ನವದೆಹಲಿ, ಜನವರಿ 17: ಕ್ಯಾನ್ಸರ್, ಲಿವರ್ ಟ್ರಾನ್ಸ್ಪ್ಲಾಂಟ್ ಇತ್ಯಾದಿಗೆ ವೈದ್ಯಕೀಯ ವೆಚ್ಚವೇ ಲಕ್ಷ ಲಕ್ಷ ರೂ ಆಗಬಹುದಾದ್ದರಿಂದ ಜನರಿಗೆ ಇಡೀ ಜೀವಮಾನದ ಉಳಿತಾಯ ಹಣ ಬಸಿದುಹೋಗಬಹುದು. ಇದನ್ನು ತಪ್ಪಿಸಲು ಸರ್ಕಾರ ಯೋಜಿಸಿದ್ದು, ಈ ನಿಟ್ಟಿನಲ್ಲಿ ಇನ್ಷೂರೆನ್ಸ್ ಕವರೇಜ್ ಮಿತಿಯನ್ನು (insurance cover per year) ಹೆಚ್ಚಿಸಲು ಹೊರಟಿದೆ. ವರದಿ ಪ್ರಕಾರ ಆಯುಷ್ಮಾನ್ ಭಾರತ್ ಹೆಲ್ತ್ ಸ್ಕೀಮ್ನ ಅಡಿಯಲ್ಲಿ ಒದಗಿಸಲಾಗುವ ಇನ್ಷೂರೆನ್ಸ್ ಕವರ್ ಅನ್ನು ಎರಡು ಪಟ್ಟು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. 5 ಲಕ್ಷ ರೂ ಇದ್ದ ವಿಮಾ ಮಿತಿಯನ್ನು 10 ಲಕ್ಷ ರೂಗೆ ಹೆಚ್ಚಿಸಬಹುದು. ಫೆಬ್ರುವರಿ 1ರಂದು ಮಂಡಿಲಾಗುವ ಮಧ್ಯಂತರ ಬಜೆಟ್ನಲ್ಲೇ ವಿಮಾ ಕವರೇಜ್ ಮಿತಿ ಹೆಚ್ಚಳದ ಬಗ್ಗೆ ಘೋಷಣೆ ಆಗಬಹುದು ಎನ್ನಲಾಗುತ್ತಿದೆ.
ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ (AB PM JAY- Ayushman Bharat Pradhan Mantri Jan Arogya Yojana) ವ್ಯಾಪ್ತಿಗೆ ಬರುವ ಫಲಾನುಭವಿಗಳ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಿಸಿ 100 ಕೋಟಿಗೆ ತರಲು ಕೇಂದ್ರ ಹಣಕಾಸು ಸಚಿವಾಲಯ ಯೋಜಿಸಿರುವ ಸುದ್ದಿ ಇದೆ.
ವರದಿ ಪ್ರಕಾರ, ಮುಂದಿನ ಮೂರು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿರುವ ಕೆಲಸಗಾರರು, ಕಲ್ಲಿದ್ದಲೇತರ ಗಣಿಗಳ ಕಾರ್ಮಿಕರು (Non-coal mining workers), ಆಶಾ ಕಾರ್ಯಕರ್ತೆಯರು ಹಾಗೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳನ್ನು ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಬಹುದು.
ವರ್ಷವೊಂದಕ್ಕೆ ಒಂದು ಕುಟುಂಬಕ್ಕೆ ವಿಮಾ ಕವರೇಜ್ ಅನ್ನು 10 ಲಕ್ಷಕ್ಕೆ ಏರಿಸುವುದರಿಂದ ಹಾಗೂ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು 100 ಕೋಟಿಗೆ ಏರಿಸುವುದರಿಂದ ಕೇಂದ್ರ ಸರ್ಕಾರಕ್ಕೆ 12,076 ಕೋಟಿ ರೂಗಳಷ್ಟು ಹೆಚ್ಚುವರಿ ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ.
2018ರಲ್ಲಿ ಆರಂಭವಾದ ಪಿಎಂ ಜನ್ ಆರೋಗ್ಯ ಯೋಜನೆ ಅಡಿಯಲ್ಲಿ 6.2 ಕೋಟಿಯಷ್ಟು ಆಸ್ಪತ್ರೆ ದಾಖಲಾತಿಗಳಾಗಿವೆ. ಒಟ್ಟು 79,157 ಕೋಟಿ ರೂನಷ್ಟು ಹಣ ಸಂದಾಯ ಮಾಡಲಾಗಿದೆ. ಕುತೂಹಲ ಎಂದರೆ, ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ನೆರವಿಲ್ಲದೇ ಫಲಾನುಭವಿಗಳು ತಾವೇ ಸ್ವಂತವಾಗಿ ಚಿಕಿತ್ಸೆ ಮಾಡಿಕೊಂಡಿದ್ದರೆ ಎರಡು ಪಟ್ಟು ಹೆಚ್ಚು ಹಣ ತೆರಬೇಕಾಗಿರುತ್ತಂತೆ.
ಇದನ್ನೂ ಓದಿ: Interim Budget 2024: ಮೊಬೈಲ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡುವ ಸಾಧ್ಯತೆ; ಆ್ಯಪಲ್ನಂತಹ ಕಂಪನಿಗಳಿಗೆ ಅನುಕೂಲ
ಅಂದಹಾಗೆ, 2023-24ರ ಹಣಕಾಸು ವರ್ಷಕ್ಕೆ ಆಯುಷ್ಮಾನ್ ಭಾರತ್ ಯೋಜನೆಗೆ ಬಜೆಟ್ನಲ್ಲಿ 7,200 ಕೋಟಿ ರೂ ನಿಯೋಜಿಸಲಾಗಿತ್ತು. ಈ ಬಾರಿ, ಅಂದರೆ 2024-25ರ ಹಣಕಾಸು ವರ್ಷಕ್ಕೆ ಬಜೆಟ್ನಲ್ಲಿ 15,000 ಕೋಟಿ ರೂ ತೆಗೆದಿರಿಸುವ ಸಾಧ್ಯತೆ ಇದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Wed, 17 January 24