ಕೊರೊನಾ ವೈರಸ್ ಸಾಂಕ್ರಾಮಿಕ ಶುರುವಾದ ಮೇಲೆ ಮಂಡನೆಯಾಗುತ್ತಿರುವ ಎರಡನೇ ಕೇಂದ್ರ ಬಜೆಟ್ ಇದಾಗಿದ್ದು, ಪ್ರತಿ ಕ್ಷೇತ್ರದಿಂದಲೂ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳ ಮಧ್ಯೆ ರಕ್ಷಣಾ ಕ್ಷೇತ್ರಕ್ಕೆ ಏನು ಸಿಗಬಹುದು? ಎಂಬ ಕುತಹೂಲವೂ ಇದ್ದೇ ಇದೆ. ಬಿಜೆಪಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಕ್ಷಣಾ ಕ್ಷೇತ್ರದ ಅಭಿವೃದ್ಧಿ, ಸದೃಢಗೊಳಿಸಲು ಪ್ರತಿವರ್ಷವೂ ಬಜೆಟ್ನಲ್ಲಿ ಹೆಚ್ಚೆಚ್ಚು ಅನುದಾನ ನೀಡುತ್ತಿದೆ. ಆಧುನಿಕ ಶಸ್ತ್ರಾಸ್ತ್ರ ಖರೀಧಿ, ಯೋಧರಿಗೆ ರಕ್ಷಣಾ ಉಪಕರಣಗಳು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ವದೇಶಿ ಶಸ್ತ್ರಾಸ್ತ್ರ ಉತ್ಪಾದನೆ ಇತ್ಯಾದಿ ಕಾರಣಗಳಿಗಾಗಿ ಬಜೆಟ್ನಲ್ಲಿ ಆದ್ಯತೆ ಸಿಗುತ್ತಿದೆ. ಈ ಬಾರಿಯೂ ಕೂಡ ಕೇಂದ್ರ ರಕ್ಷಣಾ ಸಚಿವಾಲಯ ಈಗಾಗಲೇ ತಮಗೆ ಏನೆಲ್ಲ ಅವಶ್ಯಕತೆ ಇದೆ ಎಂಬುದರ ವಿಶ್ ಲಿಸ್ಟ್ನ್ನು ಹಣಕಾಸು ಸಚಿವಾಲಯಕ್ಕೆ ಕಳಿಸಿಕೊಟ್ಟಿದೆ ಎನ್ನಲಾಗಿದೆ.
ಪ್ರಸಕ್ತ ಬಜೆಟ್ನಲ್ಲಿ ಮತ್ತಷ್ಟು ನಿರೀಕ್ಷೆ
ಸೇನೆಯ ಆಧುನೀಕರಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ತುಂಬ ಆದ್ಯತೆ ನೀಡುತ್ತಿದೆ. ಅದರಲ್ಲೂ ಇತ್ತೀಚೆಗೆ ನೆರೆ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಉಪಟಳ ಜಾಸ್ತಿಯಾಗಿದೆ. ಎಲ್ಎಸಿ ಬಳಿ ಚೀನಾ ಸೈನ್ಯ ಆಕ್ರಮಣಕಾರಿ ಮನೋಭಾವ ತೋರುತ್ತಿದ್ದರೆ, ಇತ್ತ ಎಲ್ಒಸಿ ಬಳಿ ಪಾಕಿಸ್ತಾನ, ಪಾಕಿಸ್ತಾನಿ ಉಗ್ರರ ಕಾಟ ಹೆಚ್ಚಾಗಿದೆ. ಎರಡೂ ದೇಶಗಳನ್ನೂ ಭಾರತೀಯ ಸೇನೆ ಸಮರ್ಥವಾಗಿ ನಿಭಾಯಿಸುತ್ತಿದ್ದರೂ ಕೂಡ, ಎಂಥ ಸಂದರ್ಭ ಬಂದರೂ ಎದುರಿಸಬೇಕಾದರೆ ಸಹಜವಾಗಿ ಸೇನೆಯನ್ನು ಇನ್ನಷ್ಟು-ಮತ್ತಷ್ಟು ಬಲಗೊಳಿಸುವುದು ಅನಿವಾರ್ಯ. ಯಾವುದೇ ದೇಶಗಳ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆ ಸಜ್ಜಾಗಿದ್ದು ಹೌದಾದರೂ, ಯೋಧರಿಗೆ ಕಾಲಕಾಲಕ್ಕೆ ಆಧುನಿಕ ಶಸ್ತ್ರಾಸ್ತ್ರಗಳು, ಮುಂದುವರಿದ ರಕ್ಷಣಾ ಉಪಕರಣಗಳನ್ನು ಒದಗಿಸಲೇಬೇಕು. ಹೀಗಾಗಿ ಪ್ರಸ್ತುತ ಸೇನಾ ಕ್ಷೇತ್ರದಲ್ಲಿ ನೆರೆ ರಾಷ್ಟ್ರಗಳಿಂದ ಇರುವ ಸವಾಲುಗಳನ್ನು ಎದುರಿಸಲು ಹೆಚ್ಚಿನ ಆರ್ಥಿಕ ಹಂಚಿಕೆಯ ಅಗತ್ಯತೆ ಇದೆ. ಎಂದಿನಂತೆಯೇ 2022-23ನೇ ಸಾಲಿನ ಬಜೆಟ್ನಲ್ಲೂ ಕೂಡ ಮಿಲಿಟರಿ ಕ್ಷೇತ್ರದ ನಿರೀಕ್ಷೆ ಹೆಚ್ಚಿದೆ.
ವಿಶ್ವದಲ್ಲೇ 5ನೇ ದೊಡ್ಡ ಬಜೆಟ್
ಇದು ನಿಮಗೆ ಗೊತ್ತಿರಲಿ, ಭಾರತದ ರಕ್ಷಣಾ ಬಜೆಟ್ ಎಂಬುದು ವಿಶ್ವದಲ್ಲಿಯೇ 5ನೇ ಅತ್ಯಂತ ದೊಡ್ಡ ರಕ್ಷಣಾ ಬಜೆಟ್ ಆಗಿದೆ. ಅಂದರೆ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ಅತಿ ಹೆಚ್ಚು ಅನುದಾನ ಮೀಸಲಿಡುವ 5ನೇ ದೊಡ್ಡ ದೇಶ ಭಾರತ. ಚೀನಾ ಒಟ್ಟಾರೆ ಜಿಡಿಪಿಯ ಶೇ.3ರಷ್ಟನ್ನು ತನ್ನ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟರೆ, ಭಾರತ ಒಟ್ಟಾರೆ ಜಿಡಿಪಿಯ ಶೇ.1.58ನ್ನು ರಕ್ಷಣಾ ಪಡೆಗಳಿಗಾಗಿ ಎತ್ತಿಡುತ್ತಿದೆ.
ವಿಶ್ವದ ಅತಿದೊಡ್ಡ ಸೇನೆಗಳಲ್ಲಿ ಭಾರತದ ಸೇನೆಯೂ ಒಂದು. ಪ್ರತಿವರ್ಷ ಬಜೆಟ್ನಲ್ಲಿ ಮೀಸಲಿಡುವ ಅನುದಾನದ ಬಹುತೇಕ ಪಾಲು ಸೇನೆಯ ಯೋಧರ ವೇತನ ಮತ್ತು ಪಿಂಚಣಿಗೆ ಹೋಗುತ್ತದೆ. ಹಾಗಿದ್ದಾಗ್ಯೂ ಕೂಡ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಫೇಲ್ ಜೆಟ್ನಂಥ ಆಧುನಿಕ ಯುದ್ಧವಿಮಾನ ಸೇರಿ, ಅಂಥ ವಿವಿಧ ಯುದ್ಧೋಪಕರಣಗಳ ಖರೀದಿಗೆ ಆದ್ಯತೆ ನೀಡಿದೆ. ಸೇನೆಯ ಆಧುನೀಕರಣಕ್ಕಾಗಿ ಎಲ್ಲರೀತಿಯ ಪ್ರಯತ್ನ ಮಾಡುತ್ತಿದ್ದು, ಯಥೇಚ್ಛವಾಗಿ ಹಣ ಮೀಸಲಾಗಿಡುತ್ತಿದೆ. ಕಳೆದ ವರ್ಷ ಕೇಂದ್ರ ಸರ್ಕಾರ, ರಕ್ಷಣಾ ಬಂಡವಾಳ ವೆಚ್ಚವನ್ನು ಶೇ.19ಕ್ಕೆ ಏರಿಸಿದೆ. ಕಳೆದ 15ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು ಇದು. ಅಲ್ಲಿಯವರೆಗೂ ಬಂಡವಾಳ ವೆಚ್ಚ ಶೇ.6-7ರಷ್ಟಿತ್ತು. ಅಂದರೆ ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರ, ರಕ್ಷಣಾ ಉಪಕರಣಗಳನ್ನು ಖರೀದಿಸಲು ಶೇ.6-7ರಷ್ಟನ್ನು ಮಾತ್ರ ಖರ್ಚು ಮಾಡಬಹುದಿತ್ತು.
ಅಂದಹಾಗೆ, ಕಳೆದ ವರ್ಷ ಅಂದರೆ 2021-22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 4.78 ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು. ಅದರಲ್ಲಿ ಬಂಡವಾಳ ಆಯವ್ಯಯ ಅಂದರೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಆಧುನೀಕರಣ ಮತ್ತು ಅಗತ್ಯ ಉಪಕರಣಗಳ ಖರೀದಿಗೆ 1.35 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಅದರಲ್ಲಿ ಅತಿ ಹೆಚ್ಚು ಪಾಲು ಅಂದರೆ 53 ಸಾವಿರ ಕೋಟಿ ರೂಪಾಯಿ ಭಾರತೀಯ ವಾಯುಪಡೆಗೆ ಸಿಕ್ಕಿತ್ತು. ಭೂಸೇನೆಗೆ 36 ಸಾವಿರ ಕೋಟಿ ರೂ. ಮತ್ತು ನೌಕಾಪಡೆಗೆ 37 ಸಾವಿರ ಕೋಟಿ ರೂ.ಹಂಚಿಕೆಯಾಗಿತ್ತು. ಅದಕ್ಕೆ ತಕ್ಕಂತೆ ಹಲವು ಅಭಿವೃದ್ಧಿಯನ್ನೂ ಸೇನೆಯಲ್ಲಿ ಮಾಡಲಾಗಿದೆ. ಅದರಲ್ಲೂ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ತತ್ವಕ್ಕೆ ಅತ್ಯಂತ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಇದನ್ನೂ ಓದಿ: Opening Bell: ಬಜೆಟ್ ಉತ್ತೇಜನದ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ 700 ಪಾಯಿಂಟ್ಸ್ಗೂ ಹೆಚ್ಚು ಏರಿಕೆ
Published On - 10:36 am, Tue, 1 February 22