34 ಲಕ್ಷ ಕೋಟಿ ರೂಪಾಯಿ ಬಜೆಟ್ನ ಆದಾಯ ಸಂಗ್ರಹಣೆ, ಯಾವ ವಲಯಕ್ಕೆ ಎಷ್ಟು ವೆಚ್ಚ? ರೂಪಾಯಿ ಲೆಕ್ಕಾಚಾರ ಇಲ್ಲಿದೆ
Union Budget 2022: ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟು 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದಾರೆ. ಈ ಮೊತ್ತದ ಬಜೆಟ್ಗೆ ಹಣ ಎಲ್ಲಿಂದ ಬರುತ್ತದೆ? ಯಾವ ಯಾವ ವಲಯಕ್ಕೆ ಎಷ್ಟು ಖರ್ಚಾಗಲಿದೆ? ಈ ವಿವರಗಳನ್ನು ರೂಪಾಯಿಗೆ ಹೋಲಿಸಿ ಪೈಸೆಗಳ ಲೆಕ್ಕದಲ್ಲಿ ಇಲ್ಲಿ ನೀಡಲಾಗಿದೆ.
ದೆಹಲಿ: ಕೇಂದ್ರ ಸರ್ಕಾರ ಇಂದು (ಫೆ.01) 2022-23ನೇ ಸಾಲಿನ ಬಜೆಟ್ (Budget) ಮಂಡಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ 2019, 2020, 2021ರಲ್ಲಿ ಬಜೆಟ್ ಮಂಡಿಸಿದ್ದರು. ಅವರು ಇಂದು 4ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಇದು ನರೇಂದ್ರ ಮೋದಿ (Narendra Modi) ನೇತೃತ್ವ ಸರ್ಕಾರದ 10ನೇ ಬಜೆಟ್ ಆಗಿದೆ. ಕೊರೊನಾ ಕಾರಣದಿಂದಾಗಿ ಬಜೆಟ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಳೆದ 2 ವರ್ಷಗಳಿಂದ ಬಜೆಟ್ ಪ್ರತಿ ಮುದ್ರಿಸಲಾಗುತ್ತಿಲ್ಲ. ಬದಲಾಗಿದೆ ಡಿಜಿಟಲ್ ರೂಪದಲ್ಲಿ ಬಜೆಟ್ ಮಂಡಿಸಲಾಗುತ್ತಿದೆ. 2020ರಲ್ಲಿ ದಾಖಲೆಯ 160 ನಿಮಿಷ ಬಜೆಟ್ ಮಂಡಿಸಿದ್ದರು. ಈ ಬಾರಿ 90 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟು 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದಾರೆ. ಈ ಮೊತ್ತದ ಬಜೆಟ್ಗೆ ಹಣ ಎಲ್ಲಿಂದ ಬರುತ್ತದೆ? ಯಾವ ಯಾವ ವಲಯಕ್ಕೆ ಎಷ್ಟು ಖರ್ಚಾಗಲಿದೆ? ಈ ವಿವರಗಳನ್ನು ರೂಪಾಯಿಗೆ ಹೋಲಿಸಿ ಪೈಸೆಗಳ ಲೆಕ್ಕದಲ್ಲಿ ಇಲ್ಲಿ ನೀಡಲಾಗಿದೆ.
ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿಗೆ 58 ಪೈಸೆ ಪರೋಕ್ಷ ತೆರಿಗೆಯಿಂದಾಗಿ ಬರುತ್ತದೆ. 35 ಪೈಸೆ ಸಾಲ ಮತ್ತು ಇತರ ಮೂಲಗಳಿಂದ ಬರುತ್ತದೆ. 5 ಪೈಸೆ ತೆರಿಗೆಯೇತರ ಆದಾಯದಿಂದ ಮತ್ತು 2 ಪೈಸೆ ಸಾಲಯೇತರ ಬಂಡವಾಳ ಸಂದಾಯಗಳಿಂದ ಬರುತ್ತದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2022-23 ರ ಪ್ರಕಾರ ಸರಕು ಮತ್ತು ಸೇವಾ ತೆರಿಗೆಯು ಪ್ರತಿ ರೂಪಾಯಿ ಆದಾಯದಲ್ಲಿ 16 ಪೈಸೆಗಳ ಕೊಡುಗೆ ನೀಡಿದರೆ, ಕಾರ್ಪೊರೇಷನ್ ತೆರಿಗೆಯು 15 ಪೈಸೆ ಕೊಡುಗೆ ನೀಡುತ್ತದೆ.
ಯೂನಿಯನ್ ಅಬಕಾರಿ ಸುಂಕದಿಂದ ಪ್ರತಿ ರೂಪಾಯಿಗೆ 7 ಪೈಸೆ ಹಾಗೂ ಕಸ್ಟಮ್ಸ್ ಸುಂಕದಿಂದ 5 ಪೈಸೆ ಗಳಿಸಲು ಸರ್ಕಾರ ಎದುರುನೋಡುತ್ತಿದೆ. ಆದಾಯ ತೆರಿಗೆಯು ಪ್ರತಿ ರೂಪಾಯಿಯಲ್ಲಿ 15 ಪೈಸೆ ನೀಡುತ್ತದೆ. ಸಾಲಗಳು ಮತ್ತು ಇತರ ಹೊಣೆಗಾರಿಕೆಗಳಿಂದ ತೆರಿಗೆ ಸಂಗ್ರಹವು 35 ಪೈಸೆ ಆಗಿರುತ್ತದೆ. ಈ ಬಗ್ಗೆ ಬಜೆಟ್ನಲ್ಲಿ ತಿಳಿಸಲಾಗಿದೆ.
ಯಾವ ವಲಯಕ್ಕೆ ಎಷ್ಟು ವೆಚ್ಚ?
ಪ್ರತಿ ರೂಪಾಯಿಗೆ 20 ಪೈಸೆಯನ್ನು ಸಾಲಗಳ ಮೇಲಿನ ಬಡ್ಡಿ ಪಾವತಿ ಮಾಡಲಾಗುತ್ತದೆ. ತೆರಿಗೆಗಳು ಮತ್ತು ಸುಂಕಗಳ ರಾಜ್ಯಗಳ ಪಾಲು 17 ಪೈಸೆ ಆಗಿದೆ. ರಕ್ಷಣಾ ಇಲಾಖೆಗೆ 8 ಪೈಸೆ ಹಂಚಿಕೆಯಾಗಿದೆ. ಕೇಂದ್ರ ವಲಯದ ಯೋಜನೆಗಳ ವೆಚ್ಚವು 15 ಪೈಸೆಯಾಗಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆ 9 ಪೈಸೆ ಆಗಿರುತ್ತದೆ.
‘ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳ’ ವೆ್ಚ್ಚವನ್ನು 10 ಪೈಸೆಗೆ ನಿಗದಿಪಡಿಸಲಾಗಿದೆ. ಪ್ರತಿ ರೂಪಾಯಿ ವೆಚ್ಚದಲ್ಲಿ ಸಬ್ಸಿಡಿಗಳು ಮತ್ತು ಪಿಂಚಣಿಗಳು ಕ್ರಮವಾಗಿ 8 ಪೈಸೆ ಹಾಗೂ 4 ಪೈಸೆಗಳಿರುತ್ತವೆ. ಸರ್ಕಾರ ಪ್ರತಿ ರೂಪಾಯಿಯಲ್ಲಿ 9 ಪೈಸೆಯನ್ನು ‘ಇತರ ಖರ್ಚು’ಗಳಿಗೆ ವ್ಯಯ ಮಾಡುತ್ತದೆ.
ಇದನ್ನೂ ಓದಿ: Budget 2022: ಪಿಎಂ ಕಿಸಾನ್ ಸಮ್ಮಾನ್ ಸ್ಕೀಮ್ಗೆ ಬಜೆಟ್ನಲ್ಲಿ 68 ಸಾವಿರ ಕೋಟಿ ರೂಪಾಯಿ ಮೀಸಲು