Budget 2022 Expert Opinion : ಸರ್ಕಾರದ ಯೋಚನೆ ಯೋಜನೆ ಚೆನ್ನಾಗಿದೆ, ಜಾರಿಯಾಗೋದು ಮುಖ್ಯ: ಬಜೆಟ್​ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ

|

Updated on: Feb 01, 2022 | 2:49 PM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10ನೇ ಬಜೆಟ್​ ಇದಾಗಿದ್ದು, ನಿರ್ಮಲಾ ಸೀತಾರಾಮನ್​ 4ನೇ ಬಾರಿಗೆ ಬಜೆಟ್​ ಮಂಡಿಸಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Budget 2022 Expert Opinion : ಸರ್ಕಾರದ ಯೋಚನೆ ಯೋಜನೆ ಚೆನ್ನಾಗಿದೆ, ಜಾರಿಯಾಗೋದು ಮುಖ್ಯ: ಬಜೆಟ್​ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

2022-23ನೇ ಸಾಲಿನ ಕೇಂದ್ರ ಬಜೆಟ್ (Budget 2022)​ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)​ 90 ನಿಮಿಷಗಳಲ್ಲಿ ಈ ಬಾರಿಯ ಬಜೆಟ್​ ಭಾಷಣ ಮುಗಿಸಿದ್ದಾರೆ. ಈ ಬಾರಿ ಮಂಡನೆಯಾಗಿರುವ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರದ 10ನೇ ಬಜೆಟ್​ ಇದಾಗಿದ್ದು, ನಿರ್ಮಲಾ ಸೀತಾರಾಮನ್​ 4ನೇ ಬಾರಿಗೆ ಬಜೆಟ್​ ಮಂಡಿಸಿದ್ದಾರೆ. ಈ ಬಗ್ಗೆ ಆರ್ಥಿಕ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆರ್ಥಿಕ ತಜ್ಞ ಕೇಶವ ಮೂರ್ತಿ

‘ಬಜೆಟ್​ ಉತ್ತಮವಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಹಳ್ಳಿಗಳಿಗೂ ತಂತ್ರಜ್ಞಾನವನ್ನು ತಲುಪಿಸುವ ದೂರದೃಷ್ಟಿಯ ಬಜೆಟ್​ ಇದಾಗಿದೆ’ ಎಂದು ‘ಟಿವಿ9’ ಚರ್ಚೆಯ ವೇಳೆ ಆರ್ಥಿಕ ತಜ್ಞ ಕೇಶವ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯ, ಕೃಷಿ, ರಕ್ಷಣಾ ವಲಯ ಸೇರಿದಂತೆ ಜನಸಾಮಾನ್ಯರವರೆಗೂ ಬಜೆಟ್​ ತಲುಪಿದೆ. ಹೀಗಾಗಿ ಈ ಬಾರಿ ಜನಪರ ಕಾಳಜಿಯ ಬಜೆಟ್​ ಎನ್ನಬಹುದು ಎಂದಿದ್ದಾರೆ. ಇನ್ನು ಡಿಜಿಟಲ್​ ಕರೆನ್ಸಿಯ ಬಗ್ಗೆ ಮಾತನಾಡಿದ ಅವರು ಈ ಹಿಂದೆ ಕೇಂದ್ರ ಸರ್ಕಾರ ಡಿಜಿಟಲ್​ ಕರೆನ್ಸಿಗಳ ದುರುಪಯೋಗದ ಬಗ್ಗೆ ಆತಂಕ ವ್ಯಕ್ತಪಡಿಸುತ್ತು. ಇದೀಗ ಆರ್​ಬಿಐ ಮೂಲಕವೇ ಬರುತ್ತಿರುವುದರಿಂದ ಹೆಚ್ಚು ಸುರಕ್ಷಿತವಾಗಿರುತ್ತದೆ. ಹೀಗಾಗಿ ಸರ್ಕಾರದ ಈ ನಡೆ ಮುಂದಿನ ದಿನಗಳಲ್ಲಿ ಗೇಮ್​ ಚೇಂಜರ್​ ಆಗಬಹುದು. ಇದು ಮೇಕ್​ ಇನ್​ ಇಂಡಿಯಾಗೂ ಹೆಚ್ಚು ಪುಷ್ಟಿ ನೀಡುತ್ತದೆ. ಒಟ್ಟಿನಲ್ಲಿ ಈ ಬಾರಿಯ ಬಜೆಟ್​​ ಉತ್ತಮವಾಗಿದೆ ಎಂದಿದ್ದಾರೆ.

ಹಣಕಾಸು ವಿದ್ಯಮಾನಗಳ ವಿಶ್ಲೇಷಕ ಮುರಳೀಧರ್​

ಹಣಕಾಸು ವಿದ್ಯಮಾನಗಳ ವಿಶ್ಲೇಷಕ ಮುರಳೀಧರ್​ ಮಾತನಾಡಿ, ಈ ಬಾರಿಯ ಬಜೆಟ್ ಸಾಧಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಭಿಪ್ರಾಯವನ್ನು ವಿವರಿಸಿದ ಅವರು, ದೂರದೃಷ್ಟಿಯುಳ್ಳ ಬಜೆಟ್​ನಲ್ಲಿ ಎಲ್ಲಾ ಕ್ಷೇತ್ರಗಳನ್ನೂ ತಲುಪಲಾಗಿದೆ ಆದರೆ ಸರ್ಕಾರ ಮಾಡುವ, ಜನ ಅಥವಾ ಸಾರ್ವಜನಿಕರು ಮಾಡುವ ಕೆಲಸಗಳು ಯಾವುದು ಎನ್ನುವುದರ ಕುರಿತು ಸ್ಪಷ್ಟ ನಿಲುವು ಇಲ್ಲ. ಯೋಜನೆಗಳನ್ನು ಘೋಷಣೆ ಮಾಡುವುದರ ಜೊತೆಗೆ ಅದನ್ನು ಜನರಿಗೆ ತಲುಪುವ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟೇ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಈ ಬಾರಿಯ ಬಜೆಟ್​ ಚಾಲೆಂಜಿಗ್​ ಆಗಿದೆ. ಇನ್ನು ಆರ್​ಬಿಐ ತರುತ್ತಿರುವ ಡಿಜಿಟಲ್​ ಕರೆನ್ಸಿ ನಿಯಮವು ಒಂದಷ್ಟು ಗೊಂದಲಗಳನ್ನು ಒಳಗೊಂಡಿದೆ. ಬಿಟ್​ ಕಾಯಿನ್​ಗಳನ್ನು ಎರಡು ರೀತಿಯಲ್ಲಿ ಪಡೆಯಬಹುದು ಒಂದು ಖರೀದಿಸುವವರೇ ಹುಡುಕಿ ಪಡೆಯಬೇಕು, ಇನ್ನೊಂದು ರೀತಿ ಎಂದರೆ ಯಾರಲ್ಲಿ ಇರುತ್ತದೆಯೋ ಅವರಿಂದ ಪಡೆಯಬೇಕು. ಹೇಗೆ ಪಡೆದರೂ ಮಾರುಕಟ್ಟೆಯಲ್ಲಿನ ಬೆಲೆಗೇ ಪಡೆಯಬೇಕು. ಈ ಯೋಜನೆಯಲ್ಲಿ ಆರ್​ಬಿಐನ ಕೆಲಸವೇನು ಎಂಬ ಬಗ್ಗೆ ಅಂದರೆ ಆರ್​ಬಿಐ​ ರೋಲ್​ ಬಗ್ಗೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ. ಇವೆಲ್ಲವನ್ನು ಹೊರತುಪಡಿಸಿದರೆ, ಈ ಬಾರಿಯ ಬಜೆಟ್​ನಲ್ಲಿ ರಾಜ್ಯಗಳಲ್ಲಿ ಜಾರಿಯಾಗಬೇಕಾದ ಯೋಜನೆಗಳನ್ನು ಗಮನಿಸಿ ಎಲ್ಲಾ ರಾಜ್ಯಗಳಿಗೆ ಒತ್ತು ನೀಡಲಾಗಿದೆ. ಜತೆಗೆ ಬೇರೆಬೇರೆ ದೇಶದಲ್ಲಿ ಅಳವಡಿಸಿಕೊಂಡ ಹೂಡಿಕೆ ಅಥವಾ ಫಂಡಿಂಗ್​​ ಸಿಸ್ಟಮ್​ಗಳನ್ನು ನಮ್ಮ ದೇಶದಲ್ಲಿಯೂ ಅಳವಡಿಸಿಕೊಳ್ಳಬೇಕೆಂಬ ನಿರ್ಧಾರ ಸ್ವಾಗತಾರ್ಹವಾಗಿದೆ. ಒಟ್ಟಿನಲ್ಲಿ 2022-23ರ ಬಜೆಟ್​​ ಆವರೇಜ್​ ಮಟ್ಟದಲ್ಲಿದೆ ಎಂದಿದ್ದಾರೆ.

ಚಾರ್ಟೆಡ್​ ಅಕೌಂಟೆಂಟ್​ ಗುರುರಾಜ್​ ಆಚಾರ್ಯ

ಇನ್ನು ಚಾರ್ಟೆಡ್​ ಅಕೌಂಟೆಂಟ್​ ಆಗಿರುವ ಗುರುರಾಜ್​ ಆಚಾರ್ಯ ಅವರು ಮಾತಾನಾಡಿ ತೆರಿಗೆ ನಿಯಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಆದಾಯ ತೆರಿಗೆಗಳನ್ನು ಫೈಲ್​ ಮಾಡುವಾಗ ವಿದೇಶಿ ಬಂಡವಾಳ ಹೂಡಿಕೆ ಮಾಡಿದಂತಹ ಸಂದರ್ಭಗಳಲ್ಲಿ ತೆರಿಗೆ ಸಲ್ಲಿಕೆಯಲ್ಲಿ ತಪ್ಪಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀಡಿರುವ 2 ವರ್ಷಗಳ ಅವಧಿ ಸರಿಯಾದ ಕ್ರಮ ಎನಿಸಿದೆ. ದೂರದೃಷ್ಟಿಯಿಂದ ಘೋಷಿಸಿರುವ ಯೋಜನೆಗಳು ಆರ್ಥಿಕತೆಯ ಪುನಶ್ಚೇತನಕ್ಕೆ ನಾಂದಿಯಾಗಲಿವೆ. ಆದರೆ ಇದು ಜನರಿಗೆ ತಲುಪುವಂತಾದರೆ ಎಲ್ಲ ರೀತಿಯಲ್ಲಿಯೂ ಉತ್ತಮ ಎಂದು ಹೇಳಿದ್ದಾರೆ. ಇನ್ನು ಈ ಬಾರಿಯ ಅತಿ ಮುಖ್ಯ ಘೋಷಣೆಗಳಲ್ಲಿ ಒಂದಾದ ಡಿಜಿಟಲ್​ ಕರೆನ್ಸಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆರ್​ಬಿಐ ಸ್ವತಃ ಜವಾಬ್ದಾರಿ ತೆಗೆದುಕೊಂಡಿರುವುದು ಸ್ವಾಗತಾರ್ಹ ಸಂಗತಿ. ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾರ್ವಜನಿಕರಿಗೂ ಅರ್ಥವಾಗಿದೆ. ಡಿಜಿಟಲ್​ ಕರೆನ್ಸಿ ನೀರಿನೊಳಗೆ ಸಿಗುವ ಮುತ್ತಿನಂತೆ. ಕಂಪ್ಯೂಟರ್​ ಎಕ್ಸ್​ಪರ್ಟ್ಸ್​ಗಳು ಅದನ್ನು ಹುಡುಕಬೇಕು. ಆಗ ಮಾತ್ರ ಯಾವುದು ಉತ್ತಮ ಎನ್ನುವುದು ತಿಳಿಯುತ್ತದೆ. ಈ ಬಾರಿ ಒಟ್ಟು 39.54 ಲಕ್ಷ ಕೋಟಿ ರೂ.ಗಳ ಬಜೆಟ್​ ಮಂಡನೆಯಾಗಿದೆ. ಒಟ್ಟಾರೆಯಾಗಿ ಈ ಬಾರಿ ಬಜೆಟ್​ ನೀರೀಕ್ಷಿತ ಮಟ್ಟದಲ್ಲಿ ಇರದಿದ್ದರೂ, ಘೋಷಣೆಯಾದ ಯೋಜನೆಗಳು ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ದೂರದೃಷ್ಟಿಯುಳ್ಳ 2022-23ರ ಕೇಂದ್ರ ಬಜೆಟ್​  ಕೊರೊನಾ ಕಾಲದಲ್ಲೂ ದೇಶದ ಆರ್ಥಿಕತೆಯನ್ನು ಮೇಲೆತ್ತುವ ನಿರೀಕ್ಷೆಯಿಟ್ಟುಕೊಂಡಿದೆ. ದೇಶವನ್ನು ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಮಾಡುವ ಗುರಿ ಹೊಂದಿರುವ  ಸರ್ಕಾರದ ಯೊಜನೆಗಳು ಡಿಜಿಟಲೀಕರಣವನ್ನು ಮೂಲ ಮಂತ್ರವನ್ನಾಗಿಸಿಕೊಂಡಿದೆ. ಜನಪರ ಕಾಳಜಿಯುಳ್ಳ  ಬಜೆಟ್​ ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ಬರಲಿದ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

Published On - 2:48 pm, Tue, 1 February 22