Budget 2023: ಬಿಎಸ್ಎನ್ಎಲ್ 5ಜಿ ನೆಟ್ವರ್ಕ್ ಅಭಿವೃದ್ಧಿಗೆ 53 ಸಾವಿರ ಕೋಟಿ ರೂ
BSNL Upgradation: ಬಿಎಸ್ಎನ್ಎಲ್ಗೆ ಚೇತರಿಕೆ ನೀಡಲು 1.64 ಲಕ್ಷ ಕೋಟಿ ಪ್ಯಾಕೇಜ್ ಅನ್ನು ಐಟಿ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಕಳೆದ ವರ್ಷ ಭರವಸೆ ನೀಡಿದ್ದರು. ಅದರಂತೆ ಮೊದಲ ಭಾಗವಾಗಿ ಬಜೆಟ್ನಲ್ಲಿ ಸುಮಾರು 53 ಸಾವಿರ ಕೋಟಿ ರೂ ನೀಡಲಾಗಿದೆ.
ನವದೆಹಲಿ: ಜಿಯೋ ಮತ್ತು ಏರ್ಟೆಲ್ ಮಧ್ಯೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಸ್ಪರ್ಧೆ ಮುಗಿಯಿತು ಎಂದು ಭಾವಿಸುವವರಿಗೆ ಈ ಬಾರಿಯ ಬಜೆಟ್ನಲ್ಲಿ ಉತ್ತರ ಸಿಕ್ಕಿದೆ. ಭಾರತದಲ್ಲಿ ಬಹಳ ವ್ಯಾಪಕ ನೆಟ್ವರ್ಕ್ ಹೊಂದಿರುವ ಬಿಎಸ್ಎನ್ಎಲ್ನ 4ಜಿ ಮತ್ತು 5ಜಿ ನೆಟ್ವರ್ಕ್ ಅನ್ನು ಅಪ್ಗ್ರೇಡ್ ಮಾಡಲು ಬಜೆಟ್ನಲ್ಲಿ (Union Budget 2023) ಬರೋಬ್ಬರಿ 52,937 ಕೋಟಿ ರೂ ನೀಡಲಾಗಿದೆ. ಏಪ್ರಿಲ್ 1ರಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಬಿಎಸ್ಎನ್ಎಲ್ಗೆ ಈ ಹಣ ಲಭ್ಯವಾಗಲಿದೆ. ಇದು ಆರಂಭಿಕ ಹಂತದ ಪ್ಯಾಕೇಜ್ ಮಾತ್ರ. ಬಿಎಸ್ಎನ್ಎಲ್ಗೆ ಚೇತರಿಕೆ ನೀಡಲು 1.64 ಲಕ್ಷ ಕೋಟಿ ಪ್ಯಾಕೇಜ್ ಅನ್ನು ಐಟಿ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (IT and Telecom Minister Ashwini Vaishnav) ಕಳೆದ ವರ್ಷ ಭರವಸೆ ನೀಡಿದ್ದರು. ಅದರಂತೆ ಮೊದಲ ಭಾಗವಾಗಿ ಬಜೆಟ್ನಲ್ಲಿ ಸುಮಾರು 53 ಸಾವಿರ ಕೋಟಿ ರೂ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಡವಾಳವನ್ನು ಬಿಎಸ್ಎನ್ಎಲ್ಗೆ ಸರ್ಕಾರ ತುಂಬಿಸಲಿದೆ.
ಬಿಎಸ್ಎನ್ಎಲ್ ದೇಶಾದ್ಯಂತ ಜಾಲ ಹೊಂದಿದ್ದರೂ ಅದು 2ಜಿ ಮತ್ತು 3ಜಿ ಮಟ್ಟದಲ್ಲೇ ಇದೆ. ಇದೀಗ ಅವುಗಳನ್ನು 4ಜಿ ಮತ್ತು 5ಜಿಗೆ ಅಪ್ಗ್ರೇಡ್ ಮಾಡಲಾಗುತ್ತಿದೆ. ಜಿಯೋ ಮತ್ತು ಏರ್ಟೆಲ್ ಕಂಪನಿಗಳು ಈಗಾಗಲೇ ದೇಶಾದ್ಯಂತ 5ಜಿ ನೆಟ್ವರ್ಕ್ ಅಳವಡಿಕೆಯಲ್ಲಿ ತೊಡಗಿದರೂ ಬಿಎಸ್ಎನ್ಎಲ್ ಇನ್ನೂ 3ಜಿಯಲ್ಲಿಯೇ ಇದೆ ಎಂದು ಹಲವರು ಟೀಕಿಸಿದ್ದರು. ಬಹಳಷ್ಟು ಬಿಎಸ್ಎನ್ಎಲ್ ಬಳಕೆದಾರರು ಜಿಯೋ ಮತ್ತು ಏರ್ಟೆಲ್ಗೆ ಬದಲಾಯಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಜನರ ವಿಶ್ವಾಸಕ್ಕೆ ಗುರುತಾಗಿದ್ದ ಬಿಎಸ್ಎನ್ಎಲ್ ಕತೆ ಮುಗಿಯಿತು ಎಂದೇ ಬಹಳ ಮಂದಿ ಭಾವಿಸಿದ್ದರು. ಆದರೆ, ಸರ್ಕಾರ ಮತ್ತೊಮ್ಮೆ ಸರ್ಕಾರಿ ದೂರವಾಣಿ ಕಂಪನಿಗೆ ಚೇತರಿಕೆ ನೀಡಲು ನಿರ್ಧರಿಸಿ ಆ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ಹಲವು ಸ್ವಾಗತಿಸಿದ್ದಾರೆ.
ಸರ್ಕಾರಿ ಗ್ಯಾರಂಟಿಗಳನ್ನು (Sovereign Guarantee) ಬಳಸಿ ಬಿಎಸ್ಎನ್ಎಲ್ ಹೊಸ ಸಾಲಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. 2ಜಿ ಮತ್ತು 3ಜಿ ನೆಟ್ವರ್ಕ್ ಅನ್ನು 4ಜಿ ಮತ್ತು 5ಜಿಗೆ ಅಪ್ಗ್ರೇಡ್ ಮಾಡುವುದರ ಜೊತೆಗೆ ಹೊಸ ಟವರ್ಗಳ ನಿರ್ಮಾಣ ಕಾರ್ಯ ಈಗ ನಡೆಯಲಿದೆ. ಎಂಟಿಎನ್ಎಲ್ ಮತ್ತು ಬಿಎಸ್ಎನ್ಎಲ್ ನೆಟ್ವರ್ಕ್ನ ಲ್ಯಾಂಡ್ಲೈನ್ ಸಿಸ್ಟಂಗಳಲ್ಲಿ ಪ್ರಮುಖ ಪರಿಷ್ಕರಣೆಗಳನ್ನು ಮಾಡಲಾಗುತ್ತದೆ ಎಂಬ ವಿಚಾರವನ್ನು ಕೇಂದ್ರ ಸಚಿವರು ತಿಳಿಸಿದ್ದಾರೆ.
ಬಜೆಟ್ನಲ್ಲಿ ಟೆಲಿಕಾಂಗೆ ಪುಷ್ಟಿ
ಇದೇ ವೇಳೆ ಈ ಬಾರಿಯ ಬಜೆಟ್ನಲ್ಲಿ ಟೆಲಿಕಾಂ ವಲಯಕ್ಕೆ ಒಂದಷ್ಟು ಹಣ ನಿಯೋಜನೆ ಮಾಡಲಾಗಿದೆ. ಪೋಸ್ಟಲ್ ಮತ್ತು ಟೆಲಿಕಾಂ ಯೋಜನೆಗಳಿಗೆ 1.23 ಲಕ್ಷ ಕೋಟಿ ರು ಕೊಡಲಾಗಿದೆ. ಡಿಫೆನ್ಸ್ ಸರ್ವಿಸಸ್ಗೆ ಆಪ್ಟಿಕಲ್ ಫೈಬರ್ ಕೇಬಲ್ ಆಧಾರಿತ ನೆಟ್ವರ್ಕ್ ಅಭಿವೃದ್ಧಿಗೆ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಟೆಲಿಕಾಂ ಯೋಜನೆಗಳಿಗೆ ಹತ್ತಿರಹತ್ತಿರ 3 ಸಾವಿರ ಕೋಟಿ ರೂ ಹಣವನ್ನು ಎತ್ತಿಹಿಡಲಾಗಿದೆ.
ಇನ್ನು, ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 5ಜಿ ಸರ್ವಿಸ್ ಬಳಸಿ ಅಪ್ಲಿಕೇಶನ್ ಡೆಲವಪ್ ಮಾಡಲು 100 ಲ್ಯಾಬ್ಗಳ ಸ್ಥಾಪನೆ ಮಾಡುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
Published On - 8:46 am, Thu, 2 February 23