ಹೈಕಮಾಂಡ್ ಜೊತೆ ಮಾತುಕತೆಗೆ ಮುಹೂರ್ತ ಫಿಕ್ಸ್, ಸಂಪುಟ ಲಿಸ್ಟ್ ಗೆ ಸಿಗುತ್ತಾ ಗ್ರೀನ್ ಸಿಗ್ನಲ್?

, ಹೈಕಮಾಂಡ್ ಜೊತೆ ಮಾತುಕತೆಗೆ ಮುಹೂರ್ತ ಫಿಕ್ಸ್, ಸಂಪುಟ ಲಿಸ್ಟ್ ಗೆ ಸಿಗುತ್ತಾ ಗ್ರೀನ್ ಸಿಗ್ನಲ್?

ಬೆಂಗಳೂರು: ಉಪ ಸಮರದಲ್ಲಿ ಗೆದ್ದ ಅಭ್ಯರ್ಥಿಗಳು ಯಾವಾಗ ಸಚಿವರಾಗ್ತೀವಿ ಅಂತ ತುದಿಗಾಲ ಮೇಲೆ ನಿಂತಿದ್ದಾರೆ. ಈ ನಡುವೆ ಒಂದು ತಿಂಗಳಿನಿಂದ ಭಾರಿ ನಿರೀಕ್ಷೆಯಲ್ಲಿದ್ದ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಂತಿದೆ. ಹೊಸ ಸಚಿವರಿಗೆ ಸಮಾಧಾನವಾಗುವಂತ ವಿಚಾರ ಈಗ ಸಿಎಂ ಕಡೆಯಿಂದ ಬಂದಂತಿದೆ.

ಹೈಕಮಾಂಡ್ ಜೊತೆ ಸಿಎಂ ಮಾತುಕತೆಗೆ ದಿನಾಂಕ ಫಿಕ್ಸ್!
ಯೆಸ್, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರೋ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಕ್ತಿ ನೀಡಲು ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಸಚಿವ ಸ್ಥಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಶಾಸಕರಿಗೆ ಸಿಹಿ ಸುದ್ದಿ ಸಿಗುವ ದಿನ ಹತ್ತಿರ ಬಂದಿದೆ. ಸಿಎಂ ಬಿಎಸ್‌ವೈ ಸಚಿವ ಸಂಪುಟ ವಿಸ್ತರಣೆ ಸಂಬಂಧ ಈ ತಿಂಗಳ 13 ನೇ ತಾರೀಖಿನಂದು ದೆಹಲಿಗೆ ಹೋಗಲಿದ್ದಾರೆ. ದೆಹಲಿಗೆ ತೆರಳುವ ಸಿಎಂ ಹೈಕಮಾಂಡ್ ನಾಯಕರಿಗೆ ಇರೋ ವಾಸ್ತವದ ಬಗ್ಗೆ ಸಂಪೂರ್ಣ ವರದಿ ನೀಡಲಿದ್ದಾರೆ. ಈ ಬಾರಿಯ ಸಚಿವ ಸಂಪುಟದಲ್ಲಿ ಯಾರನ್ನೆಲ್ಲ ಸೇರ್ಪಡೆ ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಲಿದ್ದಾರೆ.

ರಾಣೆಬೆನ್ನೂರು ಶಾಸಕರನ್ನ ಹೊರತುಪಡಿಸಿ, ನೂತನರಾಗಿ ಗೆದ್ದಿರೋ ಎಲ್ಲಾ ಶಾಸಕರನ್ನ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳೋ ಸಾದ್ಯತೆ ಇದೆ. ಇದರ ಜೊತೆ ಜೊತೆಗೆ ಕೆಲ ಬೇರೆ ಶಾಸಕರಿಗೂ ಮಣೆ ಹಾಕೋ ಸಾಧ್ಯತೆ ಎದ್ದು ಕಾಣುತ್ತಿದೆ. ಯಾರನ್ನೆಲ್ಲಾ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂದು ಸಿಎಂ ಪಟ್ಟಿ ಮಾಡಿಕೊಂಡಿದ್ದು, ಅದನ್ನ ಹೈಕಮಾಂಡ್ ಮುಂದೆ ಇಡಲಿದ್ದಾರೆ.

ಸಂಕ್ರಾಂತಿ ನಂತರ ಶಾಸಕರಿಗೆ ಸಿಗುತ್ತಾ ಸಕ್ಕರೆ!
ಇನ್ನು ಎಲ್ಲಾ ಅಂದ್ಕೊಂಡಂತೆ ಆದ್ರೆ ಸಂಕ್ರಾಂತಿ ನಂತ್ರ ಅಂದ್ರೆ ಈ ತಿಂಗಳ 17ಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ನೂತನ ಶಾಸಕರು ಸಹ ಇದೆ ಭರವಸೆಯಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಸಂಕ್ರಾಂತಿ ಕೆಲ ಶಾಸಕರಿಗೆ ಸಿಹಿ ನೀಡಿದ್ರೆ, ಇನ್ನು ಕೆಲವರಿಗೆ ಕಹಿ ನೀಡುವ ಸಾಧ್ಯತೆ ಇದೆ. ಯಾಕಂದ್ರೆ ಆಪರೇಷನ್ ಕಮಲದ ರೂವಾರಿಗಳು ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಂಪುಟ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಮೂಲ ಬಿಜೆಪಿಗರು ಸಹ ಈ ಬಾರಿಯ ಸಚಿವ ಸಂಪುಟದಲ್ಲಿ ಸೇರೋದಕ್ಕೆ ತಮ್ಮದೇ ಲೆಕ್ಕಾಚಾರದಲ್ಲಿ ಲಾಬಿ ನಡೆಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಸಾಕಷ್ಟು ಕುತೂಹಲ ಮೂಡಿಸಿದೆ.

ಒಟ್ನಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರೋ ಸಚಿವ ಸಂಪುಟ ವಿಸ್ತರಣೆಗೆ ಮುಕ್ತಿ ಸಿಗೋ ಲಕ್ಷಣ ಎದ್ದು ಕಾಣುತ್ತಿದೆ. ಆದ್ರೆ ಯಾರಿಗೆ ಸಚಿವ ಸ್ಥಾನ ಸಿಗುತ್ತೆ.? ಯಾರಿಗೆ ಸಿಗಲ್ಲ..?. ಯಾರಲ್ಲ ಮುನಿಸಿಕೊಳ್ತಾರೆ..? ಯಾರಿಗೆಲ್ಲ ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಖುಷಿನೀಡಲಿದೆಅನ್ನೋದು ಸಿಎಂ ದೆಹಲಿಯಿಂದ ಬಂದನಂತರವಷ್ಟೇ ಗೊತ್ತಾಗಲಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!