Budget 2021 ನಿರೀಕ್ಷೆ | ಕೋವಿಡ್ ಆಘಾತದಿಂದ ತತ್ತರಿಸಿದ ರಿಯಲ್ ಎಸ್ಟೇಟ್ ವಲಯಕ್ಕೆ ಬೇಕಿದೆ ಸುಧಾರಣೆಗಳ ಟಾನಿಕ್

2021 ಮಾರ್ಚ್​ಗೆ ಕೊನೆಗೊಳ್ಳುವ ಪ್ರಧಾನ ಮಂತ್ರಿ ಅವಾಜ್​ ಯೋಜನೆಯನ್ನು 2022 ಕ್ಕೆ ಏರಿಸಬೇಕು ಇದರಿಂದ ಯೋಜನೆಯಲ್ಲಿರುವ ಸಬ್ಸಿಡಿ ಅಂಶಗಳು ಮನೆ ಖರೀದಿದಾರರಿಗೆ ಸಹಾಯಕವಾಗಲಿದೆ.

  • Updated On - 3:07 pm, Fri, 29 January 21 Edited By: Ghanashyam D M | ಡಿ.ಎಂ.ಘನಶ್ಯಾಮ
Budget 2021 ನಿರೀಕ್ಷೆ | ಕೋವಿಡ್ ಆಘಾತದಿಂದ ತತ್ತರಿಸಿದ ರಿಯಲ್ ಎಸ್ಟೇಟ್ ವಲಯಕ್ಕೆ ಬೇಕಿದೆ ಸುಧಾರಣೆಗಳ ಟಾನಿಕ್
ಸಾಂದರ್ಭಿಕ ಚಿತ್ರ

ರಿಯಲ್ ಎಸ್ಟೇಟ್ ಉದ್ಯಮವು ಭಾರತದ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಜಿಡಿಪಿಗೆ ಮುಖ್ಯ ಕೊಡುಗೆ ನೀಡುವುದರ ಜೊತೆಗೆ, ದೇಶದ ಅತಿದೊಡ್ಡ ಉದ್ಯೋಗದಾತ ಕ್ಷೇತ್ರ ಎನಿಸಿಕೊಂಡಿದೆ. ಈ ವಲಯವು ರಾಷ್ಟ್ರದ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಪ್ರಮುಖ ಪಾತ್ರವಹಿಸಿದೆ. ಕೋವಿಡ್ -19 ಆಘಾತದ ನಂತರ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿಯೂ ಇದು ನಿರ್ಣಾಯಕವಾಗಿದೆ.

ನೋಟು ಅಮಾನ್ಯೀಕರಣದಿಂದಾಗಿ ರಿಯಲ್​ ಎಸ್ಟೇಟ್​ ವಲಯ ಕಳಾಹೀನವಾಗಿತ್ತು.  ಕೊಂಚ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಕೊರೊನಾ ಅಪ್ಪಳಿಸಿತು. ಚೇತರಿಕೆಯ ಅಂಬೆಗಾಲಿಡುತ್ತಿದ್ದ ರಿಯಲ್​ ಎಸ್ಟೇಟ್​ ಕುಸಿಯಿತು. 2021ರ ಕೇಂದ್ರ ಬಜೆಟ್​ನಲ್ಲಿ ಈ ವಲಯಕ್ಕೆ ಒಂದಿಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯಿದೆ.

2021ರ ಕೇಂದ್ರ ಬಜೆಟ್​ನಲ್ಲಿ ರಿಯಲ್​ ಎಸ್ಟೇಟ್​ ವಲಯಕ್ಕೆ ಬೇಕಾಗಿರುವ ಸವಲತ್ತುಗಳು ಹಾಗೂ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ಕಾನ್ಫಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾದ (CREDAI) ಚುನಾಯಿತ ಅಧ್ಯಕ್ಷರಾದ ಭಾಸ್ಕರ್ ಹಾಗೂ ಸ್ಕೈಡೀಲ್ಸ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್​ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಗೃಹಸಾಲಕ್ಕೆ ತೆರಿಗೆ ವಿನಾಯ್ತಿಯ ಮಿತಿ ಹೆಚ್ಚಲಿ
ಸಾಲದ ಮೇಲಿನ ಬಡ್ಡಿದರ ಈಗಾಗಲೇ ಕಡಿಮೆಯಾಗಿದೆ. ಬಡ್ಡಿ ಇನ್ನಷ್ಟು ಕಡಿಮೆಯಾಗಬೇಕು ಎಂದು ನಾವು ನಿರೀಕ್ಷಿಸುವುದಿಲ್ಲ. ಆದರೆ ಮನೆಯನ್ನು ಕೊಂಡುಕೊಳ್ಳುವವರಿಗೆ ಈಗ ₹ 2 ಲಕ್ಷ ತೆರಿಗೆ ವಿನಾಯಿತಿ ಇದೆ. ಈ ತೆರಿಗೆ ವಿನಾಯ್ತಿ ಮಿತಿಯನ್ನು ₹ 5 ಲಕ್ಷಕ್ಕೆ ಏರಿಸಬೇಕು. ಇದು ಗೃಹಸಾಲ ಪಡೆಯಲು ಉತ್ತೇಜಕವಾಗುತ್ತದೆ. ಗೃಹಸಾಲದ ಕಂತು ಮರುಪಾವತಿ ಮಾಡುವವರಿಗೆ ಮತ್ತು ನಿವೇಶನ ಕೊಳ್ಳುವವರಿಗೆ ಸಹಾಯಕವಾಗಲಿದೆ.

2021 ಮಾರ್ಚ್​ಗೆ ಕೊನೆಗೊಳ್ಳುವ ಪ್ರಧಾನ ಮಂತ್ರಿ ಅವಾಜ್​ ಯೋಜನೆಯನ್ನು 2022ಕ್ಕೆ ವಿಸ್ತರಿಸಬೇಕು. ಕೈಗೆಟುಕುವ ದರದ ಮನೆಗಳನ್ನು ಖರೀದಿಸುವ ಬಡ ಮತ್ತು ಮಧ್ಯಮ ವರ್ಗದವರಿಗೆ ಸಬ್ಸಿಡಿ ನೆರವಿನ ಈ ಯೋಜನೆಯ ಅಂಶಗಳು ಸಹಾಯಕವಾಗಲಿದೆ. ಇಂತಹ ಯೋಜನೆಗಳ ಮುಂದುವರಿಕೆಯಿಂದಾಗಿ ರಿಯಲ್​ ಎಸ್ಟೇಟ್​ ಉದ್ಯಮಕ್ಕೆ ಬೇಡಿಕೆ ಹೆಚ್ಚಾಗಲಿದೆ. ಬೇಡಿಕೆ ಹೆಚ್ಚಾದಂತೆ ಉದ್ಯೋಗ ಸೃಷ್ಟಿಯಾಗಲಿದೆ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದರು.

ಇದನ್ನೂ ಓದಿ: Union Budget 2021 ನಿರೀಕ್ಷೆ: ಸಣ್ಣ ಉದ್ಯಮ ಬೆಳೆಯಲು ಕಚ್ಚಾವಸ್ತುಗಳ ಬೆಲೆ ಇಳಿಯಬೇಕು

GSTಯಲ್ಲಿ ಬದಲಾವಣೆ ಬೇಕು..
ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆ ಮತ್ತೆ ಬರಬೇಕು. ಇದನ್ನು ಜಾರಿ ಮಾಡುವ ಮೂಲಕ ಬಜೆಟ್​ನಲ್ಲಿ ಜಿಎಸ್​ಟಿ ಸುಧಾರಣೆಗಳನ್ನು ಪರಿಚಯಿಸುವ ನಿರೀಕ್ಷೆಗಳಿವೆ. ಜಿಎಸ್​ಟಿಯಲ್ಲಿ ಇಂತ ಸುಧಾರಣೆಗಳು ಜಾರಿಯಾದರೆ ಮನೆಗಳ ನಿರ್ಮಾಣ ವೆಚ್ಚವೂ ಕಡಿಮೆಯಾಗುತ್ತದೆ, ಆಸ್ತಿಯ ಬೆಲೆಗಳು ಸಹ ಕಡಿಮೆಯಾಗಲಿವೆ.

ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಖರೀದಿಸಿದರೆ GST ಕಟ್ಟಬೇಕಾಗುತ್ತದೆ. ಹೀಗಾಗಿ ಮನೆ ಕೊಳ್ಳುವವರು ಮನೆ ನಿರ್ಮಾಣ ಪೂರ್ಣಗೊಂಡ ನಂತರವೇ ಮನೆ ಖರೀದಿಗೆ ಮುಂದಾಗುತ್ತಾರೆ. ಮನೆ ಕಟ್ಟಲು ಬಂಡವಾಳ ಹೂಡಿದ ಬಿಲ್ಡರ್​ಗಳಿಗೆ ಇದು ತೊಡಕಾಗಿದೆ. ನಿರ್ಮಾಣ ಹಂತದಲ್ಲಿರುವ ಮನೆ ಖರೀದಿಗೆ ವಿಧಿಸುತ್ತಿರುವ ಶೇ 5ರ ಜಿಎಸ್​ಟಿಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಶೇ 1ಕ್ಕೆ ಇಳಿಸಬೇಕು.

ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಾದ ಸಿಮೆಂಟ್​, ಮರಳು, ಕಬ್ಬಿಣ ಹಾಗೂ ಕಾರ್ಮಿಕರಿಗೆ ನೀಡುವ ಸಂಬಳ ಮತ್ತು ಸರ್ಕಾರ, ಬಿಬಿಎಂಪಿಗೆ ಕಟ್ಟುವ ತೆರಿಗೆಯಲ್ಲೂ ಹೆಚ್ಚಳವಾಗಿದೆ. ಆದರೆ ನಿವೇಶನ ಮಾರಾಟ ದರ ನಿರೀಕ್ಷೆಯಷ್ಟು ಹೆಚ್ಚಾಗಿಲ್ಲ. ಹೀಗಾಗಿ ಬಿಲ್ಡರ್​ಗಳಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಸರ್ಕಾರವು ನಿವೇಶನಗಳ ಮೌಲ್ಯವನ್ನು ಪರಿಷ್ಕರಿಸಬೇಕು. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ವಸ್ತುಗಳ ಮೇಲಿನ ದರ ಇಳಿಕೆಗೆ ಸಹಕರಿಸಬೇಕು. ಇಂಥ ಉತ್ಪನ್ನಗಳ ಮೇಲಿನ ತೆರಿಗೆಗೆ ವಿನಾಯ್ತಿ ಸಿಗಬೇಕು.

ಸ್ಥಗಿತಗೊಂಡ ಯೋಜನೆಗಳ ಗೃಹಬಳಕೆದಾರರಿಗೆ ಪರಿಹಾರ ನೀಡುವ ಸಲುವಾಗಿ, ಸೆಪ್ಟೆಂಬರ್ 2020 ರಲ್ಲಿ SWAMIH (ಕೈಗೆಟುಕುವ ಮತ್ತು ಮಧ್ಯಮ ಆದಾಯದ ವಸತಿಗಾಗಿ ವಿಶೇಷ ಯೋಜನೆ) ನಿಧಿಯನ್ನು ರಚಿಸಲಾಗಿದೆ. SWAMIH ನಿಧಿಯನ್ನು ಮುಂದುವರೆಸುವುದರೊಂದಿಗೆ ಈಗ ನೀಡಿರುವ ₹ 25,000 ಕೋಟಿ ಅನುದಾನವನ್ನು ಹೆಚ್ಚಿಸುವುದರೊಂದಿಗೆ ಪ್ರೋತ್ಸಾಹ ನೀಡಬೇಕು. ಬ್ಯಾಂಕಿಂಗ್ ವಲಯದಲ್ಲಿನ NPL (ಲಾಭ ರಹಿತ ಸಾಲ) ನೀತಿಯಲ್ಲಿಯೂ ಅಗತ್ಯ ಬದಲಾವಣೆ ಆಗಬೇಕಿದೆ.

ಇದನ್ನೂ ಓದಿ: Union Budget 2021 ನಿರೀಕ್ಷೆ | ಈ ವರ್ಷದ ಬಜೆಟ್​ನಿಂದ ಮಹಿಳೆಯರು ಬಯಸುತ್ತಿರುವುದೇನು?

ನೋಟ್​ಬ್ಯಾನ್​ ಹೊಡೆತದ ನೆನಪು
ಕಪ್ಪುಹಣ ಚಲಾವಣೆಗೆ ಕಡಿವಾಣ ಹಾಕುವ ಉದ್ದೇಶದಿಂದ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ (ನೋಟ್ ಬ್ಯಾನ್) ಘೋಷಣೆ ಮಾಡಿದರು. ಈ ಬೆಳವಣಿಗೆಯ ನಂತರ ರಿಯಲ್​ ಎಸ್ಟೇಟ್​ ಉದ್ಯಮ ಅಕ್ಷರಶಃ ತತ್ತರಿಸಿತು. ಜನರ ಬಳಿ ನಗದು ಚಲಾವಣೆ ತೀರಾ ಕಡಿಮೆಯಾಯಿತು. ಭೂಮಿಯ ಪರಭಾರೆ ಶೇ 30ರಷ್ಟು ಕಡಿಮೆಯಾಯಿತು. ಪ್ರಮುಖ 8 ನಗರಗಳಲ್ಲಿ ಮನೆ ಮಾರಾಟ ಪ್ರಮಾಣ ಶೇ 40ರಷ್ಟು ಕಡಿಮೆಯಾಯಿತು. ಹಲವು ರಿಯಲ್ ಎಸ್ಟೇಟ್ ಯೋಜನೆಗಳು ಸ್ಥಗಿತಗೊಂಡವು. ಮನೆ ಮಾರಾಟ ಗಣನೀಯವಾಗಿ ಕಡಿಮೆ ಆಯಿತು. ಬಂಡವಾಳ ಕೊರತೆಯಿಂದಾಗಿ ದೊಡ್ಡದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳು ಯೋಜನೆಗಳನ್ನು ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳಿಸಲು ಪರದಾಡುವಂತಾಯಿತು.

ನೋಟ್​ಬ್ಯಾನ್​ ಹೊಡೆತದಿಂದ ರಿಯಲ್​ ಎಸ್ಟೇಟ್ ಉದ್ಯಮ ಇನ್ನೇನು ಚೇತರಿಸಿಕೊಂಡಿತು ಎನ್ನುವಾಗ ಕೊರೊನಾ ಲಾಕ್​ಡೌನ್​ ಹಿರಿತ ಬಿಗಿಯಾಯಿತು. ಈ ಬಾರಿಯ ಬಜೆಟ್​ನಲ್ಲಿ ಸಕಾರಾತ್ಮಕ ಘೋಷಣೆಗಳು ಹೊರಬಿದ್ದರೆ ರಿಯಲ್ ಎಸ್ಟೇಟ್ ವಲಯ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನೂ ಓದಿ: Union Budget 2021 ನಿರೀಕ್ಷೆ | ಸಿಗಬಹುದೇ ಆದಾಯ ತೆರಿಗೆ ವಿನಾಯ್ತಿ?

ರೇರಾದಲ್ಲಿ ಆಗಬೇಕಾಗಿರುವ ಬದಲಾವಣೆಗಳು..
ವಾಸಕ್ಕೊಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಅಥವಾ ಮನೆ ಕಟ್ಟಿಸುವುದಕ್ಕೊಂದು ಸೈಟು ಕೊಳ್ಳಬೇಕು ಎಂಬ ಜನಸಾಮಾನ್ಯರ ಕನಸನ್ನೇ ಬಂಡವಾಳ ಮಾಡಿಕೊಂಡು ಕೆಲವರು ತೊಂದರೆ ಕೊಡುತ್ತಿದ್ದಾರೆ. ಬೇಕಾಬಿಟ್ಟಿ ದರ ನಿಗದಿ, ಮನೆ ಅಥವಾ ಲೇಔಟ್ ಯೋಜನೆಯಲ್ಲಿ ದಿಢೀರ್ ಬದಲಾವಣೆ, ಉದ್ದೇಶಪೂರ್ವಕ ವಿಳಂಬ ಸೇರಿದಂತೆ ಹಲವು ಅಟಾಟೋಪಗಳನ್ನು ಮೆರೆಯುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೇರಾ ಕಾಯ್ದೆ (ರಿಯಲ್ ಎಸ್ಟೇಟ್ ರೆಗ್ಯುಲೇಶನ್ ಅಂಡ್ ಡೆವಲಪ್​ಮೆಂಟ್ ಆ್ಯಕ್ಟ್) ಜಾರಿಯಾಗಿದೆ. ರೇರಾ ತನ್ನ ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ನಿಲುವು ಹೊಂದಿರಬೇಕು.

ಜೊತೆಗೆ ಅನಧಿಕೃತ ಕಟ್ಟಡಗಳ ನಿರ್ಮಾಣದ ಬಗ್ಗೆ ಗಮನ ಹರಿಸಬೇಕು, ತಡೆಯೊಡ್ಡಬೇಕು. ಯಾವುದೋ ಒಂದು ಅಸೋಸಿಯೇಷನ್ ಪರವಾಗಿ ಕೆಲಸ ಮಾಡದೇ ಎಲ್ಲಾ ವರ್ಗದವರ (ಡೆವಲಪರ್‌ಗಳು ಮತ್ತು ಖರೀದಿದಾರರ) ಪರವಾಗಿ ಕಾರ್ಯನಿರ್ವಹಿಸಬೇಕು. ರೇರಾದಲ್ಲಿ ದಾಖಲಾಗಿರುವ ಪ್ರಕರಣಗಳ ಇತ್ಯರ್ಥವನ್ನು ಆದಷ್ಟು ಬೇಗ ಮುಗಿಸಬೇಕು. ಇದಕ್ಕಾಗಿ ನ್ಯಾಯಲಯದಲ್ಲಿ ವಿಶೇಷ ಪೀಠ ರಚಿಸಬೇಕು.

ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದು ಮತ್ತು ಗ್ರಾಹಕರಿಗೆ ತಲುಪಿಸುವ ಬಗ್ಗೆ ಕಾರ್ಯ ಪ್ರವೃತ್ತವಾಗಬೇಕು. ಈಗಾಗಲೇ ರೇರಾ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ಕೆಲಸವನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗಬೇಕು. ಈ ಬಗ್ಗೆಯೂ ಸರ್ಕಾರ ಅಗತ್ಯ ಗಮನಹರಿಸಬೇಕಿದೆ.

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?