Economic Survey 2022: ಆಶಾದಾಯಕ ಬಜೆಟ್​ನ ಮುನ್ಸೂಚನೆ ನೀಡಿದ ಆರ್ಥಿಕ ಸಮೀಕ್ಷೆ, ಶೇ 9 ದಾಟಿದ ಜಿಡಿಪಿ ಅಂದಾಜು

Indian Economy: ಕೊವಿಡ್ ಸೋಂಕಿನಿಂದ ಕಳಾಹೀನವಾಗಿದ್ದ ಭಾರತದ ಆರ್ಥಿಕತೆಯು 2022-2023ರ ಆರ್ಥಿಕ ವರ್ಷದಲ್ಲಿ ಆಶಾದಾಯಕ ಬೆಳವಣಿಗೆ ದಾಖಲಿಸಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

Economic Survey 2022: ಆಶಾದಾಯಕ ಬಜೆಟ್​ನ ಮುನ್ಸೂಚನೆ ನೀಡಿದ ಆರ್ಥಿಕ ಸಮೀಕ್ಷೆ, ಶೇ 9 ದಾಟಿದ ಜಿಡಿಪಿ ಅಂದಾಜು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದರು.
Follow us
TV9 Web
| Updated By: Digi Tech Desk

Updated on:Jan 31, 2022 | 5:54 PM

ದೆಹಲಿ: ಸಂಸತ್ತಿನಲ್ಲಿ ಸೋಮವಾರ ಆರಂಭವಾದ ಬಜೆಟ್ ಅಧಿವೇಶನದಲ್ಲಿ (Budget Session 2022) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಆರ್ಥಿಕ ಸಮೀಕ್ಷೆಯ ವರದಿಯನ್ನು (Economic Survey) ಮಂಡಿಸಿದರು. ಕೊವಿಡ್ ಸೋಂಕಿನಿಂದ ಕಳಾಹೀನವಾಗಿದ್ದ ಭಾರತದ ಆರ್ಥಿಕತೆಯು (Indian Economy) 2022-2023ರ ಆರ್ಥಿಕ ವರ್ಷದಲ್ಲಿ ಆಶಾದಾಯಕ ಬೆಳವಣಿಗೆ ದಾಖಲಿಸಬಹುದು ಎಂಬ ಇಣುಕುನೋಟವನ್ನು ಆರ್ಥಿಕ ಸಮೀಕ್ಷೆಯ ವರದಿಯು ಉಲ್ಲೇಖಿಸಿದೆ. 2021-2022ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ (GDP Growth) ಶೇ 9.2 ದಾಖಲಿಸಿದೆ. 2022-2023ರಲ್ಲಿ ಜಿಡಿಪಿ ಪ್ರಗತಿಯು ಶೇ 8ರಿಂದ 8.5 ಇರಬಹುದು ಎಂದು ಅಂದಾಜಿಸಲಾಗಿದೆ. 2022ರ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ 3.9, ಕೈಗಾರಿಕಾ ಕ್ಷೇತ್ರದಲ್ಲಿ ಶೇ 11.8, ಸೇವಾ ವಲಯದಲ್ಲಿ ಶೇ 8.2ರ ಪ್ರಗತಿ ಸಾಧ್ಯ ಎಂದು ಅಂದಾಜಿಸಲಾಗಿದೆ.

2021-22ರಲ್ಲಿ ವಿತ್ತೀಯ ಕೊರತೆಯು ₹ 6.90 ಲಕ್ಷ ಕೋಟಿಗೆ ಕುಸಿದಿರುವ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ವಿತ್ತೀಯ ಕೊರತೆಯು 2020-21ರಲ್ಲಿ ₹ 10.76 ಲಕ್ಷ ಕೋಟಿ ಇತ್ತು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಎಸ್​ಟಿ ಸಂಗ್ರಹವು ಸರಾಸರಿ 1.30 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮೊದಲ ಎರಡು ತ್ರೈಮಾಸಿಕದಲ್ಲಿ ಈ ಮೊತ್ತದ ಸರಾಸರಿ ₹ 1.10 ಲಕ್ಷ ಕೋಟಿ ರೂಪಾಯಿ ಇತ್ತು. ಕೇಂದ್ರ ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆ ಮಂಡಿಸಿದ ಬಳಕ ಷೇರುಪೇಟೆಯು ಚೇತರಿಕೆ ದಾಖಲಿಸಿದ್ದು, ಮುಂಬೈ ಷೇರು ಸಂವೇದಿ ಸೂಚ್ಯಂಕ ಬಿಎಸ್​ಇ 1,057 ಅಂಶಗಳಷ್ಟು ಏರಿಕೆ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್ 58,257 ಮತ್ತು ನಿಫ್ಟಿ 17,410 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

ಪೇಟೆಂಟ್ ಆವಿಷ್ಕಾರದಲ್ಲಿ ಮುಂದು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ (Global Innovation Index) ಭಾರತವು 35ನೇ ಸ್ಥಾನದಲ್ಲಿದೆ. 2015-16ರಲ್ಲಿ ಭಾರತವು 46ನೇ ಸ್ಥಾನದಲ್ಲಿತ್ತು. 2010-11ರಲ್ಲಿ ಭಾರತೀಯರು 7509 ಪೇಟೆಂಟ್ ಪಡೆದುಕೊಂಡಿದ್ದರು. 2020-21ರಲ್ಲಿ 28,391 ಪೇಟೆಂಟ್​ಗಳು ನೋಂದಣಿಯಾಗಿವೆ. ಬಹುರಾಷ್ಟ್ರೀಯ ಕಂಪನಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಪೇಟೆಂಟ್ ಪಡೆದುಕೊಂಡಿದ್ದಾರೆ. 2020-21ರಲ್ಲಿ ಸಲ್ಲಿಕೆಯಾಗಿರುವ ಒಟ್ಟು ಪೇಟೆಂಟ್ ಅರ್ಜಿಗಳ ಪೈಕಿ ಶೇ 40ರಷ್ಟು ಅರ್ಜಿಗಳನ್ನು ಭಾರತೀಯರೇ ಸಲ್ಲಿಸಿದ್ದಾರೆ. 2010-11ರಲ್ಲಿ ಈ ಪ್ರಮಾಣ ಶೇ 10 ಮಾತ್ರ ಇತ್ತು.

ಬ್ಯಾಂಕ್​ಗಳು ದಿವಾಳಿಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಠೇವಣಿ ವಿಮೆ ಯೋಜನೆಯಡಿ 1.2 ಲಕ್ಷ ಠೇವಣಿದಾರರಿಗೆ ₹ 1500 ಕೋಟಿ ಮರಳಿಸಲಾಗಿದೆ. ಭಾರತದ ರಫ್ತು ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಐಪಿಒಗಳ ಮೂಲಕ ಬಂಡವಾಣ ಸಂಗ್ರಹವು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಹಣದುಬ್ಬರದ ಅತಂಕ ಸಗಟು ಬೆಲೆ ಸೂಚ್ಯಂಕ ಆಧರಿತ (wholesale price-based inflation) ಹಣದುಬ್ಬರವು ಒಂದೇ ಸಮ ಏರುತ್ತಲೇ ಇದೆ. ಆದರೆ ಚಿಲ್ಲರೆ ವಹಿವಾಟು ಆಧರಿಸಿದ ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು (Consumer Price Index – CPI) ನಿಗದಿತ ಪರಿಮಿತಿಯೊಳಗೆ ಇದೆ ಎಂದು ಸಮೀಕ್ಷೆಯನ್ನು ಮಂಡಿಸುವಾಗ ವಿತ್ತ ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್ 2022ರಿಂದ ಜನ ಸಾಮಾನ್ಯರ ನಿರೀಕ್ಷೆಗಳೇನು? ಇದನ್ನೂ ಓದಿ: Budget 2022: ಬಜೆಟ್ ದಿನಾಂಕ, ಸಮಯ, ಎಲ್ಲಿ ನೋಡುವುದು ಮತ್ತು ಇತರ ಮಾಹಿತಿಗಳು ಇಲ್ಲಿವೆ

Published On - 3:02 pm, Mon, 31 January 22