ಕೊರೊನಾ ನಂತರದಲ್ಲಿ ಭಾರತದ ಹಳ್ಳಿ, ಸಣ್ಣ ಪಟ್ಟಣಗಳಿಗೆ ಸೂಕ್ತ ಆಗುವ 6 Business Idea

Business Ideas For Indian Rural Areas And Small Towns: 'ನಾನಿರುವ ಹಳ್ಳಿ ಅಥವಾ ಪುಟ್ಟ ಪಟ್ಟಣದಲ್ಲೇ ಒಂದು ಬಿಜಿನೆಸ್ ಶುರು ಮಾಡಬೇಕು. ಯಾವುದನ್ನು ಮಾಡಲಿ?' ಎಂದು ಯೋಚನೆ ಮಾಡುತ್ತಿರುವವರಿಗೆ ಈ ಲೇಖನದಿಂದ ಸಹಾಯ ಆಗಲಿದೆ.

  • TV9 Web Team
  • Published On - 18:53 PM, 2 Mar 2021
ಕೊರೊನಾ ನಂತರದಲ್ಲಿ ಭಾರತದ ಹಳ್ಳಿ, ಸಣ್ಣ ಪಟ್ಟಣಗಳಿಗೆ ಸೂಕ್ತ ಆಗುವ 6 Business Idea
ಸಾಂದರ್ಭಿಕ ಚಿತ್ರ

ಭಾರತದ ಎಕಾನಮಿಯ ಚಕ್ರ ಓಡಬೇಕು ಅಂದರೆ ಅದು ಹಳ್ಳಿಗಳಿಂದಲೇ ಅನ್ನೋದು ಸರ್ಕಾರಗಳಿಗೆ ಅರ್ಥವಾಗಿದೆ. ಇದನ್ನು ಬಹಳ ಹಿಂದೆಯೇ ಮಹಾತ್ಮ ಗಾಂಧಿ ಹೇಳಿದ್ದರು. ಏಕೆಂದರೆ ಭಾರತದ ಅತಿ ದೊಡ್ಡ ಪ್ರಮಾಣದ ಜನಸಂಖ್ಯೆ ವಾಸವಾಗಿರೋದೇ ಸಣ್ಣ ಪಟ್ಟಣ ಹಾಗೂ ಹಳ್ಳಿಗಳಲ್ಲಿ. ಸ್ವಾವಲಂಬಿ ಹಳ್ಳಿಗಳಿಂದ ಮಾತ್ರ ಸ್ವಾತಂತ್ರ್ಯಾ ನಂತರದಲ್ಲಿ ದೇಶದ ನಿರ್ಮಾಣ ಸಾಧ್ಯ ಎಂದು ನಂಬಿದ್ದರು, ಪ್ರತಿಪಾದಿಸಿದ್ದರು ಬಾಪೂ. ಏಕೆ ಇಷ್ಟೆಲ್ಲ ಪೀಠಿಕೆ ಅಂದರೆ, ಕೊರೊನಾ ಬಿಕ್ಕಟ್ಟಿನ ನಂತರ ಬಹಳ ಮಂದಿ ನಗರಗಳನ್ನು ಬಿಟ್ಟು, ತಮ್ಮ ಹಳ್ಳಿ- ಪಟ್ಟಣಗಳನ್ನು ಸೇರಿಕೊಂಡಿದ್ದಾರೆ. ಹೇಗೋ ಒಂದು ಸಣ್ಣ ಅಂಗಡಿ ಹಾಕಿಕೊಂಡಾದರೂ ಜೀವನ ನಡೆಸುವ ಲೆಕ್ಕಾಚಾರದಲ್ಲಿದ್ದಾರೆ. ಹಾಗೆ ಸ್ವಂತದ್ದೊಂದು ವ್ಯವಹಾರ ಮಾಡಬೇಕು ಅಂದುಕೊಳ್ಳುವವರು ಶುರು ಮಾಡಬಹುದಾದ ಆರು ಉದ್ಯಮಗಳನ್ನು ನಿಮ್ಮೆರು ಇಡಲಾಗುತ್ತಿದೆ. ಆಯಾ ವ್ಯಕ್ತಿಗಳ ಆರ್ಥಿಕ ಚೈತನ್ಯ ಮತ್ತು ರಿಸ್ಕ್ ತೆಗೆದುಕೊಳ್ಳಬಹುದಾದ ಸಾಮರ್ಥ್ಯವನ್ನು ಅಳೆದು, ಬೇಕಾದ್ದನ್ನು ಆರಂಭಿಸಬಹುದು.

ವಾಹನಗಳ ಫೈನಾನ್ಸ್, ರಿಪೇರಿ, ಮಾರಾಟ
ಸಣ್ಣ ಪಟ್ಟಣ ಅಥವಾ ಹಳ್ಳಿಗಳಲ್ಲಿ ಇವತ್ತಿಗೂ ಸಾರಿಗೆ ಸಮಸ್ಯೆ ಇದೆ. ತುರ್ತು ಸಂದರ್ಭಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದಕ್ಕೆ ಟೂ ವ್ಹೀಲರ್, ಆಟೋ ಬಳಸುತ್ತಾರೆ. ಅಪರೂಪಕ್ಕೆ ಕಾರು ದೊರೆಯುತ್ತದೆ. ಟೂ ವ್ಹೀಲರ್ ಖರೀದಿಗೆ ಫೈನಾನ್ಸ್, ವಾಹನ ರಿಪೇರಿ ಇಂಥದ್ದನ್ನು ಆರಿಸಿಕೊಳ್ಳಬಹುದು. ಬೇಡಿಕೆಯಂತೂ ಇದ್ದೇ ಇರುತ್ತದೆ. ವಾಹನ ಫೈನಾನ್ಸ್, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಹಾಗೂ ರಿಪೇರಿ ಮೂರನ್ನೂ ಮಾಡುವವರಿಗೆ ಸಮಸ್ಯೆಯೇ ಇಲ್ಲ ಬಿಡಿ.

ಬಟ್ಟೆ ಹೊಲಿಯುವುದು ಹಾಗೂ ಮಾರಾಟ
ಇದು ಕೂಡ ಎವರ್​​ಗ್ರೀನ್ ವ್ಯವಹಾರ. ಇನ್ನೂ ಎಷ್ಟೋ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ಆನ್​​ಲೈನ್ ಉದ್ಯಮದ ಪ್ರವೇಶವಾಗಿಲ್ಲ. ಈಗಲೂ ಜನರು ಬಟ್ಟೆಯನ್ನು ಖರೀದಿ ಮಾಡುವುದಕ್ಕೆ ಹಾಗೂ ಹೊಲಿಸುವುದಕ್ಕೆ ಆದ್ಯತೆ ನೀಡುತ್ತಾರೆ. ಬ್ರ್ಯಾಂಡ್ ಅಂತೆಲ್ಲ ಯೋಚನೆ ಮಾಡದೆ, ದುಬಾರಿ ಬಟ್ಟೆಗಳನ್ನು ಇಡದೆ, ಸ್ಥಳೀಯರ ಅವಶ್ಯಕತೆ ಮತ್ತು ಆದ್ಯತೆಯನ್ನು ಗಮನಿಸಿ ಬಟ್ಟೆಯನ್ನು ಹೊಲಿದುಕೊಡುವುದು ಹಾಗೂ ಮಾರಾಟ ಮಾಡುವುದಾದರೆ ಗಳಿಕೆಗೆ ಏನೂ ಮೋಸವಿಲ್ಲ.

ಕುರಿ/ಕೋಳಿ ಸಾಗಣೆ
ಕುರಿ ಸಾಗಣೆ ಮಾಡುವುದೆಂದರೆ ಎಟಿಎಂ ಕಾರ್ಡ್ ಇದ್ದಂತೆ. ಈ ಮಾತನ್ನು ಚಿತ್ರ ನಟ ದರ್ಶನ್ ಅವರೇ ಹೇಳಿದ್ದಾರೆ. ಕುರಿ- ಕೋಳಿ ಸಾಗಣೆಯಿಂದ ಜೀವನ ನಡೆಸುವುದಕ್ಕೆ ಏನೇನೂ ಸಮಸ್ಯೆ ಇಲ್ಲ. ಕೆಲಸದವರು ಅಗತ್ಯವೂ ಇರದಂತೆ ಕುಟುಂಬ ಸದಸ್ಯರೇ ಒಟ್ಟಾಗಿ ಸೇರಿ ಮಾಡಬಹುದಾದ ಉದ್ಯಮ ಇದು. ಇದರ ಜತೆಗೆ ಹೈನುಗಾರಿಕೆ ಮಾಡಿದಲ್ಲಿ ಅದರಿಂದಲೂ ಹಣಕ್ಕೊಂದು ಮೂಲ ಸಿಕ್ಕಂತಾಗುತ್ತದೆ. ಆದರೆ ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಜತೆಗೆ ಮೇವಿನ ವ್ಯವಸ್ಥೆಯೂ ಬೇಕಾಗುತ್ತದೆ.

ಹಣ್ಣು, ತರಕಾರಿ, ಸೊಪ್ಪು ಹಾಗೂ ಹೂವು ಬೆಳೆಯುವುದು
ದೊಡ್ಡ ನಗರಗಳ ಸಮೀಪದ ಹಳ್ಳಿಗಳಲ್ಲಿ ವಾಸ ಇರುವವರು ಗಂಭೀರವಾಗಿ ಪರಿಗಣಿಸಬಹುದಾದ ಆಯ್ಕೆ ಇದು. ಆದರೆ ಇದಕ್ಕೆ ಸ್ವಂತ ಭೂಮಿ ಇದ್ದರೆ ಉತ್ತಮ. ಇಲ್ಲದಿದ್ದಲ್ಲಿ ಭೋಗ್ಯಕ್ಕೆ ಭೂಮಿ ಪಡೆಯಬಹುದು. ಹಣ್ಣು, ತರಕಾರಿ, ಸೊಪ್ಪು ಹಾಗೂ ಹೂವಿನ ಸಾಗಾಟಕ್ಕೆ ಉತ್ತಮ ವ್ಯವಸ್ಥೆಯೊಂದನ್ನು ಮಾಡಿಕೊಂಡಲ್ಲಿ ಆದಾಯವೂ ಚೆನ್ನಾಗಿಟ್ಟುಕೊಳ್ಳಬಹುದು. ತರಕಾರಿ, ಸೊಪ್ಪು ಇವುಗಳಿಗೆ ನಿರಂತರವಾದ ಮಾರ್ಕೆಟಿಂಗ್ ವ್ಯವಸ್ಥೆ ಮಾಡಿಕೊಂಡರೆ ಆದಾಯದ ವಿಚಾರದಲ್ಲಿ ನಿರಾಳವಾಗಿರಬಹುದು.

ದಿನಸಿ ಅಂಗಡಿ/ಬೇಕರಿ
ಒಂದು ದಿನದಲ್ಲಿ ಮನೆಗೆ ಬೇಕಾಗುವ ಟೂಥ್​ಪೇಸ್ಟ್​​ನಿಂದ ಮೆಣಸು, ಜೀರಿಗೆ, ಸಾಸಿವೆ ಪ್ರತಿಯೊಂದಕ್ಕೂ ವ್ಯವಹಾರ ಇದ್ದೇ ಇರುತ್ತದೆ. ಇನ್ನು ಬೇಕರಿ ಪದಾರ್ಥಗಳಿಗೂ ಡಿಮ್ಯಾಂಡ್ ಇರುತ್ತದೆ. ನಗರ ಪ್ರದೇಶಗಳಲ್ಲಿನ ಗ್ರಾಹಕರ ಮನಸ್ಥಿತಿ ಬೇರೆ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರ ಮನಸ್ಥಿತಿ ಬೇರೆ. ಅದಕ್ಕೆ ತಕ್ಕಂತೆ ಬೇಕರಿ ವ್ಯವಹಾರವನ್ನು ಆರಂಭಿಸಿದರೆ ಅದು ಕೂಡ ಕೈ ಹಿಡಿದೀತು. ಆದರೆ ದಿನಸಿ ಅಂಗಡಿ ತೆರೆಯುವಾಗ ಆಯಾ ಪ್ರಾದೇಶಿಕ ಭಾಗದ ಬೇಡಿಕೆ ಹೇಗಿದೆ ಎಂಬ ಬಗ್ಗೆ ಸಮೀಕ್ಷೆ ಮಾಡುವುದು ಉತ್ತಮ.

ಟ್ಯುಟೋರಿಯಲ್ ಆರಂಭ
ಇದನ್ನು ಬರೀ ಉದ್ಯಮ ಎನ್ನುವಂತೆ ನೋಡುವುದು ತಪ್ಪಾಗುತ್ತದೆ. ಮಕ್ಕಳಿಗೆ ಅಥವಾ ಯಾವುದೇ ಹಂತದಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಸಂಪಾದನೆಗೆ ಒಂದು ಮಾರ್ಗ. ಈಗಂತೂ ನೀವು ಎಲ್ಲಾದರೂ ಇರಿ, ಆನ್​​ಲೈನ್ ಮೂಲಕ ಎಲ್ಲಾದರೂ ಪಾಠ ಮಾಡಬಹುದು. ಆದರೆ ಕೆಲವು ವಿಷಯಗಳಿಗೆ ಬೇಡಿಕೆ ಹೆಚ್ಚು. ಉದಾಹರಣೆಗೆ, ಇಂಗ್ಲಿಷ್, ಗಣಿತ, ವಿಜ್ಞಾನ ಹೀಗೆ. ಇಂಟರ್​ನೆಟ್ ಸಂಪರ್ಕ ಉತ್ತಮವಾಗಿದ್ದಲ್ಲಿ ನಿಮ್ಮ ವ್ಯಾಪ್ತಿ ವಿಸ್ತರಣೆ ಆದಂತೆಯೇ ಸರಿ. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರಂತೂ ಬೆಳವಣಿಗೆಗೆ ಮಿತಿಯೇ ಇಲ್ಲ.

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್