು ಎದೆಯಿಂದ ಮೆದುಳಿನವರೆಗೆ ಹಬ್ಬಿದೆ. ಅಂಬ್ಯುಲೆನ್ಸ್​ನಲ್ಲಿ ಅಸ್ಪತ್ರೆಗೆ ಒಯ್ಯುವಾಗಲೇ ಫರಾಜ್ ಮೂರು ಬಾರಿ ಸೆಳೆವಿಗೊಳಗಾಗಿ ಪ್ರಜ್ಞಾಹೀನರಾದರು. ಅವರನ್ನು ಕೂಡಲೇ ಐಸಿಯುಗೆ ಶಿಫ್ಟ್ ಮಾಡಲಾಯಿತಾದರೂ ಪ್ರಜ್ಞೆಯಿನ್ನೂ ಮರಳಿಲ್ಲ. ಅವರ ಚಿಕಿತ್ಸೆಗೆ ರೂ 25 ಲಕ್ಷಗಳು ಬೇಕಾಗುತ್ತವೆ ಅಂತ ಡಾಕ್ಟರ್​ಗಳು ಹೇಳಿದ್ದಾರೆ, ಮಧ್ಯಮವರ್ಗದ ಜೀವನ ನಡೆಸುತ್ತಿರುವ ಖಾನ್ ಕುಟುಂಬಕ್ಕೆ ಹಣ ಹೊಂದಿಸುವುದು ಸಾಧ್ಯವಿಲ್ಲ, ಸಹೃದಯಿಗಳು ಹಣಕಾಸಿನ ಸಹಾಯ ಮಾಡಬೇಕೆಂದು ಕೋರಿ ಒಂದು ಫಂಡ್ ರೇಸಿಂಗ್ ಪ್ಲಾಟ್​ಫಾರ್ಮ್ ಅನ್ನು ಫಹ್ಮಾನ್ ಆರಂಭಿಸಿದ್ದಾರೆ. ಇದುವರೆಗೆ ಸುಮಾರು 3 ಲಕ್ಷ ರೂಪಾಯಿ ಜಮೆಯಾಗಿರುವ ಬಗ್ಗೆ ಅವರಿಂದ ಮಾಹಿತಿ ಸಿಕ್ಕಿದೆ.

ಖ್ಯಾತ ನಟಿ ಪೂಜಾ ಭಟ್ ಟ್ವೀಟ್ ಮೂಲಕ ಫರಾಜ್ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ ತೀವ್ರವಾದ ಹಣಕಾಸಿನ ಬಿಕ್ಕಟ್ಟಿನಲ್ಲಿರುವ ಅವರಿಗೆ ನೆರವಾಗುವಂತೆ ತಮ್ಮ ಸಹನಟರಿಗೆ ಕೋರಿದ್ದಾರೆ.

ಫರೇಬ್’, ‘ಪೃಥ್ವಿ’, ‘ಮೆಹೆಂದಿ’, ‘ದುಲ್ಹನ್ ಬನೂ ಮೈ ತೇರಿ’ ಮೊದಲಾದ ಸಿನಿಮಾಗಳು ಸೇರಿದಂತೆ, ‘ಶ್​..ಕೊಯಿ ಹೈ’, ‘ರಾತ್ ಹೊನೆ ಕೊ ಹೈ’ ಮತ್ತು ‘ಸಿಂದೂರ್ ತೇರೆ ನಾಮ್ ಕಾ’, ಟೆಲಿ ಸೀರಿಯಲ್​ಗಳಲ್ಲಿ ನಟಿಸಿರುವ 60 ವರ್ಷ ವಯಸ್ಸಿನ ಫರಾಜ್ ಖಾನ್ ಬಾಲಿವುಡ್​ನ ಖ್ಯಾತ ಖಳ ಮತ್ತು ಪೋಷಕ ನಟ ಯೂಸುಫ್ ಖಾನ್ ಅವರ ಮಗ.

Related Tags:

Related Posts :

Category:

error: Content is protected !!