Budget 2022: ಪೂರ್ವ ಕೊವಿಡ್ ಮಟ್ಟಕ್ಕಿಂತ ಹೆಚ್ಚಿದ ಕೆಲಸದ ಬೇಡಿಕೆ; ಆದರೂ ಹೆಚ್ಚಿಸಿಲ್ಲ ಮನರೇಗಾ ಯೋಜನೆಗೆ ಅನುದಾನ
2022-23 ರ ಆರ್ಥಿಕ ವರ್ಷಕ್ಕೆ ಮನರೇಗಾ ಯೋಜನೆಗಾಗಿ 73,000 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆಯನ್ನು ಇಟ್ಟುಕೊಂಡಿದ್ದಾರೆ, ಇದು 2021-22 ರ ಪರಿಷ್ಕೃತ ಅಂದಾಜಿನ 98,000 ಕೋಟಿಗಿಂತ ಕಡಿಮೆಯಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (MGNREGS) ಕೆಲಸದ ಬೇಡಿಕೆಯು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಇನ್ನೂ ಹೆಚ್ಚಿದೆ ಎಂದು ಆರ್ಥಿಕ ಸಮೀಕ್ಷೆ 2021-22 ( Economic Survey )ರಲ್ಲಿ ಹೇಳಿದ್ದರೂ ಸರ್ಕಾರವು ಯೋಜನೆಗೆ ಬಜೆಟ್ ಅನುದಾನ ಹೆಚ್ಚಿಸಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಗಳವಾರ 2022-23 ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಮಂಡಿಸಿದರು. 2022-23 ರ ಆರ್ಥಿಕ ವರ್ಷಕ್ಕೆ ಮನರೇಗಾ ಯೋಜನೆಗಾಗಿ 73,000 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆಯನ್ನು ಇಟ್ಟುಕೊಂಡಿದ್ದಾರೆ, ಇದು 2021-22 ರ ಪರಿಷ್ಕೃತ ಅಂದಾಜಿನ 98,000 ಕೋಟಿಗಿಂತ ಕಡಿಮೆಯಾಗಿದೆ (ಅನುದಾನಗಳಿಗೆ ಪೂರಕ ಬೇಡಿಕೆಗಳಲ್ಲಿ ರೂ 25,000 ನಿಗದಿಪಡಿಸುವ ಮೂಲಕ) ಮತ್ತು 2020-21 ರಲ್ಲಿ ರೂ 1,11,170 ಕೋಟಿಗಳ ವಾಸ್ತವಿಕ ವೆಚ್ಚವಾಗಿತ್ತು. ನಿರ್ಮಲಾ ಸೀತಾರಾಮನ್ ಅವರ 90 ನಿಮಿಷಗಳ ಬಜೆಟ್ ಭಾಷಣದಲ್ಲಿ ಎಲ್ಲಿಯೂ ನರೇಗಾ ಯೋಜನೆ ಬಗ್ಗೆ ಉಲ್ಲೇಖವಿಲ್ಲ. ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಬಡವರು ಮತ್ತು ವಲಸೆ ಕಾರ್ಮಿಕರಿಗೆ ಸುರಕ್ಷತಾ ನೆಟ್ ಆಗಿರುವ ನರೇಗಾ ಯೋಜನೆ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಏನನ್ನೂ ಉಲ್ಲೇಖಿಸದಿರುವುದು ಇದು ಸತತ ಎರಡನೇ ಬಾರಿಯಾಗಿದೆ. ಕಳೆದ ವರ್ಷವೂ ಅವರು ಜುಲೈ 5, 2019 ರಂದು ತಮ್ಮ ಮೊದಲ ಬಜೆಟ್ ಭಾಷಣದಂತೆಯೇ 110 ನಿಮಿಷಗಳ ಭಾಷಣದಲ್ಲಿ ನರೇಗಾ ಅನ್ನು ಉಲ್ಲೇಖಿಸಲಿಲ್ಲ. ಆದಾಗ್ಯೂ, ಫೆಬ್ರವರಿ 1, 2020 ರ ಬಜೆಟ್ ಭಾಷಣದಲ್ಲಿ ಅವರು ನರೇಗಾ ಯೋಜನೆಯನ್ನು ಒಮ್ಮೆ ಪ್ರಸ್ತಾಪಿಸಿದ್ದರು.
2021-22 ರ ಆರ್ಥಿಕ ಸಮೀಕ್ಷೆಯು ನರೇಗಾ ಯೋಜನೆ ಅಡಿಯಲ್ಲಿ ಕೆಲಸದ ಬೇಡಿಕೆಯು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಇನ್ನೂ ಹೆಚ್ಚಾಗಿದೆ ಎಂದು ಹೇಳಿದೆ. ಮನರೇಗಾ ಯೋಜನೆ ಅಡಿಯಲ್ಲಿ ಕೆಲಸಕ್ಕಾಗಿ ಬೇಡಿಕೆಯ ಇತ್ತೀಚಿನ ಡೇಟಾದ ವಿಶ್ಲೇಷಣೆಯು ಗ್ರಾಮೀಣ ಕಾರ್ಮಿಕ ಮಾರುಕಟ್ಟೆಯಲ್ಲಿ ಕೆಳಗಿನ ಪ್ರವೃತ್ತಿಗಳನ್ನು ಸೂಚಿಸುತ್ತದೆ: (i) 2020 ರಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಮನರೇಗಾ ಕೆಲಸವು ಉತ್ತುಂಗಕ್ಕೇರಿತು. (ii) ಎರಡನೇ ಕೊವಿಡ್ ಅಲೆ ನಂತರ ಮನರೇಗಾ ಕೆಲಸದ ಬೇಡಿಕೆಯು ಸ್ಥಿರವಾಗಿದೆ. (iii) ಒಟ್ಟಾರೆ ಮನರೇಗಾ ಉದ್ಯೋಗವು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಇನ್ನೂ ಹೆಚ್ಚಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಜೂನ್ 2020 ರಲ್ಲಿ ಮನರೇಗಾ ಕೆಲಸದ ಒಟ್ಟು ಬೇಡಿಕೆಯು ಉತ್ತುಂಗಕ್ಕೇರಿತು ಮತ್ತು ನಂತರ ಸ್ಥಿರಗೊಂಡಿದೆ. ಎರಡನೇ ಕೊವಿಡ್ ಅಲೆ ಸಮಯದಲ್ಲಿ ಮನರೇಗಾ ಉದ್ಯೋಗದ ಬೇಡಿಕೆಯು ಜೂನ್ 2021 ರಲ್ಲಿ 4.59 ಕೋಟಿ ವ್ಯಕ್ತಿಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಅದೇನೇ ಇದ್ದರೂ,, ಒಟ್ಟಾರೆ ಮಟ್ಟದಲ್ಲಿ ಬೇಡಿಕೆಯು ಇನ್ನೂ 2019 ರ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸಮೀಕ್ಷೆ ಹೇಳಿದೆ.
ಆಂಧ್ರ ಪ್ರದೇಶ ಮತ್ತು ಬಿಹಾರದಂತಹ ಕೆಲವು ರಾಜ್ಯಗಳಿಗೆ, ಕಳೆದ ಕೆಲವು ತಿಂಗಳುಗಳಲ್ಲಿ ಮನರೇಗಾ ಯೋಜನೆ ಅಡಿಯಲ್ಲಿ ಕೆಲಸದ ಬೇಡಿಕೆಯು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.
ಹೆಚ್ಚಿನ ಮನರೇಗಾ ಬೇಡಿಕೆಯು ವಲಸೆ ಕಾರ್ಮಿಕರ ಚಲನೆಗೆ ನೇರವಾಗಿ ಸಂಬಂಧಿಸಿರಬಹುದು ಅಂದರೆ ಮೂಲ ರಾಜ್ಯಗಳು ಹೆಚ್ಚು ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಬಹುದು. ಅದೇನೇ ಇದ್ದರೂ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಬಿಹಾರದಂತಹ ಅನೇಕ ವಲಸೆ ಮೂಲ ರಾಜ್ಯಗಳಿಗೆ, 2021 ರ ಹೆಚ್ಚಿನ ತಿಂಗಳುಗಳಲ್ಲಿ ಮನರೇಗಾ ಉದ್ಯೋಗವು 2020 ರಲ್ಲಿನ ಅನುಗುಣವಾದ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ರಾಜ್ಯ ಮಟ್ಟದ ವಿಶ್ಲೇಷಣೆ ತೋರಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.
“ವ್ಯತಿರಿಕ್ತವಾಗಿ ಮನರೇಗಾ ಉದ್ಯೋಗದ ಬೇಡಿಕೆಯು ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಮುಂತಾದ ವಲಸೆ ಸ್ವೀಕರಿಸುವ ರಾಜ್ಯಗಳಿಗೆ 2021 ರಲ್ಲಿ 2020 ಕ್ಕಿಂತ ಹೆಚ್ಚಿನ ತಿಂಗಳುಗಳವರೆಗೆ ಹೆಚ್ಚಾಗಿದೆ. ಈ ವರ್ಗೀಕರಣಕ್ಕೆ ಸರಿಯಾಗಿ ಹೊಂದಿಕೆಯಾಗದ ಇತರ ರಾಜ್ಯಗಳು ಇನ್ನೂ ಇವೆ” ಎಂದು ಅದು ಹೇಳಿದೆ.
“ಆದ್ದರಿಂದ, ಕಳೆದ ಎರಡು ವರ್ಷಗಳಲ್ಲಿ ಮನರೇಗಾ ಉದ್ಯೋಗ ಮತ್ತು ವಲಸೆ ಕಾರ್ಮಿಕರ ಚಲನೆಯ ನಡುವಿನ ಸಂಬಂಧವನ್ನು ನಿರ್ಣಾಯಕವಾಗಿ ನಿರ್ಧರಿಸಲಾಗುವುದಿಲ್ಲ ಮತ್ತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ” ಎಂದು ಅದು ಹೇಳಿದೆ. ಎನ್ಆರ್ಇಜಿಎಸ್ ಪೋರ್ಟಲ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ 31 ರವರೆಗೆ 6.73 ಕೋಟಿ ಕುಟುಂಬಗಳು (9.72 ಕೋಟಿ ವ್ಯಕ್ತಿಗಳು) ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Budget 2022: ಪಿಎಂ ಕಿಸಾನ್ ಸಮ್ಮಾನ್ ಸ್ಕೀಮ್ಗೆ ಬಜೆಟ್ನಲ್ಲಿ 68 ಸಾವಿರ ಕೋಟಿ ರೂಪಾಯಿ ಮೀಸಲು