ಕೇಂದ್ರ ಸರ್ಕಾರ ಭಾರತೀಯ ಸೇನೆಯಲ್ಲಿ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ್ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪ್ರಸಕ್ತ ಬಜೆಟ್ನಲ್ಲೂ ಕೂಡ ನಿರ್ಮಲಾ ಸೀತಾರಾಮನ್ ಅದನ್ನೇ ಪುನರುಚ್ಚರಿಸಿದ್ದಾರೆ. ಆತ್ಮ ನಿರ್ಭರ ಭಾರತ ಉಪಕ್ರಮಕ್ಕೆ ಉತ್ತೇಜನ ನೀಡಿ, ರಕ್ಷಣಾ ಉಪಕರಣಗಳ ಆಮದು ಪ್ರಮಾಣ ತಗ್ಗಿಸುವ ಮೂಲಕ ಭಾರತವನ್ನು ಸ್ವಾವಲಂಬಿ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ 2022-23 ಹಣಕಾಸು ವರ್ಷದಲ್ಲಿ, ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಉಪಕರಣಗಳ ಒಟ್ಟಾರೆ ಖರೀದಿಯಲ್ಲಿ ಶೇ.68ರಷ್ಟು ಪ್ರಮಾಣದ ಖರೀದಿಯನ್ನು ದೇಶೀಯ ಕಂಪನಿಗಳಿಂದ ಮಾಡಲಾಗುವುದು ಎಂದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದು ಕಳೆದ ಹಣಕಾಸು ವರ್ಷದವರೆಗೆ ಶೇ.58ರಷ್ಟು ಮಾತ್ರ ಇತ್ತು.
ಹಾಗೇ, ದೇಶದ ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡುವುದಾಗಿ ಸಚಿವರು ಘೋಷಿಸಿದ್ದಾರೆ. ದೇಶದ ಖಾಸಗಿ ವಲಯದವರು, ನವೋದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳವರು ರಕ್ಷಣಾ ಕ್ಷೇತ್ರದಲ್ಲೂ ಸಂಶೋಧನೆ ನಡೆಸಬಹುದು. ಹೀಗೆ ಸಂಶೋಧನೆ ನಡೆಸಲು ಆಸಕ್ತಿ ಇರುವವರು ಡಿಆರ್ಡಿಒ ( (Defence Research and Development) )ಸಹಯೋಗದಲ್ಲಿ ಸಂಶೋಧನೆ, ಅಭಿವೃದ್ಧಿ ನಡೆಸಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭದ್ರತೆಗೆ ಅಗತ್ಯವಿರುವ ಯುದ್ಧೋಪಕರಣಗಳೂ ಸೇರಿದಂತೆ ಎಲ್ಲ ಬಗೆಯ ಆಯುಧಗಳ ದೇಶೀ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಅಂದಹಾಗೆ, ಕಳೆದ ವರ್ಷ ಅಂದರೆ 2021-22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 4.78 ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು. ಅದರಲ್ಲಿ ಬಂಡವಾಳ ಆಯವ್ಯಯ ಅಂದರೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಆಧುನೀಕರಣ ಮತ್ತು ಅಗತ್ಯ ಉಪಕರಣಗಳ ಖರೀದಿಗೆ 1.35 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಅದರಲ್ಲಿ ಅತಿ ಹೆಚ್ಚು ಪಾಲು ಅಂದರೆ 53 ಸಾವಿರ ಕೋಟಿ ರೂಪಾಯಿ ಭಾರತೀಯ ವಾಯುಪಡೆಗೆ ಸಿಕ್ಕಿತ್ತು. ಭೂಸೇನೆಗೆ 36 ಸಾವಿರ ಕೋಟಿ ರೂ. ಮತ್ತು ನೌಕಾಪಡೆಗೆ 37 ಸಾವಿರ ಕೋಟಿ ರೂ.ಹಂಚಿಕೆಯಾಗಿತ್ತು. ಅದಕ್ಕೆ ತಕ್ಕಂತೆ ಹಲವು ಅಭಿವೃದ್ಧಿಯನ್ನೂ ಸೇನೆಯಲ್ಲಿ ಮಾಡಲಾಗಿದೆ. ಅದರಲ್ಲೂ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ತತ್ವಕ್ಕೆ ಅತ್ಯಂತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತದ ರಕ್ಷಣಾ ಬಜೆಟ್ ಎಂಬುದು ವಿಶ್ವದಲ್ಲಿಯೇ 5ನೇ ಅತ್ಯಂತ ದೊಡ್ಡ ರಕ್ಷಣಾ ಬಜೆಟ್ ಆಗಿದೆ. ಅಂದರೆ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ಅತಿ ಹೆಚ್ಚು ಅನುದಾನ ಮೀಸಲಿಡುವ 5ನೇ ದೊಡ್ಡ ದೇಶ ಭಾರತ. ಚೀನಾ ಒಟ್ಟಾರೆ ಜಿಡಿಪಿಯ ಶೇ.3ರಷ್ಟನ್ನು ತನ್ನ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟರೆ, ಭಾರತ ಒಟ್ಟಾರೆ ಜಿಡಿಪಿಯ ಶೇ.1.58ನ್ನು ರಕ್ಷಣಾ ಪಡೆಗಳಿಗಾಗಿ ಎತ್ತಿಡುತ್ತಿದೆ.
ಇದನ್ನೂ ಓದಿ: ಏನಿದು ಬಾರ್ಬೆಲ್ ಸ್ಟ್ರಾಟಜಿ ? ಕೊವಿಡ್ ಸವಾಲು ಎದುರಿಸಲು ಮೋದಿ ಸರ್ಕಾರ ಅದನ್ನು ಹೇಗೆ ಬಳಸಿತು?
Published On - 12:45 pm, Tue, 1 February 22