Budget 2024: ಲಾರ್ಜ್ ಲ್ಯಾಂಗ್ವೇಜ್ ಮಾಡಲ್, ಜಿಪಿಯು ಕಂಪ್ಯೂಟಿಂಗ್ ಅಭಿವೃದ್ಧಿಯಾಗಲಿ; ಬಜೆಟ್​ನಿಂದ ಎಐ ವಲಯದವರ ನಿರೀಕ್ಷೆ

Artificial Intelligence Sector Expectations: ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ವಿವಿಧ ಕ್ಷೇತ್ರಗಳಿಂದ ನಿರೀಕ್ಷೆಗಳ ಮಹಾಪೂರವೇ ಇದೆ. ಭಾರತದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ನಿರೀಕ್ಷೆಗಳೂ ಇದ್ದು ಸ್ಥಳೀಯ ಭಾಷೆಗಳಲ್ಲಿ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅಭಿವೃದ್ಧಿ ಆಗಬೇಕೆನ್ನುವ ಕೂಗಿದೆ. ಗ್ರಾಫಿಕ್ಸ್ ಕಾರ್ಡ್ ಅಥವಾ ಜಿಪಿಯು ಕಂಪ್ಯೂಟಿಂಗ್ ಅಭಿವೃದ್ಧಿಪಡಿಸಿದರೆ ಮೆಷಿನ್ ಲರ್ನಿಂಗ್ ಮತ್ತಿತರ ಕಾರ್ಯಕ್ಕೆ ಅನುಕೂಲವಾಗುತ್ತದೆ.

Budget 2024: ಲಾರ್ಜ್ ಲ್ಯಾಂಗ್ವೇಜ್ ಮಾಡಲ್, ಜಿಪಿಯು ಕಂಪ್ಯೂಟಿಂಗ್ ಅಭಿವೃದ್ಧಿಯಾಗಲಿ; ಬಜೆಟ್​ನಿಂದ ಎಐ ವಲಯದವರ ನಿರೀಕ್ಷೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 25, 2024 | 5:45 PM

2024-25ರ ಹಣಕಾಸು ವರ್ಷದ ಸಾಲಿನ ಮಧ್ಯಂತರ ಬಜೆಟ್ (Interim Budget) ಫೆಬ್ರುವರಿ 1ರಂದು ಮಂಡನೆ ಆಗಲಿದೆ. ಇದು ಪೂರ್ಣ ಬಜೆಟ್ ಅಲ್ಲವಾದರೂ ಸರ್ಕಾರದ ನೀತಿಗಳ ಸೂಚಕವೆನಿಸುವ ಅಂಶಗಳನ್ನ ಒಳಗೊಂಡಿರಬಹುದು. ಹೀಗಾಗಿ ಎಲ್ಲಾ ವಲಯದವರೂ ಕೂಡ ಬಜೆಟ್ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದಾರೆ. ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲಿ ಮುಂಬರುವ ದಶಕಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ (AI Technology) ಪ್ರಭಾವಿತಗೊಂಡಿರುತ್ತವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಭಾರತದಲ್ಲಿ ಓಪನ್​ಎಐಯಂತಹ (OpenAI) ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆಗಳು ಇಲ್ಲವಾದರೂ ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಬಜೆಟ್​ನಲ್ಲಿ ಒಂದಷ್ಟು ಪೂರಕ ನೀತಿ ಅಥವಾ ಘೋಷಣೆಗಳಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಕನ್ನಡ ಮತ್ತಿತರ ಸ್ಥಳೀಯ ಭಾಷೆಗಳಲ್ಲಿ ಎಐ ಅಭಿವೃದ್ದಿಪಡಿಸಲು ಫಂಡ್ ಬೇಕು

ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ಆಡಳಿತಕ್ಕೆ ಮತ್ತು ಜನರ ಸಂವಹನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಐ ಲ್ಯಾಂಗ್ವೇಜ್ ಮಾಡಲ್​ಗಳನ್ನು ಅಭಿವೃದ್ದಿಪಡಿಸಬೇಕಾಗುತ್ತದೆ. ಸದ್ಯ ಇಂಗ್ಲೀಷ್​ನಲ್ಲಿ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಅಭಿವೃದ್ದಿಯಾಗುತ್ತಿದೆ. ಇದು ಹಿಂದಿ, ಕನ್ನಡ, ತಮಿಳು ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲೂ ಆಗಬೇಕು.

ಇದನ್ನೂ ಓದಿ: Agricultural Credit: ಕೃಷಿ ಸಾಲದ ಗುರಿಯನ್ನು 22ರಿಂದ 25 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ

ಇದರಿಂದ ಕೃಷಿ, ಶಿಕ್ಷಣ ಮೊದಲಾದ ಕ್ಷೇತ್ರಕ್ಕೆ ಉಪಯೋಗವಾಗುವುದಷ್ಟೇ ಅಲ್ಲ ಸ್ಮಾರ್ಟ್ ಸಿಟಿ, ಆಡಳಿತ ವ್ಯವಹಾರ ಇತ್ಯಾದಿಗೂ ಅನುಕೂಲವಾಗುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ಗೆ ಮೂಲಸೌಕರ್ಯ ವ್ಯವಸ್ಥೆ ನಿರ್ಮಾಣ

ಯಾಂತ್ರಿಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬೆಳೆಯಬೇಕಾದರೆ ಅದಕ್ಕೆ ಪೂರಕವಾದ ಸೌಕರ್ಯ ವ್ಯವಸ್ಥೆ ಅಥವಾ ಮೂಲಸೌಕರ್ಯ ವ್ಯವಸ್ಥೆ (AI Infrastructure) ಪ್ರಬಲವಾಗಿರಬೇಕು. ಈ ನಿಟ್ಟಿನಲ್ಲಿ ಹಲವು ಅಂಶಗಳು ಅವಶ್ಯಕ. ಉದಾಹರಣೆಗೆ ಜಿಪಿಯು, ಅಥವಾ ಗ್ರಾಫಿಕ್ಸ್ ಪ್ರೋಸಸಿಂಗ್ ಯೂನಿಟ್ (ಗ್ರಾಫಿಕ್ಸ್ ಕಾರ್ಡ್). ಇದು ವಿಶೇಷ ಕಂಪ್ಯೂಟರ್ ಚಿಪ್ ಆಗಿದ್ದು, ಮೆಷೀನ್ ಲರ್ನಿಂಗ್, ವಿಡಿಯೋ ಎಡಿಟಿಂಗ್ ಇತ್ಯಾದಿ ಸಂಕೀರ್ಣ ಕಾರ್ಯಗಳಲ್ಲಿ ಬಳಕೆ ಆಗುತ್ತದೆ.

ಇದನ್ನೂ ಓದಿ: ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ ನಿರ್ಮಲಾ ಸೀತಾರಾಮನ್, ಏನಿದು ಮಧ್ಯಂತರ ಬಜೆಟ್?

ಜಿಪಿಯು ಯಾಕೆ ಮುಖ್ಯ ಎಂದರೆ, ಸಿಪಿಯು ಮೇಲಿನ ಹೊರೆಯನ್ನು ಇದು ತಗ್ಗಿಸುತ್ತದೆ. ಭಾರೀ ಮೆಮೊರಿ ಬೇಡುವ ಕ್ರಿಯೆಗಳನ್ನು ಸರಾಗವಾಗಿ ಮಾಡಲು ಅನುಕೂಲ ಮಾಡಿಕೊಡುತ್ತದೆ. ಅದರಲ್ಲೂ ಸಾಕಷ್ಟು ಡಾಟಾ ಇರುವ ವೈಜ್ಞಾನಿಕ ಮತ್ತು ತಂತ್ರಜ್ಞಾನ ಕಾರ್ಯಗಳನ್ನು ಇದು ಸಲೀಸಾಗಿ ಮಾಡಲು ನೆರವಾಗುತ್ತದೆ. ಹೀಗಾಗಿ, ಜಿಪಿಯು ಕಂಪ್ಯೂಟಿಂಗ್​ಗೆ ಅನುಕೂಲವಾಗುವ ಘೋಷಣೆಗಳನ್ನು ಬಜೆಟ್​ನಲ್ಲಿ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Thu, 25 January 24