ಕ್ಯಾಬಿನೆಟ್ ವಿಸ್ತರಣೆ ಮುಗಿದ ಬೆನ್ನಲ್ಲೇ ನಿಗಮ ಮಂಡಳಿಗಾಗಿ ಭರ್ಜರಿ ಫೈಟ್!

, ಕ್ಯಾಬಿನೆಟ್ ವಿಸ್ತರಣೆ ಮುಗಿದ ಬೆನ್ನಲ್ಲೇ ನಿಗಮ ಮಂಡಳಿಗಾಗಿ ಭರ್ಜರಿ ಫೈಟ್!

ಬೆಂಗಳೂರು: ಸರ್ಕಾರ ರಚನೆ ಟೆನ್ಷನ್ ಆಯ್ತು. ಕಗ್ಗಂಟಾಗಿದ್ದ ಕ್ಯಾಬಿನೆಟ್ ವಿಸ್ತರಣೆ ಚಿಂತೆಯೂ ಮುಗೀತು. ತಲೆನೋವಾಗಿದ್ದ ಖಾತೆ ಹಂಚಿಕೆಗೂ ಫುಲ್ ಸ್ಟಾಪ್ ಬಿತ್ತು. ಇನ್ಮುಂದೆ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸೋಣ ಅನ್ನೋವಷ್ಟರಲ್ಲೇ ಸಿಎಂಗೆ ಮತ್ತೊಂದು ತಲೆಬಿಸಿ ಶುರುವಾಗಿದೆ. ಅದನ್ನ ಹೇಗೆ ನಿಭಾಯಿಸೋದು ಅನ್ನೋ ಚಿಂತೆ ಕಾಡತೊಡಗಿದೆ.

ಅಧಿವೇಶನ ಮುಗಿದ ನಂತ್ರ ನಿಗಮ ಮಂಡಳಿ ಹಂಚಿಕೆ!
ಯೆಸ್.. ಸರ್ಕಾರ ರಚನೆ ಆಗಿ ಆರು ತಿಂಗಳುಗಳೇ ಕಳೆದ್ವು. ಆದ್ರೆ, ಸಂಪೂರ್ಣವಾಗಿ ಎಲ್ಲಾ ಅಧಿಕಾರ ಹಂಚಿಕೆ ಮಾಡೋಕೆ ಸಿಎಂ ಬಿಎಸ್​ವೈಗೆ ಕಾಲ ಕೂಡಿ ಬಂದಿಲ್ಲ ಅನ್ಸುತ್ತೆ. ಅದ್ರಲ್ಲೂ ನಿಗಮ ಮಂಡಳಿಗಳನ್ನು ನೇಮಕ ಮಾಡೋದು ದೊಡ್ಡ ಸವಾಲಾಗಿದೆ. ಯಾಕಂದ್ರೆ, ಈಗಾಗ್ಲೇ ನಿಗಮ ಮಂಡಳಿಗಳನ್ನು ಅಧಿವೇಶನ ಮುಗಿದ ನಂತ್ರ ನೇಮಕ ಮಾಡೋದಾಗಿ ಸಿಎಂ ಹೇಳಿದ್ದಾರೆ. ಅಲ್ಲಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗ್ತಿದೆ.

ಸಚಿವ ಸ್ಥಾನ ಸಿಗದ ಶಾಸಕರಿಂದ ಭರ್ಜರಿ ಫೈಟ್:
ಒಟ್ಟು 76 ನಿಗಮ ಮಂಡಳಿಗಳಿದ್ದು, ಪಟ್ಟಕ್ಕೇರಲು ಲೆಕ್ಕಾಚಾರ ಶುರುವಾಗಿದೆ. ಹೇಗಿದ್ರೂ ನಮ್ಮನ್ನ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿಲ್ಲ. ಕೊನೇ ಪಕ್ಷ ನಿಗಮ ಮಂಡಳಿಯ ಅಧ್ಯಕ್ಷರಾದ್ರು ಆಗಬೇಕು ಅನ್ನೋ ನಿರೀಕ್ಷೆಯಲ್ಲಿ ಹಲವು ಶಾಸಕರಿದ್ದಾರೆ. ಇನ್ನು ಕೆಲವರು ಈಗಾಗ್ಲೇ ಲಾಭದಾಯಕ ನಿಗಮ ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದು, ಪಡೆಯಲೇಬೇಕು ಅಂತಾ ಲಾಬಿ ಶುರು ಮಾಡಿದ್ದಾರೆ. ಅದ್ರಲ್ಲೂ ಪ್ರಮುಖ ನಿಗಮ ಮಂಡಳಿಗಳಾದ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮ ಮಂಡಳಿಗಳೇ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ.

ಲಾಭದಾಯಕ ಹುದ್ದೆ ಪಡೆಯಲು ಜೋರಾಗಿದೆ ಲಾಬಿ:
ಮಂತ್ರಿಗಿರಿ ಸಿಗದಿದ್ರಿಂದ ನಿರಾಸೆ ಆಗಬಾರದು ಅಂತಾ ಸರ್ಕಾರ ಮಹೇಶ್ ಕುಟಳ್ಳಿ ಅವರನ್ನು ಎಂಎಸ್ಐಎಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದ್ರೆ, ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳಿದ್ದು, ಗೃಹ ಮಂಡಳಿ ಅಧ್ಯಕ್ಷರಾಗಲು ಮಹೇಶ್ ಕಮಟಳ್ಳಿ ಕಸರತ್ತು ನಡೆಸಿದ್ದಾರೆ. ನನ್ನದು ಸಿವಿಲ್‌ ಇಂಜಿನಿಯರಿಂಗ್ ಆಗಿರೋದ್ರಿಂದ ಅದಕ್ಕೆ ಅನುಗುಣವಾಗಿ ನಿಗಮ ಮಂಡಳಿ ಸಿಕ್ಕರೆ ಕೆಲಸಕ್ಕೆ ಅನುಕೂಲವಾಗುತ್ತೆ. ಹೀಗಾಗಿ, 2 ದಿನಗಳಲ್ಲಿ ಸಿಎಂಗೆ ಅಭಿಪ್ರಾಯ ತಿಳಿಸುತ್ತೇನೆ ಅಂತಾ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ಬಿಡಿಎ ಅಧ್ಯಕ್ಷ ಸ್ಥಾನಕ್ಕಾಗಿ ಎಂಟಿಬಿ ನಾಗರಾಜ್ ಲಾಬಿ:
ಉಪಚುನಾವಣೆಯಲ್ಲಿ ಮುಗ್ಗರಿಸಿರೋ ಎಂಟಿಬಿ ಹೇಗಾದ್ರೂ ಮಾಡಿ ಅಧಿಕಾರಕ್ಕೇರಲು ಪ್ಲ್ಯಾನ್ ಮಾಡುತ್ತಿದ್ದಾರೆ. ಸಚಿವ ಸ್ಥಾನ ಸಿಗದಿದ್ರೂ ಪರವಾಗಿಲ್ಲ ಬಿಡಿಎ ಅಧ್ಯಕ್ಷರಾಗ್ಬೇಕು ಅಂತಾ ಎಂಟಿಬಿ ಲಾಬಿ ನಡೆಸಿದ್ದಾರೆ. ಬೈ ಎಲೆಕ್ಷನ್​ನಲ್ಲಿ ಸೋತಿದ್ರಿಂದ ಕಾನೂನು ತೊಡಕು ಎದುರಾಗಬಹುದು. ಈ ಬಗ್ಗೆ ನಿವೃತ್ತ ಜಡ್ಜ್​ಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗ್ತಿದೆ.

ಇನ್ನೊಂದೆಡೆ ಹೆಚ್.ವಿಶ್ವನಾಥ್ ಕೂಡ ಪ್ರಮುಖ ನಿಗಮ ಮಂಡಳಿ ಗಿಟ್ಟಿಸಿಕೊಳ್ಳಲು ಸದ್ದಿಲ್ಲದೇ ಕಸರತ್ತು ನಡೆಸಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ, ಬೈ ಎಲೆಕ್ಷನ್​ನಲ್ಲಿ ಸೋತವರು, ಸಚಿವ ಸ್ಥಾನ ಸಿಗದವರು ಹೇಗಾದ್ರೂ ಮಾಡಿ ಪವರ್ ಪಡೆಯಲೇಬೇಕು ಅಂತಾ ವರ್ಕೌಟ್ ನಡೆಸಿದ್ದಾರೆ. ಆದ್ರೆ, ಅವರಿಗೆಲ್ಲಾ ಅಂದುಕೊಂಡಿದ್ದು ಸಿಗುತ್ತಾ ಅನ್ನೋದೇ ಕುತೂಹಲ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!