Budget 2022: ಬಜೆಟ್ ಭಾಷಣದಲ್ಲಿ ಮಹಾಭಾರತದ ಶ್ಲೋಕ ಪ್ರಸ್ತಾಪಿಸಿ, ತೆರಿಗೆ ಸಂಗ್ರಹದ ಪ್ರಾಚೀನ ದೃಷ್ಟಿಕೋನ ವಿವರಿಸಿದ ನಿರ್ಮಲಾ ಸೀತಾರಾಮನ್

ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಈ ಶ್ಲೋಕದ ಭಾವಾರ್ಥವನ್ನು ಇಂಗ್ಲಿಷಿನಲ್ಲಿ ವಿವರಿಸುವಾಗ ಯೋಗಕ್ಷೇಮ ಪದಕ್ಕೆ ಹೆಚ್ಚು ಒತ್ತು ನೀಡಿದ್ದರು.

Budget 2022: ಬಜೆಟ್ ಭಾಷಣದಲ್ಲಿ ಮಹಾಭಾರತದ ಶ್ಲೋಕ ಪ್ರಸ್ತಾಪಿಸಿ, ತೆರಿಗೆ ಸಂಗ್ರಹದ ಪ್ರಾಚೀನ ದೃಷ್ಟಿಕೋನ ವಿವರಿಸಿದ ನಿರ್ಮಲಾ ಸೀತಾರಾಮನ್
ಶರಶಯ್ಯೆಯಲ್ಲಿ ಧರ್ಮರಾಯನಿಗೆ ಭೀಷ್ಮರ ಧರ್ಮೋಪದೇಶ (ಎಡಚಿತ್ರ). ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ (ಬಲಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 01, 2022 | 4:29 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸುದೀರ್ಘ ಬಜೆಟ್ ಭಾಷಣಗಳಿಗೆ (Budget 2022) ಹೆಸರುವಾಸಿಯಾದವರು. ಇಂದು (ಫೆ.1) ಅವರು ಮಂಡಿಸಿದ 92 ನಿಮಿಷಗಳ ಭಾಷಣವು ಅವರ ಈವರೆಗಿನ ಭಾಷಣಗಳಿಗೆ ಹೋಲಿಸಿದರೆ ಚುಟುಕಾದುದು. ಬಜೆಟ್ ಭಾಷಣದಲ್ಲಿ ಪ್ರಾಸಂಗಿಕವಾಗಿ ಪವಿತ್ರ ಗ್ರಂಥಗಳು, ಮಹಾಕಾವ್ಯಗಳು ಮತ್ತು ಅನುಭಾವಿಗಳ ನುಡಿಗಳನ್ನು ಪ್ರಸ್ತಾಪಿಸುವುದು ವಾಡಿಕೆ. ಇಂದಿನ ಅವರ ಭಾಷಣದಲ್ಲಿ ಗಮನ ಸೆಳೆದದ್ದು ಮಹಾಭಾರತದ (Mahabharata) ಶ್ಲೋಕವೊಂದರ ಉಲ್ಲೇಖ. ಆದಾಯ ತೆರಿಗೆ ವಿವರ ನೀಡುವ ಸಂದರ್ಭದಲ್ಲಿ ವಿತ್ತ ಸಚಿವರು ಈ ಶ್ಲೋಕ ಉಲ್ಲೇಖಿಸಿದರಾದರೂ, ಆರಿಸಿಕೊಂಡ ಶ್ಲೋಕ ಮಾತ್ರ ಧರ್ಮಶಾಸ್ತ್ರ, ತತ್ವಜ್ಞಾನ ಮತ್ತು ರಾಜಧರ್ಮಗಳ ದೃಷ್ಟಿಯಿಂದ ಮಹತ್ತರವಾದುದು. ನಿರ್ಮಲಾ ಸೀತಾರಾಮನ್ ಅವರು ಇಂದು ಉಲ್ಲೇಖಿಸಿದ್ದು, ಮಹಾಭಾರತ ಶಾಂತಿ ಪರ್ವದ (ಭೀಷ್ಮ ಪರ್ವ) 71ನೇ ಅಧ್ಯಾಯದ 11ನೇ ಶ್ಲೋಕ.

ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಈ ಶ್ಲೋಕದ ಭಾವಾರ್ಥವನ್ನು ಇಂಗ್ಲಿಷಿನಲ್ಲಿ ವಿವರಿಸುವಾಗ ಯೋಗಕ್ಷೇಮ ಪದಕ್ಕೆ ಹೆಚ್ಚು ಒತ್ತು ನೀಡಿದ್ದರು. ಸಂಸ್ಕೃತದ ‘ಯೋಗ’ ಪದಕ್ಕೆ ಬರುವುದು ಎಂತಲೂ, ‘ಕ್ಷೇಮ’ ಎಂದರೆ ಸುಖಕರವಾಗಿ ನೆಲೆಸುವುದು ಎಂತಲೂ ವಿವರಣೆ ಇದೆ. ದೇಶದ ಕೋಟ್ಯಂತರ ಮಧ್ಯಮ ವರ್ಗದವರು ಕಾತರದಿಂದ ನಿರೀಕ್ಷಿಸುತ್ತಿದ್ದ ತೆರಿಗೆ ವಿವರಗಳನ್ನು ಹೇಳುವ ಮೊದಲು ನಿರ್ಮಲಾ ಈ ಶ್ಲೋಕ ಉಲ್ಲೇಖಿಸಿ ಆಶಾಭಾವನೆ ಬಿತ್ತಿದ್ದರು. ಆದರೆ ತೆರಿಗೆ ವಿಚಾರದಲ್ಲಿ ಜನರ ನಿರೀಕ್ಷೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎನ್ನುವುದು ಬೇರೆ ಮಾತು.

ಈ ಶ್ಲೋಕವನ್ನು ಉಲ್ಲೇಖಿಸಲು ನಿರ್ಮಲಾ ಸೀತಾರಾಮನ್ ನೀಡಿದ ಸಮರ್ಥನೆ ಹೀಗಿತ್ತು… ‘ನಮ್ಮ ಪ್ರಾಚೀನ ಗ್ರಂಥಗಳಿಂದ ಜ್ಞಾನ ಪಡೆದುಕೊಳ್ಳುವುದರಿಂದ ನಾವು ನಿರಂತರವಾಗಿ ಪ್ರಗತಿಯತ್ತ ಮುನ್ನಡೆಯಲು ಮಾರ್ಗದರ್ಶನ ಸಿಗುತ್ತದೆ. ಈ ಬಜೆಟ್​ನಲ್ಲಿ ನಾವು ಸ್ಥಿರ ಮತ್ತು ನಿರೀಕ್ಷಿತ ತೆರಿಗೆ ವಿಧಾನವನ್ನೇ ಮುಂದುವರಿಸಲು ನಿರ್ಧರಿಸಿದ್ದೇವೆ. ತೆರಿಗೆ ವಿಧಾನದಲ್ಲಿ ಸುಧಾರಣೆಗಳನ್ನು ಜಾರಿ ಮಾಡುವ ಮೂಲಕ ವಿಶ್ವಾಸಾರ್ಹತೆ ಹೆಚ್ಚಿಸುವ ನಿಲುವಿಗೆ ಬದ್ಧರಾಗಿದ್ದೇವೆ. ಇದು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುತ್ತದೆ, ಸ್ವಯಂ ಪ್ರೇರಣೆಯಿಂದ ತೆರಿಗೆದಾರರು ತಮ್ಮ ಜವಾಬ್ದಾರಿ ನಿರ್ವಹಿಸಲು ಮತ್ತು ವಿವಾದಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ’.

ನಿರ್ಮಲಾ ಬಾಯಲ್ಲಿ ಭೀಷ್ಮಾಚಾರ್ಯರ ಮಾತು ಮಹಾಭಾರತ ಯುದ್ಧದಲ್ಲಿ ಕೌರವರ ಪರವಾಗಿ ಬಿಲ್ಲು ಹಿಡಿದ ಭೀಷ್ಮರು ಶಿಖಂಡಿ ಎದುರು ಬಂದನೆಂದು ಶಸ್ತ್ರತ್ಯಾಗ ಮಾಡಿ, ಬಾಣಗಳ ಪೆಟ್ಟು ತಿಂದು ನೆಲಕ್ಕೆ ಉರುಳಿದರು. ಅವರ ಪ್ರಿಯಶಿಷ್ಯ ಅರ್ಜುನನೇ ನಿರ್ಮಿಸಿಕೊಟ್ಟ ಶರಶಯ್ಯೆಯಲ್ಲಿ (ಬಾಣಗಳ ಹಾಸಿಗೆ) ಮಲಗಿ ಜೀವತ್ಯಾಗಕ್ಕೆ ಉತ್ತರಾಯಣಕ್ಕೆ (ಸಂಕ್ರಾಂತಿ) ಕಾಯುತ್ತಿದ್ದಾಗ, ಕೃಷ್ಣನ ಆದೇಶದಂತೆ ಪಾಂಡವರಿಗೆ ಧರ್ಮೋಪದೇಶ ಮಾಡಿದರು. ಧರ್ಮರಾಜ ಕೇಳಿದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ, ಅವನ ಮನದಲ್ಲಿ ಇರಬಹುದಾದ ಆದರೆ ಕೇಳದ ಸಂದೇಹಗಳಿಗೆ ಪರಿಹಾರ ರೂಪದಲ್ಲಿ ಭೀಷ್ಮಾಚಾರ್ಯರು ಮಾಡಿದ ಉಪದೇಶವನ್ನು ವೇದವ್ಯಾಸರು ಶಾಂತಿಪರ್ವದಲ್ಲಿ ವಿಸ್ತಾವಾಗಿ ಕಟ್ಟಿಕೊಟ್ಟಿದ್ದಾರೆ. ಇಂದು ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ ಶ್ಲೋಕವೂ ಇದೇ ಸಂದರ್ಭದ್ದು.

ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ ಶ್ಲೋಕ ಇದು…

ದಾಪಯಿತ್ವಾ ಕರಂ ಧರ್ಮ್ಯಂ ರಾಷ್ಟ್ರಂ ನೀತ್ಯಾ ಯಥಾವಿಧಿ ತಥೈತಂ ಕಲ್ಪಯೇದ್ರಾಜಾ ಯೋಗಕ್ಷೇಮಮತನ್ದ್ರಿತಃ |

ಭಾರತ ದರ್ಶನ ಪ್ರಕಾಶನದ ‘ಶ್ರೀಮನ್ಮಹಾಭಾರತ – ವ್ಯಾಸಭಾರತದ ಕನ್ನಡ ಸರಳಾನುವಾದ’ ಪುಸ್ತಕ ಮಾಲಿಕೆಯ 22ನೇ ಸಂಪುಟದ 650ನೇ ಪುಟದಲ್ಲಿ ಈ ಶ್ಲೋಕ ಮತ್ತು ಅದರ ಅರ್ಥವನ್ನು ನೀಡಲಾಗಿದೆ. ಈ ಪುಸ್ತಕದ ಪ್ರಕಾರ ಈ ಮೂಲ ಸಂಸ್ಕೃತ ಶ್ಲೋಕದ ಕನ್ನಡ ವಿವರಣೆ ಹೀಗಿದೆ…

‘ರಾಜನು ಧರ್ಮಾನುಕೂಲವಾಗಿ ಪ್ರಜೆಗಳಿಂದ ಕರವನ್ನು ತೆಗೆದುಕೊಂಡು, ನೀತಿಶಾಸ್ತ್ರಾನುಸಾರವಾಗಿ ರಾಷ್ಟ್ರವನ್ನು ಪರಿಪಾಲಿಸುತ್ತಾ ಆಲಸಿಕೆಯಿಲ್ಲದವನಾಗಿ ಜಾಗರೂಕನಾಗಿದ್ದುಕೊಂಡು ಪ್ರಜೆಗಳ ಯೋಗಕ್ಷೇಮಗಳ ವ್ಯವಸ್ಥೆಯನ್ನು ಏರ್ಪಡಿಸಬೇಕು’.

ಶಾಂತಿಪರ್ವದ ಈ ಇಡೀ ಅಧ್ಯಾಯವು ತೆರಿಗೆಯ ಬಗ್ಗೆ ಪ್ರಾಚೀನರು ಹೊಂದಿದ್ದ ದೃಷ್ಟಿಕೋನವನ್ನು ವಿವರಿಸುತ್ತದೆ. ಇಂದು ಬಹುತೇಕರು ಉದಾಹರಿಸುವ ‘ಹಾಲನ್ನು ಅಪೇಕ್ಷಿಸುವ ಮನುಷ್ಯನು ಹಸುವು ಕೊಡುವಷ್ಟು ಹಾಲನ್ನು ಕೆಚ್ಚಲಿನಿಂದ ಕರೆದುಕೊಂಡು ತೃಪ್ತನಾಗಬೇಕೇ ಹೊರತು ಕೆಚ್ಚಲನ್ನೇ ಕತ್ತರಿಸಿಬಿಡಬಾರದು’ (ಶಾಂತಿಪರ್ವ, 71, 16) ಎನ್ನುವ ಸಾಲುಗಳು ಸಹ ಇದೇ ಅಧ್ಯಾಯದ್ದು. ಸರ್ಕಾರಗಳು ಜನರಿಗೆ ತೆರಿಗೆ ಹೇಗೆ ಪಡೆದುಕೊಳ್ಳಬೇಕು, ಎಷ್ಟು ತೆರಿಗೆ ವಿಧಿಸಬೇಕು ಎನ್ನುವ ವಿವರಗಳನ್ನೂ ಭೀಷ್ಮರು ಯುಧಿಷ್ಠಿರನಿಗೆ ಈ ಅಧ್ಯಾಯದಲ್ಲಿ ಉಪದೇಶಿಸಿದ್ದಾರೆ.

ಭೀಷ್ಮರ ಮಾತುಗಳನ್ನು ನೆನಪಿಸಿಕೊಂಡಿರುವ ನಿರ್ಮಲಾ ಸೀತಾರಾಮನ್, ಈ ಬಜೆಟ್ ಭಾಷಣದ ಮೂಲಕ ತಮ್ಮ ಸರ್ಕಾರದ ಆದ್ಯತೆಯ ಇಣುಕುನೋಟವನ್ನೂ ನೀಡಿದ್ದಾರೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್​ ಆಯವ್ಯಯ ಲೆಕ್ಕಕ್ಕೆ ಫುಲ್​ ಮಾರ್ಕ್ಸ್ ಕೊಟ್ಟ ಪ್ರಧಾನಿ ಮೋದಿ; ಹೊಸ ಭರವಸೆ ಮೂಡಿಸಿದ ಬಜೆಟ್​ ಎಂದು ವಿಶ್ಲೇಷಣೆ ಇದನ್ನೂ ಓದಿ: Budget 2022: ಕೇಂದ್ರ ಸರ್ಕಾರದ ಬಜೆಟ್​ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

Published On - 4:23 pm, Tue, 1 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ